ಪರಿಸರ

ತೀವ್ರ ಸಂಘರ್ಷ ನೆಲೆಗಳಲ್ಲಿ ಸಫಾರಿ ಪುನಾರಂಭ ಸರಿಯೇ ?

ಕರ್ನಾಟಕದ ಹುಲಿಕಾಡುಗಳಲ್ಲಿ ಸಫಾರಿ ಪುನಾರಂಭಿಸಲು ಮಾಜಿ ಸಚಿವರೊಬ್ಬರು ಸೇರಿದಂತೆ ಅರಣ್ಯ ಪ್ರವಾಸೋದ್ಯಮ ಅವಲಂಬಿಸಿದವರು ರಾಜ್ಯ ಸರ್ಕಾರದ ಮೇಲೆ ತೀವ್ರ ಒತ್ತಡ ಹೇರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ೨೦೨೫ರ ಡಿಸೆಂಬರ್ ಮೊದಲ ವಾರದಿಂದ ಬಂಡೀಪುರ – ನಾಗರಹೊಳೆಗಳಲ್ಲಿ ಸಫಾರಿ ಮತ್ತೆ ಆರಂಭವಾಗುತ್ತದೆ ಎಂಬ ಸುದ್ದಿ ಇದೆ. ಇದು ಈ ಕಾಡಂಚಿನ ಗ್ರಾಮಸ್ಥರಲ್ಲಿ ಇರುವ ಆತಂಕ ಹೆಚ್ಚಿಸಿದೆ.

“ನವೆಂಬರ್ ೭, ೨೦೨೫ರಂದು ಸಫಾರಿ ನಿಷೇಧವಾಯಿತು. ಈ ನಂತರ ಅರಣ್ಯದ ಹೊರಗೆ ವನ್ಯಪ್ರಾಣಿಗಳು ಬರುವುದು ನಿಂತಿಲ್ಲವಾದರೂ ಅವುಗಳ ಸಂಖ್ಯೆ ಗಣನೀಯವಾಗಿ ತಗ್ಗಿದೆ. ಇದು ಸಫಾರಿ ನಿಂತಿರುವುದರಿಂದ ಉಂಟಾಗಿರುವ ಪರಿಣಾಮ. ಮತ್ತೆ ಸಫಾರಿ ಆರಂಭವಾದರೆ ಕಾಡೊಳಗೆ ಇರುವ ಹುಲಿ ಸೇರಿದಂತೆ ಇತರ ವನ್ಯಪ್ರಾಣಿಗಳು ನಾಡಿನತ್ತ ಬರಲು ಶುರುವಾಗುತ್ತವೆ. ಆದ್ದರಿಂದ ಮತ್ತೆ ಸಫಾರಿ ಆರಂಭವಾಗುವುದು ಬೇಡ” ಇದು ಕಾಡಂಚಿನ ಗ್ರಾಮಗಳ ನಿವಾಸಿಗಳ ಆಗ್ರಹ.

ಸಫಾರಿ ಪುನಾರಂಭಕ್ಕೆ ಸಂಬಂಧಿಸಿದಂತೆ ಯಾರೂ ಏನೇ ಹೇಳಿದರೂ ಕಾಡಂಚಿನ ಗ್ರಾಮಸ್ಥರ ಆತಂಕಕ್ಕೆ ಆಧಾರವಿದೆ. ಕೇವಲ ಒಂದೇ ತಿಂಗಳು ಅವಧಿಯಲ್ಲಿ ೨೦೨೫ರ ನವೆಂಬರ್ ಅಂತ್ಯದೊಳಗೆ ಮೂವರು ಗ್ರಾಮಸ್ಥರು ಹುಲಿ ದಾಳಿಗೆ ಬಲಿಯಾಗಿದ್ದಾರೆ. ಒಬ್ಬರು ತೀವ್ರ ಗಾಯಗೊಂಡು ಕಣ್ಣುಗಳನ್ನು ಕಳೆದುಕೊಂಡಿದ್ದಾರೆ. ಇವೆಲ್ಲದರಿಂದಾಗಿ ಬಂಡೀಪುರ, ನಾಗರಹೊಳೆ ಸುತ್ತಮುತ್ತಲಿನ ಹೊಲ – ತೋಟಗಳಿಗೆ ರೈತರು ಹೋಗುವುದು ಕಡಿಮೆಯಾಗಿದೆ. ಹಲವರು ಜಾನುವಾರುಗಳನ್ನು ಹೊರಗೆ ಮೇಯಿಸಲು ಭಯಪಡುತ್ತಿದ್ದಾರೆ. ಇವರ ಭಯ ನಿವಾರಣೆಗೆ ಮುನ್ನವೇ ಮತ್ತೆ ಸಫಾರಿ ಆರಂಭವಾದರೆ ಪ್ರತಿಭಟನೆ ಮಾಡುವುದಾಗಿ ರೈತಸಂಘ ಎಚ್ಚರಿಸಿದೆ. ಆದರೂ ಅರಣ್ಯ ಇಲಾಖೆ ಸಫಾರಿ ಪುನಾರಂಭಿಸಿಲು ಉತ್ಸುಕತೆ ಹೊಂದಿದೆ ಎಂಬ ಆರೋಪವಿದೆ. ಈ ಹಿನ್ನೆಲೆಯಲ್ಲಿ ಕಾಡಂಚಿನ ಗ್ರಾಮಸ್ಥರ ಪರವಾಗಿ ನ್ಯಾಯಾಂಗ ಹೋರಾಟ ನಡೆಸುತ್ತಿರುವ ರವಿ ಕುಮಾರ್ ಅವರು ಸಂಬಂಧಿಸಿದ ಇಲಾಖೆಗಳು, ಅಧಿಕಾರಿಗಳಿಗೆ ಲೀಗಲ್ ನೋಟಿಸ್ ನೀಡಿದ್ದಾರೆ. ಇವರು ನನ್ನೊಂದಿಗೆ ಮಾತನಾಡಿದ್ದರ ಸಾರಂಶ ಮುಂದಿದೆ.

“ಜಿಮ್ ಕಾರ್ಬೆಟ್ ಕಾಡಿಗೆ ಸಂಬಂಧಿಸಿದಂತೆ ಸುಪ್ರೀಮ್ ಕೋರ್ಟ್ ಜನರಲ್ ಗೈಡ್ ಲೈನ್ಸ್ ನೀಡಿದೆ. ಇದು ಭಾರತದ ಇತರ ಕಾಡುಗಳಲ್ಲಿನ ಸಫಾರಿಗೂ ಅನ್ವಯಿಸುತ್ತದೆ. ಅರಣ್ಯದ ಕೋರ್ ಏರಿಯಾದಲ್ಲಿ ಸಫಾರಿ ಮಾಡಬಾರದು ಎಂದು ನ್ಯಾಯಾಲಯದ ನಿರ್ದೇಶನವಿದೆ. ನನಗೆ ತಿಳಿದ ಮಟ್ಟಿಗೆ ಬಂಡೀಪುರ – ನಾಗರಹೊಳೆ ಕಾಡುಗಳ ಕೋರ್ ಏರಿಯಾದಲ್ಲಿಯೂ ಸಫಾರಿ ನಡೆಸಲಾಗುತ್ತಿತ್ತು. ಅರಣ್ಯ ಇಲಾಖೆಯು ಎಕೋ ಸೆನ್ಸಿಟಿವ್ ವಲಯಗಳನ್ನು ಗುರುತಿಸಿದೆ. ಬಂಡೀಪುರದಲ್ಲಿ ಇಂತಿಂಥ ಗ್ರಾಮಗಳು (ಲ್ಯಾಟಿಟ್ಯೂಡ್, ಲ್ಯಾಂಗ್ಟಿಟ್ಯೂಡ್ ಸಮೇತ) ಪರಿಸರ ಸೂಕ್ಷ್ಮ ವಲಯ ಎಂದು ನಿರ್ಧರಿತವಾಗಿವೆ. ನಾಗರಹೊಳೆಯಲ್ಲಿ ಇವತ್ತಿನವರೆಗೂ ಕರಡು ನೋಟಿಫಿಕೇಷನ್ ಅನ್ನೇ ಮುಂದುವರಿಸುತ್ತಿದ್ದಾರೆ. ಮುಖ್ಯವಾಗಿ ಪರಿಸರ ಸೂಕ್ಷ್ಮ ವಲಯಗಳಲ್ಲಿ ಪರಿಸರಕ್ಕೆ ಧಕ್ಕೆಯಾಗುವ ಯಾವುದೇ ಚಟುವಟಿಕೆ ನಡೆಸಬಾರದು. ಆದರೂ ಇಂಥ ಸೂಚನೆಗಳನ್ನು ನಿರ್ಲಕ್ಷಿಸಿ ವಾಣಿಜ್ಯ ಚಟುವಟಿಕೆ ನಡೆಯುತ್ತಿವೆ. ಸದ್ಯ ಅರಣ್ಯದಲ್ಲಿ ಸಫಾರಿ ನಿಂತಿದೆ. ಇದು ಶುರುವಾದರೆ ಈ ಹಿಂದೆ ಸುಪ್ರೀಮ್ ಕೋರ್ಟ್ ನೀಡಿರುವ ನಿರ್ದೇಶನಗಳ ಉಲ್ಲಂಘನೆಯಾಗುತ್ತದೆ. ಈ ದೃಷ್ಟಿಯಲ್ಲಿ ಸಂಬಂಧಿಸಿದ ಇಲಾಖೆಗೆ ಲೀಗಲ್ ನೋಟಿಸ್ ನೀಡಿದ್ದೇನೆ. ಕೋರ್‌ ಏರಿಯಾದಲ್ಲಿ ಸಫಾರಿ ಆರಂಭಿಸುವುದು ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ಎಚ್ಚರಿಸಿದ್ದೇನೆ” ಎಂದರು.

ವನ್ಯಜೀವಿ ಚಲನಚಿತ್ರ ನಿರ್ಮಾಪಕ ಮತ್ತು ಸಂರಕ್ಷಣಾವಾದಿ ಶೇಖರ್ ದತ್ತಾತ್ರಿ ಅವರು ಸಫಾರಿಗಳು ಹೆಚ್ಚಾಗಿ ಅಭಯಾರಣ್ಯಗಳನ್ನು “ಮನರಂಜನಾ ಉದ್ಯಾನವನಗಳು” ಆಗಿ ಪರಿವರ್ತಿಸುತ್ತವೆ, ಅಲ್ಲಿ ಗದ್ದಲದ ಜನಸಂದಣಿ ಉಂಟಾಗುತ್ತದೆ. ವಾಹನಗಳಿಂದ ಹುಲಿಗಳ ಮೇಲೆ ಒತ್ತಡ ಉಂಟಾಗುತ್ತದೆ. ಅವುಗಳ ಬೇಟೆಯ ಮಾದರಿಗಳನ್ನೂ ಸಫಾರಿಗಳು ಬದಲಾಯಿಸುತ್ತವೆ. ಮುಖ್ಯವಾಗಿ ಅವುಗಳು ಬೇಟೆಗಾಗಿ, ವಿಶ್ರಾಂತಿಗಾಗಿ ಸಂಚರಿಸುವ ಪ್ರಮುಖ ಪ್ರದೇಶಗಳನ್ನು ತಪ್ಪಿಸಲು ಕಾರಣವಾಗುತ್ತವೆ” ಎಂದು ಅಭಿಪ್ರಾಯಪಡುತ್ತಾರೆ.

ಸುಪ್ರೀಂ ಕೋರ್ಟ್ (2024 ಜಿಮ್ ಕಾರ್ಬೆಟ್ ಕಾಡು ಕುರಿತ ಸೂಚನೆಗಳು ಇತರ ಕಾಡುಗಳಿಗೂ ಅನ್ವಯಿಸುತ್ತದೆ) ತನ್ನ ಒಂದು ಪ್ರಮುಖ ತೀರ್ಪಿನಲ್ಲಿ ಅರಣ್ಯದ ಕೋರ್ ವಲಯಗಳಲ್ಲಿ ಕೆಲವು ಹುಲಿ ಸಫಾರಿಗಳನ್ನು ನಿಷೇಧಿಸಿದೆ. ಈ ಸಂದರ್ಭದಲ್ಲಿ ಪರಿಸರಶಾಸ್ತ್ರಜ್ಞರು, ವನ್ಯಜೀವಿ ವಕೀಲರ ಅಮಿಕಸ್ ಕ್ಯೂರಿ ವರದಿಗಳನ್ನು ಉಲ್ಲೇಖಿಸಿದೆ. ವಾಹನಗಳ ಬೆಂಗಾವಲುಗಳು ಪ್ರಾಣಿಗಳ ನೈಸರ್ಗಿಕ ಚಲನೆಗೆ ಅಡ್ಡಿಯಾಗುತ್ತವೆ, ರೋಗಗಳನ್ನು ಹರಡುತ್ತವೆ ಮತ್ತು ದೀರ್ಘಕಾಲದ ಒತ್ತಡವನ್ನು ಹೇಗೆ ಸೃಷ್ಟಿಸುತ್ತವೆ ಎಂಬುದನ್ನು ಎತ್ತಿ ತೋರಿಸಲಾಗಿದೆ.

ಪಾಲ್ ಗೋಲ್ಡ್ಸ್ಟೈನ್ ಎನ್ನುವ ವನ್ಯಜೀವಿ ತಜ್ಞ, ಟೈಗರ್ ಸಫಾರಿ ಮಾರ್ಗದರ್ಶಿ ಸಹ “ಕಾಡಿನಲ್ಲಿ ಅತಿಯಾದ ಸಫಾರಿಗಳು ಹುಲಿಗಳ ನಡವಳಿ ಮೇಲೆ ಗಂಭಿರವಾದ ಪರಿಣಾಮ ಉಂಟು ಮಾಡುತ್ತವೆ, ಅವುಗಳು ಈ ಒತ್ತಡದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತವೆ” ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ವನ್ಯಜೀವಿ ತಜ್ಞ ರಂಜಿತ್ ಸಿನ್ಹಾ ಅವರು “ಸಂರಕ್ಷಿತ ಪ್ರದೇಶಗಳಲ್ಲಿ (ಬಹು ಜೀಪ್ಗಳೊಂದಿಗೆ) ಹುಲಿಗಳನ್ನು ಹಿಂಬಾಲಿಸುವ ವಿಧಾನವು ಅಸ್ವಾಭಾವಿಕ ನಡವಳಿಕೆ ಎಂದು ಹೇಳುತ್ತಾರೆ.

ಈ ಎಲ್ಲ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹುಲಿಗಳ ಸಾಂದ್ರತೆ ಹೆಚ್ಚಿರುವ ಬಂಡೀಪುರ – ನಾಗರಹೊಳೆ ಕಾಡುಗಳಲ್ಲಿ ಮತ್ತೆ ಸಫಾರಿ ಆರಂಭಿಸಬಾರದು. ಮುಖ್ಯವಾಗಿ ಪರಿಸರ ಸೂಕ್ಷ್ಮ ವಲಯಗಳಲ್ಲಿ ವನ್ಯಜೀವಿಗಳ ನೆಮ್ಮದಿಗೆ ಕಂಟಕ ಉಂಟು ಮಾಡುವ ಪ್ರವಾಸೋದ್ಯಮಕ್ಕೆ ಅವಕಾಶ ಮಾಡಿಕೊಡಬಾರದು. ಕಾಡಂಚಿನ ಗ್ರಾಮಸ್ಥರ ಅಮೂಲ್ಯ ಜೀವಗಳನ್ನು ಕಾಪಾಡುವುದರತ್ತ ಆದ್ಯತೆ ನೀಡಬೇಕು.

Leave a Reply

Your email address will not be published. Required fields are marked *

error: Content is protected !!