Kannadaಪರಿಸರ

ಮುಂಗಾರು ಆರಂಭಕ್ಕೆ ಕ್ಷಣಗಣನೆ

ಮುಂಗಾರು ಆರಂಭದ ಮುನ್ಸೂಚನೆಯಾಗಿ ಕೇರಳದಾದ್ಯಂತ ಮುಂಗಾರು ಪೂರ್ವ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತೀಯ  ಹವಾಮಾನ ಇಲಾಖೆಯು ವಿವಿಧ ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ (Yellow Alert) ಘೋಷಿಸಿದೆ.

ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಪ್ರವಾಹ ಅಥವಾ ನೀರು ನಿಲ್ಲುವ ಸಾಧ್ಯತೆಯಿರುವುದರಿಂದ ಜಾಗರೂಕರಾಗಿರಲು ಹೇಳಲಾಗಿದೆ. ಗುಡುಗು, ಮಿಂಚು ಮತ್ತು ಬಲವಾದ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಎಚ್ಚರಿಸಲಾಗಿದೆ.

ಭಾರತೀಯ ಹವಾಮಾನ ಇಲಾಖೆಯ (IMD) ಇತ್ತೀಚಿನ ಮುನ್ಸೂಚನೆಯ ಪ್ರಕಾರ, ಮುಂಗಾರು ಮಾರುತಗಳು ಮೇ 26ರ ಸುಮಾರಿಗೆ ಕೇರಳ ಕರಾವಳಿಯನ್ನು ಪ್ರವೇಶಿಸುವ ಸಾಧ್ಯತೆಯಿದೆ. ಸಾಮಾನ್ಯವಾಗಿ ಮುಂಗಾರು ಜೂನ್ 1 ರಂದು ಕೇರಳಕ್ಕೆ ಆಗಮಿಸುವುದು ವಾಡಿಕೆ. ಆದರೆ ಈ ಬಾರಿ ಸುಮಾರು ಒಂದು ವಾರ ಮುಂಚಿತವಾಗಿಯೇ ಆಗಮಿಸುತ್ತಿದೆ.

ಮುಂಗಾರು ಮಾರುತಗಳು ಈಗಾಗಲೇ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಹಾಗೂ ಆಗ್ನೇಯ ಅರಬ್ಬಿ ಸಮುದ್ರದ ಭಾಗಗಳನ್ನು ಆವರಿಸಿಕೊಂಡಿವೆ.  ಕೇರಳದತ್ತ ವೇಗವಾಗಿ ಮುನ್ನುಗ್ಗುತ್ತಿವೆ.

ಪ್ರಸ್ತುತ ಕೇರಳದಾದ್ಯಂತ ವ್ಯಾಪಕವಾಗಿ ಗುಡುಗು ಸಹಿತ ಮಳೆಯಾಗುತ್ತಿದೆ.  ಮುಂದಿನ 5 ದಿನಗಳ ಕಾಲ ಭಾರಿ ಮಳೆ (7 ರಿಂದ 11 ಸೆಂ.ಮೀ) ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ( IMD ) ತಿಳಿಸಿದೆ. ಲಕ್ಷದ್ವೀಪ ಮತ್ತು ಕೇರಳದ ಕರಾವಳಿ ತೀರಗಳಲ್ಲಿ ಗಂಟೆಗೆ 40-50 ಕಿಮೀ ವೇಗದಲ್ಲಿ ಗಾಳಿ ಬೀಸುತ್ತಿರುವುದರಿಂದ ಕಡಲು ಆರ್ಭಟಿಸುತ್ತಿದೆ.  ಮೀನುಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

 ಮುಂಗಾರು ಬೇಗನೇ ಆರಂಭವಾಗುತ್ತಿದ್ದರೂ, ಈ ವರ್ಷ ‘ಎಲ್ ನಿನೋ’ (El Nino) ಪ್ರಭಾವದ ಸಾಧ್ಯತೆ ಇರುವುದರಿಂದ ದೇಶದಲ್ಲಿ ಒಟ್ಟಾರೆ ಮುಂಗಾರು ಮಳೆ ಸಾಮಾನ್ಯಕ್ಕಿಂತ ಕೊಂಚ ಕಡಿಮೆ (ದೀರ್ಘಾವಧಿ ಸರಾಸರಿಯ ಶೇ. 92 ರಿಂದ 94 ರಷ್ಟು) ಇರಬಹುದು ಎಂದು ಹವಾಮಾನ ತಜ್ಞರು ಅಂದಾಜಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!