ಸಮಾಜಮುಖಿಯ ಅಚ್ಚರಿ ಮೂಡಿಸುವ ವೈವಿಧ್ಯ ಗೋಷ್ಠಿಗಳು
ಸಾಹಿತ್ಯವನ್ನು ಜನ ಸಾಮಾನ್ಯರ ಬಳಿಗೆ ತೆಗೆದುಕೊಂಡು ಹೋಗುವ ಮೂಲಕ ಮತ್ತಷ್ಟೂ ಸದೃಢವಾಗಿ ಕಟ್ಟಬೇಕು ಎನ್ನುವ ಇರಾದೆ ಇದ್ದರೆ ಖಂಡಿತವಾಗಿಯೂ ಅಲ್ಲಿ ನಿತ್ಯ ಬದುಕಿಗೆ ನಿಕಟವಾದ ಗೋಷ್ಠಿಗಳಿರುತ್ತವೆ. ಸಮಾಜಮುಖಿ, ಬೆಂಗಳೂರಿನಲ್ಲಿ ನವೆಂಬರ್ 8-9ರಂದು ಆಯೋಜಿಸಿರುವ ಸಾಹಿತ್ಯ ಸಮ್ಮೇಳನ ಇದಕ್ಕೊಂದು ತಾಜಾ ಉದಾಹರಣೆ !
ಸಮಾನಾಂತರ ವೇದಿಕೆಗಳಿದ್ದಾಗ ಏಕಕಾಲದಲ್ಲಿ ಗೋಷ್ಠಿಗಳು ನಡೆಯುತ್ತಿರುತ್ತವೆ. ಅವುಗಳಲ್ಲಿ ಬಹು ಪ್ರಾಮುಖ್ಯ ಗೋಷ್ಠಿಗಳಿದ್ದಾಗ ಬದುಕಿನ ಎಲ್ಲ ಆಯಾಮಗಳ ಬಗ್ಗೆಯೂ ಆಸಕ್ತಿ ಹೊಂದಿರುವವರಿಗೆ ಯಾವುದನ್ನು ಆಯ್ಕೆ ಮಾಡಬೇಕು ಎಂಬ ಗೊಂದಲ ಉಂಟಾಗುತ್ತದೆ. ನನ್ನದೇ ಆಯ್ಕೆಯ ಸಂಕಷ್ಟ ಹೇಳುತ್ತೇನೆ. ಸಮ್ಮೇಳನದ ಮೊದಲ ದಿನ ಮಧ್ಯಾಹ್ನ 12.30 ರಿಂದ 1.30ರ ತನಕ ಮುಖ್ಯ ವೇದಿಕೆಯಲ್ಲಿ “ಅನುಭವ ಲೋಕದ ಸೃಜನಶೀಲತೆ- ಪೂರ್ಣಚಂದ್ರ ತೇಜಸ್ವಿ ಮತ್ತು ಸತ್ಯಜಿತ್ ರೇ” ಎಂಬ ಗೋಷ್ಠಿಯಿದೆ. ಗಿರೀಶ್ ಕಾಸರವಳ್ಳಿ, ವಿದ್ಯಾಶಂಕರ್ ಮತ್ತು ಈರೇಗೌಡ ಮಾತನಾಡುತ್ತಾರೆ.
ಇದೇ ದಿನ, ಇದೇ ವೇಳೆಗೆ ಸೃಜನಶೀಲ (ಸಮಕಾಲೀನ ವೇದಿಕೆ)ಯಲ್ಲಿ ”ಚಾಟಿ ಹಿಡಿಯದ ಚಾಳಿ; ಕನ್ನಡ ವಿಮರ್ಶಾ ಸಾಹಿತ್ಯವೇಕೆ ಬತ್ತಿ ಹೋಗಿದೆ” ಗೋಷ್ಠಿ ಇದೆ. ಚ.ಹ. ರಘುನಾಥ, ಎಸ್.ಆರ್. ವಿಜಯಶಂಕರ್ ಮತ್ತು ಎಂ.ಎಸ್.ಆಶಾದೇವಿ ಮಾತನಾಡುತ್ತಾರೆ.
ಇದೇ ದಿನ, ಇದೇ ವೇಳೆಗೆ ಶಾಸ್ತ್ರೀಯ (ಪುಸ್ತಕ ಪ್ರಪಂಚ)ವೇದಿಕೆಯಲ್ಲಿ “ಕನ್ನಡ ಕತ್ತುರಿಯಲ್ತೇ – ಕನ್ನಡ ನಾಡು-ನುಡಿ ಪರವಾಗಿ ದನಿಯೆತ್ತಿದವರು” ಗೋಷ್ಠಿ ಇದೆ. ರಾಜಪ್ಪ ದಳವಾಯಿ, ಕಾ.ವೆಂ. ಶ್ರೀನಿವಾಸಮೂರ್ತಿ ಮತ್ತು ಪದ್ಮಿನಿ ನಾಗರಾಜ್ ಮಾತನಾಡುತ್ತಾರೆ.
ಇದೇ ದಿನ, ಇದೇ ವೇಳೆಗೆ 5ನೇ ವೇದಿಕೆ ಸಾಹಿತ್ಯೇತರ (ಸಂಸ್ಕೃತಿ ಸಂಪದ)ಯಲ್ಲಿ “ಹೊಸ ತಲೆಮಾರಿನ ಸಂಗೀತ; ಶಬ್ದದೊಳಗಣ ನಿಶ್ಯಬ್ಧದತ್ತ ಪಯಣ” ಗೋಷ್ಠಿಯಿದೆ. ಎಂ.ಡಿ.ಪಲ್ಲವಿ, ರೂಮಿ ಹರೀಶ್, ಎಸ್.ಆರ್. ರಾಮಕೃಷ್ಣ ಮಾತನಾಡುತ್ತಾರೆ. ಇವುಗಳಲ್ಲದೇ 4ನೇ ವೇದಿಕೆಯಲ್ಲಿಯೂ ಆಸಕ್ತಿಕರ ಗೋಷ್ಠಿ ಇದೆ.
ನಾಲ್ಕು ವೇದಿಕೆಗಳಲ್ಲಿ ನಡೆಯುವ ನಾಲ್ಕೂ ಗೋಷ್ಠಿಗಳ ವಿಷಯಗಳಲ್ಲಿಯೂ ನನಗೆ ಅಪಾರ ಆಸಕ್ತಿಯಿದೆ. ಆಗ ಸಹಜವಾಗಿಯೇ ಯಾವುದನ್ನು ಆಯ್ಕೆ ಮಾಡಬೇಕು ಎನ್ನುವ ಗೊಂದಲ ಉಂಟಾಗುತ್ತದೆ. ಯಾವುದನ್ನು ಆಯ್ಕೆ ಮಾಡಬೇಕು ಎಂದು ಇನ್ನೂ ನಿರ್ಧರಿಸಿಲ್ಲ. ಸಾಹಿತ್ಯ ಸಮ್ಮೇಳನದಲ್ಲಿ ಈ ನಾಲ್ಕರಲ್ಲಿ ಚಿತ್ತ ಎತ್ತ ತಿರುಗುವುದೋ ತಿಳಿಯುವ ಸ್ವಯಂ ಕುತೂಹಲವಿದೆ !!
ಕನ್ನಡ ಸಾಹಿತ್ಯ ಪರಿಷತ್ ಸಾಮಾನ್ಯವಾಗಿ ಪ್ರಭುತ್ವಕ್ಕೆ ಮುಖಾಮುಖಿಯಾಗಿ ನಿಲ್ಲುವ ವಿಷಯಗಳನ್ನು ಸಾಮಾನ್ಯವಾಗಿ ಆಯ್ಕೆ ಮಾಡಿಕೊಳ್ಳುವುದಿಲ್ಲ. ಬಹುಶಃ ಆರ್ಥಿಕ ಅನುದಾನ ನೀಡುವ ಸರ್ಕಾರದ ನಿಷ್ಠುರ ಕಟ್ಟಿಕೊಳ್ಳುವ ಸಂಕಟವೇಕೆ ಎಂದು ಯೋಚಿಸಿರಬಹುದೇನೋ ? ಆದರೆ ಖಾಸಗಿ ಸಂಸ್ಥೆಗಳು, ವ್ಯಕ್ತಿಗಳು ಸೇರಿ ನಡೆಸುವ ಸಾಹಿತ್ಯ ಉತ್ಸವ (ಇವುಗಳನ್ನು ನಾನು ಪರ್ಯಾಯ ಸಾಹಿತ್ಯ ಸಮ್ಮೇಳನಗಳು ಎಂದು ತಿಳಿಯುವುದಿಲ್ಲ. ಇವುಗಳೂ ಮುಖ್ಯ ಸಮ್ಮೇಳನಗಳೇ ಆಗಿವೆ)ಗಳಲ್ಲಿಯೂ ಪ್ರಭುತ್ವಕ್ಕೆ ತಿಳಿ ಹೇಳುವ, ನಾವು ಅಂದರೆ ಮತ ನೀಡಿದವರು ಜಾಗರೂಕರಾಗಿದ್ದೇವೆ ಎಂಬ ಎಚ್ಚರಿಕೆ ರವಾನಿಸುವ ವಿಷಯಗಳ ಗೋಷ್ಠಿ ಆಯೋಜಿಸುವುದಿಲ್ಲ.
ಇದಕ್ಕೆ ವ್ಯತಿರಿಕ್ತವಾಗಿ “ಸಮಾಜಮುಖಿ ಸಾಹಿತ್ಯ ಸಮ್ಮೇಳನ”ದಲ್ಲಿ ವಿಷಯದ ಆಯ್ಕೆಯಿದೆ. ಎರಡನೇ ದಿನ ಮುಖ್ಯ ವೇದಿಕೆಯಲ್ಲಿ “ಬಿಕ್ಕಟ್ಟಿನಲ್ಲಿ ಗಣತಂತ್ರ ಮತ್ತು ಪ್ರಜಾಪ್ರಭುತ್ವ” ಕುರಿತು ಬಿ.ಎಲ್. ಶಂಕರ್, ರಾಜಾರಾಮ್ ತೋಳ್ಪಾಡಿ, ಎಲ್. ಹನುಮಂತಯ್ಯ, ಅಗ್ರಹಾರ ಕೃಷ್ಣಮೂರ್ತಿ, ಎ.ನಾರಾಯಣ ಮತ್ತು ಯು.ಟಿ. ಫರ್ಜಾನ್ ಅಶ್ರಪ್ ಮಾತನಾಡುತ್ತಾರೆ. ಇಲ್ಲಿ ಸಮಕಾಲೀನ ಬಹು ಜ್ವಲಂತ ವಿಚಾರಗಳು ಪ್ರಸ್ತಾಪವಾಗುತ್ತವೆ ಎಂಬ ಅನಿಸಿಕೆಯಿದೆ.
ಸಾಮಾನ್ಯವಾಗಿ ಸಾಹಿತ್ಯವೆಂದರೆ ಕಥೆ, ಕಾದಂಬರಿ ಮತ್ತು ಕವಿತೆಯಷ್ಟೇ ಎಂಬ ಭಾವನೆಯಿದೆ. ಆದರೆ ಬದುಕಿನ ಬೇರೆಬೇರೆ ವಿಭಾಗಗಳ ಕುರಿತು ಬರೆದವುಗಳು ಕೂಡ ಸಾಹಿತ್ಯವೇ ಆಗಿವೆ. ಉದಾಹರಣೆಗೆ ಕರ್ನಾಟಕದ ಸಂದರ್ಭದಲ್ಲಿ ಬಹು ಪ್ರಾಮುಖ್ಯವಾದ ಬೇರೆಬೇರೆ ಚಳವಳಿಗಳು ನಡೆದಿವೆ. ನಡೆಯುತ್ತಲೂ ಇವೆ. ಅವುಗಳ ಬಗ್ಗೆ ಉಪಲಬ್ದ ಇರುವ ಸಾಹಿತ್ಯ ಎಷ್ಟು ಎಂದು ಯೋಚಿಸಿದರೆ ನಿರಾಶೆಯಾಗುತ್ತದೆ. ಈ ದಿಶೆಯಲ್ಲಿ ಎರಡನೇ ದಿನ “ಕನ್ನಡದಲ್ಲಿ ಹೋರಾಟದ ಸಾಹಿತ್ಯ ಏಕಿಲ್ಲ” ಎಂಬ ಗೋಷ್ಠಿಯಿದೆ. ಕೆ.ರಾಮಯ್ಯ, ಸುನಂದಾ ಜಯರಾಮ್, ಹಿ.ಶಿ. ರಾಮಚಂದ್ರೇಗೌಡ ಮತ್ತು ಪಿಚ್ಚಳ್ಳಿ ಶ್ರೀನಿವಾಸ್ ಬೆಳಕು ಚೆಲ್ಲುತ್ತಾರೆ.
ಎರಡನೇ ದಿನ ಅಂದರೆ ಭಾನುವಾರ “ನಮಗೆ ದಕ್ಕಿರುವ ಸೃಜನಶೀಲ ಸಾಹಿತ್ಯದ ಹೊಸ ಪ್ರಾಕಾರಗಳು” ಗೋಷ್ಠಿ ಇದೆ. ಕೃಪಾಕರ ಮತ್ತು ಸೇನಾನಿ, ಕೆ.ಪುಟ್ಟಸ್ವಾಮಿ, ಸಂಜಯ್ ಗುಬ್ಬಿ ಮಾತನಾಡುತ್ತಾರೆ. ಕರ್ನಾಟಕದ ಸಂದರ್ಭದಲಿ ಪರಿಸರ –ಅರಣ್ಯ ಮತ್ತು ವನ್ಯಜೀವನ ಕುರಿತು ಪ್ರಾಮುಖ್ಯ ಇರುವ ವಿಷಯಗಳು ಪ್ರಸ್ತಾಪವಾಗಬಹುದು.

ಎರಡನೇ ದಿನ ಸೃಜನಶೀಲ ವೇದಿಕೆಯಲ್ಲಿ “ಹುಳಿಮಾವಿನ ಮರ ಮತ್ತು ಸುರಗಿ” ಆತ್ಮಕಥೆಗಳ ತೌಲನಿಕ ಚರ್ಚೆ ನಡೆಯುತ್ತದೆ. ಕೆ.ಸಿ. ಶಿವಾರೆಡ್ಡಿ, ತಾರಿಣಿ ಶುಭದಾಯಿನಿ ಮತ್ತು ಸುಬ್ಬು ಹೊಲೆಯಾರ್ ಮಾತನಾಡುತ್ತಾರೆ. ಸಾಮಾನ್ಯವಾಗಿ ಕನ್ನಡ ಸಾಹಿತ್ಯದ ಸಂದರ್ಭದಲ್ಲಿ ಬಹಿರಂಗ ವೇದಿಕೆಗಳಲ್ಲಿ ಆತ್ಮಕಥೆಗಳ ತೌಲನಿಕ ಚರ್ಚೆ ನಡೆಯುವುದು ಅಪರೂಪದ ವಿದ್ಯಮಾನ. ಇಂಥದ್ದೊಂದು ಅಪರೂಪದ ಚರ್ಚೆಗೆ ಈ ಸಮ್ಮೇಳನ ಸಾಕ್ಷಿಯಾಗಲಿದೆ !!
ಭಾನುವಾರ, “ಭಾಷಾ ಸಾಧ್ಯತೆಗಳ ಮೀರಿದ ಅನುವಾದ ಸಾಹಿತ್ಯ” ಕುರಿತು ಓ.ಎಲ್. ನಾಗಭೂಷಣ ಸ್ವಾಮಿ, ಜಯ ಶ್ರೀನಿವಾಸರಾವ್, ಅರೀಫ್ ರಾಜಾ, ಭೂಮಿಕಾ ಮತ್ತು ಪ್ರೊ. ಮಹಾದೇವ ಸಂವಾದ ನಡೆಸುತ್ತಾರೆ. ಇದು ಸಹ ಸಾಹಿತ್ಯದ ವಿದ್ಯಾರ್ಥಿಗಳಿಗೆ ಉಪಯುಕ್ತ ಗೋಷ್ಠಿ !!
ಕಸಾಪ ನಡೆಸುವ ಸಾಹಿತ್ಯ ಸಮ್ಮೇಳನಗಳಿರಲಿ, ಇತರರು ನಡೆಸುವ ಸಾಹಿತ್ಯ ಉತ್ಸವಗಳಿರಲಿ ಶ್ರಮ ಸಂಸ್ಕೃತಿ ಬಗ್ಗೆ ಚರ್ಚಿಸುವುದು ತೀರಾ ಅಪರೂಪದ ವಿದ್ಯಮಾನ ! ಈ ಸಮ್ಮೇಳನದಲ್ಲಿ ಎರಡನೇ ದಿನ “ಶ್ರಮ ಸಂಸ್ಕೃತಿ- ಪರ್ಯಾಯ ಚರಿತ್ರೆ” ಕುರಿತು ಚಕ್ಕರೆ ಶಿವಶಂಕರ್, ಡಿ. ಡೊಮಿನಿಕ್ ಮತ್ತು ಅಮರೇಂದ್ರ ಹೊಲಂಬಳ್ಳಿ ಮಾತನಾಡುತ್ತಾರೆ.
ಇದೇ ಸಂದರ್ಭದಲ್ಲಿ ನಾನು ಇನ್ನೊಂದು ವಿಚಾರವನ್ನು ನಿಮ್ಮ ಮುಂದೆ ಪ್ರಸ್ತಾಪಿಸಬೇಕು. ಅದೇನೆಂದರೆ ಕಾರ್ಪೊರೇಟ್ ಸಂಸ್ಥೆಗಳ ಪ್ರಾಯೋಜಿತವಾದ ಸಾಹಿತ್ಯ ಉತ್ಸವಗಳು ಪಂಚತಾರಾ ಹೋಟೆಲುಗಳಲ್ಲಿ ನಡೆಯುವ ಕಾರಣ ಸಹಜವಾಗಿಯೇ ಅವುಗಳ ಬಗ್ಗೆ ಪೂರ್ವಾಗ್ರಹ ಬೆಳೆದಿದೆ. ಅದರ ಬಗ್ಗೆ ಕನ್ನಡದ ಸಂದರ್ಭದಲ್ಲಿ ತತ್ವಪದಕಾರರು, ಅಧ್ಯಾತ್ಮ ಮತ್ತು ಅವಧೂತ ಪರಂಪರೆ ಬಗ್ಗೆ ಅಧ್ಯಯನ ನಡೆಸಿರುವ, ನಡೆಸುತ್ತಿರುವ ಮಹೇಶ್ ಅವರ ಅಭಿಪ್ರಾಯ ಮುಖ್ಯವೆನ್ನಿಸುತ್ತದೆ. ಅವರ ಅಭಿಪ್ರಾಯ ಮುಂದಿದೆ !
“ಕಸಾಪ ನಡೆಸುವ ಬಹು ದೊಡ್ಡಮಟ್ಟದ ಸಾಹಿತ್ಯ ಸಮ್ಮೇಳನಗಳಿಗೆ ಹೊರತಾದ ಸಣ್ಣ ಮಟ್ಟದ ಸಾಹಿತ್ಯ ಉತ್ಸವಗಳು ಲೈಕ್ ಮೈಡೆಂಡ್ ಪೀಪಲ್ ಮಾತ್ರ ಒಳಗೊಂಡಿರುತ್ತವೆ ಹೊರತೂ ಎಲ್ಲರನ್ನೂ ಒಳಗೊಂಡಿರುವುದಿಲ್ಲ ! ಕೆಲವೆಡೆ ಎಂಟ್ರಿ ಫೀಸ್ ಕೂಡ ಇರುತ್ತದೆ. ಫೈವ್ ಸ್ಟಾರ್ ಹೋಟೆಲುಗಳಲ್ಲಿ ಅದ್ದೂರಿಯಾಗಿ ಫೈವ್ ಸ್ಟಾರ್ ಸಂಸ್ಕೃತಿಯಲ್ಲಿಯೇ ಆಯೋಜಿಸಿರುತ್ತಾರೆ ಆದರೆ ಜನ ಸಾಮಾನ್ಯರಿಗೆ ಅವು ನಡೆಯುವ ದಿನಾಂಕವೂ ಸರಿಯಾಗಿ ಗೊತ್ತಿರುವುದಿಲ್ಲ ! ಮುಖ್ಯವಾಗಿ ಸಮಾಜದ ಎಲ್ಲ ಸ್ತರದವರೂ ಅಲ್ಲಿ ಇರುವುದಿಲ್ಲ. ಗೋಷ್ಠಿಗಳೂ ಸೀಮಿತವಾಗಿರುತ್ತದೆ. ವಿಷಯಗಳ ಆಯ್ಕೆ ಬಗ್ಗೆ ಹೇಳುವುದಾದರೆ ಕನ್ನಡ ಸಾಹಿತ್ಯ ಪರಿಷತ್ ನಡೆಸುವ ಸಮ್ಮೇಳನದ ಸ್ವರೂಪ ಇರುವುದಿಲ್ಲ. ಇದೇ ಸಂದರ್ಭದಲ್ಲಿ ಧಾರವಾಡ ಸಾಹಿತ್ಯ ಸಂಭ್ರಮ, ಲಡಾಯಿ ಪ್ರಕಾಶನದ ಬಸು ನಡೆಸುವ ಸಾಹಿತ್ಯ ಉತ್ಸವಗಳು ಭಿನ್ನವಾಗಿರುತ್ತವೆ. ಜನ ಸಾಮಾನ್ಯರನ್ನೂ ಒಳಗೊಳ್ಳುತ್ತವೆ. ಮೇ ಸಾಹಿತ್ಯ ಮೇಳದ ಸ್ವರೂಪದಲ್ಲೇ ಡೆಮಾಕ್ರಾಟಿಕ್ ಗುಣ ಇರುತ್ತದೆ. ಎಲ್ಲರೊಂದಿಗೂ ಸಮಾಲೋಚಿಸಿಯೇ ಮುಂದಡಿ ಇಡುತ್ತಾರೆ”
ಇದೇ ಪ್ರಥಮ ಬಾರಿಗೆ ಆಯೋಜಿತವಾಗಿರುವ “ಸಮಾಜಮುಖಿ ಸಾಹಿತ್ಯ ಸಮ್ಮೇಳನ” ಪಂಚತಾರಾ ಹೋಟೆಲಿನಲ್ಲಿ ನಡೆಯದೇ ಎಲ್ಲರನ್ನೂ ಒಳಗೊಳ್ಳುವ ಸ್ಕೌಟ್ ಮತ್ತು ಗೈಡ್ಸ್ ಆವರಣದಲ್ಲಿ ನಡೆಯುತ್ತಿರುವುದು ಕೂಡ ಬುದ್ದಿಪೂರ್ವಕ ಆಲೋಚನೆ ಎಂದೇ ಅನಿಸುತ್ತದೆ. ಬಹುಶಃ ಇದು ಮಾದರಿ ಸಾಹಿತ್ಯ ಸಮ್ಮೇಳನಗಳ ಸಾಲಿಗೆ ಸೇರಬಹುದು ಎಂಬ ಅಭಿಪ್ರಾಯವೂ ಇದೆ ! ನೀವುಗಳೂ ಬನ್ನಿ, ಪಾಲ್ಗೊಳ್ಳೋಣ. ವಿವರಗಳಿಗೆ https://samajamukhi.com/ ಜಾಲತಾಣಕ್ಕೆ ಭೇಟಿ ನೀಡಬಹುದು. ಮೊಬೈಲ್ ನಂಬರ್ 9900049892 ಕರೆ ಮಾಡಬಹುದು
