ರಾಜಕೀಯ

ಸತೀಶನ್‌ ಮುಖ್ಯಮಂತ್ರಿತ್ವ; ಕೇರಳಂ ಜಾತ್ಯತೀತ ಸಂಭ್ರಮ

ಕೇರಳದದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವ ನಿರೀಕ್ಷ ಇತ್ತು. ಆದರೆ ನಿರೀಕ್ಷೆಗೂ ಮೀರಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ (UDF) ಮೈತ್ರಿಕೂಟವು ಭರ್ಜರಿ ಬಹುಮತದೊಂದಿಗೆ (102 ಸ್ಥಾನಗಳು) ಅಧಿಕಾರಕ್ಕೆ ಬಂದಿದೆ. ಈ ಫಲಿತಾಂಶ ಬಂದಾಗ ರಾಜ್ಯದ್ಯಂತ ಕಂಡು ಬಂದ ಸಂಭ್ರಮಕ್ಕಿಂತಲೂ ಹೆಚ್ಚಿನ ಸಂಭ್ರಮ ವಿ. ಡಿ. ಸತೀಶನ್ (V. D. Satheesan) ಅವರನ್ನು ಮುಖ್ಯಮಂತ್ರಿಯಾಗಿ ಘೋಷಿಸಿದ ನಂತರ ಆಗುತ್ತಿದೆ. ರಾಜ್ಯಾದ್ಯಂತ ಜಾತಿ ಮತ್ತು ಧರ್ಮದ ಗಡಿಗಳನ್ನು ಮೀರಿ ಒಂದು ದೊಡ್ಡ ಮಟ್ಟದ ಸಂಭ್ರಮ ಹಾಗೂ ಸಕಾರಾತ್ಮಕ ವಾತಾವರಣ ನಿರ್ಮಾಣವಾಗಿದೆ. ಧಾರ್ಮಿಕ ವಲಯಗಳ ಪ್ರಮುಖರಲ್ಲಿಯೂ ಖುಷಿ ಕಾಣುತ್ತಿದೆ.
ಒಂದು ಪಕ್ಷದ ಓರ್ವ ವ್ಯಕ್ತಿ ಮುಖ್ಯಮಂತ್ರಿಯಾಗಿ ಆಯ್ಕೆಯಾದಾಗ ಜಾತ್ಯತೀತವಾಗಿ ಇಂಥ ಖುಷಿ, ಸಂಭ್ರಮ ಅಪರೂಪ. ಅದರಲ್ಲಿಯೂ ಇತ್ತೀಚಿನ ದಶಕಗಳಲ್ಲಿ ಭಾರೀ ಅಪರೂಪವೇ ಆಗಿದೆ. ಇದಕ್ಕೆ ಮುಖ್ಯ ಕಾರಣ ವಿ. ಡಿ. ಸತೀಶನ್ ಕೋಮು ಮತ್ತು ಜಾತಿ ಸಂಘಟನೆಗಳ ಓಲೈಕೆಯಿಂದ ದೂರವಿರುವುದು. ಕೇರಳ ರಾಜಕೀಯವನ್ನು ಆಸಕ್ತಿಯಿಂದ ವೀಕ್ಷಿಸುತ್ತಿರುವ ನನಗೆ ಇವರ ರಾಜಕೀಯ ಶೈಲಿಯ ವೈಶಿಷ್ಟ್ಯ ಅರ್ಥವಾಗಿದೆ. ಅವರು ಸಾಂಪ್ರದಾಯಿಕ ಒಲೈಕೆ ರಾಜಕಾರಣಕ್ಕೆ ಎಂದಿಗೂ ಮಣಿದವರಲ್ಲ. ಕೇರಳದ ಪ್ರಭಾವಿ ಕೋಮು ಅಥವಾ ಧಾರ್ಮಿಕ ಸಂಘಟನೆಗಳ ಹಂಗಿಲ್ಲದೆ, ಕೇವಲ ತಮ್ಮ ಕೆಲಸ ಮತ್ತು ಸೈದ್ಧಾಂತಿಕ ನಿಲುವುಗಳ ಆಧಾರದ ಮೇಲೆ ರಾಜಕಾರಣ ಮಾಡುತ್ತಿರುವ ಹೆಗ್ಗಳಿಕೆ ಇದೆ. ಈ ಕಾರಣದಿಂದಾಗಿ ಸಾಮಾನ್ಯ ಜನರಲ್ಲಿ ಅವರ ಮೇಲೆ ಗೌರವವಿದೆ.
ಯುಡಿಎಫ್ ಮೈತ್ರಿಕೂಟದಲ್ಲಿ ವಿಭಿನ್ನ ಧಾರ್ಮಿಕ ಹಾಗೂ ಸಾಮಾಜಿಕ ಹಿನ್ನೆಲೆಯುಳ್ಳ ಪಕ್ಷಗಳಿವೆ. ಮುಖ್ಯಮಂತ್ರಿ ಸ್ಥಾನದ ಆಯ್ಕೆಯ ಸಂದರ್ಭದಲ್ಲಿ ಮುಸ್ಲಿಂ ಲೀಗ್ (IUML) ಸೇರಿದಂತೆ ಮೈತ್ರಿಕೂಟದ ಎಲ್ಲಾ ಪ್ರಮುಖ ಪಕ್ಷಗಳು ಮತ್ತು ನಾಯಕರು ಸತೀಶನ್ ಅವರ ನಾಯಕತ್ವಕ್ಕೆ ಒಮ್ಮತದ ಬೆಂಬಲ ಸೂಚಿಸಿದರು ಎಂಬುದು ಬಹು ಗಮನಾರ್ಹ. ಇದು ಅವರ ಜಾತ್ಯತೀತ ಇಮೇಜ್‌ಗೆ ಮತ್ತಷ್ಟು ಬಲ ತಂದಿದೆ.
ಕಳೆದ 5 ವರ್ಷಗಳ ಕಾಲ (2021-2026) ಕೇರಳ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕನಾಗಿ ಸತೀಶನ್ ಅವರು ಸಕ್ರಿಯವಾಗಿ ಕಾರ್ಯನಿರ್ವಹಿಸಿದ್ದರು. ಜಾತಿ-ಧರ್ಮದ ರಾಜಕಾರಣದ ಬದಲಿಗೆ ಭ್ರಷ್ಟಾಚಾರ, ಆಡಳಿತಾತ್ಮಕ ವೈಫಲ್ಯಗಳು ಮತ್ತು ಸಾರ್ವಜನಿಕರ ದೈನಂದಿನ ಸಮಸ್ಯೆಗಳ ವಿರುದ್ಧ ಅವರ ಸದನದ ಒಳಗೆ ಮತ್ತು ಹೊರಗಿನ ಹೋರಾಟ ಜನತೆ ಗಮನ ಸೆಳೆದಿತ್ತು.
ಇವೆಲ್ಲದರ ಜೊತೆಗೆ ಸತೀಶನ್ ಅವರು ಕೇರಳ ಕಾಂಗ್ರೆಸ್‌ನಲ್ಲಿ ಹೊಸ ತಲೆಮಾರಿನ, ಪ್ರಗತಿಪರ ಮತ್ತು ಸುಧಾರಣಾವಾದಿ ನಾಯಕರ ಸಂಕೇತವಾಗಿಯೂ ಗುರುತಿಸಿಕೊಂಡಿದ್ದಾರೆ. ಪಕ್ಷದೊಳಗಿನ ಹಳೆಯ ಬಣ ರಾಜಕೀಯವನ್ನು ಬದಿಗೊತ್ತಿ, ಯುವ ಕಾರ್ಯಕರ್ತರಲ್ಲಿ ಹೊಸ ಚೈತನ್ಯ ತುಂಬಿದ ಶ್ರೇಯಸ್ಸು ಖಂಡಿತ ಅವರಿಗೆ ಸಲ್ಲುತ್ತದೆ.
ನಿಯೋಜಿತ ಮುಖ್ಯಮಂತ್ರಿಯಾಗಿ ಆಯ್ಕೆ ನಂತರ ವಿ. ಡಿ. ಸತೀಶನ್ ಅವರು, “ಇದು ಜನರ ನಿರೀಕ್ಷೆಗಳನ್ನು ಈಡೇರಿಸುವ ಹೊಸ ಯುಗದ ಆರಂಭ” ಎಂದು ಘೋಷಿಸಿದ್ದಾರೆ. ಕೇರಳದ ಜನರು ಹಳೆಯ ರಾಜಕೀಯ ಧ್ರುವೀಕರಣದಿಂದ ಬೇಸತ್ತು, ಅಭಿವೃದ್ಧಿ ಮತ್ತು ಎಲ್ಲರನ್ನೂ ಒಳಗೊಳ್ಳುವ ಆಡಳಿತವನ್ನು ಬಯಸುತ್ತಿರುವುದೇ ಈ ಧರ್ಮಾತೀತ ಸಂಭ್ರಮಕ್ಕೆ ಮುಖ್ಯ ಕಾರಣವಾಗಿದೆ.
ಕೋಮು ಧ್ರುವೀಕರಣದ ಪ್ರಯತ್ನಗಳ ವಿರುದ್ಧ ನಿಯೋಜಿತ ಮುಖ್ಯಮಂತ್ರಿ ವಿ.ಡಿ. ಸತೀಶನ್ ತೀವ್ರ ಎಚ್ಚರಿಕೆ ನೀಡಿದ್ದಾರೆ. ಕೇರಳದ ಜಾತ್ಯತೀತ ವ್ಯವಸ್ಥೆಗೆ ಧಕ್ಕೆ ತರುವ ಯಾವುದೇ ಪ್ರಯತ್ನಗಳೊಂದಿಗೆ ತಮ್ಮ ಸರ್ಕಾರ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇದರ ಜೊತೆಗೆ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) ಪಕ್ಷವನ್ನು ಕೋಮುವಾದಿ ಸಂಘಟನೆ ಎಂದು ಬಿಂಬಿಸುತ್ತಿರುವ ದ್ವೇಷದ ಪ್ರಚಾರವನ್ನು ಅವರು ಖಂಡಿಸಿರುವುದು ಸಹ ಪ್ರಮುಖ ಸಂಗತಿ.
ಇಂಥ ವ್ಯಕ್ತಿಯನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡುವಲ್ಲಿ ಕಾಂಗ್ರೆಸ್‌ ಹೈ ಕಮಾಂಡ್‌ ವಿಳಂಬ ಮಾಡಿತು. ಆಗಲೇ ಕೇರಳಂ ರಾಜ್ಯದ ಕಾಂಗ್ರೆಸ್‌ ಪಕ್ಷದ ಹಲವರಲ್ಲಿ ವಿಶೇಷವಾಗಿ ಯುವಕರಲ್ಲಿ ಅಸಮಾಧಾನ ಮೂಡಿತ್ತು. ಕಾಂಗ್ರೆಸ್‌ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್‌ ಮುಖ್ಯಮಂತ್ರಿ ಸ್ಪರ್ಧೆ ಆಕಾಂಕ್ಷಿಯಾಗಿರದೇ ಇದ್ದರೆ ಸತೀಶನ್‌ ಆಯ್ಕೆ ಕಠಿಣವಾಗುತ್ತಿರಲಿಲ್ಲ. ರಮೇಶ್‌ ಚೆನ್ನಿತ್ತಲ ಅವರನ್ನು ಸುಲಭವಾಗಿ ಸಮಾಧಾನ ಪಡಿಸಬಹುದಿತ್ತು. ಕೆ.ಸಿ. ವೇಣುಗೋಪಾಲ್‌ ಅವರು ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಸೂಚಿಸುವ ಜವಾಬ್ದಾರಿ ರಾಹುಲ್‌ ಗಾಂಧಿ ಅವರ ಮೇಲಿತ್ತು. ಆದರೆ ಅವರು ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಲಿಲ್ಲ.
ಹೊಸ ಸರ್ಕಾರದಲ್ಲಿ ಸಚಿವ ಸ್ಥಾನಗಳ ಹಂಚಿಕೆ ಕುರಿತು ಕಾಂಗ್ರೆಸ್ ಮತ್ತು ಯುಡಿಎಫ್ ಮಿತ್ರಪಕ್ಷಗಳ ನಡುವೆ ಮಾತುಕತೆ ಸುಗಮವಾಗಿ ಸಾಗುತ್ತಿದೆ. ರಮೇಶ್ ಚೆನ್ನಿತ್ತಲ ಅವರಿಗೆ ಮುಖ್ಯಮಂತ್ರಿ ಸ್ಥಾನ ತಪ್ಪಿದ್ದರಿಂದ ಉಂಟಾಗಿದ್ದ ಅಸಮಾಧಾನ ಈಗ ಸಂಪೂರ್ಣವಾಗಿ ಬಗೆಹರಿದಿದೆ ಎಂದು ಕೇರಳಂ ಕೆಪಿಸಿಸಿ ಅಧ್ಯಕ್ಷ ಸನ್ನಿ ಜೋಸೆಫ್ ಹೇಳಿದ್ದಾರೆ.
ವಿ. ಡಿ. ಸತೀಶನ್ ಅವರು ಸೋಮವಾರ, ಮೇ 18, 2026 ರಂದು ಕೇರಳದ 13ನೇ ಮುಖ್ಯಮಂತ್ರಿಯಾಗಿ ಅಧಿಕೃತವಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅವರೊಂದಿಗೆ ಇತರ ಕೆಲವರು ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ. ಆದರೆ ಮಿತ್ರಪಕ್ಷಗಳ ಶಾಸಕರನ್ನು ಹೊರತುಪಡಿಸಿ ಕಾಂಗ್ರೆಸ್ ಶಾಸಕರನ್ನು ಮಂತ್ರಿಗಳಾಗಿ ಆಯ್ಕೆ ಮಾಡುವುದು ಅಷ್ಟು ಸಲೀಸಲ್ಲ. ಇಲ್ಲಿಯೂ ಅಸಮಾಧಾನಿತ ಕೆ.ಸಿ. ವೇಣುಗೋಪಾಲ್ ಹಸ್ತಕ್ಷೇಪ ಇರಬಹುದು ಎನ್ನುವುದಕ್ಕಿಂತ ಇರುತ್ತದೆ ಎನ್ನುವುದೇ ಸೂಕ್ತವೇನೋ

Leave a Reply

Your email address will not be published. Required fields are marked *

error: Content is protected !!