ಪೋಟೋ ತೆಗೆದ ಮೇಲೆ ಅದನ್ನು ನಾವು ನಾಲ್ಕು ಗೋಡೆಗಳ ನಡುವಿನ ಒಂದು ಪೇಪರ್ ತುಂಡಿನಂತೆ ನೋಡ್ತೀವಿ. ಈ ವಾತಾವರಣ ನಮ್ಮಗಿಲ್ಲಿ ಯಾವ ಅನುಭವವನ್ನು ಕೊಡುತ್ತೋ ಅದೇ ಅನುಭೂತಿಯನ್ನು ಅಲ್ಲಿಯೂ ನೀಡಬೇಕು -ಪೂರ್ಣಚಂದ್ರ ತೇಜಸ್ವಿ
ಚಿತ್ರಕಲಾ ಪರಿಷತ್, ಭಾರತ ಯಾತ್ರಾ ಕೇಂದ್ರ ಮತ್ತು ವಿಸ್ಮಯ ಪ್ರತಿಷ್ಠಾನ ಸಹಭಾಗಿತ್ವದಲ್ಲಿ ತೇಜಸ್ವಿ ನೆನಪಿನ ಉತ್ಸವ-75 ಅರ್ಥಪೂರ್ಣವಾಗಿ ಆಚರಿಸಲ್ಪಡುತ್ತಿದೆ. ಈ ಸಂದರ್ಭದಲ್ಲಿ ತೇಜಸ್ವಿ ಅವರು ತೆಗೆದಿರುವ ಚಿತ್ರಗಳೂ ಸೇರಿದಂತೆ ವಿವಿಧ ಛಾಯಾಗ್ರಾಹಕರು ಕ್ಲಿಕ್ಕಿಸಿದ ಚಿತ್ರಗಳ ಪ್ರದರ್ಶನ ಏರ್ಪಾಡಾಗಿದೆ. ಇಲ್ಲಿ ತೇಜಸ್ವಿ ಅವರ ಈ ಮೇಲಿನ ಮಾತುಗಳನ್ನು ಸಾಕಾರಗೊಳಿಸಿರುವ, ವ್ಹಾವ್ ಎಂದು ಉದ್ಗಾರ ಮೂಡಿಸುವ ಅನೇಕ ಚಿತ್ರಗಳಿವೆ.
“ಗಾಳಿ, ಬೆಳಕು, ತೇವಾಂಶ, ಸುವಾಸನೆ, ನಿಶ್ಯಬ್ಧತೆ, ಜೈವಿಕ ಚಲನಶೀಲತೆ, ಮಣ್ಣಿನ ವಾಸನೆ, ಛಾಯಾಗ್ರಹಕನ ಮನಸ್ಥಿತಿ ಇವೆಲ್ಲದರ ಸಮ್ಮಿಲನ ಈಗ ನೋಡುತ್ತಿರುವ ದೃಶ್ಯ. ಇದೇ ಪೋಟೋ ಆಗಿ ಪ್ರಿಂಟ್ ಆದಾಗ ನೋಡುಗರ ಕಣ್ಣು ಮಾತ್ರ ಇವೆಲ್ಲವನ್ನೂ ಗ್ರಹಿಸಬೇಕಾಗಿರುತ್ತದೆ. ಅದೇ ಪೋಟೋದ ಲಿಮಿಟೇಶನ್” ಇದು ತೇಜಸ್ವಿ ಅವರ ಮಾತುಗಳು ( ‘ಇದನ್ನೆಲ್ಲ ಹೇಳಲು ತೇಜಸ್ವಿ ನನಗೆ ನಿಮಿತ್ತ’ ಕೃತಿಯಿಂದ)
ಚಿತ್ರ ಪ್ರದರ್ಶನದಲ್ಲಿ ಇಂಥ ಅಂಶಗಳನ್ನು ಒಳಗೊಂಡ ಅನೇಕ ಚಿತ್ರಗಳು ನನ್ನನ್ನು ಪ್ರಭಾವಿತಗೊಳಿಸಿದವು. ಇವುಗಳನ್ನು ಕ್ಲಿಕ್ಕಿಸುವಲ್ಲಿ ಛಾಯಾಗ್ರಾಹಕರ ಅಪಾರ ಪರಿಶ್ರಮ, ಶ್ರದ್ಧೆ ಅಡಕವಾಗಿದೆ ಎಂಬುದು ತಂತಾನೆ ತಿಳಿಯುತ್ತದೆ. ಜೊತೆಗೆ ‘ಛಾಯಾಗ್ರಹಣ ಒಂದು ತಪ್ಪಸ್ಸು’ ಎಂದೂ ಮನದಟ್ಟಾಗುತ್ತದೆ.
ಇಂಥ ಚಿತ್ರಗಳಲ್ಲಿ ಕೆಲವೇ ಕೆಲವು ಚಿತ್ರಗಳನ್ನು ಮತ್ತು ಇವುಗಳನ್ನು ಕ್ಲಿಕ್ಕಿಸಿದ ಛಾಯಾಗ್ರಾಹಕರ ಹೆಸರುಗಳನ್ನು ನೀಡಿದ್ದೇನೆ. ಈ ಸುಂದರ ಚಿತ್ರಗಳನ್ನು ಏಮ್ & ಶೂಟ್ ಕ್ಯಾಮರಾದಲ್ಲಿ ತೆಗೆದು ಇಲ್ಲಿ ನೀಡಿದ್ದೇನೆ. ಮೂಲಚಿತ್ರದ ಸೊಬಗು ಇಲ್ಲಿಲ್ಲ. ಚಿತ್ರಕಲಾ ಪರಿಷತ್ ನಲ್ಲಿ ಸೆಪ್ಟೆಂಬರ್ 14ರವರೆಗೆ ಚಿತ್ರ ಪ್ರದರ್ಶನವಿದ್ದು ಮೂಲಚಿತ್ರಗಳ ಸೊಗಸನ್ನು ಅಲ್ಲಿ ಕಣ್ತುಂಬಿಕೊಳ್ಳಬಹುದು.