ಅಣೆಕಟ್ಟೆಗಾಗಿ ಮುಳುಗಡೆಯಾಗಲಿರುವ ಊರು, ಉತ್ತಮ ಆದಾಯವಿಲ್ಲದ ಕೃಷಿಕರು, ಇಂಥ ಊರಿನಲ್ಲಿ ಇರುವ ಪುರಾತನ ದೇಗುಲ, ನಿಧಿ ಇರುವ ಪ್ರತೀತಿ, ಇವೆಲ್ಲದರ ಜೊತೆಗೆ ಹಲವು ವರ್ಷಗಳಿಗೊಮ್ಮೆ ಬರುವ ಅಪರೂಪದ ಗ್ರಹಣ. ಇವುಗಳ ಸುತ್ತ ಘಟನಾವಳಿಗಳು ನಡೆಯುತ್ತಾ ಕಥೆ ಬೆಳೆಯುತ್ತಾ ಹೋಗುತ್ತದೆ. ಇದರಲ್ಲಿ ಹಲವು ಪಾತ್ರಗಳ ನಿಜಸ್ವರೂಪಗಳು ಬೆಂಗಳೂರಿನ “ಸಮಷ್ಟಿ” ತಂಡ ರಂಗರೂಪಕ್ಕೆ ತಂದ ‘ಕಂತು’ವಿನಲ್ಲಿ ಕಳಚಿಕೊಳ್ಳುತ್ತಾ ಹೋಗುತ್ತವೆ.

ಅಣೆಕಟ್ಟೆಯಲ್ಲಿ ಊರುಕೇರಿ, ಎಲ್ಲದಕ್ಕಿಂತ ದೇವಿಯ ದೇಗುಲ ಮುಳುಗಡೆಯಾಗಲಿದೆ ಎಂಬುದು ಮಾವಿನೂರು ಜನತೆಯ ಆತಂಕ. ಊರು – ಜಮೀನು ಮುಳುಗಡೆಯಾದರೆ ಎಲ್ಲಿ ಹೋಗುವುದು, ಪರಿಹಾರ ಸಿಗುವುದೇ ಎಂಬ ಚಿಂತೆ. ಇವರ ಚಿಂತೆಯನ್ನೇ ಬಂಡವಾಳ ಮಾಡಿಕೊಂಡ ಶ್ರೀಮಂತ ಜಗನ್ನಾಥ. ಇದೇ ಸದಾವಕಾಶವೆಂದು ತಿಳಿದು ಸಿಕ್ಕಷ್ಟು ಕಡಿಮೆ ಬೆಲೆಗೆ ರೈತರಿಂದ ಹೊಲ – ಮನೆ – ಗದ್ದೆ –ತೋಟ ಖರೀದಿಸುವ ಹುನ್ನಾರ. ಇದಕ್ಕೆ ಸಾಥ್ ನೀಡುವ ಸರ್ಕಾರಿ ಅಧಿಕಾರಿ.

ಅಪತ್ಕಾಲದ ಬಂಧು ಎಂಬಂತೆ ಮುಖವಾಡ ಹಾಕಿರುವ ಜಗನಾಥ್ , ತನ್ನ ಹಿರಿಯ ಸಹೋದರನ ಕುಟುಂಬಕ್ಕೂ ದುಸ್ವಪ್ನ. ಈತನಿಂದ ತನ್ನ ಮನೆ, ಮನೆತನ ದುಸ್ಥಿತಿಗೆ ಬಂತು ಎಂಬುದು ಈತನ ಅತ್ತಿಗೆ ಕಾವೇರಿಯ ಅಳಲು – ಆಕ್ರೋಶ. ಪತಿ ಮೃತರಾದ ಬಳಿಕ ಈಕೆಯ ಆಕ್ರೋಶದ ಕಟ್ಟೆ ಒಡೆಯುತ್ತದೆ. ಅತ್ತ ನದಿಗೆ ಕಟ್ಟೆ ಕಟ್ಟೆ ಮಾವಿನೂರಿನಂಥ ನೂರಾರು ಹಳ್ಳಿಗಳನ್ನು ಮುಳುಗಿಸುವ ಯೋಜನೆ ನಡೆಯುತ್ತಿರುತ್ತದೆ.

ಕಾವೇರಿ ಮಗ ಪಾಂಡುರಂಗ ರಾಯ ರಟ್ಟೆಯಲ್ಲಿ ಬಲ, ತಲೆಯಲ್ಲಿ ಬುದ್ದಿ ಇಲ್ಲದ ವ್ಯಕ್ತಿ. ತಾಯಿಯಂತೆ ಚಿಕ್ಕಪ್ಪ ಜಗನಾಥನ ಮೇಲೆ ಒಣ ಆಕ್ರೋಶ ತೋರಿಸುವುದಷ್ಟೆ. ಇವರ ಈತನ ಪತ್ನಿಗೆ ನಡುವೆ ತಮ್ಮ ಕುಟುಂಬ, ವಿಶೇಷವಾಗಿ ಮಗಳ ಭವಿಷ್ಯದ ಚಿಂತೆ. ಪ್ರತಿಯೊಬ್ಬರಿಗೂ ತಮ್ಮತಮ್ಮ ಭವಿಷ್ಯದ ಚಿಂತೆಯಾದರೂ ಪಾರಾಗುವುದು ಹೇಗೆಂಬ ಬಗ್ಗೆ ಸ್ಪಷ್ಟತೆಯಿಲ್ಲ.

ಇವರೆಲ್ಲರ ನಡುವೆ ವಿಜ್ಞಾನ ಕಲಿಸುವ ಶಿಕ್ಷಕ – ಹಳ್ಳಿಗರನ್ನು ಕಂದಾಚಾರದ ಕಪಿಮುಷ್ಟಿಯಲ್ಲಿ ಬಂಧಿಸಿಡಬೇಕು ಎಂಬ ಮನೋಭಾವದ ಶಾಸ್ತ್ರಿ. ಇವರ ಪಾಂಡಿತ್ಯ – ತರ್ಕಗಳಿಗೆ ಗ್ರಹಣ ವೇದಿಕೆಯಾಗುತ್ತದೆ. ದ್ವಂದ್ವ ವ್ಯಕ್ತಿತ್ವದ ಶಿಕ್ಷಕ ಸದಾನಂದ ಗೆಲ್ಲುತ್ತಾನೊ ಅಥವಾ ಶಾಸ್ತ್ರಿ ಗೆಲ್ಲುತ್ತಾನೊ ಎಂಬ ಸಂಗತಿಗಳು ಬೇರೆಬೇರೆ ಘಟನೆಗಳ ನಡುವೆ ಅನಾವರಣವಾಗುತ್ತಾ ಹೋಗುತ್ತದೆ.

ಮಾವಿನೂರಿನಲ್ಲಿ ಗ್ರಹಣ ಸ್ಪಷ್ಟವಾಗಿ ಕಾಣುತ್ತದೆ ಎಂಬ ಹಿನ್ನೆಲೆಯಲ್ಲಿ ಸಾಕಷ್ಟು ಮಂದಿ ವಿದೇಶಿಗರು ಊರಿಗೆ ಕಾಲಿಡುತ್ತಾರೆ. ಪಾರಂಪಾರಿಕ ವಸ್ತುಗಳ ಬಗ್ಗೆ ಇವರಿಗಿರುವ ಆಸಕ್ತಿ, ಹಳ್ಳಿಗರು ತಮ್ಮ ಹಳೆಯ ಮನೆಗಳಲ್ಲಿದ್ದ ವಸ್ತುಗಳನ್ನು ಮಾರಾಡಲು ಪ್ರೇರೇಪಿಸುತ್ತದೆ. ಮನೆತನ ಬದುಕಿಸಬೇಕು ಎಂಬ ಛಲದ ಕಾವೇರಿಯ ಮಗ, ನೂರೈವತ್ತು ವರ್ಷ ಹಳೆಯದಾದ ತಮ್ಮ ಮನೆಯ ತಲಬಾಗಿಲನ್ನೇ ಕಿತ್ತು ಮಾರಾಟ ಬಿಡಲು ಮುಂದಾಗುತ್ತಾನೆ. ಅತ್ತ ಮೈದುನನ ದುರಾಸೆ, ಇತ್ತ ಮಗನ ದಡ್ಡತನಗಳ ನಡುವೆ ಕಾವೇರಿ ತನ್ನ ಮನೆ ಮರ್ಯಾದೆ ಉಳಿಸಿಕೊಳ್ಳಲು ಹೆಣಗುತ್ತಾ ಹೋಗುತ್ತಾಳೆ.

ನಿಧಿ ಹುಡುಕಬೇಕು ಎಂಬ ಹಂಬಲವನ್ನೇ ಕನವರಿಸುತ್ತಾ ಸಾಗುವ ಗಂಗಾಧರ ಅದಕ್ಕಾಗಿ ಸತತ ಪ್ರಯತ್ನ ಮಾಡುತ್ತಾನೆ. ಈ ಹುಡುಕಾಟದಲ್ಲಿಯೇ ಆತನಿಗೆ ಸತ್ಯದ ದರ್ಶನವಾಗುತ್ತದೆ. ತನ್ನನ್ನು ಅಪಾರವಾಗಿ ಪ್ರೀತಿಸುವ ಪತ್ನಿ ಕಾತ್ಯಾಯಿನಿಯೇ ನಿಜವಾದ ನಿಧಿ. ತನ್ನ ಬಳಿಯೇ ನಿಧಿ ಇಟ್ಟುಕೊಂಡು ಅಲೆಯುತ್ತಿದ್ದೇನೆ ಎಂಬ ದರ್ಶನವಾಗುತ್ತದೆ. ನಿಜಕ್ಕೂ ನಾಟಕದಲ್ಲಿ ಇದೊಂದು ಮಿಂಚು.

ಇಲ್ಲಿ ಗ್ರಹಣ ಎನ್ನುವುದು ಪ್ರಾಕೃತಿಕವಾಗಿ ನಡೆಯುವ ವಿದ್ಯಮಾನಕ್ಕಷ್ಟೆ ಸೀಮಿತವಾಗದೇ ಊರಿಗೆ ಅದರಲ್ಲಿಯೂ ಧಮಣಿ ವಿಠಲರಾಯರ ಪ್ರತಿಷ್ಠಿತ ಕುಟುಂಬದ ಪ್ರತಿಷ್ಠೆಗೆ ಹಿಡಿದ ಗ್ರಹಣವಾಗಿ ಕಾಣುತ್ತದೆ. ಆದ್ದರಿಂದ ಈ ಸಾಂಕೇತಿಕತೆ ಇಡೀ ನಾಟಕವನ್ನೇ ಆವರಿಸಿಕೊಂಡು ಬೆಳೆಯುತ್ತಾ ಹೋಗುತ್ತದೆ. ಶ್ರೀಮಂತ ಜಗನ್ನಾಥನ ಅಕಾಲಿಕ ಸಾವು ಗ್ರಹಣ ಮುಕ್ತಿಯ ಸಂಕೇತವಾಗಿ ಕಾಣುತ್ತದೆ.

ಸಾಹಿತಿ ವಿವೇಕ ಶಾನಭಾಗ್ ಅವರ ಕತೆ “ಕಂತು” ಆಧರಿಸಿದ ನಾಟಕ ಅದೇ ಹೆಸರಿನಲ್ಲಿ ಪ್ರಸ್ತುತಿಗೊಂಡಿದೆ. ಕತೆ ಹೇಳಲು ಹೊರಟ್ಟಿದ್ದನ್ನು ರಂಗದ ಮೇಲೆ ಯಶಸ್ವಿಯಾಗಿ ತರಲಾಗಿದೆ. ಇಲ್ಲಿನ ಪ್ರತಿಯೊಂದು ಪಾತ್ರಕ್ಕೂ ಆದ್ಯತೆ ದೊರೆತಿದೆ. ಇದು ನಾಟಕದ ಕಸುವನ್ನು ಮತ್ತಷ್ಟೂ ಹೆಚ್ಚಿಸಿದೆ.

ಹಲವು ಪಾತ್ರಧಾರಿಗಳಿದ್ದರೂ ಎಲ್ಲಿಯೂ ತಾಳಮೇಳ ತಪ್ಪದಂತೆ ಸಮನ್ವಯದಿಂದ ಅಭಿನಯಿಸಿರುವುದು ಗಮನಾರ್ಹ. ವಿಶೇಷವಾಗಿ ಕಾವೇರಿ (ಸೌಮ್ಯ ಮಾರ್ನಾಡ್ ) ಜಗನ್ನಾಥನ  (ಮಂಜುನಾಥ ಎಂ.ಎಸ್.) ಧಮಣಿ ವಿಠಲರಾಯ (ಅನಂತರಾಮು ಎಂ.ಎನ್.), ತರ್ಕಶಾಸ್ತ್ರಿ (ಶಿವಾನಂದ ಜಿ.ಕೆ,) ಆಚಾರಿಯ ಸಹಾಯಕ (ಲಿಖಿತ್ ಕುಮಾರ್) ಪಾತ್ರಧಾರಿಗಳು ತಾವು ಅಭಿನಯಿಸಿದ ಪಾತ್ರಗಳನ್ನೇ ಆವಾಹಿಕೊಂಡಂತೆ ಅಭಿನಯಿಸಿದ್ದಾರೆ. ಪಾತ್ರದ ಹಾವಭಾವಗಳ ಕಂಟಿನ್ಯೂಟಿಯಲ್ಲಿ, ಪಾತ್ರಕ್ಕೆ ಸೂಕ್ತ ಆಂಗಿಕ ಭಾಷೆಯಲ್ಲಿ ಕಾವೇರಿ ಪಾತ್ರಧಾರಿ ಸೈ ಎನಿಸಿಕೊಂಡಿದ್ದಾರೆ.

ಕಂತು ಕಥೆ ನಡೆಯುವ ಪರಿಸರದ ಭಾಷೆ, ಅದರಲ್ಲಿಯೂ ಹವ್ಯಕ ಭಾಷೆಯನ್ನು ಪಾತ್ರಧಾರಿಗಳು ತಡವರಿಸದೇ ಹೇಳಿದ್ದಾರೆ. ನಾಟಕವೆಂದರೆ ಅದು ಬೆಂಗಳೂರಿನ ಭಾಷೆಯೇ ಆಗಿರಬೇಕು, ಹಾಗಿದ್ದರೆ ಹೆಚ್ಚು ಮೆಚ್ಚುಗೆ ದೊರೆಯುತ್ತದೆ ಎಂಬ ಗ್ರಹಿಕೆಗಳಿಂದ ಕಂತು ಹೊರ ಬಂದಿದೆ.

ರಂಗಸಜ್ಜಿಕೆ (ಶಿವಾನಂದ ಜಿ.ಕೆ.) ವಸ್ತ್ರ ವಿನ್ಯಾಸ (ವಸುಂಧರಾ) ನೃತ್ಯ ಸಂಯೋಜನೆ (ಲಹರಿ) ಸಂಗೀತ (ವೀರೇಶ್ ಎಂ.ಪಿ,ಎಂ.) ಬೆಳಕು ( ರವೀಂದ್ರ ಪೂಜಾರಿ) ಕಾರ್ಯಗಳು ನಾಟಕದ ಸೊಬಗನ್ನು ಹೆಚ್ಚಿಸಿವೆ. ಕತೆಯೊಂದನ್ನು ನಾಟಕಕ್ಕೆ ಒಗ್ಗಿಸುವ ಕಾರ್ಯ ಮಾಡಿರುವ ಮಂಜುನಾಥ್ ಬಡಿಗೇರ ಅವರ ನಿರ್ದೇಶನ ಹೇಳಬೇಕಾದ ವಿಷಯವನ್ನು ಮೊನಚಾಗಿ ಪ್ರೇಕ್ಷಕರಿಗೆ ದಾಟಿಸುತ್ತದೆ. ನಾಟಕ ಎಲ್ಲಿಯೂ ಆಸಕ್ತಿ ಕಳೆದುಕೊಳ್ಳದಂತೆ ತನ್ನ ಓಘ (ಟೆಂಪೊ) ಬೆಳೆಸುಕೊಂಡು ಹೋಗುವಂತೆ ಮಾಡಿರುವುದರಲ್ಲಿ ಇವರ ಪರಿಶ್ರಮ ಅಪಾರ ಎಂಬುದು ತಿಳಿಯುತ್ತದೆ.

Similar Posts

Leave a Reply

Your email address will not be published. Required fields are marked *