ಮತ್ತೆಮತ್ತೆ ಮನುಷ್ಯರ ಮೇಲೆ ಹುಲಿ ದಾಳಿ ನಡೆಯುತ್ತಿದೆ ಏಕೆ ?
ಭಾರತದಲ್ಲಿ ಕರ್ನಾಟಕದ ಬಂಡೀಪುರ ಹುಲಿ ಅಭಯಾರಣ್ಯವು ದೇಶದ ಅತ್ಯಂತ ಯಶಸ್ವಿ ಸಂರಕ್ಷಣಾ ಪ್ರದೇಶಗಳಲ್ಲಿ ಒಂದಾಗಿದೆ. 872 ಚದರ ಕಿ.ಮೀ. ವಿಸ್ತೀರ್ಣದಲ್ಲಿ 150ಕ್ಕೂ ಹೆಚ್ಚು ಹುಲಿಗಳಿಗೆ ನೆಲೆಯಾಗಿದೆ, ಇದರಿಂದ ನೀಲಗಿರಿ ಮೀಸಲು ಪ್ರದೇಶವು ವಿಶ್ವದ ಅತಿದೊಡ್ಡ ಹುಲಿ ಆವಾಸಸ್ಥಾನ ಎಂಬ ಸ್ಥಾನಮಾನಕ್ಕೂ ಕಾರಣವಾಗಿದೆ. ಇದು ಹೆಮ್ಮೆಯ ಸಂಗತಿ ಹೌದು. ಆದರೆ ಇದೇ ಮಾನವ-ಹುಲಿ ಸಂಘರ್ಷ ಹೆಚ್ಚಳಕ್ಕೂ ಕಾರಣವಾಗಿದೆಯೇ ? ಈ ಅಂಶವನ್ನೂ ಪರಿಶೀಲಿಸುವುದು ಅಗತ್ಯ !!
2023ರಲ್ಲಿ ಬಂಡೀಪುರ ಮತ್ತು ನೆರೆಯ ನಾಗರಹೊಳೆ ಅಭಯಾರಣ್ಯಗಳ ಸರಹದ್ದುಗಳಲ್ಲಿ ಎಂಟು ಬಾರಿ ಹುಲಿಗಳ ನಡೆದಿವೆ ! ಅಕ್ಟೋಬರ್ 2025 ರ ಅಂತ್ಯದ ವೇಳೆಗೆ ಬಂಡೀಪುರ ಹುಲಿಧಾಮದ ಬಳಿಯ ಸರಗೂರು ತಾಲ್ಲೂಕಿನಲ್ಲಿ ಕೆಲವೇ ದಿನಗಳ ಅಂತರದಲ್ಲಿ ಮತ್ತೆಮತ್ತೆ ಹುಲಿ ದಾಳಿ ನಡೆದಿದೆ. ಇಬ್ಬರು ಬಲಿಯಾಗಿದ್ದಾರೆ. ಒಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.
ನರಭಕ್ಷಕ ಹುಲಿಗಳಲ್ಲ
ಕಾರಣಾಂತರಗಳಿಂದ ಹುಲಿಗಳು ನರಭಕ್ಷಕಗಳೂ ಆಗುತ್ತವೆ. ಆದರೆ ಈ ದಾಳಿಗಳನ್ನು ನಡೆಸಿರುವುದು ನರಭಕ್ಷಕಗಳಲ್ಲ ಎಂಬುದು ಗಮನಾರ್ಹ ಅಂಶ ! ಈ ದಾಳಿಗಳು ಪರಿಸರ ಒತ್ತಡಗಳು, ಮಾನವ ಚಟುವಟಿಕೆಗಳು ಮತ್ತು ನಡವಳಿಕೆ ಅಂಶಗಳ ಮಿಶ್ರಣದಿಂದ ಉಂಟಾಗುತ್ತಿವೆ. ಅವುಗಳನ್ನು ಮುಂದೆ ಪಟ್ಟಿ ಮಾಡಿದ್ದೇನೆ.
1. ಹೆಚ್ಚುತ್ತಿರುವ ಹುಲಿಗಳ ಸಂಖ್ಯೆ ಮತ್ತು ಪ್ರಾದೇಶಿಕ ಒತ್ತಡಗಳು
ಬಂಡೀಪುರ ಮತ್ತು ನಾಗರಹೊಳೆ ಒಟ್ಟಾಗಿ ಕರ್ನಾಟಕದ ಸುಮಾರು ಶೇಕಡ 75ರಷ್ಟು ಹುಲಿಗಳನ್ನು ಹೊಂದಿವೆ. 1970 ರ ದಶಕದಲ್ಲಿ ಪ್ರಾಜೆಕ್ಟ್ ಟೈಗರ್ ಶುರುವಾಗುವುದಕ್ಕೂ ಮುಂಚೆ ಇಲ್ಲಿ ಅಂದಾಜು ಕೇವಲ 12 ಹುಲಿಗಳಿದ್ದವು. 55 ವರ್ಷದಲ್ಲಿ ಅವುಗಳ ಸಂಖ್ಯೆ ಈ ವ್ಯಾಪ್ತಿಗಳಲ್ಲಿ 150 ದಾಟಿದೆ.. ಇದೇ ಅವಧಿಯಲ್ಲಿ ಕಾಡಿನ ವಿಸ್ತೀರ್ಣ ಹೆಚ್ಚಾಗಿಲ್ಲ. ಹಾಗಾಗಿ ಹುಲಿಗಳ ಸಾಂದ್ರತೆ ಹೆಚ್ಚಾಗಿದೆ. ಕೆಲವು ಪ್ರದೇಶಗಳಲ್ಲಿ 100 ಚದರ ಕಿ.ಮೀ.ಗೆ 15 ಹುಲಿಗಳವರೆಗೆ ಇದು ಹೆಚ್ಚಿದೆ. ಒಂದು ವಯಸ್ಕ ಹುಲಿಯ ಪ್ರತ್ಯೇಕ ಪ್ರದೇಶದ ವಿಸ್ತೀರ್ಣ 11-12 ಚದರ ಕಿ.ಮೀ ಅಥವಾ ಅದಕ್ಕಿಂತ ಕಡಿಮೆಗೆ ಕುಗ್ಗಿದೆ. ಇದು ಸಾಮಾನ್ಯವಾಗಿ ಬೆಳವಣಿಗೆಯಾಗುತ್ತಿರುವ ಹುಲಿಗಳು (ಕುಟುಂಬದ ಗುಂಪುಗಳಿಂದ ಚದುರಿಹೋಗುವ ಸಂದರ್ಭಗಳು), ವಯಸ್ಸಾದ ಹುಲಿಗಳು, ಹೋರಾಟಗಳಲ್ಲಿ ಸೋತ ಹುಲಿಗಳ ಮೇಲೆ ತೀವ್ರ ಒತ್ತಡಕ್ಕೆ ಕಾರಣವಾಗುತ್ತವೆ. ಆಗ ಮಾನವರ ವಾಸಸ್ಥಾನದ ಸಮೀಪ ಇರುವ ಅರಣ್ಯದ ಸರಹದ್ದುಗಳೆಡೆ ಅವುಗಳು ನಡೆಯುತ್ತವೆ.
ಇಂಥ ಹುಲಿಗಳು ಮತ್ತು ಮರಿಗಳನ್ನು ಹೊಂದಿರುವ ಹೆಣ್ಣು ಹುಲಿಗಳಿಗೆ ಸುಲಭದ ಬೇಟೆಯೆಂದರೆ ಮಾನವರು ಸಾಕಣೆ ಮಾಡಿರುವ ಜಾನುವಾರುಗಳು ! ಅವುಗಳು ಮೇಯಲು ಬಂದಾಗ ದಾಳಿ ಮಾಡುತ್ತವೆ. ಈ ಸಂದರ್ಭದಲ್ಲಿ ತಡೆಯಲು ಪ್ರಯತ್ನಿಸಿದ ದನಗಾಹಿ ಅಥವಾ ರೈತರ ಮೇಲೂ ಆಕ್ರೋಶದಿಂದ ದಾಳಿ ಮಾಡುತ್ತವೆ.
2. ಅರಣ್ಯಗಳ ಸಮೀಪ ಇರುವ ಕೃಷಿ ಪ್ರದೇಶಗಳು ಮಾನವ ಅತಿಕ್ರಮಣ
ಗ್ರಾಮಸ್ಥರು ಮತ್ತು ಕಾರ್ಮಿಕರು ಆಗಾಗ ಉರುವಲು ಸಂಗ್ರಹಿಸಲು, ದನಗಳನ್ನು ಮೇಯಿಸಲು ಅರಣ್ಯದಂಚಿಗೆ ತೆರಳುತ್ತಾರೆ. ಉದಾಹರಣೆಗೆ ಹೇಳುವುದಾದರೆ ನಾಗರಹೊಳೆ ಸನಿಹದಲ್ಲಿ ಕಾಫಿ ಎಸ್ಟೇಟುಗಳಿವೆ. ಇಲ್ಲಿಗೆ ತೆರಳುವ ಸಂದರ್ಭಗಳಲ್ಲಿ ಸಂಬಂಧಿಸಿದವರು ಅರಣ್ಯದ ಸರಹದ್ದುಗಳ ಮೂಲಕವೇ ಪ್ರವೇಶಿಸುವ ಅನಿವಾರ್ಯತೆ ಇರುತ್ತದೆ.ಅಂಥ ಸಂದರ್ಭಗಳಲ್ಲಿಯೂ ಹುಲಿ ದಾಳಿ ನಡೆಯುವ ಸಾಧ್ಯತೆ ಹೆಚ್ಚು !
3. ಗೋಮಾಳಗಳ ಕಣ್ಮರೆ
ಕೇವಲ 50 ವರ್ಷದ ಹಿಂದೆ ಗ್ರಾಮಗಳ ನಡುವೆ ಇದ್ದ ಗೋಮಾಳಗಳು ಕಣ್ಮರೆಯಾಗಿವೆ. ಇದಕ್ಕೆ ಅಕ್ರಮ ಅತಿಕ್ರಮಣವೇ ಕಾರಣ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಇದರಿಂದ ಸಾಕಣೆ ಮಾಡುತ್ತಿರುವ ಜಾನುವಾರುಗಳನ್ನು ಮೇವಿನ ಸಲುವಾಗಿ ಅರಣ್ಯದಂಚಿನ ಪ್ರದೇಶಗಳಿಗೆ ಅಟ್ಟುವುದು ರೂಢಿಯಾಗಿದೆ. ಕೆಲವೊಮ್ಮೆ ಇದು ಹುಲಿ, ಕಾಡಾನೆ ದಾಳಿಗೂ ಕಾರಣವಾಗುತ್ತಿದೆ.
4. ಮನುಷ್ಯರ ಭಂಗಿಗಳು
ಸಾಮಾನ್ಯವಾಗಿ ನಡೆದುಕೊಂಡು ಹೋಗುತ್ತಿರುವ ಅಥವಾ ನೆಟ್ಟಗೆ ನಿಂತಿರುವ ಮನುಷ್ಯರ ಮೇಲೆ ಹುಲಿ ದಾಳಿ ನಡೆಯುವುದು ಅಪರೂಪ. ಹೊಲಗಳಲ್ಲಿ ಹುಲ್ಲು ಕೊಯ್ಯುತ್ತಿರುವ ಅಥವಾ ಬಾಗಿ ಕೆಲಸ ಮಾಡುತ್ತಿರುವ ವ್ಯಕ್ತಿಗಳ ಮೇಲೆ ದಾಳಿ ಮಾಡಿರುವ ಪ್ರಕರಣಗಳೇ ಹೆಚ್ಚು ! ಬಹುಶಃ ಇದು ಹೊಂಚು ಹಾಕಿ ದಾಳಿ ನಡೆಸುವ ಹುಲಿಗಳ ಪ್ರವೃತ್ತಿಯನ್ನು ಪ್ರಚೋದಿಸಬಹುದು !
5.ಪರಿಸರ ಪ್ರವಾಸೋದ್ಯಮ ಮತ್ತು ಅಭಿವೃದ್ಧಿಯಿಂದ ಆವಾಸಸ್ಥಾನ ಅಡಚಣೆ
ಹೆಚ್ಚುತ್ತಿರುವ ಪರಿಸರ ಪ್ರವಾಸೋದ್ಯಮ – ಅಕ್ರಮ ರೆಸಾರ್ಟ್‌ಗಳು, ಸಫಾರಿ ವಾಹನಗಳು, ಕಾಡುಗಳಲ್ಲಿ ಗಣಿಗಾರಿಕೆ ಮತ್ತು ನಿರ್ಮಾಣ ಕಾಮಗಾರಿಗಳು ಸಹ ಅರಣ್ಯಗಳ ಸರಹದ್ದುಗಳಿಗೆ ಹುಲಿಗಳು ವಲಸೆ ಹೋಗುವಂತೆ ಮಾಡುತ್ತವೆ. ಇದು ಸಹ ಮಾನವ – ಹುಲಿ ಸಂಘರ್ಷ ಹೆಚ್ಚಾಗಲು ಕಾರಣವಾಗಿದೆ. ಬಂಡೀಪುರ, ನಾಗರಹೊಳೆಯಲ್ಲಿ ಗಣಿಗಾರಿಕೆ ಇಲ್ಲದಿದ್ದರೂ ಮಾನವರು, ವಾಹನಗಳು ಅತಿಯಾಗಿ ಕಾಡಿನೊಳಗೆ ಪ್ರವೇಶ ಮಾಡುತ್ತಿರುವುದು, ಹುಲಿ, ಆನೆ ಸಂಚರಿಸುವ ಸರಹದ್ದುಗಳಲ್ಲಿ ಅತಿಯಾದ ರೆಸಾರ್ಟುಗಳು ದುರಂತಕ್ಕೆ ಕಾರಣವಾಗುತ್ತಿವೆ.
6.ಕೃತಕ ನೀರಿನ ಹೊಂಡಗಳ ಸಂಖ್ಯೆ ಅತಿಯಾಗಿರುವುದು, ಕಾಡಿನ ಬೆಂಕಿಯೂ ಬೇಟೆ ಪ್ರಾಣಿಗಳನ್ನು ಅರಣ್ಯದಂಚಿಗೆ ವಲಸೆ ಹೋಗುವಂತೆ ಮಾಡುತ್ತವೆ.
7.ಕಾಡಿನಲ್ಲಿ ಅತಿಯಾದ ಹುಲಿಗಳ ಸಂಖ್ಯೆ, ಅತಿಯಾದ ಪೈಪೋಟಿ ಕಡಿಮೆಯಾದ ಬೇಟೆ ಸಾಧ್ಯತೆಗಳು ಅಂದರೆ ಜಿಂಕೆ, ಕಡವೆ, ಕಾಡುಕುರಿಗಳ ಸಂಖ್ಯೆ ಕಡಿಮೆಯಾಗುವುದು ಸಹ ಅರಣ್ಯದಂಚಿಗೆ ವಲಸೆ ಹೋಗಲು ಪ್ರೇರೇಪಿಸುತ್ತವೆ.
8. ಹೆಣ್ಣು ಹುಲಿಗಳು ತಮ್ಮೊಂದಿಗೆ ಮರಿಗಳಿದ್ದಾಗ ಅವುಗಳ ಸುರಕ್ಷತೆಗೆ ಅಪಾಯ ಎನಿಸಿದರೆ ಕಾಡಿನಲ್ಲಿ ಅಥವಾ ಸರಹದ್ದಿನಲ್ಲಿ ಕಂಡ ವ್ಯಕ್ತಿಯ ಮೇಲೆ ದಾಳಿ ಮಾಡುವ ಸಾಧ್ಯತೆ ಅಧಿಕ

