ಸಂವಿಧಾನ – ಕಾನೂನು ಮುಂದೆ ಎಲ್ಲರೂ ಸಮಾನರು. ಪ್ರಜೆಗಳಿಗೆ ಹೇಗೆ ಚೌಕಟ್ಟು ಇರುತ್ತದೋ ಅದೇ ರೀತಿ ಕಾರ್ಯಾಂಗ- ಶಾಸಕಾಂಗ – ನ್ಯಾಯಾಂಗಗಳಲ್ಲಿ ಕೆಲಸ ಮಾಡುವವರಿಗೂ ಇರುತ್ತದೆ. ಇದನ್ನು ಮೀರಿದಾಗ ಅಭಾಸಗಳು ಸೃಷ್ಟಿಯಾಗುತ್ತವೆ.
ಕರ್ನಾಟಕ ಹೈಕೋರ್ಟಿನ ಸಿಂಗಲ್ ಬೆಂಚ್ ಜಡ್ಜ್ ವಿ. ಶ್ರೀಶಾನಂದ ಅವರು ಕಲಾಪ ನಡೆಸುವಾಗ ಹೇಳಿದ ಮಾತುಗಳು ವಿವಾದ ಉಂಟು ಮಾಡಿದ್ದವು. ಆಗಸ್ಟ್ ೨೮ರಂದು ಅವರು ನ್ಯಾಯಾಲಯದಲ್ಲಿಯೇ “ ಬೆಂಗಳೂರಿನ ಮೈಸೂರು ರಸ್ತೆಯ ಗೋರಿಪಾಳ್ಯದಲ್ಲಿ ಕಾನೂನು ಬಾಹಿರ ಕೃತ್ಯಗಳನ್ನು ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರೇ ಹಿಂದೇಟು ಹಾಕುತ್ತಾರೆ. ಏಕೆಂದರೆ ಅದು ಪಾಕಿಸ್ತಾನದಲ್ಲಿದೆ” ಎಂದಿದ್ದರು. ಮತ್ತೊಮ್ಮೆ ವಿಚಾರಣೆ ನಡೆಸುವಾಗ ಒಂದು ವಿಚಾರದ ಬಗ್ಗೆ ಪ್ರತಿವಾದಿ ವಕೀಲರಿಗೆ ಪ್ರಶ್ನೆ ಕೇಳಿದ್ದರು. ಅವರು ಉತ್ತರಿಸುವ ಮುನ್ನವೇ ಮಹಿಳಾ ವಕೀಲರು ಪ್ರತಿಕ್ರಿಯೆ ನೀಡಿದ್ದರು. ಇದಕ್ಕೆ ನ್ಯಾಯಮೂರ್ತಿ ಅವರು “ಅವರ ಬಗ್ಗೆ ನಿಮಗೆ ಪೂರ್ತಿ ಗೊತ್ತಿದೆ. ನಾಳೆ ಬೆಳಗ್ಗೆ ಕೇಳಿದರೆ ಇನ್ನೇನಾದರೂ ಹೇಳುತ್ತೀರಿ; ಯಾವ ಬಣ್ಣದ ಒಳ ಉಡುಪು ಧರಿಸಿದ್ದಾರೆ ಎಂದೂ ಹೇಳುತ್ತೀರಿ” ಎಂದಿದ್ದರು.
ಸಹಜವಾಗಿಯೇ ಈ ಮಾತುಗಳ ವಿರುದ್ಧ ವಕೀಲರ ಸಮೂಹದಲ್ಲಿ, ಸಾರ್ವಜನಿಕರಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿರೋಧ ವ್ಯಕ್ತವಾಯಿತು. ಹಿರಿಯ ಮಹಿಳಾ ವಕೀಲರೊಬ್ಬರು “ ಈ ನ್ಯಾಯಮೂರ್ತಿಗಳಿಗೆ ಲಿಂಗ ಸಂವೇದನೆ ಪಾಠ ಹೇಳಿಕೊಡಬೇಕಾಗಿದೆ” ಎಂದು ಟ್ವೀಟ್ ಮಾಡಿದ್ದರು.
ಈ ವಿಷಯ ಸುಪ್ರೀಮ್ ಕೋರ್ಟ್ ಅಂಗಳಕ್ಕೆ ತಲುಪುವುದೇನೂ ತಡವಾಗಲಿಲ್ಲ. ಅಲ್ಲಿಯ ಉನ್ನತ ಪೀಠವು ನ್ಯಾಯಮೂರ್ತಿ ಶ್ರೀಶಾನಂದ ಅವರ ಹೇಳಿಕೆ ವಿರುದ್ಧ ಪ್ರಕರಣ ದಾಖಲಿಸಿಕೊಂಡಿತು. ಕರ್ನಾಟಕ ಹೈಕೋರ್ಟಿನ ರಿಜಿಸ್ಟ್ರಾರ್ ಅವರು ಈ ಪ್ರಕರಣದ ಬಗ್ಗೆ ವರದಿ ನೀಡುವಂತೆ ಸೂಚಿಸಿತು. ಈ ಎಲ್ಲ ಬೆಳವಣಿಗೆಗಳಿಂದ ವಿಚಲಿತರಾಗಿದ್ದ ಶ್ರೀಶಾನಂದ ಅವರು ತಮ್ಮ ಬೆಂಚ್ ನಡೆಸುವ ಹೈಕೋರ್ಟ್ ಕಲಾಪದ ನಡುವೆಯೇ ತಮ್ಮ ಮಾತುಗಳಿಗೆ ವಿಷಾದ ವ್ಯಕ್ತಪಡಿಸಿದರು.
ಇಂದು ಸುಪ್ರೀಮ್ ಕೋರ್ಟಿನಲ್ಲಿ ಈ ಪ್ರಕರಣದ ವಿಚಾರಣೆ ಉನ್ನತ ಪೀಠದಿಂದ ನಡೆಯಿತು. ಇದರಲ್ಲಿ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ,ಸೂರ್ಯಕಾಂತ್, ಹೃಷಿಕೇಶ್ ರಾಯ್ ಮತ್ತು ಸಂಜೀವ್ ಖನ್ನ ಇದ್ದರು. ಶ್ರೀಶಾನಂದ ಅವರು ವಿಷಾದ ವ್ಯಕ್ತಪಡಿಸಿದ ವಿಷಯ ತಲುಪಿದ್ದ ಕಾರಣ ಪೀಠವು ಸ್ವಯಂ ಪ್ರೇರಿತವಾಗಿ ದಾಖಲು ಮಾಡಿದ್ದ ಪ್ರಕರಣದ ವಿಚಾರಣೆ ಮುಕ್ತಾಯಗೊಳಿಸಿದೆ. ಆದರೆ ಈ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯದ ಉನ್ನತ ಪೀಠ ವ್ಯಕ್ತಪಡಿಸಿರುವ ಅಭಿಪ್ರಾಯ ಗಮನಾರ್ಹ. ತೋಚಿದ ಹಾಗೆ ಮಾತನಾಡುವ ಎಲ್ಲರಿಗೂ ಒಂದು ಗಮನಾರ್ಹ ಎಚ್ಚರಿಕೆಯ ಪಾಠ
“ಭಾರತದ ಯಾವುದೇ ಭಾಗವನ್ನು ಪಾಕಿಸ್ತಾನ ಎಂದು ಕರೆಯಲು ಸಾಧ್ಯವಿಲ್ಲ. ಏಕೆಂದರೆ ಅದು ಮೂಲಭೂತವಾಗಿ ಅದು ಮೂಲಭೂತವಾಗಿ ರಾಷ್ಟ್ರದ ಪ್ರಾದೇಶಿಕ ಸಮಗ್ರತೆಗೆ ವಿರುದ್ಧ. ವೈಯಕ್ತಿಕ ಪೂರ್ವಾಗ್ರಹಗಳು ತಮ್ಮ ಕರ್ತವ್ಯದ ಮೇಲೆ ಪ್ರತಿಫಲಿಸದಂತೆ ವಕೀಲರು, ನ್ಯಾಯಾಧೀಶರುಗಳು ಎಚ್ಚರ ವಹಿಸಬೇಕು. ಲಿಂಗ ಅಥವಾ ಸಮುದಾಯಕ್ಕೆ ಸಂಬಂಧಿಸಿದಂತೆ ನೀಡಿದ ಹೇಳಿಕೆಯು ವೈಯಕ್ತಿಕ ಪಕ್ಷಪಾತದಿಂದ ನೀಡಿದ ಹೇಳಿಕೆ ಎಂದು ಗ್ರಹಿತವಾಗಬಹುದು. ಆದ್ದರಿಂದ ಪುರುಷ ಪ್ರಧಾನ ಅಥವಾ ಸ್ತ್ರೀ ದ್ವೇಷದ ವಿರುದ್ದ ಹೇಳಿಕೆ ನೀಡುವಾಗ ಜಾಗ್ರತೆ ವಹಿಸಬೇಕು. ನಿರ್ದಿಷ್ಟ ಲಿಂಗ ಅಥವಾ ಸಮುದಾಯದ ಅವಲೋಕನಗಳ ಬಗ್ಗೆ ನಮಗೆ ಗಂಭೀರ ಕಳವಳ ಇದೆ. ಇಂಥ ಅವಲೋಕನಗಳನ್ನು ನಕಾರಾತ್ಮಕವಾಗಿ ಅರ್ಥೈಸಿಕೊಳ್ಳಬಹುದಾಗಿದೆ. ನ್ಯಾಯಿಕ ಪ್ರಕ್ರಿಯೆಯಲ್ಲಿನ ವ್ಯಕ್ತಿಗಳು ತಮ್ಮತಮ್ಮ ಜವಾಬ್ದಾರಿಗಳನ್ನು ಪಕ್ಷಪಾತವಿಲ್ಲದೇ ಎಚ್ಚರಿಕೆಯಿಂದ ನಿರ್ವಹಿಸುತ್ತಾರೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದು ಉನ್ನತ ಪೀಠ ಹೇಳಿದೆ.
ಸ್ ಸರ್ ಎಚ್ಚರಿಕೆಯ ನಡೆ ನ್ಯಾಯಾಧೀಶರದ್ದು ಆಗಬೇಕಿತ್ತು. ಇದು ವಿಷಾದನೀಯ.. ಒಳ್ಳೆಯ ಬರಹ ಸರ್