ಮಾಧ್ಯಮ

ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯ ಇದೆಯೇ ?

ಪತ್ರಿಕಾ ರಂಗವನ್ನು ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿ ಪರಿಗಣಿಸಲಾಗುತ್ತದೆ. ಪ್ರಜಾಪ್ರಭುತ್ವದ ವಾಚ್ ಡಾಗ್ ಎಂಬ ಪರಿಕಲ್ಪನೆಯೂ ಇದೆ. ವಿಶ್ವದಾದ್ಯಂತ ಪ್ರತಿವರ್ಷ ಮೇ 3ರಂದು ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ ಆಚರಿಸಲಾಗುತ್ತದೆ. ಪತ್ರಿಕಾ ಸ್ವಾತಂತ್ರ್ಯದ ಮೂಲಭೂತ ತತ್ವಗಳನ್ನು ಎತ್ತಿಹಿಡಿಯಲು, ಮಾಧ್ಯಮದ ಸ್ವಾತಂತ್ರ್ಯವನ್ನು ಮೌಲ್ಯಮಾಪನ ಮಾಡಲು ಮತ್ತು ಕರ್ತವ್ಯದ ಸಂದರ್ಭದಲ್ಲಿ ಪ್ರಾಣ ಕಳೆದುಕೊಂಡ ಪತ್ರಕರ್ತರಿಗೆ ಗೌರವ ಸಲ್ಲಿಸಲು ಮೀಸಲಾದ ದಿನವಾಗಿದೆ.
ಇದರ ಜೊತೆಗೆ ಪತ್ರಿಕಾ ಸ್ವಾತಂತ್ರ್ಯದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದು, ಪತ್ರಿಕೋದ್ಯಮದ ಮೇಲಿನ ದಾಳಿಗಳನ್ನು ಪ್ರತಿರೋಧಿಸುವ ಅಂಶಗಳೂ ಸೇರಿವೆ. ಇಂಥ ಮಹತ್ವದ ದಿನಾಚರಣೆಗೆ ಕಾರಣವಾಗಿದ್ದು UNESCO ಶಿಫಾರಸು. ಇದರ ಆಧಾರದ ಮೇಲೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಡಿಸೆಂಬರ್ 1993 ರಲ್ಲಿ ಮೇ 3 ಅನ್ನು ಪತ್ರಿಕಾ ಸ್ವಾತಂತ್ರ್ಯದ ದಿನವನ್ನಾಗಿ ಘೋಷಿಸಿತು.
ಪ್ರತಿವರ್ಷ ಒಂದೊಂದು ನಿರ್ದಿಷ್ಟ ಥೀಮ್ ಇಟ್ಟುಕೊಂಡು ಪತ್ರಿಕಾ ಸ್ವಾತಂತ್ರ್ಯ ದಿನ ಆಚರಿಸಲಾಗುತ್ತದೆ. 2026ರ ವಿಶೇಷತೆ ಏನೆಂದರೆ “ಶಾಂತಿಯ ಭವಿಷ್ಯವನ್ನು ರೂಪಿಸುವುದು” ಮೇ 4 ರಂದು ಲುಸಾಕಾದಲ್ಲಿ ಈ ವಿಷಯಾಧಾರಿತ ವಿಶೇಷ ಸಮ್ಮೇಳನ ನಡೆಯಲಿದೆ. ಪತ್ರಿಕಾ ಸ್ವಾತಂತ್ರ್ಯವು ಪತ್ರಕರ್ತರ ಹಕ್ಕು ಮಾತ್ರವಲ್ಲ; ಅದು ಜನರ ಹಕ್ಕು ಸಹ ಆಗಿದೆ. ಈ ಹಕ್ಕನ್ನು ಸಂರಕ್ಷಿಸಿದರೆ ಪ್ರಜಾಪ್ರಭುತ್ವದ ಬಲವರ್ಧನೆಗೆ ಆಗುತ್ತದೆ ಎಂಬ ಭಾವನೆಯಿದೆ.

ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ದೇಶಗಳಲ್ಲಿ ಭಾರತವೂ ಒಂದು. ಇಂಥ ದೇಶ 2026ರ ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ 180 ದೇಶಗಳಲ್ಲಿ 157ನೇ ಸ್ಥಾನದಲ್ಲಿದೆ. ಇದು ಖುಷಿ ಪಡುವ ಸಂಗತಿಯೇ ? ಕಳೆದ ವರ್ಷ 151ನೇ ಸ್ಥಾನದಲ್ಲಿತ್ತು. 2026ರ ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ 180 ದೇಶಗಳಲ್ಲಿ 157ನೇ ಸ್ಥಾನದಲ್ಲಿದೆ. ಈ ವರ್ಷ ಸೂಚ್ಯಂಕದಲ್ಲಿ ಮತ್ತಷ್ಟೂ ಕುಸಿತ ಕಂಡಿದೆ. ಪ್ರತಿವರ್ಷ ಸೂಚ್ಯಂಕದಲ್ಲಿ ಮೇಲೆರುವ ಬದಲು ಏಕೆ ಕುಸಿಯುತ್ತಿದೆ ? ಇದೇ ಸಂದರ್ಭದಲ್ಲಿ ಪತ್ರಿಕಾ ಸ್ವಾತಂತ್ರ್ಯ ವಿಷಯದಲ್ಲಿ ನೆರೆಯ ದೇಶಗಳಾದ ಪಾಕಿಸ್ತಾನ (153ನೇ ಸ್ಥಾನ- ಸುಧಾರಣೆ), ನೇಪಾಳ, ಶ್ರೀಲಂಕಾ ಮುಂತಾದವು ಭಾರತಕ್ಕಿಂತ ಮುಂದಿವೆ.

Free Speech Collective (FSC) 2025 ವರದಿ ಮತ್ತು CPJ/RSF ಮೂಲಗಳ ಮಾಹಿತಿಗಳ ಪ್ರಕಾರ ಭಾರತದಲ್ಲಿ ಪತ್ರಕರ್ತರ ಮೇಲೆ ಹಲ್ಲೆ, ಬೆದರಿಕೆ ಮತ್ತು ಕೊಲೆ ಪ್ರಕರಣಗಳು ನಡೆಯುತ್ತಲೇ ಇವೆ. 2025ರಲ್ಲಿ 8 ಪತ್ರಕರ್ತರು + 1 ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಕೊಲೆಯಾಗಿದ್ದಾರೆ ಎಂದು FSC ವರದಿ ಹೇಳಿದೆ. ಎರಡು ಕೊಲೆಗಳು ಉತ್ತರ ಪ್ರದೇಶದಲ್ಲಿ, ಉಳಿದವು ಛತ್ತೀಸ್ಗಢ್, ಹರಿಯಾಣ, ಒಡಿಶಾ, ಉತ್ತರಾಖಂಡ್, ಪಂಜಾಬ್ ಮತ್ತು ಅಂಡಮಾನ್ನಲ್ಲಿ ನಡೆದಿವೆ.
ಮುಕೇಶ್ ಚಂದ್ರಕರ್ (ಜನವರಿ 2025, ಬಸ್ತರ್, ಛತ್ತೀಸ್ಗಢ್): YouTube ಚಾನಲ್ Bastar Junction ನಡೆಸುತ್ತಿದ್ದ ಅವರು ರಸ್ತೆ ನಿರ್ಮಾಣದ ಅಕ್ರಮಗಳ ಬಗ್ಗೆ ವರದಿ ಮಾಡಿದ್ದರು. ಅವರ ಮೃತ ದೇಹ, ರಸ್ತೆ ಗುತ್ತಿಗೆದಾರರ ಆಸ್ತಿಯ ಸೆಪ್ಟಿಕ್ ಟ್ಯಾಂಕ್ನಲ್ಲಿ ಪತ್ತೆಯಾಯಿತು. ಇದು 2025ರ ಮೊದಲ ದೊಡ್ಡ ಘಟನೆ. ಹೆಚ್ಚಿನವು ಸ್ಥಳೀಯ ಭ್ರಷ್ಟಾಚಾರ, ರಾಜಕೀಯ ಮತ್ತು ಅಪರಾಧಿ ಜಾಲಗಳ ವಿರುದ್ಧ ವರದಿ ಮಾಡುವವರ ಮೇಲೆ ನಡೆದಿವೆ.
ಹಲ್ಲೆ ಮತ್ತು ಬೆದರಿಕೆಗಳ ಉದಾಹರಣೆಗಳು
2025ರಲ್ಲಿ ಒಟ್ಟು 40 ಹಲ್ಲೆಗಳು ನಡೆದಿವೆ. ಅವುಗಳಲ್ಲಿ 33 ಪತ್ರಕರ್ತರ ಮೇಲೆ ಆಗಿವೆ. 19 ಹರಾಸ್ಮೆಂಟ್ಗಳಲ್ಲಿ 14 ಪತ್ರಕರ್ತರ ಮೇಲೆ ಆಗಿವೆ. 17 ಬೆದರಿಕೆಗಳಲ್ಲಿ 12 ಪತ್ರಕರ್ತರ ಮೇಲೆ ಆಗಿವೆ.
ಪಶ್ಚಿಮ ಬಂಗಾಳ (ಜನವರಿ 2026): ಮುರ್ಷಿದಾಬಾದ್ನಲ್ಲಿ ಪ್ರತಿಭಟನೆಯನ್ನು ಕವರ್ ಮಾಡುತ್ತಿದ್ದಾಗ ಜನಸಮೂಹವು Zee 24 Ghanta ಪತ್ರಕರ್ತೆ ಸೋಮಾ ಮೈತಿ ಮತ್ತು ಕ್ಯಾಮರಾಮ್ಯಾನ್ ಅವರ ಮೇಲೆ ಹಲ್ಲೆ ಮಾಡಿತು. ಮತ್ತೊಬ್ಬರು ABP Ananda ಪತ್ರಕರ್ತರು ಕೂಡ ಹಲ್ಲೆಗೆ ಒಳಗಾದರು. ಜಮ್ಮು-ಕಾಶ್ಮೀರ್ ದಲ್ಲಿ ಭಯೋತ್ಪಾದನಾ ಘಟನೆಯ ನಂತರ ಪ್ರತಿಭಟನೆ ಕವರ್ ಮಾಡುತ್ತಿದ್ದ ರಾಕೇಶ್ ಶರ್ಮಾ (Dainik Jagran) ಅವರ ಮೇಲೆ ಪ್ರಮುಖ ರಾಜಕೀಯ ಪಕ್ಷದ ಬೆಂಬಲಿಗರು ಹಲ್ಲೆ ಮಾಡಿದ್ದರು.
2025-26ರ ಸುದ್ದಿಗಳ ಪ್ರಕಾರ ದಕ್ಷಿಣ ಭಾರತದ ಇತರ ರಾಜ್ಯಗಳ ಪತ್ರಿಕಾ ಸ್ವಾತಂತ್ರ್ಯದ ಸ್ಥಿತಿಗತಿ ಏನು ?
RSF ಸೂಚ್ಯಂಕವು ರಾಜ್ಯಮಟ್ಟದಲ್ಲಿ ಶ್ರೇಯಾಂಕ ನೀಡುವುದಿಲ್ಲ. ಆದರೆ ರಾಷ್ಟ್ರೀಯ ಮಟ್ಟದ ಸಮಸ್ಯೆಗಳು (ರಾಜಕೀಯ ಒತ್ತಡ, ಹಲ್ಲೆಗಳು, ಕಾನೂನು ದುರ್ಬಳಕೆ) ಎಲ್ಲಾ ರಾಜ್ಯಗಳಲ್ಲೂ ಪ್ರತಿಫಲಿಸುತ್ತವೆ. Free Speech Collective ಮತ್ತು ಇತರ ವರದಿಗಳ ಪ್ರಕಾರ 2025ರಲ್ಲಿ ದಕ್ಷಿಣ ಭಾರತದಲ್ಲಿ ಮುಕ್ತ ಸಂವಾದ ಉಲ್ಲಂಘನೆಗಳಾಗಿವೆ.
ರಾಜ್ಯವಾರು ಸ್ಥಿತಿ:
ಕರ್ನಾಟಕ: 9 ಘಟನೆಗಳು (ದಕ್ಷಿಣದಲ್ಲಿ ಅತಿ ಹೆಚ್ಚು). ವಿಧಾನ ಸೌಧ ಪ್ರವೇಶ ನಿರ್ಬಂಧಗಳು, ಪತ್ರಕರ್ತರ ಮೇಲೆ ಹಲ್ಲೆ/ಬೆದರಿಕೆಗಳು ಸಾಮಾನ್ಯ.
ಆಂಧ್ರಪ್ರದೇಶ: 7 ಘಟನೆಗಳು. ರಾಜಕೀಯ ಪಕ್ಷಗಳ ನಡುವಿನ ಉದ್ವಿಗ್ನತೆಯಲ್ಲಿ ಮಾಧ್ಯಮಗಳ ಮೇಲೆ ಒತ್ತಡ, ಪ್ರತಿಭಟನೆಗಳು. ಇತ್ತೀಚೆಗೆ YSRCP ಪ್ರತಿಭಟನೆಗಳು “ಪತ್ರಿಕಾ ಸ್ವಾತಂತ್ರ್ಯದ ಮೇಲೆ ದಾಳಿ” ಎಂದು ಟೀಕೆಗೆ ಒಳಗಾಗಿವೆ.
ತಮಿಳುನಾಡು: 6 ಘಟನೆಗಳು. ರಾಜಕೀಯ ಒತ್ತಡ ಮತ್ತು ಪತ್ರಕರ್ತರ ವಿರುದ್ಧ ಕ್ರಮಗಳು ವರದಿಯಾಗುತ್ತವೆ. CPJ ಮುಂತಾದ ಸಂಸ್ಥೆಗಳು ಚುನಾವಣಾ ಸಮಯದಲ್ಲಿ ಪತ್ರಕರ್ತರ ಸುರಕ್ಷತೆಗೆ ಒತ್ತಾಯಿಸಿವೆ.
ತೆಲಂಗಾಣ: 5 ಘಟನೆಗಳು. ಇತ್ತೀಚೆಗೆ ಸರ್ಕಾರಿ ಟೀಕೆ ಮಾಡಿದ ಸೋಷಿಯಲ್ ಮೀಡಿಯಾ ಹ್ಯಾಂಡಲ್ಗಳ ವಿರುದ್ಧ UAPA ಕಾನೂನು ಬಳಕೆಯ ಆರೋಪಗಳು. ಪೊಲೀಸ್ ಭೇಟಿ ಮತ್ತು ಬೆದರಿಕೆಗಳು ವರದಿಯಾಗಿವೆ.
ಕೇರಳ: ದಕ್ಷಿಣದಲ್ಲಿ ತುಲನಾತ್ಮಕವಾಗಿ ಉತ್ತಮ ಎಂದು ಪರಿಗಣಿಸಲಾಗುತ್ತದೆ. ಆದರೆ ಇಲ್ಲಿ ಕೂಡ ಪತ್ರಕರ್ತರ ಮೇಲೆ ಒತ್ತಡ, ಬೆದರಿಕೆಗಳು ಇವೆ. CPJ ಕೇರಳ ಸರ್ಕಾರಕ್ಕೆ ಪತ್ರಿಕಾ ಸ್ವಾತಂತ್ರ್ಯ ರಕ್ಷಣೆಗೆ ಒತ್ತಾಯಿಸಿದೆ.
ದಕ್ಷಿಣ ಭಾರತದಲ್ಲಿ ಸಾಮಾನ್ಯ ಸಮಸ್ಯೆಗಳೆಂದರೆ ಪತ್ರಕರ್ತರ ಮೇಲೆ ಹಲ್ಲೆ, ಬೆದರಿಕೆ ಮತ್ತು ಕಾನೂನು ಕ್ರಮಗಳು (UAPA, ಡಿಫಮೇಷನ್ ಕೇಸುಗಳು). ರಾಜಕೀಯ ಪಕ್ಷಗಳಿಂದ ಒತ್ತಡ (ಎಲ್ಲಾ ಪಕ್ಷಗಳಲ್ಲೂ ಕಂಡುಬರುತ್ತದೆ). ಸೋಷಿಯಲ್ ಮೀಡಿಯಾ ಮತ್ತು ಡಿಜಿಟಲ್ ಮಾಧ್ಯಮಗಳ ಮೇಲೆ ಹೆಚ್ಚು ನಿಯಂತ್ರಣ. 2025ರಲ್ಲಿ ದಕ್ಷಿಣ ಭಾರತದಲ್ಲಿ 27ಕ್ಕಿಂತಲೂ ಹೆಚ್ಚು ಮುಕ್ತ ಸಂವಾದ ಉಲ್ಲಂಘನೆಗಳು ವರದಿಯಾಗಿವೆ. ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಹೆಚ್ಚು ಘಟನೆಗಳು ದಾಖಲಾಗಿವೆಯಾದರೂ, ಎಲ್ಲಾ ದಕ್ಷಿಣ ರಾಜ್ಯಗಳಲ್ಲೂ ಪತ್ರಿಕಾ ಸ್ವಾತಂತ್ರ್ಯಕ್ಕೆ ಸವಾಲುಗಳಿವೆ. ಇದು ರಾಷ್ಟ್ರೀಯ ಸಮಸ್ಯೆಯ ಭಾಗವಾಗಿದೆ.
ಕರ್ನಾಟಕದ ಸ್ಥಿತಿಗತಿ ಏನು ?
ಕರ್ನಾಟಕದಲ್ಲಿ ಪತ್ರಿಕಾ ಸ್ವಾತಂತ್ರ್ಯ ವಿಷಯವು ರಾಷ್ಟ್ರೀಯ ಸರಾಸರಿಗೆ ಸಮಾನವಾಗಿ ಸವಾಲುಗಳನ್ನು ಎದುರಿಸುತ್ತಿದೆ. ಇತ್ತೀಚಿನ ಗಮನಾರ್ಹ ಘಟನೆಗಳೆಂದರೆ ವಿಧಾನ ಸೌಧದಲ್ಲಿ ಮಾಧ್ಯಮ ಪ್ರವೇಶ ನಿರ್ಬಂಧಗಳು (2026 ಫೆಬ್ರವರಿ). ಆದೇಶದ ಪ್ರಕಾರ, ಪತ್ರಕರ್ತರು ವಿಧಾನ ಸೌಧದಲ್ಲಿ ನಿರ್ದಿಷ್ಟ ಪ್ರದೇಶಕ್ಕೆ (ಪಶ್ಚಿಮ ಗೇಟ್ ಹತ್ತಿರ) ಮಾತ್ರ ಸೀಮಿತರಾಗಬೇಕು. ಉಳಿದಂತೆ ಮುಖ್ಯಮಂತ್ರಿ, ಸಚಿವರು ಮತ್ತು ಶಾಸಕರಿಂದ ಪ್ರತಿಕ್ರಿಯೆ ಪಡೆಯುವುದು ನಿರ್ಬಂಧಿಸಲಾಗಿದೆ. ಇದನ್ನು “ಭದ್ರತೆ”ಗಾಗಿ ಎಂದು ಸರ್ಕಾರ ವಿವರಿಸಿದ್ದರೂ, ಪತ್ರಕರ್ತರು ಮತ್ತು ವಿರೋಧ ಪಕ್ಷಗಳು ಇದನ್ನು ಪತ್ರಿಕಾ ಸ್ವಾತಂತ್ರ್ಯದ ಮೇಲಿನ ದಾಳಿ ಎಂದು ವಿರೋಧಿಸಿದ್ದಾರೆ. ತಪ್ಪು ಮಾಹಿತಿ ಕಾನೂನು ಪ್ರಸ್ತಾವ (2025): ತಪ್ಪು ಸುದ್ದಿ ನಿಯಂತ್ರಣಕ್ಕಾಗಿ ಕರ್ನಾಟಕ ರಾಜ್ಯ ಸರ್ಕಾರ ಪ್ರಸ್ತಾಪಿಸಿದ ಕಾನೂನು ಪತ್ರಕರ್ತರ ಮೇಲೆ ದುರ್ಬಳಕೆಯಾಗಬಹುದು ಎಂದು Committee to Protect Journalists (CPJ) ಎಚ್ಚರಿಸಿದೆ.
RSF ವರದಿಯ ಪ್ರಕಾರ, 2014ರಿಂದ ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯ ಸವಾಲುಗಳು ಹೆಚ್ಚಾಗಿವೆ ಎಂದು ಉಲ್ಲೇಖಿಸಲಾಗಿದೆ. ಇದು ಸರ್ಕಾರಿ ದೃಷ್ಟಿಕೋನದಿಂದ ವಿವಾದಾಸ್ಪದ. ಕೆಲವರು ಇದನ್ನು ಪಕ್ಷಪಾತಿ ಎಂದು ಟೀಕಿಸುತ್ತಾರೆ.
ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯ ಸುಧಾರಣೆಗೆ ಅವಕಾಶವಿದೆ ಎಂದು RSF ಮತ್ತು ಇತರ ಸಂಸ್ಥೆಗಳು ಹೇಳುತ್ತವೆ. ಕರ್ನಾಟಕದಲ್ಲಿ ಸ್ಥಳೀಯ ನಿರ್ಬಂಧಗಳು ಪಾರದರ್ಶಕತೆಯನ್ನು ಕುಂಠಿತಗೊಳಿಸುವ ಅಪಾಯವಿದೆ ಎಂಬ ಅಭಿಪ್ರಾಯವಿದೆ.

ಸ್ವಂತ ಅನುಭವ
ಕುಮಾರ ರೈತ ಹೆಸರಿನ ಪತ್ರಕರ್ತನಾದ ನನ್ನ ಮೇಲೂ ಮಾರಣಾಂತಿಕ ಹಲ್ಲೆ ನಡೆದಿತ್ತು. ಸುಧಾರಿಸಿಕೊಳ್ಳಲು ತಿಂಗಳುಗಟ್ಟಲೇ ಸಮಯ ಹಿಡಿದಿತ್ತು. ಬಳ್ಳಾರಿಯಲ್ಲಿ ಸುವರ್ಣ ನ್ಯೂಸ್ ವಾಹಿನಿಯ ಬ್ಯೂರೋ ಹೆಡ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಗಣಿ ಅಕ್ರಮಗಳ ಬಗ್ಗೆ ನಿರಂತರವಾಗಿ ವಿಶೇಷ ವರದಿಗಳನ್ನು ಮಾಡುತ್ತಿದ್ದೆ. ಇದು ಸಹಜವಾಗಿ ಅಕ್ರಮ ಎಸಗುತ್ತಿದ್ದವರ ಕಣ್ಣು ಕೆಂಪಗಾಗಿಸಿತ್ತು.

2010ರಲ್ಲಿ ಸರ್ವೇ ಆಫ್ ಇಂಡಿಯಾದ ಅಧಿಕಾರಿಗಳು ಅಕ್ರಮ ಗಣಿಗಾರಿಕೆ ತನಿಖೆಗೆಂದು ಬಂದಿದ್ದರು. ಇವರ ಸಭೆ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮಗ್ಗುಲಿನಲ್ಲಿರುವ ಬಾಲಾ ರೆಸಿಡೆನ್ಸಿಯಲ್ಲಿ ನಡೆಯುತ್ತಿತ್ತು. ಇದರ ವರದಿಗೆಂದು ಹೋಗಿದ್ದೆ. ಸಭೆ ಮುಂದುವರಿದಿದ್ದ ಕಾರಣ ಪಕ್ಕದಲ್ಲೇ ಇರುವ ಪುಟ್ಟ ಹೋಟೆಲಿಗೆ ಕಾಫಿ ಕುಡಿಯಲೆಂದು ಹೋಗಿದ್ದೆ. ಅಲ್ಲಿಗೆ ಗಣಿ ಅಕ್ರಮಗಳನ್ನು ನಿಲ್ಲಿಸಬೇಕೆಂದು ದೂರುಗಳನ್ನು ನೀಡಿದ್ದ ಟಪಾಲ್ ಗಣೇಶ್ ಮತ್ತವರ ಸಹೋದರ ಬಂದಿದ್ದರು. ನಾನು ಹೋಟೆಲ್ ಮುಂಭಾಗದಲ್ಲಿದ್ದ ಬೆಂಚಿನ ಮೇಲೆ ಕುಳಿತು ಕಾಫಿ ಕುಡಿಯುತ್ತಿದ್ದೆ. ಇನ್ನೂ ಮೂರ್ನಾಲ್ಕು ಮಂದಿ ಸಾರ್ವಜನಿಕರು ಚಹಾ/ಕಾಫಿ ಕುಡಿಯುತ್ತಿದ್ದರು. ಆಗ ಹೋಟೆಲ್ ಮುಂದಿನ ರಸ್ತೆಯಲ್ಲಿ ನಿಂತ ಇನ್ನೋವಾದಿಂದ ಇಳಿದ ಧಾಂಡಿಗರು ಧಾವಿಸಿ ಬಂದು ನನ್ನ ಮೇಲೆ ಹಲ್ಲೆ ನಡೆಸಿದರು. ಹೊಟ್ಟೆಯ ಚರ್ಮ ಸುಲಿದು ಹೋಗಿತ್ತು.. ಕೂಡಲೇ ರಕ್ಷಿಸಿಕೊಳ್ಳಲು ಓಡಿದೆ. ಆಗ ಧಾಂಡಿಗನೊಬ್ಬ ಬೀಸಿದ ದಪ್ಪನೆಯ ದಂಡ ನನ್ನ ತಲೆಗೆ ರಪ್ ಎಂದು ತಾಗಿತು. ತಲೆ ಬುರುಡೆಗೆ ಭಾರಿ ಪೆಟ್ಟಾಯಿತು. ನಂತರ ಸ್ಥಳಕ್ಕೆ ಬಂದ ಪತ್ರಕರ್ತರು ನನ್ನನ್ನು ವಿಮ್ಸ್ ಗೆ ದಾಖಲಿಸಿದರು.
ಪೊಲೀಸ್ ದೂರು ದಾಖಲಾಯಿತು. ಆಸ್ಪತ್ರೆಯಿಂದ ಬಿಡುಗಡೆ ಆದ ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಹೋಗಿ ಹಲ್ಲೆ ಮಾಡಿದವರ ಮುಖ ಚಹರೆಗಳನ್ನು ಹೇಳಿದೆ. ಪೊಲೀಸ್ ಕಲಾವಿದರು ಅವರ ಚಹರೆಗಳ ಚಿತ್ರ ರಚಿಸಿದರು. ಹಲ್ಲೆ ನಡೆದ ಸಂದರ್ಭದಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿತ್ತು. 2013ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನನ್ನ ಮೇಲೆ ಹಲ್ಲೆ ಮಾಡಿದವರ ಬಂಧನವಾಗಿದೆ ಎಂಬ ಸುದ್ದಿ ತಿಳಿಯಿತು. ನಂತರ ಆ ಪ್ರಕರಣದ ಬಗ್ಗೆ ಮಾಹಿತಿಯೇ ಇಲ್ಲ.

2 thoughts on “ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯ ಇದೆಯೇ ?

  • ಜಿ ಎಸ್ ಶ್ರೀನಾಥ

    ಇದು ನಮ್ಮ ನ್ಯಾಯಾಂಗ ವ್ಯವಸ್ಥೆಯ ದೋಷ, ನೀವೆಷ್ಟು ದೂರು ದಾಖಲು ಮಾಡಿದರೂ, ಅಪರಾಧಿಗಳಿಗೆ ಶಿಕ್ಷೆ ಆಗುವುದಿಲ್ಲ.

    ಎಷ್ಟೋ ಸಲ ಈ ಅವ್ಯವಸ್ಥೆ ಯಲ್ಲಿ ನಮ್ಮ ಪೋಲೀಸ್ ಇಲಾಖೆಯ ಬೇಜವಾಬ್ದಾರಿತನವು ಇದೆ

    Reply
  • seema sajjan

    The descending ranking mirrors India’s fall in free speech!

    Despite being such glorifying images, India is performing very poor in comparison to its neighboring nations.

    Reply

Leave a Reply

Your email address will not be published. Required fields are marked *

error: Content is protected !!