ಕನ್ನಡ ಬಾವುಟದ ಬಣ್ಣಗಳು ಧಾರ್ಮಿಕತೆ ಸಂಕೇತಿಸುತ್ತವೆಯೇ ?
ಬಣ್ಣಗಳು ತಟಸ್ಥವಾಗಿರುತ್ತವೆ; ಆದರೆ ಭಾವನೆಗಳಿಗೆ ಬಣ್ಣಗಳಿರುತ್ತವೆ. ಆದ್ದರಿಂದಲೇ ಸುಮ್ಮನಿರುವ ಬಣ್ಣಗಳಿಗೂ ಭಾವಗಳ ರಂಗು ಬಳಿಯುತ್ತೇವೆ. ಸಂದರ್ಭನುಸಾರ ಇದು ನಡೆಯುತ್ತದೆ. ಖುಷಿ, ದುಃಖ, ಸಂಕಟ, ಅಪಾಯ, ಅಭಯ ಹೀಗೆ ಬೇರೆಬೇರೆ ಸನ್ನಿವೇಶಗಳ ಸಂದರ್ಭದಲ್ಲಿ ನೀಡುವ ಬಣ್ಣಗಳೇ ಬೇರೆ !
ಬೇರೆಬೇರೆ ಪ್ರದೇಶಗಳು, ಆಡಳಿತಗಳಲ್ಲಿ ಹರಿದು ಹಂಚಿ ಹೋಗಿದ್ದ ಕನ್ನಡಿಗರನ್ನು ಭಾವನಾತ್ಮಕವಾಗಿ ಒಗ್ಗೂಡಿಸುವ ಕಾರಣದಿಂದಲೇ “ಭುವನೇಶ್ವರಿ” ಪರಿಕಲ್ಪನೆ ಉದಯವಾಯಿತು. ಯಾರು ಈ ಪರಿಕಲ್ಪನೆಯನ್ನು ನೀಡಿದರೋ ಅವರ ಕಾಲದಲ್ಲಿ ಇದು ವ್ಯಾಪಕವಾಗಿ ಬಳಕೆಯಾಗಲಿಲ್ಲ. ಆದರೆ ಕನ್ನಡ ಬಾವುಟದ ಸಂದರ್ಭದಲ್ಲಿ ಇದೇ ಮಾತನ್ನು ಹೇಳಲಾಗುವುದಿಲ್ಲ. ದಿನೇದಿನೇ ಅದರ ಬಳಕೆ ಹೆಚ್ಚುತ್ತಲೇಇದೆ.ಇದಕ್ಕೆ ಕಾರಣಗಳೂ ಎಲ್ಲರಿಗೂ ಗೊತ್ತಿದೆ. ಇಂದಿಗೂ ಕನ್ನಡಿಗರು, ಕನ್ನಡ ನೆಮ್ಮದಿಯಾಗಿರುವ ವಾತಾವರಣ ನಿರ್ಮಾಣವಾಗಿಲ್ಲ.ಪರಭಾಷೆಗಳಿಂದ, ಪರಭಾಷಿಕರಿಂದ ಆತಂಕವಿದ್ದೇ ಇದೆ. ಇಂಥ ಸಂದರ್ಭದಲ್ಲಿ ಕನ್ನಡಿಗರನ್ನು ಭಾವನಾತ್ಮಕವಾಗಿ ಒಂದುಗೂಡಿಸುವ ಕನ್ನಡ ಬಾವುಟದ ಬಣ್ಣಗಳಿಗೂ ಅರ್ಥವಿದೆ. ಅವುಗಳಲ್ಲಿ ಮತೀಯತೆ ಇಲ್ಲ, ಮಹಿಳಾ ಸಾಹಿತಿಯೊಬ್ಬರು ತಪ್ಪಾಗಿ ಅರ್ಥೈಸಿದಂತೆ ಅವು ಅರಿಶಿಣ – ಕುಂಕುಮಗಳಲ್ಲ !
1960ರ ದಶಕದಲ್ಲಿಯೂ ಅಂದರೆ ಭಾಷಾವಾರು ಪ್ರಾಂತ್ಯ ರಚನೆಯಾದ ನಂತರವೂ ಕನ್ನಡಿಗರು – ಕನ್ನಡ ಪಟ್ಟಿರುವ ಕಷ್ಟನಷ್ಟಗಳು ಅನೇಕ ! ಇಂಥ ಸಂದರ್ಭದಲ್ಲಿ ಕನ್ನಡ ಅಸ್ಮಿತೆಗಾಗಿ ಕನ್ನಡ ಚಳವಳಿಕಾರ ಎಂ.ರಾಮಮೂರ್ತಿ ಅವರು “ಕನ್ನಡ ಧ್ವಜ”ದ ಪರಿಕಲ್ಪನೆ ಮುಂದಿಟ್ಟರು.
ಹಳದಿ, ಕರ್ನಾಟಕ ನಕ್ಷೆ ಮತ್ತು ಮಧ್ಯದಲ್ಲಿ ಭತ್ತದ ಕಿರೀಟವನ್ನು ಒಳಗೊಂಡ ಧ್ವಜವನ್ನು ವಿನ್ಯಾಸಗೊಳಿಸಿದರು.ಈ ನಂತರದ ದಿನಗಳಲ್ಲಿ ದ್ವಿವರ್ಣ ಧ್ವಜ ಅಂದರೆ ಮೇಲ್ಭಾಗದಲ್ಲಿ ಹಳದಿ ಮತ್ತು ಕೆಳಭಾಗದಲ್ಲಿ ಕೆಂಪು ಅಳವಡಿಸಿಕೊಳ್ಳಲಾಯಿತು. ಹಳದಿ ಸಮೃದ್ಧಿಯನ್ನು ಸಂಕೇತಿಸಿದರೆ ಕೆಂಪು ಬಣ್ಣವು ಧೈರ್ಯ ಮತ್ತು ಯೋಗಕ್ಷೇಮವನ್ನು ಪ್ರತಿನಿಧಿಸುತ್ತದೆ.
ಈ ಧ್ವಜಕ್ಕೆ ಭಾರತ ಸರ್ಕಾರದಿಂದ ಅಧಿಕೃತ ಮನ್ನಣೆ ಇಲ್ಲದಿದ್ದರೂ ಕನ್ನಡಿಗರ ಭಾವನಾತ್ಮಕ ಮನ್ನಣೆ ದೊರೆತಿದೆ. ಕರ್ನಾಟಕ ರಾಜ್ಯೋತ್ಸವ ಮತ್ತು ಕನ್ನಡ ಪರ ಚಳುವಳಿಗಳಲ್ಲಿ ವ್ಯಾಪಕವಾಗಿ ಬಳಸಲಾಗುವ ಈ ಧ್ವಜವು ಕನ್ನಡದ ಗುರುತು ಮತ್ತು ಹೆಮ್ಮೆಯ ಸಂಕೇತವೂ ಆಗಿದೆ.
ವಾಸ್ತವ ಹೀಗಿರುವಾಗ “ ಕನ್ನಡವನ್ನೂ ಕನ್ನಡ ಭುವನೇಶ್ವರಿಯಾಗಿ ಮಾಡಿಬಿಟ್ಟಿರಿ, ಕೆಂಪು ಮತ್ತು ಹಳದಿ, ಅರಿಶಿಣ, ಕುಂಕುಮ ಬಾವುಟವನ್ನು ಹಾಕಿ, ಅರಿಶಿಣ -ಕುಂಕುಮ ಲೇಪಿತ ಮಾಡಿ ಆಕೆಯನ್ನು ಕರೆದುಕೊಂಡು ಹೋಗಿ ಮಂದಾಸನದ ಮೇಲೆ ಕೂರಿಸಿಬಿಟ್ಟಿರಿ. ನಾನು ಎಲ್ಲಿ ನಿಲ್ಲಬೇಕು ? ನಾನು ಏನನ್ನು ನೋಡಬೇಕು” ಎಂದು ಬಾನು ಮುಷ್ತಾಕ್ ಅವರು ಆರೋಪಿಸಿರುವುದರಲ್ಲಿ ಅರ್ಥವಿದೆಯೇ ? ಅಮಾಯಕ ಪರಿಕಲ್ಪನೆಗಳು ಮಾಡಿದ ಅಪರಾಧವಾದರೂ ಏನು ?
