ರಾಜಕೀಯ

ಟಿವಿಕೆ ಗೆಲುವಿಗೆ ವಿಜಯ್‌ ಸಿನಿ ಜನಪ್ರಿಯತೆ ಕಾರಣವೇ

ಟಿವಿಕೆ (ತಮಿಳಗ ವೆಟ್ಟ್ರಿ ಕಳಗಂ) ಪಕ್ಷವು ತಮಿಳುನಾಡು 2026 ವಿಧಾನಸಭಾ ಚುನಾವಣೆಯಲ್ಲಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಮೇಲ್ನೋಟ್ಟಕ್ಕೆ ದಳಪತಿ ವಿಜಯ್‌ ಸಿನಿಮಾ ಜನಪ್ರಿಯತೆ ಕಾರಣ ಎನಿಸುತ್ತದೆ. ಆದರೆ ಗೆಲುವಿಗೆ ಅನೇಕ ಕಾರಣಗಳಿವೆ.

 ಸ್ಟಾಲಿನ್‌ ನೇತೃತ್ವದ ಡಿಎಂಕೆ ಸರ್ಕಾರದ ಅವಧಿಯಲ್ಲಿ ತಮಿಳುನಾಡು ಗಣನೀಯ ಪ್ರಗತಿ ಸಾಧಿಸಿದೆ. ಕೈಗಾರಿಕಾ ವಲಯದಲ್ಲಂತೂ ಅಚ್ಚರಿ ಎನಿಸುವಷ್ಟು ಅಭಿವೃದ್ಧಿಯಾಗಿದೆ. ಬೆಲೆ ಏರಿಕೆ ಬಗ್ಗೆ ಜನತೆಯಲ್ಲಿ ಅಸಮಾಧಾನವಿತ್ತಾದರೂ ಅದು ಸೋಲಿಗೆ ಪ್ರಮುಖ ಕಾರಣವೆಂದು ಹೇಳಲಾಗುವುದಿಲ್ಲ.  ಸ್ಟಾಲಿನ್‌ ತಮ್ಮ ಮಗ ಉದಯನಿಧಿಯನ್ನು ಉಪ ಮುಖ್ಯಮಂತ್ರಿ ಮಾಡಿದ ಬಗ್ಗೆ ಪಕ್ಷದ ಹಿರಿಯರ ವಲಯದಲ್ಲಿ ಅಸಮಾಧಾನ ಇತ್ತಾದರೂ ಜನತೆಯಲ್ಲಿ ಅದರ ಬಗ್ಗೆ ಅತೃಪ್ತಿ ಇರಲಿಲ್ಲ. ಇದು ಒಳ ಏಟಾಗಿಯೂ ಕೆಲಸ ಮಾಡಿಲ್ಲ. ಹಗರಣ ಎನ್ನುವಂಥದ್ದು ಆಗಿಲ್ಲ. ಆದರೂ ಸೋತಿದ್ದು ಏಕೆ ?

ಪ್ರಮುಖ ಕಾರಣಗಳು:

ಟಿವಿಕೆ (ತಮಿಳಗ ವೆಟ್ಟ್ರಿ ಕಳಗಂ) ಪಕ್ಷವು  ರಚನೆಯಾಗಿ ಕೇವಲ ಎರಡೇ ವರ್ಷವಾಗಿದೆ. ಇಷ್ಟು ಕಿರು ಅವಧಿಯಲ್ಲಿ ಅಚ್ಚರಿಯ ವಿಜಯ ಗಳಿಸಲು ನಟ ವಿಜಯ್ ಅವರ ವ್ಯಕ್ತಿತ್ವ ಮತ್ತು ಅಭಿಮಾನಿ ವರ್ಗ ಗೆಲುವಿಗೆ ಮುಖ್ಯ ಅಂಶ. ಆದರೆ  ಮೊದಲೇ ಹೇಳಿದಂತೆ ಇನ್ನು ಅನೇಕ ಅಂಶಗಳು ಕೆಲಸ ಮಾಡಿವೆ.

ಟಿವಿಕೆ ಪ್ರಣಾಳಿಕೆ ಯುವಕರು ಮತ್ತು ಮಹಿಳೆಯರ ಮೇಲೆ ಪ್ರಮುಖವಾಗಿ ಗಮನ ಹರಿಸಿತು. ವಿದ್ಯಾರ್ಥಿಗಳಿಗೆ ಸ್ಟೈಪೆಂಡ್, ಉದ್ಯೋಗಿಗಳಿಗೆ ಸ್ಟಾರ್ಟಪ್ ಲೋನ್, ಡ್ರಗ್-ಫ್ರೀ ರಾಜ್ಯ, ಮಹಿಳೆಯರಿಗೆ ಮಾಸಿಕ ನೆರವು, ಉಚಿತ ಎಲ್‌ಪಿಜಿ, ಚಿನ್ನ, ಸೀರೆ ಇತ್ಯಾದಿ ಆಕರ್ಷಕ ಯೋಜನೆಗಳು.  ಇವೆಲ್ಲ ಯುವ ಮತದಾರರ (18-39 ವಯಸ್ಸು) ಮತ್ತು ಮಹಿಳೆಯರ ದೊಡ್ಡ ಬೆಂಬಲವನ್ನು ತಂದಿದೆ.

ಇದರ ಜೊತೆಗೆ ಆಂಟಿ-ಇನ್‌ಕಂಬೆನ್ಸಿ (ಅಧಿಕಾರದ ವಿರುದ್ಧ ಅಸಮಾಧಾನ),  ಡಿಎಂಕೆ ಸರ್ಕಾರದ ವಿರುದ್ಧ ಭ್ರಷ್ಟಾಚಾರ, ಅಪೂರ್ಣ ವಾಗ್ದಾನಗಳು ಮತ್ತು ಆಡಳಿತ ವೈಫಲ್ಯದ ಆರೋಪಗಳು ಕಾರಣ ಎನಿಸಿದರೂ ಅವುಗಳೇನು ಪ್ರಮುಖ ಕಾರಣವಾಗಿಲ್ಲ. ಈ ನಡುವೆ  ಟಿವಿಕೆಯು “ಸ್ವಚ್ಛ, ಜನ-ಕೇಂದ್ರಿತ” ಪರ್ಯಾಯವಾಗಿ ತನ್ನನ್ನು ಗುರುತಿಸಿಕೊಂಡಿತು ಎಂಬುದು ಗಮನಾರ್ಹ.

ಟಿವಿಕೆ ಯಾವುದೇ ಮೈತ್ರಿ ಇಲ್ಲದೆ ಎಲ್ಲ 234 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿತು.  ಇದು ಸಹ ಹೊಸ ರಾಜಕೀಯ ಇಮೇಜ್ ನೀಡಿತು.  ಇದರ ಜೊತೆಗೆ ಸಾಮಾಜಿಕ ನ್ಯಾಯ, ಧರ್ಮನಿರಪೇಕ್ಷತೆ, ಅಂಬೇಡ್ಕರ್-ಪೆರಿಯಾರ್-ಕಾಮರಾಜ್ ಆದರ್ಶಗಳು ಎಂಬ ಐಡಿಯಾಲಜಿಯನ್ನು ಜನತೆ ಮುಂದಿಟ್ಟಿದ್ದು ಸಹ ಕೆಲಸ ಮಾಡಿದೆ.

ಇವೆಲ್ಲದರ ಜೊತೆಗೆ ಅತೀ ಹೆಚ್ಚಿನ ಮತದಾನ (80%+), ಮತ್ತು ಗ್ರಾಸ್‌ರೂಟ್ ಮೊಬಿಲೈಸೇಷನ್, ಸಾಮಾಜಿಕ ಮಾಧ್ಯಮಗಳ ಮೂಲಕ ಮತ್ತು  ಅಭಿಮಾನಿ ಬಳಗದ ಮೂಲಕ ಬಲವಾದ  ಪ್ರಚಾರ ಮಾಡಿದ್ದು ಸಹ ಕೆಲಸ ಮಾಡಿದೆ.‌

ಥಿಂಕ್‌ ಟ್ಯಾಂಕ್

ಇವೆಲ್ಲದರ ಜೊತೆಗೆ ಪ್ರಮುಖ ಕಾರಣ ಎಂದರೆ ವಿಜಯ್‌ ಅವರ ಥಿಂಕ್‌ ಟ್ಯಾಂಕ್. ವಿವಿಜಯ್ ಅವರ ಚಿಂತನಾ, ಸಲಹಾ ಬಳಗದ (ಪ್ರಮುಖ ನಾಯಕರು ಮತ್ತು ಸಲಹೆಗಾರರು ಗೆಲುವಿಗೆ ಅತ್ಯಂತ ಪ್ರಮುಖ ಕಾರಣಕರ್ತರು. ತೀರಾ ಅಬ್ಬರ – ಉಬ್ಬರಕ್ಕೂ ಹೋಗದೇ ಸಮಾಧಾನಚಿತ್ತವಾಗಿ ಸಂಯಮದಿಂದ ಚುನಾವಣಾ ಗೆಲುವಿಗೆ ಕಾರಣವಾಗಬಹುದಾದ ಸ್ಟ್ರಾಟರ್ಜಿ ರೂಪಿಸಿದರು.

ಟಿವಿಕೆಯು ಅಧಿಕೃತವಾಗಿ ಈ ತಂಡವನ್ನು “ಥಿಂಕ್ ಟ್ಯಾಂಕ್” ಎಂದು ಕರೆಯದಿದ್ದರೂ ಇವರೇ ಗೆಲುವಿನ ನಗೆ ಬೀರಲು ಕಾರಣರಾದವರು. ಈ ಥಿಂಕ್‌ ಟ್ಯಾಂಕ್‌ ನೀಡುತ್ತಿದ್ದ ಸಲಹೆಗಳನ್ನು ಪಕ್ಷದ ಮುಖ್ಯಸ್ಥ ವಿಜಯ್‌  ವಿಮರ್ಶಿಸಿ ನಿರ್ಣಯ ತೆಗೆದುಕೊಳ್ಳುತ್ತಿದ್ದರು. ಇವರ ಜೊತೆಗೆ ಮುಂದೆ ಉಲ್ಲೇಖಿಸಿರುವವರು ಕಾರಣಕರ್ತರು.

ಎನ್.‌  ಆನಂದ್ (ಬುಸ್ಸಿ ಆನಂದ್): ಇವರು ಪುದುಚೇರಿ ಮಾಜಿ ಶಾಸಕ ಪಕ್ಷದ ಪ್ರಬಲ ಸಂಘಟನಾತ್ಮಕ ಚಾತುರ್ಯವಿರುವ  ಪ್ರಧಾನ ಕಾರ್ಯದರ್ಶಿ

ಆಧವ್‌ ಅರ್ಜುನ್:‌ ಚುನಾವಣಾ ಪ್ರಚಾರ ಮ್ಯಾನೇಜ್‌ಮೆಂಟ್ ಜನರಲ್ ಸೆಕ್ರಟರಿ, ಕ್ಯಾಂಪೇನ್ ನಾಯಕ (Voice of Commons ಸಂಸ್ಥೆಯೊಂದಿಗೆ ಸಂಬಂಧ)

ಕೆ.ಜಿ.  ಅರುಣ್‌ರಾಜ್ : ಇವರು ಭಾರತೀಯ ರೆವಿನ್ಯೂ ಸೇವೆಯ  ( IRS)  ಮಾಜಿ  ಅಧಿಕಾರಿ. ಪಾಲಿಸಿ ಮತ್ತು ಪ್ರಚಾರ ವಿಭಾಗದ  ಜನರಲ್ ಸೆಕ್ರಟರಿ.

ಸಿ.ಟಿ.ಆರ್.‌ ನಿರ್ಮಲ್‌ ಕುಮಾರ್‌ : ಟಿವಿಕೆಯ ಡೆಪ್ಯೂಟಿ ಜನರಲ್ ಸೆಕ್ರಟರಿ.

ಜಾನ್‌ ಆರೋಗ್ಯಸ್ವಾಮಿ: ಚುನಾವಣಾ ಸ್ಟ್ರಾಟಜಿಸ್ಟ್.

ಕೆ.ಎ. ಸೆಂಗೋಟಿಯನ್:‌ ಇವರು ಅನುಭವಿ ರಾಜಕಾರಣಿ, ಮಾಜಿ ಮಂತ್ರಿ, ಹೈ-ಲೆವೆಲ್ ಅಡ್ಮಿನಿಸ್ಟ್ರೇಟಿವ್ ಕಮಿಟಿ ಚೀಫ್ ಕೋ-ಆರ್ಡಿನೇಟರ್

ಕಪಿಲ್ ಸಹು — ಪ್ರಸ್ತುತ ಚುನಾವಣಾ ಸ್ಟ್ರಾಟಜಿಸ್ಟ್/ವಾರ್ ರೂಮ್ ಲೀಡರ್.

ಪ್ರಶಾಂತ್‌ ಕಿಶೋರ್ ಪಾತ್ರವೇನು ?

ಕೆಲವು ಮಾಧ್ಯಮಗಳಲ್ಲಿ ರಾಜಕೀಯ ವಿಚಾರಗಳ ತಜ್ಞ ಪ್ರಶಾಂತ್‌ ಕಿಶೋರ್‌ ಅವರ ಮಾರ್ಗದರ್ಶನವೇ ಟಿವಿಕೆ ಗೆಲುವಿಗೆ ಕಾರಣ ಎಂದು ಬಿಂಬಿತವಾಗುತ್ತಿದೆ. ಆದರೆ ಇದು ಸತ್ಯವಲ್ಲ. ಟಿವಿಕೆಗೆ ನಾಲ್ಕೈದು ತಿಂಗಳಷ್ಟೇ ಇವರು ಪೊಲಿಟಿಕಲ್ ಅಡ್ವೈಸರ್ ಆಗಿದ್ದರು. ಆಗ ಪಕ್ಷ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿರಲಿಲ್ಲ.

ಟಿವಿಕೆ ಸ್ಪಷ್ಟ ಬಹುಮತ ಪಡೆಯದಿದ್ದರೂ ( ಈ ಲೇಖನ ಬರೆಯುವಾಗ ಸರ್ಕಾರ ರಚಿಸಲು ಬೇಕಾದ ಮ್ಯಾಜಿಕ್‌ ಸಂಖ್ಯೆ 118ಕ್ಕೆ ಟಿವಿಕೆ 10 ಸ್ಥಾನ ಕಡಿಮೆ ಇತ್ತು) ಟಿವಿಕೆಯು ತಮಿಳುನಾಡಿನ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಎಂಜಿಆರ್‌, ಜಯಲಲಿತಾ ನಂತರ ಪ್ರಭಾವಶಾಲಿ ನಾಯಕ ನಟ ವಿಜಯ್‌ ಅವರು ತಮಿಳುನಾಡಿಗೆ ಹೊಸ ಭಾಷ್ಯ ಬರೆಯಲು ಸಿದ್ದರಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!