ಶರೆಣ ಚಳವಳಿಯೇ ಸ್ವತಃ ಕ್ರಾಂತಿ. ಇಂಥ ಮಹಾ ಚಳವಳಿಯ ಹೆಜ್ಜೆಗಳು ಮೂಡಿದ ಕಲ್ಯಾಣದಲ್ಲಿ ಸಹಜವಾಗಿಯೇ ಸಂಘರ್ಷಗಳು ನಡೆದಿರುತ್ತವೆ. ಇಂಥವುಗಳನ್ನು ಇಂದಿನ ಕಾಲಘಟ್ಟಕ್ಕೆ ಕಟ್ಟಿಕೊಡುವುದು ಸಾಧಾರಣ ಸಂಗತಿಯಂತೂ ಅಲ್ಲ.  ಗಿರೀಶ್ ಕಾರ್ನಾಡರ “ತಲೆದಂಡ” ನಾಟಕ ಕಲ್ಯಾಣದ ನಿಜವಾದ ಸಂಘರ್ಷವನ್ನು ಕಟ್ಟಿಕೊಡುವ ಪ್ರಯತ್ನವನ್ನು ಮಾಡುವುದಿಲ್ಲ. ಇದೊಂದು ಮಾತಿನ ಕಸರತ್ತಿನ ಹಂತದಲ್ಲಿಯೇ ಉಳಿದುಬಿಡುತ್ತದೆ.

ಬೆಂಗಳೂರು ನಗರದ “ರಂಗಸಿರಿ” ತಂಡದವರು ಪ್ರಸ್ತುತಪಡಿಸಿದ”ತಲೆದಂಡ” ನಾಟಕದ ರಂಗರೂಪವನ್ನು ಡಿಸೆಂಬರ್ 18ರಂದು ಸಂಜೆ ರಂಗಶಂಕರದಲ್ಲಿ ನೋಡಿದೆ. ರಂಗತಂಡದವರು ನಾಟಕವನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡಲು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದಾರೆ. ಆದರೆ ಆಧರಿಸಿದ ಕೃತಿಯಲ್ಲಿಯೇ ಕಲ್ಯಾಣದ ಸಂಘರ್ಷಗಳ ಆಳನೋಟ ಇಲ್ಲದಿರುರುವುದರಿಂದ ನಾಟಕ ಸಶಕ್ತವಾಗಿ ಮೂಡಿಬರುವುದು ಕಷ್ಟದ ಸಂಗತಿ.

ನಿಂತ  ನೀರಿನಂಥ ಸನಾತನ ಆಚರಣೆಗಳು, ಅದನ್ನು ಕಾವಲು ಕಾಯಲು ನಿಂತ ವೈದಿಕ ಧರ್ಮ. ಇಂಥ ನೆಲೆಯಲ್ಲಿ 12ನೇ ಶತಮಾನದಲ್ಲಿಯೇ ಧಾರ್ಮಿಕ ವೈಚಾರಿಕತೆಯನ್ನು ಬಿತ್ತಿ ಬೆಳೆಯಲು ಹೊರಟ ಬಸವಣ್ಣನಿಗೆ ಸಹಜವಾಗಿಯೇ ಹಲವಾರು ಸವಾಲುಗಳು, ಸಂಕೀರ್ಣತೆಗಳು ಎದುರಾಗಿರುತ್ತವೆ. ಇಂಥ ಸಂಕೀರ್ಣತೆ ಮತ್ತು ಸವಾಲುಗಳನ್ನು ತಲೆದಂಡ ನಾಟಕ ಕಟ್ಟಿಕೊಡುವುದಿಲ್ಲ. ಇಲ್ಲಿ ಹರಳಯ್ಯ ಮತ್ತು ಮಧುವರಸರ ಬೀಗತನವೇ ದುರಂತಗಳಿಗೆ ಕಾರಣ ಎನ್ನುವಂತೆ ಬಿಂಬಿಸಲಾಗಿದೆ. ಇಲ್ಲಿ ಎಷ್ಟು ಗೊಂದಲವಿದೆಯೆಂದರೆ ಶರಣ ಚಳವಳಿಯ ಹರಿಕಾರನಾದ ಬಸವಣ್ಣನಿಗೆ ಹರಳಯ್ಯ ಮತ್ತು ಮಧುವರಸರು ಬೀಗತನಕ್ಕೆ ನಿಶ್ಚಯಿಸಿದ್ದೇ ಗೊತ್ತಿಲ್ಲ ಎನ್ನುವಷ್ಟು. ಈ ಬೆಳವಣಿಗೆ ಬಸವಣ್ಣನ ಪತ್ನಿಗೆ ಗೊತ್ತಾಗಿರುತ್ತದೆ. ಬಸವಣ್ಣನಿಗೆ ಗೊತ್ತೇ ಇರಲಿಲ್ಲ ಎಂಬಂತೆ ಬಿಂಬಿಸಲಾಗಿದೆ.

ಮದುವೆಯಾಗುವವರಿಬ್ಬರಿಗೂ ಒಪ್ಪಿಗೆ ಇದೆಯೇ ಇಲ್ಲವೇ ತಿಳಿದುಕೊಳ್ಳದೇ ಹರಳಯ್ಯ ಮತ್ತು ಮಧುವರಸರಿಬ್ಬರೇ ಈ ಸಂಬಂಧ‍ ನಿಶ್ವಯಿಸಿದ್ದಾರೋ ಎಂಬಂತೆ ಪ್ರತಿಪಾದಿಸಿರುವುದು ಆಶ್ಚರ್ಯಕ್ಕೀಡು ಮಾಡುತ್ತದೆ. ಹರಳಯ್ಯನ ಮಗ ಶೀಲವಂತ ಮಾತನಾಡುತ್ತಾ ಸಮಗಾರ ಓಣಿಯಲ್ಲಿ ಓಡಾಡುವಾಗ ಚರ್ಮ ಹದ ಮಾಡುವಾಗ ಹೊಮ್ಮುವ ದುರ್ವಾಸನೆಯನ್ನು ಮಧುವರಸನ ಮಗಳು ಸಹಿಸದೇ ಮೂಗು ಮುಚ್ಚಿಕೊಂಡು ಹೋಗುತ್ತಾಳೆ ಇನ್ನು ಹೇಗೆ ಇಲ್ಲಿ ನೆಮ್ಮದಿಯಾಗಿ  ಬಾಳ್ವೆ ಮಾಡಲು ಸಾಧ್ಯ, ತನಗೂ ಇಂಥದೊಂದು ಸಂಬಂಧ ಇಷ್ಟವಿಲ್ಲ ಎನ್ನುತ್ತಾನೆ. ಮಧುವರಸನ ಪತ್ನಿಯೂ ಸಹ ಇಂಥ ಸಂಬಂಧ ತನಗೂ ಒಪ್ಪಿಗೆಯಿಲ್ಲ. ಮಗಳಿಗೂ ಇಷ್ಟವಿಲ್ಲ. ಇದೊಂದು ಬಲವಂತದ ಮದುವೆ ಎನ್ನುವಂತೆ ಮಾತನಾಡುತ್ತಾಳೆ.

ಈ ಘಟನೆಗಳ ನಂತರ ರಾಜ ಬಿಜ್ಜಳ ಮಾತನಾಡುವಾಗ “ಮಧುವರಸನ ಮಗಳು ಹರಳಯ್ಯನ ಮಗನನ್ನು ಇಷ್ಟಪಟ್ಟು ಒಪ್ಪಿ ಮದುವೆಗೆ ಸಮ್ಮತಿಸಿದಳು” ಎಂದು ಹೇಳುತ್ತಾನೆ. ಇಲ್ಲಿ ಯಾರಮಾತು ನಿಜ, ನಾಟಕಕಾರರೇಕೆ ಇಂಥ ಗೊಂದಲಗಳನ್ನು ತಂದಿದ್ದಾರೆ ಎಂಬ ಪ್ರಶ್ನೆ ಎದುರಾಗುತ್ತದೆ.

ಮದುವೆಯ ನಂತರ ನಡೆದ ಸಂಘರ್ಷಗಳನ್ನು ನಾಟಕ ಪರಿಣಾಮಕಾರಿಯಾಗಿ ಕಟ್ಟಿಕೊಡುವುದಿಲ್ಲ. ಎಲ್ಲವನ್ನೂ ಗೋಜಲುಗೋಜಲಾಗಿಯೇ ಹೇಳಲಾಗಿದೆ. ಕ್ಷತ್ರೀಯ ಎನ್ನುವುದು ಒಂದು ಜಾತಿಯಲ್ಲ, ಅದೊಂದು ವರ್ಗ. ಮೂಲತಃ ಇವರು ಬೇರೆಬೇರೆ ಜಾತಿಗಳಿಂದಲೇ ಬಂದವರಾಗಿರುತ್ತಾರೆ. ವೈವಾಹಿಕ ಸಂಬಂಧಗಳನ್ನು ಬೆಳೆಸುವ ಸಂದರ್ಭದಲ್ಲಿ ಆ ರಾಜಮನೆತನ ಎಷ್ಟು ಬಲಿಷ್ಠ ಎಂದು ನೋಡುತ್ತಿದ್ದರೆ ವಿನಃ ಆತನ ಮೂಲಜಾತಿಯನ್ನಲ್ಲ. ಇಂಥ ಸಂದರ್ಭದಲ್ಲಿ ಬಿಜ್ಜಳ ತನ್ನ ಕಳಚೂರಿ ಹಿನ್ನೆಲೆ ಬಗ್ಗೆ ಪತ್ನಿ ಮುಂದೆ ಅಳಲು ತೋಡಿಕೊಳ್ಳುವುದು ಅಸಹಜವಾಗಿ ಕಾಣುತ್ತದೆ. ಒಬ್ಬ ಬಲಿಷ್ಠ ರಾಜ ಹೀಗೆ ಹಲುಬುವುದು ಸಾಧ್ಯವಿಲ್ಲ. ಇಂಥವರು ಆಡಿರಲಾರದ ಮಾತುಗಳನ್ನು ಹೇಳಿಸುವುದು ಆ ಪಾತ್ರದ ಮೂಲಸತ್ವವನ್ನೇ ಅಡಗಿಸಿಬಿಡುತ್ತದೆ ಎಂಬುದನ್ನು ನಾಟಕಕಾರರು ಅರಿತಿಲ್ಲ. ಬಿಜ್ಜಳ ಮತ್ತವನ ಮಗನ ನಡುವೆ ನೇರ ಸಂಭಾಷಣೆಗಳೇ ನಡೆದಿಲ್ಲ ಎನ್ನುವಂಥ ಚಿತ್ರಣವನ್ನು ನೀಡಲಾಗಿದೆ.

ಬಸವಣ್ಣನ ವಿರೋಧಿಗಳು ಖಜಾನೆಯಲ್ಲಿ ಅಪರಾತಪರಾ ಮಾಡದಂತೆ ಕಾಯ್ದ ಜಗ್ಗಣ್ಣ ತನ್ನ ತಂದೆಯ ಮರಣಾನಂತರ ಬಸವಣ್ಣನ ಬಗ್ಗೆ ಕಟುಮಾತುಗಳನ್ನೇಕೆ ಆಡುತ್ತಾನೆ ಎಂಬುದು ಸ್ಪಷ್ಟವಾಗುವುದಿಲ್ಲ. ಹಾಗೆಯೇ ಬಿಜ್ಜಳ ಕೊಲೆಯಾದ ನಂತರ ಆತ ತನ್ನನ್ನೇ ಇರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದರ ಹಿಂದಿನ ಕಾರಣಗಳು ರಂಗದಲ್ಲಿ ಸ್ಪಷ್ಟವಾಗುವುದಿಲ್ಲ.  ಬಿಜ್ಜಳ ಮಗ ತನ್ನ ತಂದೆಯಿಂದ ರಾಜ್ಯಾಧಿಕಾರ ಕಿತ್ತುಕೊಳ್ಳುವ ವಿಪ್ಲವಕಾರಿ ಬೆಳವಣಿಗೆಗಳು ಪರಿಣಾಮಕಾರಿಯಾಗಿ ಮೂಡಿಲ್ಲ.

ಸರಳ ರಂಗಸಜ್ಜಿಕೆ, ಅಷ್ಟೇನೂ ಪರಿಣಾಮಕಾರಿಯಲ್ಲದ ಬೆಳಕಿನ ನಿರ್ವಹಣೆಯಲ್ಲಿಯೂ ನಾಟಕ ತಂಡದ ಸದಸ್ಯರೆಲ್ಲರೂ ಸಮನ್ವಯತೆಯಿಂದ ನಟಿಸಿದ್ದಾರೆ. ಬಿಜ್ಜಳ ಪಾತ್ರಧಾರಿಯ ನಟನೆ ಮನಗೆಲ್ಲುತ್ತದೆ. ಇಲ್ಲಿ ಬಸವಣ್ಣನ ಪಾತ್ರವೂ ಒಂದು ಮಿಂಚಾಗಬೇಕಿತ್ತು. ಆದರೆ ಈ ಪ್ರಭೆಯನ್ನು ಹೊಮ್ಮಿಸಲು ಈ ಪಾತ್ರ ಮಾಡಿದವರಿಂದ ಸಾಧ್ಯವಾಗಿಲ್ಲ. ಬಿಜ್ಜಳನ ಪತ್ನಿ ರಂಭಾ ಪಾತ್ರಧಾರಿ ನಟನೆಯೂ ಮೆಚ್ಚುಗೆಗೆ ಪಾತ್ರವಾಗುತ್ತದೆ. ನಾಟಕವನ್ನು ಪರಿಣಾಮಕಾರಿಯಾಗಿಸಲು ನಿರ್ದೇಶಕ ಸಂದೀಪ್ ಪೈ ಪಟ್ಟಿರುವ ಪರಿಶ್ರಮ ಕಾಣುತ್ತದೆ.

*ಚಿತ್ರಗಳನ್ನು ಇಂಟರ್ನೆಟ್ನಿಂದ ತೆಗೆದುಕೊಳ್ಳಲಾಗಿದೆ. ಮೂಲ ಛಾಯಾಗ್ರಾಹಕರಿಗೆ ಕೃತಜ್ಞತೆಗಳು

Similar Posts

Leave a Reply

Your email address will not be published. Required fields are marked *