ಭುವನೇಶ್ವರಿ ಪರಿಕಲ್ಪನೆ ಒಪ್ಪದವರು ಶಾರದೆ ಮೂರ್ತ ಸ್ವರೂಪ ಒಪ್ಪುವರೇ ?
ಭಾಷೆಗೆ ಅಲ್ಪಸಂಖ್ಯಾತ, ಬಹುಸಂಖ್ಯಾತ ಎನ್ನುವ ದೃಷ್ಟಿಕೋನ ಇರುವುದಿಲ್ಲ. ಧಾರ್ಮಿಕತೆಯೂ ಇರುವುದಿಲ್ಲ. ಮೂಲತಃ ಸಂವಹನಕ್ಕಾಗಿಯೇ ಬೆಳವಣಿಗೆಯಾದ ಅದರಲ್ಲಿ ಪೂರ್ವಾಗ್ರಹಗಳೂ ಇರುವುದಿಲ್ಲ. ಪರಿಶ್ರಮಪಟ್ಟಷ್ಟೂ ಒಲಿಯುತ್ತದೆ; ಸಮರ್ಥವಾಗಿ ಅಭಿವ್ಯಕ್ತಿ ಮಾಡುತ್ತದೆ. ಇದರಲ್ಲಿ ಧರ್ಮದ ಬೇಧಭಾವಗಳನ್ನು ಕಾಣಲು ಸಾಧ್ಯವೂ ಇಲ್ಲ. ಇದಕ್ಕೆ ಶಿಶುನಾಳ ಶರೀಫರು, ಕರೀಂಖಾನ್, ನಿಸಾರ್ ಅಹಮದ್ ಹೀಗೆ ಅನೇಕ ಉದಾಹರಣೆಗಳನ್ನು ನೀಡಬಹುದು. ಕನ್ನಡದಲ್ಲಿ ಅಭಿವ್ಯಕ್ತಿಸುವವರೆಲ್ಲ ಕನ್ನಡಿಗರು. ಮನೆಯ ಭಾಷೆ ಬೇರೆಯಾಗಿದ್ದರೂ ಭಾವನೆಗಳ ವ್ಯಕ್ತತೆಗೆ ಕನ್ನಡವನ್ನು ಆಧರಿಸಿದ ಅನೇಕ ಸಾಹಿತಿಗಳು ಇದ್ದಾರೆ ! ಮಾಸ್ತಿ ವೆಂಕಟೇಶ ಅಯ್ಯಂಗಾರ್, ದ.ರಾ. ಬೇಂದ್ರೆ, ಗಿರೀಶ್ ಕಾರ್ನಾಡ್ ಹೀಗೆ ಹಲವರನ್ನು ಉದರಿಸಬಹುದು. ಇದು ಏನನ್ನು ಸೂಚಿಸುತ್ತದೆ ? ಯಾವುದೇ ಭಾಷೆ ತನ್ನನ್ನು ಒಪ್ಪಿಕೊಂಡವರೆಲ್ಲರನ್ನೂ ಅಪ್ಪಿಗೊಳ್ಳುತ್ತದೆ. ಇದೇ ಸಂದರ್ಭದಲ್ಲಿ ಭಾಷೆಯನ್ನು ಭಾವನೆಗಳಾಗಿ ನೋಡುವುದರಿಂದ ಪರಿಕಲ್ಪನೆಗಳು ಮೂಡುತ್ತವೆ. ಕನ್ನಡದ ಸಂದರ್ಭದಲ್ಲಿ ತಾಯಿ ಭುವನೇಶ್ವರಿ, ಕೆಂಪು ಹಳದಿಯ ಬಾವುಟ. ಇವು ಧರ್ಮಾತೀತ. ಏಕೆಂದರೆ ಇವುಗಳು ಧರ್ಮದ ಆಧಾರಗಳಲ್ಲಿ ಮೂಡಿದ್ದಲ್ಲ; ಭಾವನೆಗಳ ಸಾಕಾರತೆಯ ಹಿನ್ನೆಲೆಯಲ್ಲಿ ಮೂಡಿದ ಅಪ್ಪಟ ಭಾಷಾ ಸಂಕೇತಗಳು ! ಇದನ್ನು ಹಿಂದೂ ಭಾವನೆ ಆಧರಿತ ಎಂದು ಪರಿಭಾವಿಸಬಾರದು.
ಪ್ರಸ್ತುತ ಸಂದರ್ಭದಲ್ಲಿ ಸಾಹಿತಿ ಬಾನು ಮುಷ್ತಾಕ್ ಅವರು ಕನ್ನಡ ಭುವನೇಶ್ವರಿಯನ್ನೂ, ಕನ್ನಡ ಬಾವುಟ ಬಣ್ಣಗಳನ್ನು ಧಾರ್ಮಿಕ ಹಿನ್ನೆಲೆಯಲ್ಲಿಯೇ ವ್ಯಾಖ್ಯಾನಿಸಿದ್ದಾರೆ. “ಭಾಷೆಗೆ ಧಾರ್ಮಿಕ ಬಣ್ಣಗಳ ಲೇಪನವನ್ನೂ ಮಾಡುವುದರ ಮೂಲಕ ಮುಸ್ಲೀಮರನ್ನು ಹೊರಗಿಡಲಾಗಿದೆ” ಎಂದು ಪರಿಭಾವಿಸಿದ್ದಾರೆ. ಭಾಷೆ ಎಂದು ಪರಿಬೇಧ ಮಾಡುವುದಿಲ್ಲ. ಓದುಗರು ಆ ಪರಿಭಾವನೆಯಿಂದ ಓದುವುದಿಲ್ಲ. ಆದ್ದರಿಂದಲೇ ನಿಸಾರರ ಸಾಹಿತ್ಯವನ್ನಾಗಲಿ, ಸಾರಾ ಅಬೂಬಕರ್, ಬಾನು ಮುಸ್ತಾಕ್ ಸಾಹಿತ್ಯವನ್ನಾಗಲಿ ಕನ್ನಡ ಸಾಹಿತ್ಯ ಜಗತ್ತು ಒಪ್ಪಲು ಅರ್ಥಾತ್ ಮೆಚ್ಚಲು ಸಾಧ್ಯವಾಗಿದೆ. ಇವರಿಗೆ ಯಾವ ಪ್ರಶಸ್ತಿ ಬಂದರೂ ಬಾರದಿದ್ದರೂ ಅವರು ಸೃಷ್ಟಿಸಿರುವ ಸಾಹಿತ್ಯದ ಹಿರಿಮೆ ಕುಂದುವುದಿಲ್ಲ. ಇಷ್ಟಿದ್ದರೂ ಬಾನು ಅವರು ಭಾಷೆಯ ಭಾವಗಳ ಪರಿಕಲ್ಪನೆಗಳನ್ನು ಧಾರ್ಮಿಕ ದೃಷ್ಟಿಯಿಂದ ನೋಡಿರುವುದು ದಿಗ್ಬ್ರಮೆಯ ವಿಷಯ !
“ಕನ್ನಡವನ್ನು ಕನ್ನಡ ಭುವನೇಶ್ವರಿಯಾಗಿ ಮಾಡಿಬಿಟ್ಟಿರಿ; ಕೆಂಪು ಮತ್ತು ಹಳದಿ, ಅರಿಶಿಣ, ಕುಂಕುಮ ಬಾವುಟವನ್ನು ಹಾಕಿ, ಅರಿಶಿಣ, ಕುಂಕುಮ ಲೇಪಿತ ಮಾಡಿ ಆಕೆಯನ್ನು ಕರೆದುಕೊಂಡು ಹೋಗಿ ಮಂದಾಸನದ ಮೇಲೆ ಕೂರಿಸಿ ಬಿಟ್ಟಿರಿ ! ನಾನು ಎಲ್ಲಿ ನಿಲ್ಲಬೇಕು; ನಾನು ಏನನ್ನು ನೋಡಬೇಕು” ಎಂಬ ಪ್ರಶ್ನೆಯನ್ನು ಅವರು ಗೊಂದಲಕ್ಕೆ ಅವಕಾಶವಿಲ್ಲದಂತೆ ಸ್ಪಷ್ಟವಾಗಿ ಕೇಳಿದ್ದಾರೆ !
ಕನ್ನಡ ಸಾಹಿತ್ಯ ಲೋಕ ಅವರನ್ನೆಂದೂ ಹೊರಗಿಟ್ಟಿಲ್ಲ. ಯಾವ ಧಾರ್ಮಿಕ ತಾರತಮ್ಯವನ್ನೂ ಮಾಡಿಲ್ಲ; ಮಾಡಲು ಸಾಧ್ಯವೂ ಇಲ್ಲ. ಏಕೆಂದರೆ ಭಾಷೆಗೆ ಧಾರ್ಮಿಕತೆಯ ಲೇಪನಗಳಿರುವುದಿಲ್ಲ. ನೀವು ಭಾಷಾ ಭಾವಗಳ ಪರಿಕಲ್ಪನೆಗಳನ್ನು ಒಪ್ಪುವುದಿಲ್ಲ ಎಂದರೆ ಭಾಷೆ ಮುನಿಸಿಕೊಳ್ಳುವುದಿಲ್ಲ; ದೂರ ತಳ್ಳುವುದೂ ಇಲ್ಲ. ನೀವು ” ಕನ್ನಡ ಭಾಷೆಯನ್ನೇ ಅಭಿವ್ಯಕ್ತಿ ಮಾಧ್ಯಮವಾಗಿಸಿಕೊಂಡ ಲಂಕೇಶ್ ಪತ್ರಿಕೆ” ಮೂಲಕ ಬೆಳಕಿಗೆ ಬಂದ ಕ್ಷಣದಿಂದಲೇ ಕನ್ನಡ ಸಾಹಿತ್ಯದಲ್ಲಿ ಸ್ಥಾನ ಗಳಿಸಿದ್ದೀರಿ. ಬೂಕರ್ ಪ್ರಶಸ್ತಿ ನಂತರವಂತೂ ಕನ್ನಡಿಗರು (ಧರ್ಮಾತೀತವಾಗಿ) ಸಂಭ್ರಮಿಸುತ್ತಿದ್ದಾರೆ. ಹೀಗಿರುವಾಗ “ನಾನು ಎಲ್ಲಿ ನಿಲ್ಲಬೇಕು, ನಾನು ಏನನ್ನು ನೋಡಬೇಕು” ಎಂಬ ಪ್ರತ್ಯೇಕತಾ ಭಾವ ಮೂಡಿದ್ದಾರೂ ಹೇಗೆ ?
ಇನ್ನು ದಸರಾ ಉದ್ಘಾಟಿಸುವ ವಿಷಯ; ನುಡಿ ಹಬ್ಬವಾಗಲಿ; ನಾಡಹಬ್ಬವಾಗಲಿ ಒಂದು ಧರ್ಮಕ್ಕಷ್ಟೇ ಸೀಮಿತವಲ್ಲ. ಯಾವುದೇ ಧರ್ಮದವರೂ ಚಾಲನೆ ನೀಡಬಹುದು. ಏಕೆಂದರೆ ಪ್ರತ್ಯಕ್ಷವಾಗಿ – ಪರೋಕ್ಷವಾಗಿ ಹಿಂದೂ – ಮುಸ್ಲೀಮ್ – ಕ್ರೈಸ್ತ – ಬೌದ್ಧ – ಜೈನ ಇತ್ಯಾದಿಗಳೆಲ್ಲರೂ ಜೇನುಹುಳುಗಳ ಹಾಗೆ ಅವುಗಳ ಯಶಸ್ಸಿಗೆ ಶ್ರಮಿಸುತ್ತಾರೆ. ಇಂಥ ಸಂದರ್ಭದಲ್ಲಿ ಭಾಷೆಗೆ ಹಿರಿಮೆ – ಗರಿಮೆ ತಂದವರ ಮುಖಾಂತರ ದಸರೆಗೆ ಚಾಲನೆ ನೀಡಿಸುವುದು ಅವರಿಗೆ ನೀಡುವ ಗೌರವ. ಇದರ ಮೂಲಕ ಪ್ರತಿಯೊಬ್ಬ ನಾಡವರೂ ತಮ್ಮನ್ನು ತಾವು ಗೌರವಿಸಿಕೊಳ್ಳುತ್ತಾರೆ. ನಾಡಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ವರ್ಷದ ದಸರೆಗೆ ಚಾಲನೆ ನೀಡಲು ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿದ್ದಾರೆ. ಇದು ಶ್ಲಾಘನೀಯ ಸಂಗತಿ ! ಆದರೆ ಆಹ್ವಾನಿತರಾದವರಿಗೆ ಭಾಷೆ ಭಾವಗಳ ಮೂರ್ತ ಪರಿಕಲ್ಪನೆಯ ಕುರಿತೇ ಸಮ್ಮತವಿಲ್ಲದಿರುವಾಗ ನಾಡಿನ ಧಾರ್ಮಿಕ ಭಾವನೆಗಳೂ ಮೂರ್ತ ಸ್ವರೂಪ ತಳೆದಿರುವ ಆಚರಣೆಗಳಿಗೆ ಹೇಗೆ ಚಾಲನೆ ನೀಡಿಯಾರು ? ಇಲ್ಲಿ ಶಾಸ್ತ್ರವಿದೆ, ಶಾರದೆಯೂ ಇದ್ದಾಳೆ. ಭುವನೇಶ್ವರಿಯ ಪರಿಕಲ್ಪನೆಯನ್ನು ಒಪ್ಪದವರು ಶಾರದೆಯ ಮೂರ್ತ ಸ್ವರೂಪವನ್ನು ಒಪ್ಪುವರೇ ?
