ಬೆಂಗಳೂರಿನಲ್ಲಿ ಚಳಿ ಪ್ರಮಾಣ ಅಧಿಕವಾಗಿದೆ. ಇದಕ್ಕೇನು ಕಾರಣ ಎಂಬುದು ಹಲವರ ಪ್ರಶ್ನೆ. ಮೊದಲನೇಯ ಕಾರಣ ಏನೆಂದರೆ ಸಮುದ್ರಮಟ್ಟದಿಂದ ಬೆಂಗಳೂರು 900 ಮೀಟರ್ ಎತ್ತರದಲ್ಲಿದೆ. ಇದು ಕೂಡ ಒಂದು ಸಣ್ಣ ಗಿರಿಧಾಮ. ಇನ್ನೊಂದು ಕಾರಣ ನೆಲಗಾಳಿಯೆನ್ನುವುದು ಈಶಾನ್ಯ ಅಥವಾ ಉತ್ತರ ದಿಕ್ಕಿನಿಂದ ಬೀಸುತ್ತಿದೆ. ಈ ಗಾಳಿ ಪ್ರತಿಗಂಟೆಗೆ ಹದಿನೈದರಿಂದ ಇಪ್ಪತ್ತು ಕಿಲೋ ಮೀಟರ್ ವೇಗದಲ್ಲಿ ಬೀಸುತ್ತಿದೆ. ಇದರಲ್ಲಿ ತಂಪು ಅಂಶ ಅಧಿಕವಾಗಿದೆ.
ವಾಯುಭಾರ ಕುಸಿತದ ಕಾರಣ ಆಕಾಶವೂ ಮೋಡವಾಗಿದೆ. ಹಗುರವಾಗಿ ಮಳೆಯಾಗುತ್ತಿದೆ. ಇದರಿಂದ ಗರಿಷ್ಠ ತಾಪಮಾನ ಹೆಚ್ಚಾಗುತ್ತಿಲ್ಲ. ಸೂರ್ಯನ ಕಿರಿಣಗಳು ಭೂಮಿಗೆ ಬೀಳುತ್ತಿಲ್ಲ. ಈ ಹಿನ್ನೆಲೆಯಲ್ಲಿ ಗರಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ಇದೆ. ಈ ಕಾರಣಗಳಿಂದ ಪ್ರಸ್ತುತ ಬೆಂಗಳೂರಿನಲ್ಲಿ ಮಳೆಯಾಗುತ್ತಿದೆ. ಮುಂದಿನ ಎರಡು ಅಥವಾ ಮೂರುದಿನದಲ್ಲಿ ವಾತಾವರಣ ಸುಧಾರಿಸುವ ಸಾಧ್ಯತೆ ಇದೆ. ಆಗ ಚಳಿ ಪ್ರಮಾಣ ಕಡಿಮೆಯಾಗಲಿದೆ.
ನಾವು ಗಮನಿಸಬೇಕಾದ ಅಂಶವೇನೆಂದರೆ ತೀವ್ರ ಚಳಿಯ ಅವಧಿಯಾದ ಡಿಸೆಂಬರ್ ಕೊನೆಯಾರ್ಧ ಜನೆವರಿ, ಫೆಬ್ರುವರಿಯಲ್ಲಿ ಚಳಿಯ ಪ್ರಮಾಣ ಅತ್ಯಧಿಕ. ಈ ಅವಧಿ ಹತ್ತಿರ ಬರುತ್ತಿದೆ. ಇದರ ಪ್ರಭಾವ ಒಂದು ತಿಂಗಳು ಮುಂಚಿತವಾಗಿ ಬೆಂಗಳೂರಿನಲ್ಲಿ ಉಂಟಾಗುವ ಸಾಧ್ಯತೆ ಇದೆ.
ಇಂದು ಬೆಂಗಳೂರು ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಮುಂಜಾನೆ ದಟ್ಟವಾಗಿ ಮಂಜು ಕವಿಯಬಹುದು. ಕನಿಷ್ಟ ತಾಪಮಾನ 17 ರಿಂದ ಗರಿಷ್ಠ 23ರವರೆಗೆ ಇರುತ್ತದೆ. ನಾಳೆ ಗರಿಷ್ಠ ತಾಪಮಾಣ 23, ಕನಿಷ್ಟ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ಇರಲಿದೆ.