ಭತ್ತ ಕೊಯ್ಲಾಗಿತ್ತು. ಕೂಳೆಗಳು, ನೆಲದೊಳಗಿನಿಂದ ಮೂಡಿದ ಬಂಗಾರದ ಎಸಳುಗಳಂತೆ ಕಾಣುತ್ತಿದ್ದವು. ಶುಭ್ರ ನೀಲಾಕಾಶ. ತೇಲಿ ಬರುತ್ತಿದ್ದ ತಂಗಾಳಿ, ಹೊಂಗೆ, ಬುಗುರಿ ಮರದ ನೆರಳು. ಬದುವಿನ ಮೇಲೆ ಒಂದೆರಡು ಇಂಚಿದ್ದ ಹಸಿರುಹುಲ್ಲು. ಅದರ ಮೇಲೆ ನನ್ನ ತಾಯಿ, ಸೋದರ ಮಾವಂದಿರು, ನನ್ನ ತಮ್ಮ ಸಿದ್ದರಾಜು, ನಾನು ಕುಳಿತಿದ್ದೆವು. ಬದುವಿಗೆ ಅಂಟಿಕೊಂಡಂತೆ ಹರಿಯುತ್ತಿದ್ದ ಹಳ್ಳದ ನೀರು ಕಲ್ಲುಗಳಿಗೆ ಬಡಿದು ಹನಿಗಳು ಮೈಮೇಲೆ ಸಿಂಪಡಣೆಯಾಗುತ್ತಿತ್ತು.
ಹೊಂಗೆಯ ಮರದ ಪಕ್ಕದಲ್ಲೇ ನಾನು, ತುಸು ಅಂತರಗಳಲ್ಲಿ ನನ್ನ ತಾಯಿಯ ಚಿಕ್ಕಪ್ಪನ ಮಗ, ಆತನ ಪಕ್ಕ ನನ್ನ ತಮ್ಮ ಸಿದ್ದರಾಜು ಇವನ ಪಕ್ಕ ನನ್ನ ಸೋದರ ಮಾವ, ನಂತರ ನನ್ನ ತಾಯಿ. ಮಾತುಕಥೆ ಸಾಗಿತ್ತು. ಹೊಂಗೆಯ ತಂಪಾದ ನೆರಳಿನಲ್ಲಿ ಕಟಾವಾದ, ಕಟಾವಾಗದ ಭತ್ತದ ಗದ್ದೆಗಳು ಅದರ ಮೇಲೆ ನೀಲಿ ಗುಡಾರ ಹಾಕಿದಂತೆ ಕಾಣುತ್ತಿದ್ದ ಆಕಾಶ ನೋಡುತ್ತಾ ಕುಳಿತಿದ್ದೆ. ಅದೊಂದು ಬಗೆಯ ಗುಂಗು.
ಎರಡೂ ಕೈಗಳನ್ನು ತುಸು ಹಿಂದಕ್ಕೆ ವೂರಿ, ವಾರಿ ಕುಳಿತಿದ್ದೆ. ಹಳ್ಳದ ನೀರು, ಮೈ, ಕೈಗೆ ಸಿಡಿಯುತ್ತಲೇ ಇತ್ತು. ಕೈ ತುಸು ಹೆಚ್ಚು ತಣ್ಣಗಾದಂತೆ ಅನಿಸಿತು. ನೀರ ಹನಿಗಳು ಎಂದುಕೊಂಡು ಅದರತ್ತ ಗಮನ ನೀಡಲಿಲ್ಲ. ಬಲದೊಡೆಯ ಮಗ್ಗುಲಿಗೆ ತಾಗಿ ಏನೋ ಹರಿದಂತಾಯಿತು. ನೋಡಿದರೆ ನಾಗರಹಾವು
ಹೊಂಗೆ ಎಲೆಗಳಿಂದ ತೂರಿ ಬಂದ ಬೆಳಕಿನ ಕಿರಣಗಳು ಗೋಧಿಬಣ್ಣದ ಅದರ ಮೇಲೆ ಬಿದ್ದು ಹೊಳೆಯುತ್ತಿತ್ತು. ನಾನು ನೋಡುವಷ್ಟರಲ್ಲಿ ಆತನ ತಲೆ ನನ್ನ ಬಲದೊಡೆಯ ಮೇಲಿತ್ತು. ವಿಶ್ರಾಂತಿ ಪಡೆಯುವವನಂತೆ ತುಸು ಹೊತ್ತು ತಲೆಯಾನಿಸಿದ ನಾಗ, ಎರಡೂ ಕಾಲುಗಳ ನಡುವೆ ಮೆಲ್ಲನೆ ಹರಿದು ಶೂಗಳ ಮೇಲೆ ತಲೆಯಿಟ್ಟ. ಅತ್ತಿತ್ತ ತಲೆ ತಿರುಗಿಸಿ ಎಡಕ್ಕೆ ಹರಿಯತೊಡಗಿದ. ನನ್ನಿಡೀ ಮೈ ಮರಗಟ್ಟಿತ್ತು.
ಎಂಟಡಿಗೂ ಹೆಚ್ಚು ಉದ್ದವಿದ್ದ ಅವ ಬದುವಿನ ಅಂಚಿಗೆ ಹರಿದರಿದು ಕಾಣದಂತಾದ. ಇದೆಲ್ಲವನ್ನೂ ನನ್ನ ಪಕ್ಕದಲ್ಲಿಯೇ ಇದ್ದ ಮಾವ ಗಮನಿಸಿದ್ದ. ನಾನಾಗಲಿ, ಆತನಾಗಲಿ ಗಾಬರಿಗೊಂಡು ಮೈ ಅಲುಗಿಸಿದ್ದರೆ ಕ್ಷಣ ಮಾತ್ರದಲ್ಲಿ ಹೆಡೆಯುತ್ತಿದ್ದ ನಾಗನ ರೋಷಕ್ಕೆ ಈಡಾಗುತ್ತಿದ್ದವು. ಆದರೆ ಹಾಗೆ ಆಗಲಿಲ್ಲ. ಹಾವು ಮೈಮೇಲೆ ಹರಿದು ಹೋಗಿದ್ದನ್ನು ಆತ ಉಳಿದವರಿಗೂ ತಿಳಿಸಿದಾಗ ಅವರೆಲ್ಲರಿಗೂ ದಿಗ್ಬ್ರಮೆ. ಇದು ಸುಮಾರು ಇಪ್ಪತ್ತು ವರ್ಷದ ಹಿಂದಿನ ಘಟನೆ.
ರೈತ ಕುಟುಂಬದ ನಮಗ್ಯಾರಿಗೂ ಹಾವುಗಳನ್ನು ನೋಡುವುದು ಹೊಸ ಸಂಗತಿಯಲ್ಲ. ಆದರೆ ಮೈಮೇಲೆ ಹಾದು ಹೋಗುವುದು ಭಯದ ಸಂಗತಿ. ಕೆಲವು ಭತ್ತದ ತಳಿಗಳು ನಾಲ್ಕುವರೆ ಅಡಿಗೂ ಹೆಚ್ಚು ಎತ್ತರವಿರುತ್ತವೆ. ಅದರೊಳಗೆ ಬೆಳೆದು ನಿಂತ ಗಂಡು ಭತ್ತ ಕೊಯ್ದು, ಹೊರೆ ಮಾಡಿಕೊಂಡು ಸೈಕಲ್ ಕ್ಯಾರಿಯರ್ಗೆ ಕಟ್ಟಿ ತಂದು ದನಗಳಿಗೆ ನಿತ್ಯ ಹಾಕುತ್ತಿದ್ದೆ. ಕಳೆ ಕೊಯ್ಯುವಾಗ ನಾಗರಹಾವುಗಳನ್ನು ಕಂಡಿದ್ದೇನೆ. ಒಂದೆರಡು ಬಾರಿ ಅವು ಹೆಡೆಯೆತ್ತಿದ್ದು ಇದೆ. ನಾವೇನೂ ಪ್ರತಿಕ್ರಯಿಸದೇ ಇದ್ದರೆ ಅವಷ್ಟಕ್ಕೆ ಹರಿದು ಹೋಗುತ್ತವೆ ವಿನಃ ಮುಂದೆ ಬಂದೇನೂ ಕಚ್ಚುವುದಿಲ್ಲ.
ಕಾಲುಗಳ ಮೇಲಿಂದ ಹಾವು ಹರಿದು ಹೋಗುವಾಗ ಮಿಸುಕಾಡಿದ್ದರೂ ಅದು ಗಾಬರಿಯಾಗುತ್ತಿತ್ತು. ಇಂಥದ್ದೇ ಇನ್ನೆರಡು ಸಂಗತಿಗಳಿಗೆ ನಾನು ಮುಖಾಮುಖಿಯಾದೆ. ನನಗೆ ಅದು ಹಾವುಗಳ ಸ್ವಭಾವವನ್ನೇ ಪರಿಚಯಿಸಿತು. ಅದರ ಬಗ್ಗೆ ನಾಳೆ ಅಥವಾ ನಾಳಿದ್ದು ಬರೆಯುತ್ತೇನೆ. ಆ ವಿಷಯಗಳು ತಿಳಿದರೆ ನಿಮಗೆ ಅಚ್ಚರಿಯಾಗುವುದು ಖಂಡಿತ.