ಕನ್ನಡವೇ ಆದ ಸಮಾಜಮುಖಿ ಸಾಹಿತ್ಯ ಉತ್ಸವ
ಕನ್ನಡವೇ ಆದ ಎನ್ನುವುದಕ್ಕೂ ಕನ್ನಡವೂ ಆದ ಎನ್ನುವುದಕ್ಕೂ ಅಪಾರ ಅರ್ಥ ವ್ಯತ್ಯಾಸಗಳಿವೆ ! ನವೆಂಬರ್ ೮,೯, ೨೦೨೫ ಎರಡು ದಿನ ಬೆಂಗಳೂರಿನಲ್ಲಿ ಜರುಗಿದ “ಸಮಾಜಮುಖಿ ಸಾಹಿತ್ಯ” ಸಮ್ಮೇಳನ ನಿಜವಾದ ಅರ್ಥದಲ್ಲಿ ಕನ್ನಡವೇ ಆಗಿತ್ತು ! ಅಲ್ಲಿ ಇಂಗ್ಲಿಷ್ ಇತ್ತಷ್ಟೇ !! ಅರೇ ಇಂಗ್ಲಿಷ್ ಇತ್ತಷ್ಟೇ ಎನ್ನುವುದೇಕೆ ಎಂದರೆ ಕಳೆದ ದಶಕದಿಂದ ನಡೆಯುತ್ತಿರುವ ಕಾರ್ಪೊರೇಟ್ ಸಾಹಿತ್ಯ ಉತ್ಸವಗಳಲ್ಲಿ ಕನ್ನಡವೂ ಇತ್ತಷ್ಟೇ ಎನ್ನುವ ಸ್ಥಿತಿಯಿದೆ. ಈ ಹಿನ್ನೆಲೆಯಲ್ಲಿ ಈ ಮಾತು ಹೇಳಬೇಕಾಯಿತು.
“ಕೇಂದ್ರ ಸರ್ಕಾರವು ಜನರು ಆಡುವ ಭಾಷೆಗಳನ್ನು ನಿರ್ಲಕ್ಷಿಸಿ ಸಂಸ್ಕೃತ ಭಾಷೆಯನ್ನು ಅರಳಿಸುವ ಪ್ರಯತ್ನ ನಡೆಸುತ್ತಿದೆ. ಸಂಸ್ಕೃತ, ಹಿಂದಿ ಭಾಷೆಗಳನ್ನು ನಮ್ಮ ಮೇಲೆ ಹೇರುವ ಅಗತ್ಯವಿಲ್ಲ. ಹೀಗೆ ಹೇರುವ ಮೂಲಕ ದ್ರಾವಿಡ ಭಾಷೆಗಳ ಮೇಲೆ ಸೇಡು ತೀರಿಸಿಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ. ಸಂಸ್ಕೃತದ ಅಭಿವೃದ್ಧಿಗೆ ರೂ. ೨, ೫೩೨ (ಎರಡು ಸಾವಿರದ ಐನೂರ ಮುವ್ವತ್ತೆರಡು ಕೋಟಿ ರೂಪಾಯಿ) ನೀಡಲಾಗಿದೆ. ಕನ್ನಡ ಭಾಷೆಗೆ ಕೇವಲ ರೂ. ೧೨.೨೮ ( ಹನ್ನೆರಡು ಕೋಟಿ ಇಪ್ಪತ್ತೆರಡು ಲಕ್ಷ ರೂಪಾಯಿ) ನೀಡಲಾಗಿದೆ. ಇಂಥ ತಾರತಮ್ಯದ ವಿರುದ್ಧ ಧ್ವನಿ ಎತ್ತಲೇಬೇಕಾಗಿದೆ” ಹೀಗೆಂದು ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಹಂಪ ನಾಗರಾಜಯ್ಯ ಗುಡುಗಿದರು.
“ಪ್ರಸ್ತುತ ಭಾರತದ ಸಂದರ್ಭದಲ್ಲಿ ಏಕವನ್ನು ಅನೇಕದ ವಿರುದ್ಧ ಎತ್ತಿಕಟ್ಟಲಾಗುತ್ತಿದೆ. ಇದು ಈ ಹೊತ್ತಿನ ಅಪಾಯ. ಈ ಕಾರ್ಯವನ್ನು ಬಹು ವ್ಯವಸ್ಥಿತವಾಗಿ ಮಾಡಲಾಗುತ್ತಿದೆ. ಕಾರ್ಪೊರೇಟ್ ಸಾಹಿತ್ಯ ಉತ್ಸವಗಳು ಈ ಹುನ್ನಾರದ ಭಾಗ. ನಾನು ಇನ್ನೆಂದಿಗೂ ಅಂತಹ ಫೆಸ್ಟಿವಲ್ ಗಳಲ್ಲಿ ಭಾಗಿಯಾಗುವುದಿಲ್ಲ” ಎಂದು ಕವಿ ಹೆಚ್.ಎಸ್. ಶಿವಪ್ರಕಾಶ್ ಘೋಷಿಸಿದರು. ಇದರ ಮೂಲಕ “ಸಮಾಜಮುಖಿ ಸಾಹಿತ್ಯ ಉತ್ಸವ” ಮಾದರಿ ಅಗತ್ಯವನ್ನು ಪ್ರತಿಪಾದಿಸಿದರು ಎನ್ನುವುದು ಗಮನಾರ್ಹ ಸಂಗತಿ.
ಕನ್ನಡದ ಬಹು ಆಯಾಮಗಳ ಹಿನ್ನೋಟ ಮುನ್ನೋಟ
ಏಕಕಾಲದಲ್ಲಿ ಐದು ಬೇರೆಬೇರೆ ವೇದಿಕೆಗಳಲ್ಲಿ (ಮುಖ್ಯ ವೇದಿಕೆ, ಸೃಜನಶೀಲ, ಶಾಸ್ತ್ರೀಯ – ಪುಸ್ತಕ ಪ್ರಪಂಚ, Muse Hall- ಜಗದರಿವು, ಸಾಹಿತ್ಯೇತರ – ಸಂಸ್ಕೃತಿ ಸಂಪದ) ಸಂವಾದಗಳು ನಡೆದವು. ಕನ್ನಡದ ಬಹು ಆಯಾಮಗಳ ಹಿನ್ನೋಟ – ಮುನ್ನೋಟಗಳಿಗೂ ಸಮ್ಮೇಳನ ಸಾಕ್ಷಿಯಾಯಿತು ! “ಹಳೆಗನ್ನಡ ಸಾಹಿತ್ಯ – ಹಿಂದಣ ಹೆಜ್ಜೆಯನ್ನರಿತಲ್ಲದೇʼ, ಅವಸರವೂ ತಕ್ಷಣದ ಬೆನ್ನೇರಿದಾಗ, ಚಾಟಿ ಹಿಡಿಯದ ಚಾಳಿ; ಕನ್ನಡ ವಿಮರ್ಶಾ ಸಾಹಿತ್ಯವೇಕೆ ಬತ್ತಿ ಹೋಗಿದೆ, ಕನ್ನಡ ಭಾಷಾ ಬಿಕ್ಕಟ್ಟುಗಳು, ಕನ್ನಡಂ ಕತ್ತುರಿಯಲ್ತೆ – ಕನ್ನಡ ನಾಡು ನುಡಿ ಪರವಾಗಿ ದನಿಯೆತ್ತಿದವರು, ಕುಲಂ ಕುಲಮಲ್ತು, ಹರಿಹರ ಕವಿಯ ಕ್ರಾಂತಿಯ ನೆಲೆಗಳು ಇತ್ಯಾದಿ ಗೋಷ್ಠಿಗಳು ಕನ್ನಡ ಅನುಸಂಧಾನದ ಬಹುಮುಖಿ ನೆಲೆಗಳನ್ನು ತೆರೆದಿಟ್ಟವು.
“ಸಮಾಜಮುಖಿ ಸಾಹಿತ್ಯ ಸಮ್ಮೇಳನ ಸುಲಭದ ವಿಷಯ ಆಗಿರ್ಲಿಲ್ಲ. ಪ್ರತಿಯೊಂದು ಗೋಷ್ಠಿ, ಸಂಪನ್ಮೂಲ ವ್ಯಕ್ತಿಗಳು, ಗೆಳೆಯರು, ಎಳೆಯರು, ಸಮಾನ ಮನಸ್ಕರು ಎಲ್ಲರೂ ಒಂದಡೆ ಸೇರುವ ಸೂರು ಇದಾಗಿತ್ತು ಅನ್ನೋದೆ ಖುಷಿ. ಮುಖ್ಯವಾಗಿ ಕನ್ನಡದ ವರ್ತಮಾನ – ತಲ್ಲಣಗಳ ಕುರಿತ ಹಲವು ಆಯಾಮಗಳ ಚರ್ಚೆ ಗಮನಾರ್ಹ. ಸಮಾನ ವೇದಿಕೆಗಳ ಚರ್ಚೆಗಳು ಕುತೂಹಲಭರಿತವಾಗಿದ್ದವು. ಕನ್ನಡದ ಹಲವು ವಿಚಾರಗಳ ಬಗ್ಗೆ ಒಂದಷ್ಟು ಅದ್ಭುತ ಒಳಹುಗಳು ಸಿಕ್ಕಿದ್ದು ಖುಷಿಯ ವಿಚಾರ. ವಿಚಾರಗೋಷ್ಠಿಗಳು ಉದ್ಯಮಿಕರಣಗೊಳ್ಳುತ್ತಿರುವ ಮತ್ತು ನಿಯಂತ್ರಿಸಲ್ಪಡುತ್ತಿರುವ ಪ್ರಸ್ತುತದ ಸಂಧರ್ಭದಲ್ಲಿ ಯಾವುದರ ಹಂಗಿಲ್ಲದ ಕಾರ್ಯಕ್ರಮ ಹೆಚ್ಚು ಆಪ್ತವಾಯ್ತು. ವೇದಿಕೆಗಳು ಮತ್ತು ಅಲ್ಲಿ ಜರುಗುತ್ತಿರುವ ಗೋಷ್ಠಿಯ ವಿಚಾರಗಳು ಸಮ್ಮೇಳನವನ್ನು ಹೆಚ್ಚು ಆಕರ್ಷಣೀಯಗೊಳಿಸಿದವು” ಎನ್ನುವುದು ವಿದ್ಯಾರ್ಥಿನಿ ಗೌರಿ ಅದಮ್ಯ ಅವರ ಅಭಿಪ್ರಾಯ ! ವಿದ್ಯಾರ್ಥಿಯ ಈ ನೋಟವು ಸಮ್ಮೇಳನದ ವಿಶಿಷ್ಟತೆಗೆ ಕನ್ನಡಿ ಹಿಡಿದಿದೆ.
“ಸಮಾಜಮುಖಿ ಸಾಹಿತ್ಯ ಸಮ್ಮೇಳನ’ ಯಾವುದೇ ಹಿತಾಸಕ್ತಿ,ಲಾಭಾಪೇಕ್ಷೆ ಇಲ್ಲದೆ, ಸಾಹಿತ್ಯ- ಸಮಾಜ ಇವೆರಡರ ಬಗೆಗಿನ ಕಾಳಜಿಯಿಂದ ರೂಪಿತವಾದದ್ದು. ಇದು ಕಸಾಪ ನಡೆಸುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಂತಹ ಕೋಟಿ ಬೆಲೆಯ,ಲಕ್ಷಾಂತರ ಜನ ಹಾಜರಿಯ ಸಮ್ಮೇಳನವಲ್ಲ. ಆದರೆ ಸಮಾಜಮುಖಿ ಸಮ್ಮೇಳನದ ಉದ್ಘಾಟನೆ,ಸಮಾರೋಪಗಳಲ್ಲಿ ಕೆಲವರ ಮಾತು, ಕೆಲವು ಗೋಷ್ಠಿಗಳ ಮೌಲಿಕ ಚರ್ಚೆ ಬೆಲೆ ಕಟ್ಟಲು ಸಾಧ್ಯವಾಗದ್ದು.ಒಬ್ಬರು ಒಂದು ಕನಸು ಕಾಣುತ್ತಾರೆ. ಅದನ್ನು ಸಾಕಾರ ಮಾಡುವುದು ಅವರೊಬ್ಬರಿಗೆ ಸಾಧ್ಯವಿಲ್ಲ. ಇತರರಿಗೆ ಅದನ್ನು ಹಂಚಿಕೊಳ್ಳುತ್ತಾರೆ. ಅವರೆಲ್ಲ ಸೇರಿ ಕನಸು ನನಸು ಮಾಡಲು ಶ್ರಮಿಸುತ್ತಾರೆ.ಹೀಗೊಬ್ಬರು ಕನಸಿದ ಫಲ, ‘ಸಮಾಜಮುಖಿ ಸಾಹಿತ್ಯ ಸಮ್ಮೇಳನ’ ಇದರ ಕನಸು ಕಂಡವರು ಜಯರಾಮ ರಾಯಪುರ.ದೊಡ್ಡ ತಂಡವೇ ಅವರೊಡನೆ ಸೇರಿ ಈ ಸಮ್ಮೇಳನಕ್ಕೆ ದುಡಿದಿದೆ” ಎಂಬುದು ಲೇಖಕ, ಬ್ಯಾಂಕಿಂಗ್ ಕ್ಷೇತ್ರದ ನಿವೃತ್ತ ಉದ್ಯೋಗಿನಾಗರಾಜ ಶೆಟ್ಟಿಅವರ ಕಣ್ಣೋಟ !

ಕನ್ನಡ ಸಂದರ್ಭದಲ್ಲಿ ಚಳವಳಿ, ಸಿನಿಮಾ, ನಾಟಕ, ಪರಿಸರ, ಚಿತ್ರಕಲೆ ಮತ್ತು ಸಂಗೀತದ ಆಯಾಮಗಳ ಕುರಿತು ಗೋಷ್ಠಿಗಳಿದ್ದವು. ಆಳವಾದ ಒಳನೋಟದ ಚರ್ಚೆಗಳು ನಡೆದವು. ಕನ್ನಡದ ಬಹುಮುಖಿ ಸಾಹಿತ್ಯದ ಸಮೃದ್ಧಿ – ಕೊರತೆಗಳನ್ನೂ ಅವುಗಳು ತೆರೆದಿಟ್ಟವು.
ಅಚ್ಚುಕಟ್ಟಾದ ಮಾದರಿ ವ್ಯವಸ್ಥೆ
ಪ್ರತಿಯೊಂದು ಹಂತದಲ್ಲಿಯೂ ಅಚ್ಚುಕಟ್ಟುತನ ಕಾಣುತ್ತಿತ್ತು ! ಮಾದರಿಯಾಗಿ “ಸಾಹಿತ್ಯ ಉತ್ಸವ ನಡೆಸುತ್ತೇವೆ” ಎನ್ನುವ ಕಾರ್ಪೊರೇಟ್ ಬೆಂಬಲಿತ ಸಮ್ಮೇಳನಗಳಿಗೂ “ಸಮಾಜಮುಖಿ ಸಾಹಿತ್ಯ ಸಮ್ಮೇಳನ” ಮಾದರಿಯಾಗಿತ್ತು. ಒಂದೇ ಆವರಣದಲ್ಲಿ ಏಕಕಾಲದಲ್ಲಿ ಐದು ಗೋಷ್ಠಿಗಳು ನಡೆದರೂ ಶಬ್ದಸಂಘರ್ಷ ಇಲ್ಲದಂತೆ ಬೇರೆಬೇರೆ ಅಂತರದಲ್ಲಿರುವ ಕಟ್ಟಡ ಮತ್ತು ತಾತ್ಕಾಲಿಕ, ಮರುಜೋಡಿಸುವ ಗುಡಾರ (ಸೃಜನಶೀಲ ವೇದಿಕೆ)ದಲ್ಲಿ ಗೋಷ್ಠಿಗಳು ನಡೆದವು.
ಮಳೆ ಬಂದರೂ ನೆನಯದ, ಇರಚಲು ಒಳಗೆ ಬೀಳದ, ಬಿಸಿಲಿನಿಂದ ಪುಸ್ತಕಗಳು, ಮೇಲ್ವಿಚಾರಕರು ಒಣಗದ ರೀತಿ ವೈಜ್ಞಾನಿಕ ಮಾದರಿಯ ಪುಸ್ತಕ ಮಳಿಗೆಗಳಿದ್ದವು. ಪ್ರತಿ ಮಳಿಗೆಯೂ ವಿಶಾಲವಾಗಿದ್ದರಿಂದ ದೂರದೂರಿನಿಂದ ಬಂದ ಪುಸ್ತಕ ಪ್ರಕಾಶಕರೂ ಖುಷಿಯಾಗಿದ್ದರು. ಪುಸ್ತಕ ಮಾರಾಟವೂ ಚೆನ್ನಾಗಿ ಆಗಿದ್ದು ಅವರ ಖುಷಿ ಇಮ್ಮಡಿಸಿತು. ಎರಡು ದಿನವೂ ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು. ಪ್ರತಿಯೊಂದು ಗೋಷ್ಠಿಯೂ ಅವರಿಂದ ತುಂಬಿತ್ತು.
ಗುಣಮಟ್ಟದ ಆಹಾರ ಮತ್ತು ವಿತರಣೆ
ಎರಡು ದಿನವೂ ಬೆಳಗ್ಗಿನ ಉಪಹಾರ, ಮಧ್ಯಾಹ್ನ ಊಟ, ಸಂಜೆ ಲಘು ಉಪಹಾರ ಮತ್ತು ರಾತ್ರಿಯೂಟದ ವ್ಯವಸ್ಥೆ ಇತ್ತು. ಎಲ್ಲಿಯೂ ಗಡಿಬಿಡಿ, ಅವಸರ, ಕೂಗಾಟಗಳಿಗೆ ಆಸ್ಪದವೇ ಇಲ್ಲದಂತೆ ಆಹಾರ ವಿತರಣೆ ಆಗಿದ್ದು ಕೂಡ ಭಾಗವಹಿಸಿದ್ದವರ ಮೆಚ್ಚುಗೆಗೆ ಪಾತ್ರವಾಯಿತು.
ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಬಂದ ಸಾಹಿತ್ಯಾಸಕ್ತರು ಎಲ್ಲ ರೀತಿಯಿಂದಲೂ ಮಾದರಿಯಾಗಿದ್ದ ಸಮ್ಮೇಳನದಲ್ಲಿ ಭಾಗವಹಿಸಿದ ಅನುಭವದಿಂದ ಸಂತಸಗೊಂಡಿದ್ದರು. “ನಿಜವಾದ ಅರ್ಥದಲ್ಲಿ ಕನ್ನಡಮುಖಿಯಾಗಿದ್ದ ಸಮಾಜಮುಖಿ ಸಾಹಿತ್ಯ ಸಮ್ಮೇಳನ” ನಿರಂತರವಾಗಿ ನಡೆಯಬೇಕು ಎಂಬುದು ಅವರ ಆಶಯ !
ಸರ್ಕಾರದ ಹಣಕಾಸು ನೆರವು ಕೇಳಿಲ್ಲ; ಕಾರ್ಪೊರೇಟ್ ಸಂಸ್ಥೆಗಳ ನಿಧಿಯ ಸಹಾಯ ಪಡೆದಿಲ್ಲ. “ಸಮಾಜಮುಖಿ ಪತ್ರಿಕೆ” ಪ್ರಕಾಶಕರ ಸ್ವಂತ ಸಾಹಿತ್ಯಾಸಕ್ತಿ, ಸಾಹಿತ್ಯಾಸಕ್ತರ ನೆರವು, ಪ್ರತಿನಿಧಿ ಶುಲ್ಕದ ಆಧಾರದಲ್ಲಿ “ಸಮಾಜಮುಖಿ ಸಾಹಿತ್ಯ ಸಮ್ಮೇಳನ” ನಡೆದಿದೆ. ಇದು ಸಹ ಗಮನಾರ್ಹ ಸಂಗತಿ. “ಬಹು ಆಯಾಮಗಳಲ್ಲಿ ಕನ್ನಡ, ಕನ್ನಡಿಗರು ಇವೆರಡನ್ನೂ ಸೇರಿದ ಕರ್ನಾಟಕ ಬೆಳವಣಿಗೆ ಕುರಿತ ಚಿಂತನೆ ಪ್ರಧಾನವಾಗಿದ್ದರೆ ಯಶಸ್ಸು ತಾನಾಗಿ ಒಲಿಯುತ್ತದೆ ಎಂಬುದಕ್ಕೂ ಈ ಸಮ್ಮೇಳನ ಉದಾಹರಣೆಯಾಗಿದೆ.
