ಕೃಷಿ

ದೇಹಕ್ಕೆ ಅಧಿಕ ಶಕ್ತಿ ನೀಡುವ ಅಳಿಯನ ಅಕ್ಕಿ  

ತಮಿಳುನಾಡಿನ ಪುದುಕೊಟೈಯ ಸಾವಯವ ಕೃಷಿಕ ಅರವಿಂದನ್ ನೀಲಮೇಘಮ್ ಅವರ ಕೃಷಿಕ್ಷೇತ್ರಕ್ಕೆ ಹೋಗಿದ್ದೆ. ಮುಂಜಾನೆಯಿಂದಲೇ ಅವರ ಸುಸ್ಥಿರ-ಸಾವಯವ ಕೃಷಿಪದ್ಧತಿ ಕುರಿತು ಚಿತ್ರೀಕರಣ ಆರಂಭಿಸಿದ್ದೆವು.  ಬೆಳಗ್ಗೆ ಸುಮಾರು 9 ಗಂಟೆಗೆ ಅಲ್ಲಿಗೆ ಅವರ ಕುಟುಂಬದವರು ನಮಗೆಲ್ಲ ಮನೆಯಿಂದ ತಿಂಡಿ ಮಾಡಿ ತಂದಿದ್ದರು. “ಮಾಪಿಳ್ಳೈ ಸಾಂಬಾ ಅಕ್ಕಿಯಿಂದ ಮಾಡಿದ ಗಂಜಿಯೂ ಇದೆ. ಕುಡೀತೀರಾ” ಎಂದರು.

ಮಾಪಿಳ್ಳೈ ಸಾಂಬಾ ಅಕ್ಕಿ ತಳಿಯ ಬಗ್ಗೆ ಕೇಳಿದ್ದೆ. ಆದರೆ ಅದರಿಂದ ಮಾಡಿದ ಆಹಾರ ಸವಿದಿರಲಿಲ್ಲ. ಸಂತೋಷದಿಂದ ಆಯಿತು ಎಂದೆ. ದೊಡ್ಡ ಬಟ್ಟಲಿನಲ್ಲಿ ಗಂಜಿ ತುಂಬಿ ನೆಚ್ಚಿಕೊಳ್ಳಲು ಎಣ್ಣೆಯಲ್ಲಿ ಕರಿದ ಒಣ ಮೆಣಸಿನಕಾಯಿ, ಸಂಡಿಗೆ ಕೊಟ್ಟರು. ಭಾರಿ ರುಚಿಯಾಗಿತ್ತು. ಮೂರು ಬಟ್ಟಲು ಗಂಜಿ ಕುಡಿದಿದ್ದಾಯ್ತು.

ಈ ನಂತರ ಕರ್ನಾಟಕ, ಆಂಧ್ರ ಮತ್ತು ತಮಿಳುನಾಡು ಗಡಿಗಳು ಸಂಗಮಿಸುವ ಸ್ಥಳದಲ್ಲಿರುವ ಮಲ್ಲಯ್ಯನ ಬೆಟ್ಟಕ್ಕೆ ಹೋಗಿದ್ದೆ. ಮುಂಜಾನೆಯೇ ಹೊರಟ್ಟಿದ್ದರಿಂದ ತಿಂಡಿ ವೇಳೆಗೆ ಕೃಷ್ಣಗಿರಿ ಸನಿಹ ಇದ್ದೆ. ಅಲ್ಲಿ ಹೆದ್ದಾರಿ ಬದಿಯಲ್ಲೇ  ಇರುವ “ಮುರುಗನ್ ಇಡ್ಲಿ” ಹೋಟೆಲಿಗೆ ಹೋದೆ. ಮೆನುವಿನಲ್ಲಿ ಮಾಪಿಳ್ಳೈ ಸಾಂಬಾ ಇಡ್ಲಿಯೂ ಇತ್ತು. ತರಲು ಹೇಳಿದೆ. ಅಲ್ಲಿ ಮೂರು ಥರದ ಚಟ್ನಿಯಿಂದಿಗೆ ಇಡ್ಲಿ ಕೊಡುತ್ತಾರೆ. ಮೊದಲಿಗೆ ಎರಡು ಇಡ್ಲಿ ತಿಂದವನು ಮತ್ತೆ ನಾಲ್ಕು ಇಡ್ಲಿ ತರಿಸಿಕೊಂಡು ತಿಂದೆ. ಅಷ್ಟು ರುಚಿ. ಇನ್ನೊಂದು ವಿಚಾರ ಎಂದರೆ ಬೆಳ್ತಕ್ಕಿಯಿಂದ ಮಾಡಿದ ಇಡ್ಲಿ ತಿಂದಾಗ ಬೇಗನೆ ಹಸಿವಾಗುತ್ತದೆ. ಆದರೆ ಮಾಪಿಳ್ಳೈ ಸಾಂಬಾದಿಂದ ಮಾಡಿದ ಗಂಜಿ ಕುಡಿದಾಗ, ಇಡ್ಲಿ ತಿಂದಾಗ ಹಸಿವು ಆಗುವುದು ನಿಧಾನ. ಜೊತೆಗೆ ಬಹಳ ಹೊತ್ತು ಉತ್ಸಾಹ-ಹುರುಪು ಇರುತ್ತದೆ.

ಇದು ವಿಶೇಷವಾಗಿ ತಮಿಳುನಾಡು ತಿರುವಣ್ಣಾ ಮಲೈ, ಪುದುಕೊಟೈ ಭಾಗದಲ್ಲಿ ಬೆಳೆಯುವ ದೇಸೀ ತಳಿ. ಇದಕ್ಕೆ “ಮಾಪಿಳ್ಳೈ ಸಾಂಬಾ” ಎಂದು ಹೆಸರಿಡಲು ಬಹು ವಿಶೇಷ ಕಾರಣವೂ ಇದೆ. ತಮಿಳಿನಲ್ಲಿ ಮಾಪಿಳ್ಳೈ ಎಂದರೆ ಅಳಿಯ. ಸಾಂಬಾ ಎಂದರೆ ಅಕ್ಕಿ. ಕನ್ನಡದಲ್ಲಿ ಅಳಿಯನ ಅಕ್ಕಿ” ಎಂದು ಹೇಳಬಹುದು. ನವ ವರ ಅಂದರೆ ಆಗಷ್ಟೆ ಮದುವೆಯಾಗಿ ಪತ್ನಿ ಮನೆಗೆ ಬಂದ ಆತಿಥ್ಯಕ್ಕಾಗಿ ಬಂದ ಅಳಿಯನಿಗೆ ಆತನ ಅತ್ತೆ “ಮಾಪಿಳ್ಳೈ ಸಾಂಬಾ” ದಿಂದ ಮಾಡಿದ ಅನ್ನ, ಗಂಜಿ, ಇಡ್ಲಿ, ದೋಸೆ, ಪಾಯಸ, ಕಜ್ಜಾಯ ಇತ್ಯಾದಿ ತಿನಿಸುಗಳನ್ನು ಮಾಡುತ್ತಿದ್ದರು.

ಮಾಪಿಳ್ಳೈ ಸಾಂಬಾದಿಂದ ಮಾಡಿದ ಆಹಾರ ಸವಿಯುವುದರಿಂದ ದೇಹಕ್ಕೆ ಬೇಗನೆ ವಿಶೇಷ ಶಕ್ತಿ ದೊರೆಯುತ್ತದೆ.  ಇದರಿಂದ ಮಾಡಿದ ಆಹಾರ ತಿಂದು ಮತ್ತಷ್ಟೂ ದೇಹಶಕ್ತಿ ಗಳಿಸಿದ ನಂತರ ಗ್ರಾಮದ ಗರಡಿ ಮನೆಯಲ್ಲಿರುವ ಬಲು ಭಾರದ ಗುಂಡನ್ನು ಅಳಿಯ ಎತ್ತಬೇಕಿತ್ತು. ಇದರ ಹಿಂದೆ ಗ್ರಾಮೀಣರ ಕ್ರೀಡಾಸಕ್ತಿಯೂ ಇತ್ತು.

ಆರೋಗ್ಯ ವೃದ್ದಿಸಲು, ಶಕ್ತಿ ಹೆಚ್ಚಿಸಲು, ದೇಹ ಪುಷ್ಟಿ ಅಂದರೆ ದಪ್ಪಗಾಗಲು ಮಾಪಿಳ್ಳೈ ಸಾಂಬಾ ತಳಿಯ ಅಕ್ಕಿಯಿಂದ ಮಾಡಿದ ಆಹಾರ ಸೇವನೆ  ಪೂರಕ. ಇಂಥ ವಿಶೇಷ ತಳಿಯ  ಕೃಷಿಕ್ಷೇತ್ರ ಇತ್ತೀಚಿನ ದಶಕಗಳಲ್ಲಿ ಕಡಿಮೆಯಾಗಿದೆ.

ಮಾಪಿಳ್ಳೈ ಸಾಂಬಾ ತಳಿ ಅಕ್ಕಿ ಬಣ್ಣ ಕೆಂಪು. ನೋಡಲು ಕರ್ನಾಟಕದ ಕೆಂಪಕ್ಕಿ ತಳಿಯ ಹಾಗೆ ಇದೆ. ಇದು 160 ದಿನಗಳ ಬೆಳೆ. ಸಾವಯವ ಕೃಷಿಗೆ ಸೂಕ್ತ. 90 ರಿಂದ 120  ದಿನಗಳಲ್ಲೇ ಕೊಯ್ಲಿಗೆ ಬರುವ ಅಕ್ಕಿ ತಳಿಗಳನ್ನೇ ಬೆಳೆಯಲು ಹೆಚ್ಚಿನ ಕೃಷಿಕರು ಆಸಕ್ತಿ ತೋರಿದ ಕಾರಣ ಇದರ ಕೃಷಿಕ್ಷೇತ್ರ ಗಣನೀಯವಾಗಿ ಕುಗ್ಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ದೇಸೀ ತಳಿ ಅಕ್ಕಿಗಳಿಗೆ ಅದರಲ್ಲೂ ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆದ ಕೆಂಪಕ್ಕಿಗೆ ಬೇಡಿಕೆ ಹೆಚ್ಚುತ್ತಿರುವುದರಿಂದ ಇದರ ಕೃಷಿಕ್ಷೇತ್ರ ನಿಧಾನವಾಗಿ ಹೆಚ್ಚುತ್ತಿದೆ. ಇದು ಆಶಾದಾಯಕ ಬೆಳವಣಿಗೆ.

2 thoughts on “ದೇಹಕ್ಕೆ ಅಧಿಕ ಶಕ್ತಿ ನೀಡುವ ಅಳಿಯನ ಅಕ್ಕಿ  

  • ಸುಮತಿ ಡಿ.ಜಿ

    ಉತ್ತಮ ಮಾಹಿತಿ ಭತ್ತ ಬೆಳೆಯುವಲ್ಲಿ ಇಷ್ಟೇಕೆ ತಾತ್ಸಾರ. ವಿವಿಧ ತಳಿಗಳನ್ನು ಪೋಷಿಸದೆ, ಜನರಿಗೆ ಒದಗಿಸದೇ ಮನೋಪಲಿ ಮಾಡುವ ಹುನ್ನಾರಾವಾ ಇದು

    Reply
  • ಡಾ ಆರ್ ಜಿ ಗೊಲ್ಲರ್

    ಉತ್ತಮ ಮತ್ತು ಸ್ವಾರಸ್ಯಕರ ಮಾಹಿತಿ. ಧನ್ಯವಾದಗಳು, ಲೇಖಕರಿಗೆ.

    Reply

Leave a Reply

Your email address will not be published. Required fields are marked *

error: Content is protected !!