ಮುಡಾ ಪ್ರಕರಣದಲ್ಲಿ ತನಿಖೆಗೆ ಅನುಮತಿ ನೀಡಿದ ರಾಜ್ಯಪಾಲರ ಕ್ರಮವನ್ನು ಹೈಕೋರ್ಟ್ ಸಿಂಗಲ್ ಜಡ್ಜ್ ಬೆಂಚ್ ಎತ್ತಿ ಹಿಡಿದಿದೆ. ಈ ಬೆಳವಣಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಕಷ್ಟ ತಂದಿದೆಯೇ ಎಂಬ ವಾದ – ವಿವಾದ ಮಾಧ್ಯಮಗಳಲ್ಲಿ, ಜನ ಸಾಮಾನ್ಯರಲ್ಲಿ ನಡೆಯುತ್ತಿದೆ.
ನಾವು ಇಲ್ಲಿ ಗಮನಿಸಬೇಕಿರುವುದು ನ್ಯಾಯಾಲಯವು ಪಿಸಿ ಕಾಯ್ದೆಯ 17ಎ ಪ್ರಕಾರ ತನಿಖೆಗೆ ಆದೇಶ ನೀಡಿದೆ. ಇದರ ಹೊರತಾಗಿ ಸಿದ್ದರಾಮಯ್ಯ ತಪ್ಪು ಮಾಡಿದ್ದಾರೆ ಎಂದಲ್ಲ. ಅರ್ಥಾತ್ ಕೋರ್ಟ್ ಮುಂದೆ ಇದ್ದಿದ್ದು ರಾಜ್ಯಪಾಲರ ತೀರ್ಮಾನ ಸರಿಯೇ ತಪ್ಪೆ ಎನ್ನುವುದಷ್ಟೆ ಆಗಿತ್ತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೋರ್ಟ್ ಆದೇಶ ಹೊರ ಬಂದ ನಂತರ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದರು. ಇವರ ಮಾತಿನ ಸಾರಾಂಶ “ನ್ಯಾಯಾಂಗ ಹೋರಾಟ ಮುಂದುವರಿಸುತ್ತೇವೆ” ಎನ್ನುವುದು. ಇವರು ಹೈಕೋರ್ಟಿನ ವಿಭಾಗೀಯ ಪೀಠದ ಎದುರು ತಮ್ಮ ಅಹವಾಲು ಸಲ್ಲಿಸಬಹುದು ಅಥವಾ ಸುಪ್ರೀಮ್ ಕೋರ್ಟಿಗೆ ಹೋಗಬಹುದು.
ಹೈಕೋರ್ಟಿನ ಸಿಂಗಲ್ ಬೆಂಚ್ ನೀಡಿದ ಆದೇಶದ ಮರು ಪರಿಶೀಲನೆ ಅದರ ಮೇಲಿನ ನ್ಯಾಯಾಲಯಕ್ಕೆ ಹೋದಾಗ ಕಾನೂನುಗಳ ಪರಾಮರ್ಶೆ ಮತ್ತಷ್ಟು ವಿಸ್ತಾರವಾಗುತ್ತದೆ. ಇಲ್ಲಿ ಮೇಲು ಹಂತದ ಕೋರ್ಟ್ ಗಳು ಸಿಂಗಲ್ ಬೆಂಚ್ ಜಡ್ಜ್ ಆದೇಶವನ್ನು ಎತ್ತಿ ಹಿಡಿಯಬಹುದು ಅಥವಾ ಹಿಡಿಯದೇ ಇರಬಹುದು.
ದೂರಿಗೆ ಒಳಗಾದ ವ್ಯಕ್ತಿ ತಾನು ತಪ್ಪು ಮಾಡಿಲ್ಲ ಎಂಬ ನಿಲುವು ತಳೆದಿರುವಾಗ ಸಹಜವಾಗಿ ಮೇಲಿನ ಕೋರ್ಟಿಗೆ ಮನವಿ ಸಲ್ಲಿಸಿಯೇ ಸಲ್ಲಿಸುತ್ತಾರೆ. ಈ ಪ್ರಕರಣದಲ್ಲಿಯೂ ಹಾಗೆಯೇ ಆಗುತ್ತದೆ. ಮುಂದಿನ ಹಂತದ ನ್ಯಾಯಾಲಯ ಯಾವ ನಿಲುವು ತಳೆಯುತ್ತದೋ ಅದು ಎಲ್ಲರಿಗೂ ಕುತೂಹಲಕಾರಿ ವಿಷಯ.
ಕೆಲವರು “ತನಿಖೆ ಆಗಲಿ ಅದರಲ್ಲಿ ತಪ್ಪೇನು ? ತನಿಖೆ ನಡೆದರೆ ಸಿದ್ದರಾಮಯ್ಯ ಅವರು ತಪ್ಪು ಮಾಡಿದ್ದಾರೋ ಇಲ್ಲವೋ ಗೊತ್ತಾಗುತ್ತದೆ” ಎಂದು ಹೇಳುತ್ತಿದ್ದಾರೆ. ಆದರೆ ಇದು ಅಷ್ಟು ಸಲೀಸಾದ ವಿಷಯವಲ್ಲ. ಆದ್ದರಿಂದಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯಪಾಲರ ನಡೆ ಪ್ರಶ್ನಿಸಿ ಕೋರ್ಟಿಗೆ ಹೋಗಿದ್ದು !
ಹೈಕೋರ್ಟ್ ಆದೇಶ ಹೊರಬಿದ್ದ ಕೂಡಲೇ ಬಿಜೆಪಿ, ಜೆಡಿಎಸ್ ಪಕ್ಷಗಳು ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜಿನಾಮೆ ನೀಡಬೇಕು ಎಂದು ಒತ್ತಾಯಿಸುತ್ತಿವೆ. ಇದು ತೀರಾ ಬಾಲಿಶವಾದ ಒತ್ತಾಯ. ರಾಜ್ಯಪಾಲರು ತನಿಖೆಗೆ ಅನುಮತಿ ನೀಡಿದ್ದಾರೆ. ಅದನ್ನು ಕೋರ್ಟ್ ಎತ್ತಿ ಹಿಡಿದಿದೆ ಹೊರತು ಸಿದ್ದರಾಮಯ್ಯ ತಪ್ಪಿತಸ್ಥರು ಎಂದು ಹೇಳಿಲ್ಲ.
ಪ್ರೆಸ್ ಮೀಟ್ ಸಂದರ್ಭ ಸಿದ್ದರಾಮಯ್ಯ ಅವರು ಹೇಳಿರುವ ಈ ಮಾತು ಗಮನಾರ್ಹ “ಬಿಜೆಪಿಯವರನ್ನು ನಾವು ರಾಜಕೀಯವಾಗಿ ಎದುರಿಸುತ್ತೇವೆ. ಅವರು ಹೇಳಿದ ಮಾತ್ರಕ್ಕೆ ನಾನು ರಾಜೀನಾಮೆ ಏಕೆ ಕೊಡಬೇಕು? ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಮೇಲೆ ಎಫ್.ಐ.ಆರ್ ಆಗಿದ್ದು, ಅವರು ಜಾಮೀನಿನ ಮೇಲೆ ಇದ್ದಾರೆ. ಅವರು ರಾಜೀನಾಮೆ ಕೊಟ್ಟಿದ್ದಾರೆಯೇ? ಇದು ಅವರಿಗೆ ಅನ್ವಯವಾಗುವುದಿಲ್ಲವೇ? ತನಿಖೆ ಹಂತದಲ್ಲಿಯೇ ರಾಜೀನಾಮೆ ಕೊಡಬೇಕು ಎನ್ನುವ ಬಿಜೆಪಿ ವಾದಕ್ಕೆ ಕುಮಾರಸ್ವಾಮಿ ಅವರ ಪ್ರತಿಕ್ರಿಯೆ ಏನೆಂದು ಕೇಳಿ”
ಸಿದ್ದರಾಮಯ್ಯ ಅವರ ಹೇಳಿಕೆ ಸರಿ ಎನಿಸುವುದಿಲ್ಲವೇ ? ಎಫ್.ಐ.ಆರ್. ಆಗಿರುವ, ಜಾಮೀನಿನ ಮೇಲೆ ಹೊರಗಿರುವ ವ್ಯಕ್ತಿಯು ಕೇಂದ್ರ ಸಚಿವ ಸಂಪುಟದಲ್ಲಿ ಕ್ಯಾಬಿನೆಟ್ ದರ್ಜೆ ಮಂತ್ರಿಯಾಗಿದ್ದಾರೆ. ಇದನ್ನು ಸಾಧ್ಯ ಮಾಡಿರುವ ಬಿಜೆಪಿಗೆ ಸಿದ್ದರಾಮಯ್ಯ ಅವರ ರಾಜಿನಾಮೆ ಕೇಳುವುದಕ್ಕೆ ಯಾವ ನೈತಿಕತೆ ಇದೆ ?
ಒಟ್ಟಾರೆ ಹೇಳುವುದಾದರೆ ಕೋರ್ಟ್ ಆದೇಶ ಸಿದ್ದರಾಮಯ್ಯ ಅವರಿಗೆ ಸಂಕಷ್ಟ ತಂದಿಲ್ಲ. ಆದ್ದರಿಂದ ಅವರು ರಾಜಿನಾಮೆ ನೀಡುವುದಿಲ್ಲ; ನೀಡಬಾರದು. ಒಂದು ವೇಳೆ ರಾಜಿನಾಮೆ ನೀಡಿದರೆ “ಬಿಜೆಪಿ ರೊಟ್ಟಿ ಜಾರಿ ತುಪ್ಪದಲ್ಲಿ ಬಿದ್ದಂತೆ ಆಗುತ್ತದೆ”