ಕಾಕ್ರೋಚ್ ಪಾರ್ಟಿ ಹಿಂದೆ ಆಮ್ ಆದ್ಮಿ ಪಾರ್ಟಿ ಕೈವಾಡವಿದೆಯೇ ?
ಕಾಕ್ರೋಚ್ ಜನತಾ ಪಾರ್ಟಿ’ (CJP – cockroach Janata party) ಭಾರತೀಯ ರಾಜಕಾರಣ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸುತ್ತಿದೆ. ಇದರ ಹಿಂದೆ ಈಗಾಗಲೇ ಸಂಸ್ಥಾಪಿತ ಪಕ್ಷವಾದ ಆಮ್ ಆದ್ಮಿ ಪಾರ್ಟಿಕೈವಾಡವಿದೆಯೇ ಎಂಬ ಅನುಮಾನವೂ ಚಾಲ್ತಿಯಲ್ಲಿದೆ.
ಕಾಕ್ರೋಚ್ ಪಾರ್ಟಿಯೇ ವಿಲಕ್ಷಣವಾಗಿದೆ. ಇಂಥ ಪಾರ್ಟಿಯ ಹುಟ್ಟಿಗೆ ಕಾರಣವಾಗಿದ್ದು ಭಾರತದ ಮುಖ್ಯ ನ್ಯಾಯಮೂರ್ತಿ (CJI) ಒಂದು ಹೇಳಿಕೆ ಎಂಬ ವಾದವೂ ಇದೆ. ಮೇ 15, 2026 ರಂದು ಸುಪ್ರೀಮ್ ಕೋರ್ಟ್ ವಿಚಾರಣೆ ನಡೆಯುತ್ತಿತ್ತು. ಹಿರಿಯ ವಕೀಲರ ಹುದ್ದೆಯ ಆಕಾಂಕ್ಷಿಗಳಿಗೆ ಸಂಬಂಧಿಸಿದಂತೆ ಸಿಜೆಐ ಸೂರ್ಯ ಕಾಂತ್ ಮಾತನಾಡಿದರು. ವ್ಯವಸ್ಥೆಯ ಮೇಲೆ ದಾಳಿ ಮಾಡುವ ಕೆಲವರನ್ನು “ಸಮಾಜದ ಪರಾವಲಂಬಿಗಳು (parasites) ಮತ್ತು ಉದ್ಯೋಗವಿಲ್ಲದ ಜಿರಳೆಗಳಂತಹ (cockroaches) ಯುವಕರು” ಎಂದಿದ್ದರು.
ಈ ಮಾತುಗಳು ದೇಶದ ನಿರುದ್ಯೋಗಿ ಯುವ ಪೀಳಿಗೆಯನ್ನು (Gen Z) ಕೆರಳಿಸಿತು. ಬೋಸ್ಟನ್ ವಿಶ್ವವಿದ್ಯಾಲಯದಲ್ಲಿ ಸಾರ್ವಜನಿಕ ಸಂಪರ್ಕ (Public Relations) ಓದುತ್ತಿರುವ ಮಹಾರಾಷ್ಟ್ರ ಮೂಲದ ಅಭಿಜೀತ್ ದಿಪ್ಕೆಎಂಬ 30 ವರ್ಷದ ಯುವಕನ ಗಮನವನ್ನೂ ಸೆಳೆಯಿತು. “ಎಲ್ಲ ಜಿರಳೆಗಳು ಒಂದಾದರೆ ಹೇಗೆ?” ಎಂದು ತಮಾಷೆಯಾಗಿ ಪೋಸ್ಟ್ ಮಾಡಿ, ಮೇ 16 ರಂದು ‘ಕಾಕ್ರೋಚ್ ಜನತಾ ಪಾರ್ಟಿ’ ಎಂಬ ವ್ಯಂಗ್ಯಭರಿತ (satirical) ಆನ್‌ಲೈನ್ ವೇದಿಕೆಯನ್ನು ಸ್ಥಾಪಿಸಿದರು.
ಈ ಬಳಿಕ ಸಿಜೆಐ ಅವರು “ನನ್ನ ಹೇಳಿಕೆಯನ್ನು ತಪ್ಪು ತಿಳಿಯಲಾಗಿದೆ, ನಾನು ನಕಲಿ ಪದವಿ ಪಡೆದು ವಕೀಲಿ ವೃತ್ತಿಗೆ ಬರುವವರನ್ನು ಹಾಗೆ ಕರೆದಿದ್ದೆನೇ ಹೊರತು ದೇಶದ ಯುವಕರನ್ನಲ್ಲ” ಎಂದು ಸ್ಪಷ್ಟನೆ ನೀಡಿದರು. ಆದರೆ ಅಷ್ಟರಲ್ಲಾಗಲೇ ಈ ಚಳುವಳಿ ದೇಶಾದ್ಯಂತ ಹಬ್ಬಿತ್ತು.ಈ ಚಳವಳಿಯ ಶೀಘ್ರ ಬೆಳವಣಿಗೆಗೆ ಕಾರಣವಾದ ಅಂಶಗಳು ಯಾವುವು ಎಂಬ ಪ್ರಶ್ನೆಗಳು ಮೂಡದಿರದು !
ಕೇವಲ 5-6 ದಿನಗಳಲ್ಲಿ ಈ ಜಿಐಎಫ್/ಮೀಮ್ ಆಧಾರಿತ ಪಕ್ಷವು ಇನ್‌ಸ್ಟಾಗ್ರಾಮ್‌ನಲ್ಲಿ 2 ಕೋಟಿಗೂ (20 million) ಹೆಚ್ಚು ಫಾಲೋವರ್ಸ್ ಪಡೆದು ಆಡಳಿತಾರೂಢ ಬಿಜೆಪಿ ಸೇರಿದಂತೆ ಭಾರತದ ಎಲ್ಲಾ ರಾಜಕೀಯ ಪಕ್ಷಗಳ ಅಧಿಕೃತ ಖಾತೆಗಳನ್ನು ಹಿಂದಿಕ್ಕಿದೆ. ಇದೇನು ಸಾಮಾನ್ಯ ಸಂಗತಿಯಲ್ಲ !!
ದೇಶದಲ್ಲಿ ಪದವೀಧರ ಯುವಜನತೆ ನಿರುದ್ಯೋಗ ದರ ಹೆಚ್ಚುತ್ತಿದೆ. ಇತ್ತೀಚಿನ NEET-UG 2026 ಪರೀಕ್ಷಾ ಪತ್ರಿಕೆ ಸೋರಿಕೆ (Paper Leak) ಹಗರಣಗಳಿಂದ ಯುವಕರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶಗೊಂಡಿದ್ದಾರೆ.
ಕಾಕ್ರೋಚ್ ಪಾರ್ಟಿಯ ವಿಲಕ್ಷಣ – ವಿಶಿಷ್ಟ ಅರ್ಹತಾ ಮಾನದಂಡಗಳು ಯುವಜನತೆಗೆ ಇಷ್ಟವಾಗಿವೆ. “ನಿರುದ್ಯೋಗಿಯಾಗಿರಬೇಕು, ಸೋಮಾರಿ ಇರಬೇಕು, ಸದಾ ಆನ್‌ಲೈನ್‌ನಲ್ಲಿರಬೇಕು ಮತ್ತು ವೃತ್ತಿಪರರಂತೆ ಆಕ್ರೋಶ ಹೊರಹಾಕುವಂತಿರಬೇಕು.” ಇದರ ಧೈಯವಾಕ್ಯ ಏನೆಂದರೆ “Voice of the Lazy & Unemployed” (ಸೋಮಾರಿ ಹಾಗೂ ನಿರುದ್ಯೋಗಿಗಳ ಧ್ವನಿ)
ಕಾಕ್ರೋಚ್ ಪಾರ್ಟಿಯ ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರು AI ಪರಿಕರಗಳನ್ನು (ChatGPT, Claude) ಬಳಸಿ ಆಕರ್ಷಕ ಲೋಗೋ ಮತ್ತು ಪೋಸ್ಟ್‌ಗಳನ್ನು ಸೃಷ್ಟಿಸಿದ್ದಾರೆ. ಯುವ ಪೀಳಿಗೆಗೆ ರಾಜಕೀಯ ಭಾಷಣಗಳಿಗಿಂತ ‘ಮೀಮ್ಸ್’ (Memes) ಮೂಲಕ ವ್ಯವಸ್ಥೆಯನ್ನು ಅಣಕಿಸುವುದು ಹೆಚ್ಚು ಕನೆಕ್ಟ್ ಆಯಿತು.
ಕಾಕ್ರೋಚ್ ಪಾರ್ಟಿಯನ್ನು ಆಮ್ ಆದ್ಮಿ ಪಾರ್ಟಿಯ (AAP) ಮನೀಶ್ ಸಿಸೋಡಿಯಾ, ಟಿಎಂಸಿಯ ಮಹುವಾ ಮೊಯಿತ್ರಾ ಮತ್ತು ಹಿರಿಯ ವಕೀಲ ಪ್ರಶಾಂತ್ ಭೂಷಣ್ ಈ ಆಂದೋಲನವನ್ನು ಸಾರ್ವಜನಿಕವಾಗಿ ಬೆಂಬಲಿಸಿದರು. ಬಹುಶಃ ಇದೇ ಕಾಕ್ರೋಚ್ ಪಾರ್ಟಿಯ ಹಿಂದೆ ಆಮ್ ಆದ್ಮಿ ಪಾರ್ಟಿಯ ಕೈವಾಡ ಇರಬಹುದು ಎಂಬ ಅನುಮಾನ ಮೂಡಲು ಕಾರಣವಾಯಿತು. ಈ ಬೆಳವಣಿಗೆ ನಂತರ ಕಾಕ್ರೋಚ್ ಪಾರ್ಟಿಯ ಸಾಮಾಜಿಕ ಜಾಲತಾಣಗಳು ಒಂದರ ಹಿಂದೆ ಒಂದು ಸ್ಥಗಿತಗೊಂಡಿವೆ ಎಂಬುದು ಗಮನಾರ್ಹ !!

ಅಭಿಜೀತ್ ದಿಪ್ಕೆ ಅವರ ಪ್ರಕಾರ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ 6 ಲಕ್ಷಕ್ಕೂ ಹೆಚ್ಚು ‘ಜಿರಳೆಗಳು’ (ಬೆಂಬಲಿಗರು) ಆನ್‌ಲೈನ್ ಸಹಿ ಅಭಿಯಾನ ನಡೆಸಿದ ಬೆನ್ನಲ್ಲೇ ಕಾಕ್ರೋಚ್ ಪಾರ್ಟಿಯ ಸಾಮಾಜಿಕ ಜಾಲತಾಣಗಳ ವಿರುದ್ಧ ಕ್ರಮ ಜರುಗಿದೆ.ಭಾರತ ಸರ್ಕಾರದ ಕಾನೂನು ಜಾರಿ ಸಂಸ್ಥೆಗಳ ಅಧಿಕೃತ ವಿನಂತಿಯ ಮೇರೆಗೆ ‘X’ (ಟ್ವಿಟರ್) ಸಂಸ್ಥೆಯು ಸಿಜೆಪಿ ಅಧಿಕೃತ ಹ್ಯಾಂಡಲ್ ಅನ್ನು ಭಾರತದಲ್ಲಿ ತಡೆಹಿಡಿದಿದೆ (withheld).ಇನ್‌ಸ್ಟಾಗ್ರಾಮ್ ಪೇಜ್ ಮತ್ತು ಬ್ಯಾಕ್-ಅಪ್ ಖಾತೆಗಳನ್ನು ಡಿಲೀಟ್ ಮಾಡಲಾಗಿದೆ ಅಥವಾ ಸೈಬರ್ ದಾಳಿ ನಡೆಸಿ ಹ್ಯಾಕ್ ಮಾಡಲಾಗಿದೆ ಎಂದು ದಿಪ್ಕೆ ಹೇಳಿದ್ದಾರೆ. ಕಾಕ್ರೋಚ್ ಪಾರ್ಟಿಯ ಅಧಿಕೃತ ವೆಬ್‌ಸೈಟ್ (cockroachjantaparty.org) ಅನ್ನು ಸಹ ಇಂಟರ್ನೆಟ್‌ನಿಂದ ತೆಗೆದುಹಾಕಲಾಗಿದೆ (Taken down).
ಕಾಕ್ರೋಚ್ ಪಾರ್ಟಿಯ ಹಿಂದೆ ಆಮ್ ಆದ್ಮಿ ಪಾರ್ಟಿಯ ಕೈವಾಡವಿದೆಯೇ ಎಂಬ ಗುಮಾನಿಗೆ ಮುಖ್ಯ ಕಾರಣವೂ ಒಂದಿದೆ. ಅದೇನೆಂದರೆ ಅಭಿಜೀತ್ ದಿಪ್ಕೆ ಅವರು ಈ ಹಿಂದೆ (2020-2023) ಆಮ್ ಆದ್ಮಿ ಪಾರ್ಟಿಯ (AAP) ಸೋಷಿಯಲ್ ಮೀಡಿಯಾ ಸ್ಟ್ರಾಟಜಿಸ್ಟ್ ಆಗಿ ಕೆಲಸ ಮಾಡಿದ್ದರು. ಹೀಗಾಗಿ ಇದು ಕೇವಲ ಯುವಕರ ಸ್ವಯಂಪ್ರೇರಿತ ಆಂದೋಲನವಲ್ಲ, ಇದರ ಹಿಂದೆ ಆಪ್ (AAP) ಪಕ್ಷದ ರಾಜಕೀಯ ತಂತ್ರಗಾರಿಕೆ ಅಡಗಿದೆ ಎಂದು ಬಿಜೆಪಿ ನಾಯಕರು ಆರೋಪಿಸುತ್ತಿದ್ದಾರೆ.
ಶ್ರೀಲಂಕಾ ಅಥವಾ ಬಾಂಗ್ಲಾದೇಶಗಳಲ್ಲಿ ಯುವ ಸಮೂಹ ಬೀದಿಗಿಳಿದು ಸರ್ಕಾರಗಳನ್ನು ಉರುಳಿಸಿದ ಮಾದರಿಯಲ್ಲಿ, ಭಾರತದಲ್ಲೂ ಡಿಜಿಟಲ್ ರೂಪದ ಯುವ ದಂಗೆ ಏಳುತ್ತಿದೆಯೇ ಎಂಬ ಆತಂಕ ರಾಜಕೀಯ ವಲಯದಲ್ಲಿರುವುದಂತೂ ಸುಳ್ಳಲ್ಲ.
ಕಾಕ್ರೋಚ್ ಪಾರ್ಟಿ ಮೇಲೆ ಈ ಗುಮಾನಿ, ಅನುಮಾನ ಮತ್ತೊಂದು ಮಗದೊಂದು ಏನೇ ಇರಲಿ ಅದು ಭಾರತದ ಯುವಜನತೆಯಲ್ಲಿ ಭ್ರಷ್ಟಾಚಾರ, ನಿರುದ್ಯೋಗದಂಥ ಪ್ರಮುಖ ಸಮಸ್ಯೆಗಳ ವಿರುದ್ಧ ಆಕ್ರೋಶದ ಪ್ರತೀಕವಾಗಿದೆ. ಮುಂದೆ ಕಾಕ್ರೋಚ್ ಪಾರ್ಟಿ ಸಾಂಸ್ಥಿಕ ರಾಜಕೀಯ ಪಕ್ಷದ ಸ್ವರೂಪ ಪಡೆದುಕೊಳ್ಳಬಹುದು, ತನ್ಮೂಲಕ ಭಾರತದಲ್ಲಿ ಹೊಸ ಭರವಸೆಯ ಬೆಳಕಾಗಬಹುದು ! ಹೀಗಾಗುತ್ತದೆಯೇ ಎಂಬುದಕ್ಕೆ ಕಾಲವೇ ಉತ್ತರಿಸಲಿದೆ.
