ಕನ್ನಡ ಅನುಭವಿಸಿದ ಸಂಕಷ್ಟಗಳ ಅರಿವಿದೆಯೇ ?(ಬಾನು ಮುಷ್ತಾಕ್ ಹೇಳಿಕೆ ಹಿನ್ನೆಲೆಯಲ್ಲಿ)
ಬೆಂಗಳೂರು ಸನಿಹದಲ್ಲಿಯೇ ಇರುವ ತಮಿಳುನಾಡು ರಾಜ್ಯಕ್ಕೆ ಸೇರಿರುವ ಹೊಸೂರು ನಿಮಗೆಲ್ಲರಿಗೂ ಗೊತ್ತಿದೆ. ಆದರೆ ಅದು ಅಚ್ಚ ಕನ್ನಡ ಪ್ರದೇಶ ಎಂದು ಎಷ್ಟು ಜನರಿಗೆ ಗೊತ್ತಿದೆ ? ಅಲ್ಲಿ ಕನ್ನಡಿಗರೇ ಬಹು ಸಂಖ್ಯಾತರು. ಆದರೂ ತಮಿಳುನಾಡಿಗೆ ಸೇರಲು ಕಾರಣವೇನು ? ಅದೂ ಒಂದು ಕಥೆ. ಮುಂದೆ ಹೇಳುತ್ತೇನೆ !
ಹೊಸೂರು ಪ್ರದೇಶವು ಸ್ವಾತಂತ್ರ್ಯಪೂರ್ವದಲ್ಲಿ ಬ್ರಿಟಿಷ್ ಆಡಳಿತದ ಮದ್ರಾಸ್ ಪ್ರೆಸಿಡೆನ್ಸಿಗೆ ಸೇರಿತ್ತು. ಅಲ್ಲಿನ ಕನ್ನಡಿಗರು ಅಲ್ಲಿ ಹೆಚ್ಚು ಸಂಖ್ಯೆಯಲ್ಲಿದ್ದ (ಈಗಲೂ) ತೆಲುಗು ಶಾಲೆಗಳಲ್ಲಿ ಕಲಿತವರು. ಪ್ರಸ್ತುತವೂ ಹಲವರು ತಮ್ಮ ಮಕ್ಕಳನ್ನು ತೆಲುಗು ಶಾಲೆಗಳಿಗೆ ಕಳಿಸುತ್ತಾರೆ. ಮನೆ ಮಾತು ಕನ್ನಡವಾದರೂ ಅಲ್ಲಿನ ರೈತರು, ಉದ್ಯಮಿಗಳು ತಮ್ಮ ಟ್ರಾಕ್ಟರ್, ಕಾರುಗಳ ಹಿಂದೆ “ಜೈ ತೆಲುಗು ತಲ್ಲಿ” ಎಂದು ಬರೆಸಿರುತ್ತಾರೆ ! ವಿಚಿತ್ರ ಎನಿಸುತ್ತದೆ ಅಲ್ಲವೇ ? ಇದೇ ಪರಿಸ್ಥಿತಿ ಮದ್ರಾಸ್ ಪ್ರೆಸಿಡೆನ್ಸಿಗೆ ಸೇರಿದ ಬಳ್ಳಾರಿಯಲ್ಲಿಯೂ ಇತ್ತು ! ಇದೇ ದುಸ್ಥಿತಿ ಹೈದ್ರಾಬಾದ್ ನಿಜಾಮನ ಆಳ್ವಿಕೆಗೆ ಸೇರಿದ ಹೈದ್ರಾಬಾದ್ ಕರ್ನಾಟಕದಲ್ಲಿಯೂ ಇತ್ತು. ಇಲ್ಲಿ ಉರ್ದು ಪ್ರಾಬಲ್ಯವಿತ್ತು ! ಬಾಂಬೆ ಕರ್ನಾಟಕಕ್ಕೆ ಸೇರಿದ ಬೆಳಗಾವಿ ಸುತ್ತಮುತ್ತಲ ಜಿಲ್ಲೆಗಳಲ್ಲಿ ಮರಾಠಿ ದರ್ಬಾರಿತ್ತು. ಮರಾಠಿ ಪ್ರಾಬಲ್ಯವಂತೂ ದಿಕ್ಕುಗೆಡಿಸುತ್ತಿತ್ತು. ಇಂಥ ಸಂದರ್ಭದಲ್ಲಿ ಆಲೂರು ವೆಂಕಟರಾಯರು ನಲುಗಿ ಹೋಗಿದ್ದ ಕನ್ನಡ ಭಾಷೆಯ ಉಳಿವಿನ ಬಗ್ಗೆ ಚಿಂತಿಸಿದರು. ಹೀಗೆಯೇ ಮುಂದುವರಿದರೆ ಹಲವೆಡೆ ಕನ್ನಡವೇ ಅಳಿಸಿಹೋಗಿ ಮೈಸೂರು ಸಂಸ್ಥಾನಕ್ಕೆ ಸೇರಿದ ಎಂಟ್ಹತ್ತು ಜಿಲ್ಲೆಗಳಲ್ಲಿ ಮಾತ್ರ ಕಾಣಬಹುದಷ್ಟೇ ಎಂದು ಆತಂಕಪಟ್ಟರು. ಕನ್ನಡ ಅಸ್ಮಿತೆಯನ್ನು ಉಳಿಸುವ ಕಾರ್ಯದಲ್ಲಿ ನಿರಂತರವಾಗಿ ತೊಡಗಿಸಿಕೊಂಡರು !
ನೆನಪಿಡಿ ಇವರು ರಾಜಕೀಯ ವ್ಯಕ್ತಿಯಲ್ಲ, ಕನ್ನಡ ಹೆಗ್ಗುರುತು ಉಳಿಸಲು ರಾಜಕೀಯ ನಂಟು ಬೆಳೆಸಿಕೊಂಡಿದ್ದರೂ ಅದರಿಂದಲೂ ಹೊರ ಬಂದರು.
ಮೊನ್ನೆ Facebookನಲ್ಲಿ ಗೆಳೆಯರೊಬ್ಬರು ಆಲೂರು “ವೆಂಕಟರಾಯರು ಸಾವರ್ಕರ್ ಅವರ ನೇರಾನೇರ ಶಿಷ್ಯರು, ಬಲಪಂಥೀಯರು, ಇದರಿಂದಾಗಿಯೇ ಹಿಂದುತ್ವದ ಸಂಕೇತವಾಗಿ ಭುವನೇಶ್ವರಿ ದೇವಿಯು ಪ್ರತಿಮೆಯು ಕನ್ನಡಾಂಬೆಯಾದಳು” ಎಂದು ಬರೆದಿರುವುದನ್ನು ಓದಿದೆ. ಆಲೂರು ವೆಂಕಟರಾಯರು ಸಾವರ್ಕರ್ ಅವರಿಗಿಂತ ಮೂರು ವರ್ಷ ಹಿರಿಯರು. ಇಬ್ಬರು ಪುಣೆಯ ಫರ್ಗ್ಯುಸನ್ ಕಾಲೇಜು ವಿದ್ಯಾರ್ಥಿಗಳು. ಸಿದ್ದಾಂತಗಳ ಕುರಿತು ಚರ್ಚಿಸುತ್ತಿದ್ದರು. ಇದರ ವಿನಃ ಆಲೂರರು ಸಾವರ್ಕರ್ ಶಿಷ್ಯರೂ ಅಲ್ಲ, ಅವರು ಪ್ರತಿಪಾದಿಸುತ್ತಿದ್ದ “ಹಿಂದುತ್ವ ರಾಷ್ಟ್ರೀಯತೆ” ಪ್ರತಿಪಾದಕರು ಅಲ್ಲ ! ಆಲೂರರು ಬಾಲ ಗಂಗಾಧರ್ ತಿಲಕ್, ಗೋಖಲೆ ಥಿಯರಿಗಳಿಂದ ಪ್ರಭಾವಿತರಾಗಿದ್ದರೂ ಕಾರ್ಯಾಚರಣೆ ಕೃತಿಗಳಲ್ಲಿ ಒಡಮೂಡಿಸಲಿಲ್ಲ!
ಫಾದರ್ ಆಫ್ ಲ್ಯಾಂಡ್ ಥಿಯರಿ
ಸಾವರ್ಕರ್ ಅವರದು ರಾಷ್ಟ್ರದ ಬಗ್ಗೆ ವಿಭಿನ್ನ ಥಿಯರಿ. ಅವರು ಅದನ್ನು “ಫಾದರ್ ಆಫ್ ಲ್ಯಾಂಡ್ ಅರ್ಥಾತ್ ಪಿತೃಭೂಮಿ” ಎಂದು ಕರೆದಿದ್ದರು. ಒಂದು ವೇಳೆ ಅವರಿಂದ ಆಲೂರರು ಪ್ರಭಾವಿತರಾಗಿದ್ದರೆ “ಭುವನೇಶ್ವರಿ” ಪರಿಕಲ್ಪನೆ ಬದಲು “ಭುವನೇಶ್ವರ ಅಥವಾ ಕನ್ನಡೇಶ್ವರ ಪರಿಕಲ್ಪನೆ ಮುಂದಿಡುತ್ತಿದ್ದರು ಅಲ್ಲವೇ ?
*ಕನ್ನಡ ರಾಷ್ಟ್ರೀಯತೆ ಚಳವಳಿ*
ನಿಮಗೆ ಅಚ್ಚರಿಯಾಗಬಹುದು, ಆಲೂರರು ಸ್ವಾತಂತ್ರ್ಯ ಬರುವುದಕ್ಕೂ ದಶಕಗಳ ಮೊದಲೇ ” ಕನ್ನಡ ರಾಷ್ಟ್ರೀಯತೆ” ಅಗತ್ಯ ಪ್ರತಿಪಾದಿಸಿದವರು. 1927ರಲ್ಲಿಯೇ ಅವರ ಕೃತಿಗಳಲ್ಲಿ ಇದು ಮೂಡಿತ್ತು. 1904-05ರ ಸಮಯದಲ್ಲಿಯೇ ಕನ್ನಡ ಏಕೀಕರಣವನ್ನು ಕನಸಲು ಆರಂಭಿಸಿದ್ದರು. ಜೊತೆಗೆ ಕನ್ನಡ ರಾಷ್ಟ್ರೀಯತೆ ಚಳವಳಿಗಾಗಿ ತಮ್ಮ ಬದುಕು ಮೀಸಲಿಟ್ಟರು. ಭಾಷಾವಾರು ಪ್ರಾಂತ್ಯ ರಚನೆಯಾಗುವುದಕ್ಕೂ ದಶಕಗಳಿಗೂ ಮೊದಲಿನಿಂದಲೇ ಕರ್ನಾಟಕ ಏಕೀಕರಣಕ್ಕಾಗಿ ದುಡಿಯಲು ಆರಂಭಿಸಿದರು. ಇದಕ್ಕಾಗಿಯೇ ಎಲ್ಲೆಡೆ ಸಂಚರಿಸಿದರು, ಅರಿವು ಮೂಡಿಸಿದರು. ಅತ್ತ ಜಮಖಂಡಿ ಸಂಸ್ಥಾನದಲ್ಲಿದ್ದ ಅಂದಾನಪ್ಪ ಮೇಟಿ ಅವರು ಸಹ ಬಾಂಬೆ ಪ್ರೆಸಿಡೆನ್ಸಿ ಮುಂದೆ ಭಾಷಾವಾರು ಪ್ರಾಂತ್ಯ ರಚನೆ, ಕರ್ನಾಟಕ ಏಕೀಕರಣ ಅಗತ್ಯವನ್ನು ಪ್ರತಿಪಾದಿಸಿದರು !
ವಿವಿಧ ಸಂಸ್ಥಾನಗಳು, ಭಾಷಾ ಪ್ರದೇಶಗಳಲ್ಲಿ ಹರಿದು ಹಂಚಿ, ನಲುಗಿ ಹೋಗಿದ್ದ ಕನ್ನಡ ಭೂ ಪ್ರದೇಶಗಳು, ಕನ್ನಡಿಗರನ್ನು ಮಾನಸಿಕವಾಗಿ ಒಂದುಗೂಡಿಸಲು ಪರಿಕಲ್ಪನೆಯ ಅಗತ್ಯವೊಂದು ಆಲೂರು ವೆಂಕಟರಾಯರು, ಶಾಂತಕವಿ ಮತ್ತು ಅಂದಾನಪ್ಪ ಮೇಟಿ ಅವರಿಗೆ ಕಂಡಿತು ! ಹೀಗಾಗಿ ವಿಜಯನಗರದ ಹಿಂದೂ ಸಾಮಾಜ್ರ್ಯ ಒಡಮೂಡುವುದಕ್ಕೂ ನೂರಾರು ವರ್ಷಗಳ ಮೊದಲಿನಿಂದಲೂ ಹಂಪಿಯಲ್ಲಿದ್ದ ಭುವನೇಶ್ವರಿ ಆಧರಿಸಿ ನಾಡದೇವಿ ಕನ್ನಡಾಂಬೆ ಪರಿಕಲ್ಪನೆ ಮುಂದಿರಿಸಿದರು ! ಇವೆಲ್ಲ ಸಂಗತಿಗಳು 1956ರಲ್ಲಿ ಭಾಷಾವಾರು ಪ್ರಾಂತ್ಯಗಳ ರಚನೆಗಳಿಗೂ ಮೊದಲೇ ಆಗಿತ್ತು ! ಇದ್ಯಾವುದೂ ಎರವಲು ಪರಿಕಲ್ಪನೆಗಳೆಲ್ಲ. ನೂರಾರು ವರ್ಷಗಳಿಂದಲೂ ಕನ್ನಡಿಗರು ತಾಯ್ನೆಲ, ತಾಯ್ನುಡಿ ಎನ್ನುವ ಪರಿಭಾಷೆ ರೂಢಿಯಲ್ಲಿ ಬಂದಿದೆ. ತೆಲುಗರು ತೆಲುಗು ತಲ್ಲಿ, ತಮಿಳರು ತಮಿಳ್ ತಾಯ್, ಎನ್ನುವುದು ರೂಢಿಯಲ್ಲಿದೆ. ಆ ನಂತರ ಅಂದಾನಪ್ಪ ಮೇಟಿ ಅವರ ಪರಿಕಲ್ಪನೆ ಆಧರಿಸಿ ಗದುಗಿನ ಕಲಾ ಮಂದಿರದ ಸಿ.ಎನ್. ಪಾಟೀಲರು ನಾವು ಇತ್ತೀಚಿನ ಸಾಹಿತ್ಯ ಸಮ್ಮೇಳನಗಳಲ್ಲಿ ಕಾಣುವ “ಭುವನೇಶ್ವರಿ” ಚಿತ್ರವನ್ನು ಚಿತ್ರಿಸಿ ಮುಂದಿರಿಸಿದರು.ಅಚ್ಚರಿಯೆಂದರೆ ಅವರುಗಳ ಜೀವಿತಕಾಲದಲ್ಲಿ ಭುವನೇಶ್ವರಿ ಪರಿಕಲ್ಪನೆ ವ್ಯಾಪಕವಾಗಿ ಬಳಕೆಯಾಗಲಿಲ್ಲ ! ನಂತರವೂ ಕಸಾಪ ನಡೆಸುವ ಸಮ್ಮೇಳನಗಳಲ್ಲಿ, ನವೆಂಬರ್ 1 ರಂದು ಶಾಲೆಗಳಲ್ಲಿ ನಡೆಯುವ ರಾಜ್ಯೋತ್ಸವ ಆಚರಣೆ ಸಂದರ್ಭಗಳಲ್ಲಿಯೂ ಯಾರಿಗೂ ಇರಿಸುಮುರಿಸು ಉಂಟು ಮಾಡುವ ರೀತಿ ಭುವನೇಶ್ವರಿ ಚಿತ್ರ ಬಳಕೆಯಾಗುವುದಿಲ್ಲ!ಅವರ್ಯಾರಿಗೂ ಮುಂದೊಂದು ದಿನ ಇದು ಹಿಂದುತ್ವದ ಸಂಕೇತವೆಂದು ಮಹಿಳಾ ಸಾಹಿತಿಯೊಬ್ಬರು ಪರಿಭಾವಿಸಬಹುದೆಂಬ ಕಲ್ಪನೆಯೂ ಇರಲಿಲ್ಲ. ಏಕೆಂದರೆ ಅದು ಕನ್ನಡ ಭಾಷಾ ಭಾವನೆಗಳಿಗೆ ಮೂರ್ತ ಸ್ವರೂಪ ಕೊಡುವ; ತನ್ಮೂಲಕ ಕನ್ನಡಿಗರನ್ನು ಒಂದುಗೂಡಿಸಲು ಬಳಸಲೆತ್ಮಿಸುವ ಅಪ್ಪಟ ಸೆಕ್ಯುಲರ್ ಪರಿಕಲ್ಪನೆಯಾಗಿತ್ತು ! ಹಿಂದುತ್ವದ ಪರಿಭಾಷೆಯ ಲೇಪನವಂತೂ ಆಲೂರು ವೆಂಕಟರಾಯರಿಂದ ಸಾಧ್ಯವಾಗದ ಮಾತಾಗಿತ್ತು ! ಏಕೆಂದರೆ ಅವರು ವಿಶ್ವ ಭಾತೃತ್ವವನ್ನು, ಅಖಂಡ ಭಾರತವನ್ನು ಪ್ರತಿಪಾದಿಸಿದವರು. ಡಾ. ಡಿ.ಆರ್. ನಾಗರಾಜ್ ಸಹ ಅದನ್ನು ಗುರುತಿಸಿದ್ದರು. ಆಲೂರು ವೆಂಕಟರಾಯರು ಮತ್ತು ಡಾ.ಚಿದಾನಂದಮೂರ್ತಿ ಅವರು ನಡೆಸಿದ ಕನ್ನಡ ಚಳವಳಿಗಳ ಭಿನ್ನತೆ ಗುರುತಿಸುವ ಸಂದರ್ಭದಲ್ಲಿ ಇಂಥ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ !
