ಶಾಖದ ಅಲೆಗಳು ಮುಟ್ಟಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆಯೇ
ಭಾರತದಲ್ಲಿ ಶಾಖದ ಅಲೆಗಳ ದುಷ್ಪರಿಣಾಮ ಹೆಚ್ಚುತ್ತಿದೆ. ಇದು ಸ್ತ್ರೀಯರ ಆರೋಗ್ಯ, ವಿಶೇಷವಾಗಿ ಅವರ ಋತುಚಕ್ರದ ಆರೋಗ್ಯದ (menstrual health)ಮೇಲೆ ದುಷ್ಪರಿಣಾಮ ಬೀರುವ ಆತಂಕ ವ್ಯಕತವಾಗುತ್ತಿದೆ. ತೀವ್ರ ತಾಪಮಾನವು ಹಾರ್ಮೋನುಗಳ ಸಮತೋಲನವನ್ನು ಸದ್ದಿಲ್ಲದೆ ಹದಗೆಡಿಸಬಹುದು ಎನ್ನಲಾಗಿದೆ.
ವಿಶ್ವ ಆರೋಗ್ಯ ಸಂಸ್ಥೆಯು ಶಾಖದ ಅಲೆಗಳನ್ನು “ಸಾಮಾನ್ಯಕ್ಕಿಂತ ಹೆಚ್ಚು ಬಿಸಿಯಾದ ಹಗಲು ಮತ್ತು ರಾತ್ರಿಗಳ ಅನುಕ್ರಮದಲ್ಲಿ ಸ್ಥಳೀಯ ಹೆಚ್ಚುವರಿ ಶಾಖವು ಸಂಗ್ರಹವಾಗುವ ಅವಧಿ” ಎಂದು ವ್ಯಾಖ್ಯಾನಿಸುತ್ತದೆ. ಹವಾಮಾನ ಬದಲಾವಣೆಯಿಂದಾಗಿ ಶಾಖದ ಅಲೆಗಳು ಹೆಚ್ಚುತ್ತಿವೆ. ದೀರ್ಘಕಾಲದ ಶಾಖಕ್ಕೆ ಒಡ್ಡಿಕೊಳ್ಳುವುದು ಮಹಿಳೆಯರ ಸಂತಾನೋತ್ಪತ್ತಿ ಆರೋಗ್ಯದ ಮೇಲೆ ಹೇಗೆ ಅರಿಣಾಮ ಬೀರುತ್ತದೆ ಎಂಬುದರ ಬಗ್ಗೆ ಆರೋಗ್ಯ ಕ್ಷೇತ್ರದ ತಜ್ಞರು ಗಮನ ಹರಿಸಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ತೀವ್ರ ಶಾಖದ ಸಮಯದಲ್ಲಿ ದೇಹದ ಆಂತರಿಕ ತಾಪಮಾನವನ್ನು ನಿಯಂತ್ರಿಸಲು ಅಸಮರ್ಥತೆ ಉಂಟಾದರೆ ಅದು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ದೇಹದ ಆಂತರಿಕ ತಾಪಮಾನವನ್ನು ನಿಯಂತ್ರಿಸಲು ಮತ್ತು ಶಾಖ ಹೆಚ್ಚಳವನ್ನು ತಡೆದುಕೊಳ್ಳುವ ಸಮರ್ಥತೆಯು ಕುಗ್ಗಿದಾಗ ಶಾಖದ ಬಳಲಿಕೆ ಮತ್ತು ಶಾಖದ ಹೊಡೆತದ ಅಪಾಯ ಹೆಚ್ಚಾಗುತ್ತದೆ. ಅದು ತನ್ನನ್ನು ತಾನೇ ತಣ್ಣಗಾಗಿಸಿಕೊಳ್ಳಲು ಪ್ರಯತ್ನಿಸುವಾಗ ದೇಹದ ಮೇಲೆ ಬೀರುವ ಒತ್ತಡವು ಹೃದಯ ಮತ್ತು ಮೂತ್ರಪಿಂಡಗಳ ಮೇಲೂ ಪರಿಣಾಮ ಬೀರುತ್ತದೆ. ಇದಲ್ಲದೆ, ಶಾಖದ ಅಲೆಗಳ ತೀವ್ರತೆಯು ದೀರ್ಘಕಾಲದ ಪರಿಸ್ಥಿತಿಗಳಿಂದ (ಹೃದಯ ರಕ್ತನಾಳ, ಮಾನಸಿಕ, ಉಸಿರಾಟ ಮತ್ತು ಮಧುಮೇಹ ಸಂಬಂಧಿತ ಪರಿಸ್ಥಿತಿಗಳು) ಉದ್ಭವಿಸುವ ಆರೋಗ್ಯದ ಅಪಾಯಗಳನ್ನು ಇನ್ನಷ್ಟು ಹದಗೆಡಿಸಬಹುದು. ಮೂತ್ರಪಿಂಡದ ಅನಾರೋಗ್ಯಕ್ಕೂ ಕಾರಣವಾಗಬಹುದು.”
ಈ ಶಾರೀರಿಕ ಒತ್ತಡವು ಅಂತಃಸ್ರಾವಕ ವ್ಯವಸ್ಥೆಗೆ ವಿಸ್ತರಿಸುತ್ತದೆ, ಇದು ಮುಟ್ಟಿನ ಚಕ್ರದ ನಿರ್ಣಾಯಕ ಹಾರ್ಮೋನುಗಳನ್ನು ನಿಯಂತ್ರಿಸುತ್ತದೆ ಎಂದು ವೈದ್ಯಕೀಯ ತಜ್ಞರು ಹೇಳುತ್ತಾರೆ. ದೆಹಲಿಯ ರೇನ್‌ಬೋ ಮಕ್ಕಳ ಆಸ್ಪತ್ರೆಯ ಹಿರಿಯ ಸಲಹೆಗಾರ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದ ಡಾ. ಸಾಕ್ಷಿ ಗೋಯೆಲ್ ಅವರ ಪ್ರಕಾರ, ತೀವ್ರ ಶಾಖವು ಹಾರ್ಮೋನುಗಳ ಸಮತೋಲನವನ್ನು ಗಮನಾರ್ಹವಾಗಿ ಅಡ್ಡಿಪಡಿಸುತ್ತದೆ. “ಅತಿ ಹೆಚ್ಚಿನ ತಾಪಮಾನಕ್ಕೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದರಿಂದ ದೈಹಿಕ ಒತ್ತಡ ಉಂಟಾಗುತ್ತದೆ, ಮುಟ್ಟಿನ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುವ ಹಾರ್ಮೋನುಗಳ ಸಮತೋಲನವನ್ನು ಅಡ್ಡಿಪಡಿಸುತ್ತದೆ”. ಶಾಖದ ಒತ್ತಡವು ಹಾರ್ಮೋನ್ ನಿಯಂತ್ರಣಕ್ಕೆ ಕಾರಣವಾದ ಮೆದುಳಿನ ಪ್ರದೇಶವಾದ ಹೈಪೋಥಾಲಮಸ್ ಅನ್ನು ದುರ್ಬಲಗೊಳಿಸಬಹುದು, ಇದು ವಿಳಂಬ, ಗೈರುಹಾಜರಿ ಅಥವಾ ಅನಿಯಮಿತ ಮುಟ್ಟಿನ ಹರಿವಿಗೆ ಕಾರಣವಾಗಬಹುದು.
ನಿರ್ಜಲೀಕರಣವು ಸಮಸ್ಯೆಯನ್ನು ಮತ್ತಷ್ಟು ಸಂಕೀರ್ಣಗೊಳಿಸುತ್ತದೆ. ಶಾಖದ ಅಲೆಗಳ ಸಮಯದಲ್ಲಿ, ದ್ರವದ ನಷ್ಟವು ಆಯಾಸ, ತಲೆನೋವು, ಮನಸ್ಥಿತಿ ಬದಲಾವಣೆಗಳು ಮತ್ತು ಉಬ್ಬುವುದು ಮುಂತಾದ ಲಕ್ಷಣಗಳನ್ನು ತೀವ್ರಗೊಳಿಸುತ್ತದೆ. ಶಾಖದಿಂದ ಉಂಟಾಗುವ ನಿದ್ರಾ ಭಂಗವು ಭಾವನಾತ್ಮಕ ಲಕ್ಷಣಗಳನ್ನು ಇನ್ನಷ್ಟು ಹದಗೆಡಿಸುತ್ತದೆ ಮತ್ತು ಅಸ್ವಸ್ಥತೆ ತಡೆಯುವ ರೋಗ ನಿರೋಧತೆಯನ್ನು ಕಡಿಮೆ ಮಾಡುತ್ತದೆ ಎಂದು ಡಾ. ಗೋಯೆಲ್ ಹೇಳುತ್ತಾರೆ.
ಸಿಕೆ ಬಿರ್ಲಾ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದ ನಿರ್ದೇಶಕಿ ಡಾ. ಕೀರ್ತಿ ಖೇತನ್, ಹೆಚ್ಚಿನ ತಾಪಮಾನವು ದೇಹದ ಒತ್ತಡದ ಹಾರ್ಮೋನ್ ಕಾರ್ಟಿಸೋಲ್ ಬಿಡುಗಡೆಯನ್ನು ಪ್ರಚೋದಿಸುತ್ತದೆ ಎಂದು ಹೇಳುತ್ತಾರೆ. “ಇದು ಮಹಿಳೆಯರ ಹಾರ್ಮೋನುಗಳ ಸಮತೋಲನವನ್ನು ಅಡ್ಡಿಪಡಿಸುತ್ತದೆ ಮತ್ತು ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್‌ನಂತಹ ಹಾರ್ಮೋನುಗಳ ಕೆಲಸದಲ್ಲಿ ಅಡ್ಡಿಗಳನ್ನು ಉಂಟುಮಾಡುತ್ತದೆ, ಇದು ತಡವಾದ ಮುಟ್ಟನ್ನು ಉಂಟುಮಾಡುತ್ತದೆ” ಎಂದು ಅವರು ವಿವರಿಸುತ್ತಾರೆ. ಅತಿಯಾದ ಬೆವರುವಿಕೆಯಿಂದ ಎಲೆಕ್ಟ್ರೋಲೈಟ್ ಅಸಮತೋಲನವು ಪ್ರೀ ಮೆನ್ಸ್ಟ್ರುವಲ್ ಸಿಂಡ್ರೋಮ್ (ಪಿಎಂಎಸ್), ಹೆಚ್ಚಿದ ಕಿರಿಕಿರಿ, ಬಳಲಿಕೆ ಮತ್ತು ತಲೆನೋವುಗಳನ್ನು ಮತ್ತಷ್ಟು ಉಲ್ಬಣಗೊಳಿಸುತ್ತದೆ.
ಇತರ ತಜ್ಞರು ಶಾಖದ ನರವೈಜ್ಞಾನಿಕ ಮತ್ತು ಚಯಾಪಚಯ ಪರಿಣಾಮಗಳನ್ನು ಎತ್ತಿ ತೋರಿಸುತ್ತಾರೆ. ಆರ್ಟೆಮಿಸ್ ಆಸ್ಪತ್ರೆಗಳ ಘಟಕ ಮುಖ್ಯಸ್ಥ ಡಾ. ನಿಧಿ ರಾಜೋಟಿಯಾ (ಗೋಯೆಲ್) ಹೆಚ್ಚಿನ ತಾಪಮಾನವು ಮನಸ್ಥಿತಿಯನ್ನು ನಿಯಂತ್ರಿಸುವ ಸಿರೊಟೋನಿನ್ ಮಟ್ಟವನ್ನು ಬದಲಾಯಿಸಬಹುದು ಎಂದು ಗಮನ ಸೆಳೆದಿದ್ದಾರೆ. ಇದು ಹೆಚ್ಚಿದ ಆತಂಕ ಅಥವಾ ಕಿರಿಕಿರಿಗೆ ಕಾರಣವಾಗಬಹುದು. “ತೀವ್ರವಾಗಿ ಬೆವರುತ್ತಿದ್ದರೆ ಸೋಡಿಯಂ ಮತ್ತು ಪೊಟ್ಯಾಸಿಯಮ್‌ನಂತಹ ಪ್ರಮುಖ ಖನಿಜಗಳನ್ನು ಕಳೆದುಕೊಳ್ಳಬಹುದು. ಇದು ಮಹಿಳೆಯರನ್ನು ದುರ್ಬಲ ಮತ್ತು ಹೆಚ್ಚು ಅನಾನುಕೂಲತೆಯನ್ನು ಅನುಭವಿಸುವಂತೆ ಮಾಡುತ್ತದೆ” ಎಂದು ಅವರು ಹೇಳುತ್ತಾರೆ.

ಅನೇಕ ಮಹಿಳೆಯರಿಗೆ, ವಿಶೇಷವಾಗಿ ಅನೌಪಚಾರಿಕ ವಲಯಗಳಲ್ಲಿರುವ ಮಹಿಳೆಯರಿಗೆ, ಸವಾಲುಗಳು ಕೇವಲ ಜೈವಿಕವಲ್ಲದೆ ರಚನಾತ್ಮಕವೂ ಆಗಿರುತ್ತವೆ. ಶುದ್ಧ ನೀರು, ತಂಪಾಗಿಸುವಿಕೆ ಮತ್ತು ನೈರ್ಮಲ್ಯ ಉತ್ಪನ್ನಗಳ ಕಡಿಮೆ ಸೌಲಭ್ಯವು ಶಾಖದ ಅಲೆಗಳ ಸಮಯದಲ್ಲಿ ಮುಟ್ಟಿನ ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಕಷ್ಟಕರವಾಗಿಸುತ್ತದೆ. ಸಾಕಷ್ಟು ನೈರ್ಮಲ್ಯ ಸೌಲಭ್ಯಗಳಿಲ್ಲದೆ ಶಾಖಕ್ಕೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದರಿಂದ ಸೋಂಕುಗಳು ಮತ್ತು ಅಸ್ವಸ್ಥತೆಯ ಅಪಾಯ ಹೆಚ್ಚಾಗುತ್ತದೆ.
ಡಾ. ಪ್ರೀತಿ ಪ್ರಭಾಕರ್ ಶೆಟ್ಟಿ ಗಮನಿಸುವಂತೆ, ಶಾಖವು ಎಲ್ಲರಿಗೂ ಮುಟ್ಟಿನ ಚಕ್ರಗಳನ್ನು ತೀವ್ರವಾಗಿ ಬದಲಾಯಿಸದಿದ್ದರೂ, ಅದು ಹೆಚ್ಚಾಗಿ “ರೋಗಲಕ್ಷಣ ವರ್ಧಕ” ವಾಗಿ ಕಾರ್ಯನಿರ್ವಹಿಸುತ್ತದೆ. “ಹೆಚ್ಚಿನ ತಾಪಮಾನವು ಹೆಚ್ಚಿದ ಆಯಾಸ ಮತ್ತು ತಲೆನೋವಿನೊಂದಿಗೆ ದ್ರವದ ಧಾರಣ ಮತ್ತು ಉಬ್ಬುವಿಕೆಗೆ ಕಾರಣವಾಗಬಹುದು. ಶಾಖದಿಂದಾಗಿ ಕಳಪೆ ನಿದ್ರೆ ಹೆಚ್ಚಾಗಿ ಮುಟ್ಟಿನ ಪೂರ್ವ ಹಂತದಲ್ಲಿ ಕಿರಿಕಿರಿ, ಮನಸ್ಥಿತಿ ಬದಲಾವಣೆಗಳು ಮತ್ತು ಕಡಿಮೆ ಶಕ್ತಿಯನ್ನು ನೀಡುತ್ತದೆ” ಎಂದು ಅವರು ಹೇಳುತ್ತಾರೆ.
ಈ ಪರಿಣಾಮಗಳು ಸಾಮಾನ್ಯವಾಗಿ ತಾತ್ಕಾಲಿಕವಾಗಿರುತ್ತವೆ ಆದರೆ ಗಮನ ಅಗತ್ಯ ಎಂದು ತಜ್ಞರು ಒತ್ತಿ ಹೇಳುತ್ತಾರೆ. ಅವಶ್ಯಕವಿರುವಷ್ಟು ನೀರು ಕುಡಿಯುವುದು, ಕಡಿಮೆ ಸಕ್ಕರೆ ಇರುವ ಅಥವಾ ಸಕ್ಕರೆಯೇ ಇಲ್ಲದ ಹಣ್ಣಿನ ಪಾನೀಯಗಳ ಸೇವನೆ, ಸಮತೋಲಿತ ಆಹಾರವನ್ನು ಕಾಪಾಡಿಕೊಳ್ಳುವುದು, ದೀರ್ಘಕಾಲದ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದನ್ನು ತಪ್ಪಿಸುವುದು ಮತ್ತು ಸಾಕಷ್ಟು ವಿಶ್ರಾಂತಿಯನ್ನು ಖಚಿತಪಡಿಸಿಕೊಳ್ಳುವುದು ಪ್ರಮುಖ ತಡೆಗಟ್ಟುವ ಕ್ರಮಗಳಾಗಿವೆ. ಮುಟ್ಟಿನ ಚಕ್ರಗಳನ್ನು ಟ್ರ್ಯಾಕ್ ಮಾಡುವುದು ಸಹ ಶಾಖ-ಸಂಬಂಧಿತ ಬದಲಾವಣೆಗಳನ್ನು ಮೊದಲೇ ಗುರುತಿಸಲು ಸಹಾಯ ಮಾಡುತ್ತದೆ.
ಹವಾಮಾನ ಬದಲಾವಣೆಯು ತೀವ್ರವಾದ ಶಾಖದ ಅಲೆಗಳಿಗೆ ಕಾರಣವಾಗುವುದರಿಂದ, ಮುಟ್ಟಿನ ಆರೋಗ್ಯವನ್ನು ಸಾರ್ವಜನಿಕ ಆರೋಗ್ಯ ಯೋಜನೆಯಲ್ಲಿ ಸೇರಿಸಬೇಕು. ಇಲ್ಲದಿದ್ದರೆ ಮಹಿಳೆಯರ ಆರೋಗ್ಯದ ಮೇಲೆ ಹವಾಮಾನ ವೈಪರೀತ್ಯದ ತೀವ್ರ ಶಾಖದ ಅಲೆಗಳು ಸದ್ದಿಲ್ಲದೇ ದುಷ್ಪರಿಣಾಮ ಬೀರುತ್ತಿರುತ್ತವೆ.
ಆಧಾರ – ಅನುವಾದ
