ಭಾರತದ ಸಂವಿಧಾನ ಸೂಚಿಸಿರುವ ರೀತಿಯಲ್ಲಿ ಶಾಸಕರು ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾಗುತ್ತಾರೆ. ಇವರ ಮೂಲಕ ಬಹುಮತ ಇರುವ ಶಾಸಕಾಂಗ ನಾಯಕ, ತನ್ಮೂಲಕ ಮುಖ್ಯಮಂತ್ರಿ ಆಯ್ಕೆಯಾಗುತ್ತಾರೆ. ಬಳಿಕ ಸಚಿವರು ನೇಮಕವಾಗುತ್ತಾರೆ. ಹೀಗೆ ಪ್ರಜಾ ತಾಂತ್ರಿಕ ರಾಜ್ಯ ಸರ್ಕಾರ ರಚನೆಯಾಗುತ್ತದೆ.
ರಾಜ್ಯಪಾಲರು ಪ್ರಜಾ ತಾಂತ್ರಿಕವಾಗಿ ಆಯ್ಕೆ ಆದವರಲ್ಲ
ರಾಜ್ಯಪಾಲರು ಪ್ರಜಾ ತಾಂತ್ರಿಕವಾಗಿ ಆಯ್ಕೆ ಆದವರಲ್ಲ; ಲೋಕಸಭಾ ಚುನಾವಣೆಯಲ್ಲಿ ಬಹುಮತ ಪಡೆದು ಕೇಂದ್ರದಲ್ಲಿ ಸರ್ಕಾರ ರಚಿಸಿದ ಆಡಳಿತ ಪಕ್ಷದಿಂದ ಆಯ್ಕೆಯಾದವರು ರಾಜ್ಯಪಾಲರಾಗಿ ನೇಮಕವಾಗುತ್ತಾರೆ. ಅರ್ಥಾತ್ ಇದು ರಾಜಕೀಯ ನೇಮಕಾತಿ. ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಬೇರೆಬೇರೆ ಪಕ್ಷಗಳು ಸರ್ಕಾರ ರಚಿಸಿದಾಗ ರಾಜ್ಯಪಾಲರು ಮತ್ತು ರಾಜ್ಯ ಸರ್ಕಾರದ ನಡುವೆ ಸಂಘರ್ಷಗಳಾಗುವ ಸಾಧ್ಯತೆ ಇರುತ್ತದೆ.
ನಿರಂತರ ಸಂಘರ್ಷಗಳು
ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರದ ಅವಧಿಯಲ್ಲಿ ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳದಲ್ಲಿ ರಾಜ್ಯಪಾಲರು ಮತ್ತು ಅಲ್ಲಿಯ ರಾಜ್ಯ ಸರ್ಕಾರಗಳ ನಡುವೆ ನಿರಂತರ ಸಂಘರ್ಷಗಳು ನಡೆಯುತ್ತಿವೆ. ಕರ್ನಾಟಕದಲ್ಲಿ ಬಿಜೆಪಿ ರಚಿಸಿದ್ದ ರಾಜ್ಯ ಸರ್ಕಾರ ಇರುವವರೆಗೂ ಮೌನವಾಗಿದ್ದ ರಾಜ್ಯಪಾಲರು ಕಾಂಗ್ರೆಸ್ ಸರ್ಕಾರ ಬಂದ ನಂತರ ಸಂಘರ್ಷಕ್ಕೆ ತೊಡಗಿದ್ದಾರೆ. ಈಗಂತೂ ಖಾಸಗಿ ದೂರಿಗೆ ಶೀಘ್ರವೇ ಓಗೊಟ್ಟು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ದ ತನಿಖೆಗೆ ಅನುಮತಿ ಕೊಟ್ಟಿದ್ದಾರೆ.
ಬೆಳಕು
ರಾಜ್ಯಪಾಲರಿಗೆ ಈ ರೀತಿ ಅನುಮತಿ ಕೊಡುವ ಅಧಿಕಾರ ಸಂವಿಧಾನದ ಅನ್ವಯ ಪ್ರದತ್ತವಾಗಿದೆಯೇ ? ಸುಪ್ರೀಮ್ ಕೋರ್ಟಿನ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಈ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಮುಖ್ಯಮಂತ್ರಿಯ ವಿರುದ್ಧ ಪ್ರಾಸಿಕ್ಯೂಷನ್ ಆದೇಶಗಳನ್ನು ಮಂಜೂರು ಮಾಡುವ ಪಾತ್ರದಲ್ಲಿ ರಾಜ್ಯಪಾಲರ ಸಾಂವಿಧಾನಿಕ ಕರ್ತವ್ಯಗಳನ್ನು ಅವರು ಪ್ರಶ್ನಿಸಿದ್ದಾರೆ.
ಸಂವಿಧಾನದಲ್ಲಿ ಪ್ರಸ್ತಾಪವಾಗಿಲ್ಲ
“ ರಾಜ್ಯ ಸರ್ಕಾರದ ಭಾಗವಾಗಿರುವ ಮುಖ್ಯಮಂತ್ರಿ, ಸಚಿವರ ವಿರುದ್ದ ತನಿಖೆಗೆ ರಾಜ್ಯಪಾಲರು ಅನುಮತಿ ನೀಡಬಹುದು ಎಂಬ ವಿಷಯ ಸಂವಿಧಾನದಲ್ಲಿ ಪ್ರಸ್ತಾಪವಾಗಿಲ್ಲ. ಮುಖ್ಯಮಂತ್ರಿಯ ವಿರುದ್ದ ಆರೋಪ ಬಂದಾಗ ಅದರ ಬಗ್ಗೆ ತೀರ್ಮಾನ ಕೈಗೊಂಡು ತನಿಖೆಗೆ ಅನುಮತಿ ನೀಡುವ ಮೇಲಿನ ಪ್ರಾಧಿಕಾರ ಯಾರು ಎಂಬ ಜಿಜ್ಞಾಸೆ ಉಂಟಾದಾಗ ಇಂಥ ಅಧಿಕಾರ ಸುಪ್ರೀಮ್ ಕೋರ್ಟಿನಿಂದ ರಾಜ್ಯಪಾಲರಿಗೆ ದತ್ತವಾಗಿದೆ. ಆದರೆ ಇಂಥ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸಂವಿಧಾನವಾಗಲಿ ಅಥವಾ ಕೋರ್ಟ್ ಆಗಲಿ ಏನು ಹೇಳಿಲ್ಲ” ಎಂದಿದ್ದಾರೆ.
ಖಾಸಗಿ ದೂರುಗಳು
ರಾಜ್ಯಪಾಲರ ಅನುಮತಿ ಇಲ್ಲದೇ ತನಿಖೆ ಸಾಧ್ಯವಿಲ್ಲ ಎಂದು ಕಾನೂನು ಹೇಳುತ್ತದೆ. ಆದರೆ ಖಾಸಗಿ ದೂರುಗಳು ಬಂದಾಗ ಮ್ಯಾಜಿಸ್ಟ್ರೆಟರು ಇಲ್ಲಿ ಏನಾದರೂ ಉಲ್ಲಂಘನೆಗಳಾಗಿವೆಯೇ ಎಂದು ಪರಿಶೀಲಿಸಬೇಕು. ಮ್ಯಾಜಿಸ್ಟ್ರೆಟರ ಪರಿಶೀಲನೆ ಇಲ್ಲದೇ ಆರೋಪದಲ್ಲಿ ತಥ್ಯವಿದೆ ಎಂದು ರಾಜ್ಯಪಾಲರು ನಿರ್ಣಯಿಸಲು ಹೇಗೆ ಸಾಧ್ಯ ? ನನ್ನ ಅಭಿಪ್ರಾಯದ ಪ್ರಕಾರ ಈ ಥರದ ನಿರ್ಣಯಕ್ಕೆ ಬರುವ ಅಧಿಕಾರ ರಾಜ್ಯಪಾಲರಿಗೆ ಇಲ್ಲ. ರಾಜ್ಯಪಾಲರಿಗೆ ನ್ಯಾಯಾಧೀಶರಂತೆ ವರ್ತಿಸುವ ಯಾವುದೇ ಅಧಿಕಾರವೂ ಇಲ್ಲ” ಎಂದು ಹಿರಿಯ ವಕೀಲ ಕಪಿಲ್ ಸಿಬಲ್ ಅಭಿಪ್ರಾಯಪಟ್ಟಿದ್ದಾರೆ.
ಮುಡಾ ಪ್ರಕರಣ
ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅನುಮತಿ ನೀಡಿರುವುದನ್ನು ಕರ್ನಾಟಕ ಹೈಕೋರ್ಟ್ ಎತ್ತಿ ಹಿಡಿದ ಆದೇಶ ಹೊರ ಬಂದ ಬಳಿಕ ಕಪಿಲ್ ಸಿಬಲ್ ಅವರ ಈ ಅಭಿಪ್ರಾಯ ಬಂದಿದೆ ಎಂಬುದು ಗಮನಾರ್ಹ.
ರಾಷ್ಟ್ರೀಯ ಚಳವಳಿ
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ರಾಜ್ಯಪಾಲರನ್ನು ಬಳಸಿಕೊಂಡು ತನ್ನ ವಿರೋಧಿ ಪಕ್ಷಗಳು ರಚಿಸಿರುವ ರಾಜ್ಯ ಸರ್ಕಾರಗಳನ್ನು ಉರುಳಿಸಲು ಷಡ್ಯಂತ್ರ ರಚಿಸುತ್ತಿದೆ ಎಂದು ನೇರವಾಗಿಯೇ ಆರೋಪ ಮಾಡಿದ್ದಾರೆ. ದೇಶದ ಒಕ್ಕೂಟ ವ್ಯವಸ್ಥೆಗೆ ವಿರುದ್ದವಾಗಿ ರಾಜ್ಯಪಾಲರು ನಿರ್ಧಾರಗಳನ್ನು ತೆಗೆದುಕೊಳ್ಳುವುದರ ವಿರುದ್ದವೇ ಧ್ವನಿಯೆತ್ತಬೇಕು. ರಾಜ್ಯಪಾಲರುಗಳನ್ನು ಪದಚ್ಯುತಗೊಳಿಸುವ ಸಂಬಂಧ ರಾಷ್ಟ್ರೀಯ ಚಳವಳಿ ಆರಂಭಿಸಬೇಕೆಂದು ಬಿಜೆಪಿಯೇತರ ರಾಜ್ಯ ಸರ್ಕಾರಗಳಿಗೆ ಕರೆ ನೀಡಿದ್ದಾರೆ.