ಶರದೃತು ದಿನಗಳ ಮುಂಜಾವು ಎಲ್ಲ ಮುಂಜಾವುಗಳಂತಲ್ಲ. ಈ ಸಮಯದಲ್ಲಿ ತೇಲಿತೇಲಿ ಬರುವ ತಂಗಾಳಿಗೆ ಮುಖವೊಡ್ಡಿ ಕಾಫಿ ಹೀರುವುದೆಂದರೆ ಅದೊಂದು ಅಪೂರ್ವ ಅನುಭೂತಿ. ಕಾಫಿ ಹೀರುವುದೆಂದರೆ ಅದೊಂದು ಧ್ಯಾನ. ಇನ್ನೂ ಪೂರ್ಣ ಬೆಳಗಾಗಿರುವುದಿಲ್ಲ. ಎರಡು ಅಂಗೈಗಳಲ್ಲಿ ಹಿಡಿದ ಸ್ಟೀಲ್ ಲೋಟದಲ್ಲಿ ಹಬೆಯಾಡುತ್ತಿರುವ ಬಿಸಿಯಾಗಿರುವ ಕಾಫಿ ಗಂಟಲನ್ನು ಬಿಸಿ ಮಾಡುತ್ತಾ ನಿಧಾನವಾಗಿ ಉದರದೊಳಗೆ ಇಳಿಯುತ್ತದೆ. ಇಂಥ ಒಂದು ದಿನದಲ್ಲಿ ಮೈ ತುಂಬ ಬಿಳಿರಕ್ತ; ಕೊಂಡಿಯಲ್ಲಿ ತೀವ್ರ ವಿಷವಿರುವ ಚೇಳು ಕೊಂಡಿಯೆತ್ತಿದರೆ …
ನಿತ್ಯ ಬೆಳಗ್ಗಿನ ಜಾವ ಐದು ಗಂಟೆಗೆಲ್ಲ ಎದ್ದು ಬಿಸಿಬಿಸಿ ಕಾಫಿ ಕುಡಿಯುವುದು ನನ್ನ ತಾಯಿಯ ಅಭ್ಯಾಸ. ಅಷ್ಟು ಹೊತ್ತಿಗೆಲ್ಲ ಆಗ ಹಾಲು ಬಂದಿರುತ್ತಿರಲಿಲ್ಲ. ಮನೆಯಲ್ಲಿ ಫ್ರಿಜ್ಜ್ ಇರಲಿಲ್ಲ. ಹಿಂದಿನ ದಿನವೇ ಹಾಲು ತಂದು ಅದನ್ನು ಕಾಯಿಸಿ ಇಡಬೇಕಿತ್ತು. ಒಂದು ದಿನ ಹಾಲು ಖಾಲಿಯಾಗಿದೆ. ಆಗ ತುಸು ದೂರದ ಗುರುಪ್ರಸಾದ್ ಹೋಟೆಲಿಗೆ ನನ್ನ ಸೋದರ ಮಾವನನ್ನು ಕಳಿಸಿ ಕಾಫಿ ತರಿಸಿದ್ದಾರೆ. ಆ ಫಿಲ್ಟರ್ ಕಾಫಿ ನನ್ನ ತಾಯಿಗೆ ಅದೆಷ್ಟು ಇಷ್ಟವಾಯಿತೆಂದರೆ ಒಂದಷ್ಟು ದಿನ ಮುಂಜಾವುಗಳಲ್ಲಿ ಅದನ್ನೇ ಕುಡಿಯುವ ಅಭ್ಯಾಸ ಮಾಡಿಕೊಂಡಿದ್ದರು.
ನನ್ನ ಸೋದರಮಾವ ಊರಿಗೆ ಹೋದ ನಂತರ ಕಾಫಿ ತರುವ ಜವಾವ್ದಾರಿ ನನ್ನ ಪಾಲಿಗೆ ಬಿತ್ತು. ಅಷ್ಟೊತ್ತಿಗಾಗಲೇ ಎದ್ದಿರುತ್ತಿದ್ದ ನಾನು ಖುಷಿಖುಷಿಯಿಂದಲೇ ಕಾಫಿ ತರಲು ಹೋಗುತ್ತಿದ್ದೆ. ನನಗೂ ಆ ಕಾಫಿ ಹೆಚ್ಚು ರುಚಿಸಿತ್ತು. ಮಧ್ಯರಾತ್ರಿ ಎಬ್ಬಿಸಿ ಕಾಫಿ ಕುಡಿಯುತ್ತೀಯಾ ಎಂದರೆ ಮರು ಮಾತನಾಡದೇ ಎದ್ದು ಕಾಫಿ ಹೀರಿ ಮತ್ತೆ ಎಚ್ಚರವಿಲ್ಲದಂತೆ ಮಲಗುವ ಅಭ್ಯಾಸ ನನ್ನದು. ನನ್ನ ತಾಯಿಗೆ ಸೋದರಿಯರು ಜಾಸ್ತಿ. ಅವರೆಲ್ಲ ಸೇರಿದಾಗ ಮುಂಜಾಗ್ರತೆಯಿಂದ ಲೀಟರುಗಟ್ಟಲೆ ಹಾಲು ತಂದು ಅರ್ಧ ಗಂಟೆಗೊಮ್ಮೆಯೋ ತಾಸಿಗೊಮ್ಮೆಯೂ ಕಾಫಿ ಕುಡಿಯುತ್ತಾ ರಾತ್ರಿ ಎರಡರ ತನಕ ಮಾತನಾಡುತ್ತಾ ಕೂರುತ್ತಿದ್ದರು.
ಮುಂಜಾನೆ ಎದ್ದ ಕೂಡಲೇ ಫ್ಲಾಸ್ಕ್ ಅನ್ನು ಮತ್ತೊಮ್ಮೆ ತೊಳೆದು ಹನಿನೀರು ಇಲ್ಲದಂತೆ ಜಾಡಿಸಿ ಭದ್ರವಾಗಿ ಕ್ಯಾಪ್ ಹಾಕಿಕೊಂಡು ಹೋಗುತ್ತಿದ್ದೆ. ಅದು ಮೂರು ಸಣ್ಣ ಲೋಟಗಳಷ್ಟೆ ಹಿಡಿಯುವ ಕಾಫಿ. ಹಬೆಯಾಡುತ್ತಿದ್ದ ಬಿಸಿಬಿಸಿ ಕಾಫಿಯನ್ನು ಹಾಕಿಸಿಕೊಂಡು ಮತ್ತೆ ಭದ್ರವಾಗಿ ಕ್ಯಾಪ್ ಹಾಕಿಕೊಂಡು ತರುತ್ತಿದ್ದೆ. ತಂದ ಕೂಡಲೇ ನೀರಿನ ಪಸೆಯೂ ಇಲ್ಲದಂತೆ ಒರೆಸಿಟ್ಟ ಸ್ಟೀಲ್ ಲೋಟಗಳಿಗೆ ಹಾಕಿ ತಾವು ತೆಗೆದುಕೊಂಡು ನನಗೂ ಕೊಡುತ್ತಿದ್ದರು. ನನ್ನ ತಂದೆಗೆ ಅಷ್ಟು ಬೆಳಗ್ಗೆ ಕಾಫಿ ಕುಡಿಯುವ ಅಭ್ಯಾಸ ಇರಲಿಲ್ಲ. ಮನೆಯ ಇತರ ಸದಸ್ಯರಲ್ಲಿ ಯಾರು ಬೇಗ ಎದ್ದಿರುತ್ತಿದ್ದರೋ ಅವರಿಗೆ ಕಾಫಿಭಾಗ್ಯ !
ಶರದೃತು ದಿನಗಳ ಮುಂಜಾವು ಎಲ್ಲ ಮುಂಜಾವುಗಳಂತಲ್ಲ. ಈ ಸಮಯದಲ್ಲಿ ತೇಲಿತೇಲಿ ಬರುವ ತಂಗಾಳಿಗೆ ಮುಖವೊಡ್ಡಿ ಕಾಫಿ ಹೀರುವುದೆಂದರೆ ಅದೊಂದು ಅಪೂರ್ವ ಅನುಭೂತಿ. ಕಾಫಿ ಹೀರುವುದೆಂದರೆ ಅದೊಂದು ಧ್ಯಾನ. ಇನ್ನೂ ಪೂರ್ಣ ಬೆಳಗಾಗಿರುವುದಿಲ್ಲ. ಎರಡು ಅಂಗೈಗಳಲ್ಲಿ ಹಿಡಿದ ಸ್ಟೀಲ್ ಲೋಟದಲ್ಲಿ ಹಬೆಯಾಡುತ್ತಿರುವ ಬಿಸಿಯಾಗಿರುವ ಕಾಫಿ ಗಂಟಲನ್ನು ಬಿಸಿ ಮಾಡುತ್ತಾ ನಿಧಾನವಾಗಿ ಉದರದೊಳಗೆ ಇಳಿಯುತ್ತದೆ. ಇಂಥ ಒಂದು ದಿನದಲ್ಲಿ ಎಂದಿನಂತೆ ಫ್ಲಾಸ್ಕ್ ಹಿಡಿದು ಹಿತ್ತಲಿಗೆ ಹೋದೆ. ತೊಳೆದೆ. ಕ್ಯಾಪ್ ಹಾಕುವಾಗ ಬಲಗಾಲ ಹೆಬ್ಬೆರಳ ಮುಂಭಾಗಕ್ಕೆ ಜೋರಾಗಿ ಏನೋ ಕುಟುಕಿದಂತಾಯಿತು.
ಹಿತ್ತಲಿನಲ್ಲಿದ್ದ ಬಲ್ಬ್ ಮಂದ ಬೆಳಕಿನಲ್ಲಿ ಭಾರಿಗಾತ್ರದ ಕರಿಚೇಳು ತೀವ್ರ ವಿಷವಿರುವ ಕೊಂಡಿಯನ್ನು ಪ್ರಶ್ನಾರ್ಥಕ ಚಿಹ್ನೆಯಲ್ಲಿ ಎತ್ತಿತ್ತು. ಉರಿಉರಿ. ಕುಟುಕಿದ ರಭಸಕ್ಕೆ ನನ್ನ ಬೆರಳಿನಿಂದ ಹನಿರಕ್ತ ಜಿನುಗಿತ್ತು. ನಾನು ಕೂಗಿಕೊಂಡ ಸದ್ದಿಗೆ ತಂದೆ-ತಾಯಿ ಇಬ್ಬರೂ ಓಡಿಬಂದರು. ಕೈ ತೋರಿದೆ. ಅವರಿಗೆ ಅರ್ಥವಾಯಿತು. ನನ್ನ ತಂದೆ ಅಲ್ಲೇ ಇದ್ದ ಸೌದೆಸೀಳು ತೆಗೆದುಕೊಂಡು ಬಾರಿಸಿದ ಏಟಿಗೆ ಚೇಳಿನ ಹೊಟ್ಟೆಯಿಂದ ಬಿಳಿರಕ್ತ ಚಿಲ್ಲನೆ ಚಿಮ್ಮಿತು.
ನನ್ನ ಹೆಬ್ಬೆರಳಿನ ಮಧ್ಯಭಾಗಕ್ಕೆ ನನ್ನತಾಯಿ ಶೂಲೇಸ್ ಅನ್ನು ಭಧ್ರವಾಗಿ ಬಿಗಿದು ಕಟ್ಟಿದ್ದರು. ಉರಿಯೆಂದರೆ ಉರಿ. ಹತ್ತಿರದಲ್ಲೇ ಇದ್ದ ಖಾಸಗಿ ಆಸ್ಪತ್ರೆಗೆ ತಕ್ಷಣ ಕರೆದೊಯ್ದು ನೈಟ್ ಡ್ಯೂಟಿಯಲ್ಲಿದ್ದ ನರ್ಸಿಗೆ ವಿಷಯ ತಿಳಿಸಿದರು. ಅವರು ಓಡೋಡಿ ಹೋಗಿ ಡಾಕ್ಟರನ್ನು ಕರೆತಂದರು. ಅವರ ಹೆಸರು ನನಗಿನ್ನೂ ನೆನಪಿದೆ. ಡಾ. ಸುಧಾರಾಣಿ. ಕೂಡಲೇ ಅವರು ದೊಡ್ಡದೊಂದು ಸಿರೀಂಜ್ ಅನ್ನು ಹೆಬ್ಬೆರಳಿಗೆ ಚುಚ್ಚಿದರು. ಭಯಪಡುವ ಅವಶ್ಯಕತೆಯೇನೋ ಇಲ್ಲ ಎಂದರು.
ಚೇಳು ಕುಟುಕ್ಕಿದ್ದು ನನ್ನ ಪಾಲಿಗೆ ನಷ್ಟವೇ ಎನ್ನಬಹುದು. ಮರುದಿನದಿಂದ ಹೋಟೆಲಿನಿಂದ ಕಾಫಿ ತರಿಸುವ ಕಾರ್ಯಕ್ರಮ ನಿಂತು ಹೋಯಿತು. ಮುಂಜಾನೆದ್ದು ಬಿಸಿಬಿಸಿ ಫಿಲ್ಟರ್ ಕಾಫಿ ಕುಡಿಯುವುದು ನನಗೆ ಅತ್ಯಂತ ಪ್ರಿಯವಾದ ಸಂಗತಿಯಾಗಿತ್ತು. ಆ ನಂತರವೂ ಕಾಫಿ ತರುತ್ತೇನೆ ಎಂದರೆ ತಾಯಿ ರೇಗುತ್ತಿದ್ದರು.