ಕೆಲವಾರು ನಾಟಕಗಳ ಗುಣ ಕಾಲಕ್ಕೆ ತಕ್ಕಹಾಗೆ ನವೀಕರಣಗೊಳ್ಳುವ ಹಾಗೆ ಇರುತ್ತದೆ. ಚುಟುಕು ಕವನಗಳಿಗೆ ಹೆಸರಾದ ಹೆಚ್. ಡುಂಡಿರಾಜ್ ಅವರು ಬರೆದ “ಪುಕ್ಕಟೆ ಸಲಹೆ” ಇದೇ ಮಾದರಿಯದು. ಬೆಂಗಳೂರಿನ “ವಿಶ್ವಪಥ ಕಲಾಸಂಗಮ” ತಂಡದವರು ಇದನ್ನು ಆಧರಿಸಿದ ನಾಟಕವನ್ನು ಬಹು ಅರ್ಥಪೂರ್ಣವಾಗಿ ರಂಗರೂಪಕ್ಕೆ ತಂದಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಮನರಂಜನೆ/ಸುದ್ದಿಗಳಿಗೆ ಮೀಸಲಾದ ಟಿವಿ ವಾಹಿನಿಗಳ ಜನಪ್ರಿಯ ಕಾರ್ಯಕ್ರಮ “ಜ್ಯೋತಿಷ ಸಲಹೆ” ಈ ಸಂಸ್ಥೆಗಳಲ್ಲಿ ಕೆಲಸ ಮಾಡುವವರ ಪ್ರಕಾರ ಇದಕ್ಕೆ ದೊರೆಯುವ ಟಿ.ಆರ್.ಪಿ. ತನ್ಮೂಲಕ ಬರುವ ಜಾಹಿರಾತುಗಳು ಅಧಿಕ. ಆದ್ದರಿಂದಲೇ ಈ ಕಾರ್ಯಕ್ರಮವನ್ನು ಟಿವಿ ಆಡಳಿತ ಮಂಡಳಿ, ಜ್ಯೋತಿಷಿಗಳು ಬಹು ಆಸಕ್ತಿಯಿಂದ ನಿರ್ವಹಿಸುತ್ತಾರೆ.

ಟಿವಿಗಳಲ್ಲಿ ಜ್ಯೋತಿಷ ಕಾರ್ಯಕ್ರಮಗಳು ಬರುವುದು ಶುರುವಾದ ಮೇಲೆ ಅದರ ವೀಕ್ಷಕರಲ್ಲಿ ಮೌಢ್ಯ ಹೆಚ್ಚಾಯಿತೋ ಅಥವಾ ಮೊದಲೇ ಇದ್ದ ಮೌಢ್ಯಕ್ಕೆ ಈ ಕಾರ್ಯಕ್ರಮಗಳು ನೀರು, ಗೊಬ್ಬರ ಎರೆಯುತ್ತಿದ್ದವೊ ? ಇದೊಂದು ರೀತಿ ಕೋಳಿ ಮೊದಲು, ಮೊಟ್ಟೆ ಮೊದಲೊ ಎಂಬ ಪ್ರಶ್ನೆ ಥರ.

ಪುಕ್ಕಟೆ ಸಲಹೆ ಏನೆಂದರೆ ಅದು ಟಿವಿ ವಾಹಿನಿ, ಜ್ಯೋತಿಷಿ ಮತ್ತು ಅದನ್ನು ನಡೆಸಿಕೊಡುವ ಆ್ಯಂಕರ್ ಇವರುಗಳನ್ನು ವಿಡಂಬನೆ ಮಾಡುತ್ತಲೇ ಅವರುಗಳ ಮೂಲಕ ಅದನ್ನು ನೋಡುವ ಜನರ ಸ್ವಭಾವವನ್ನು ವಿಡಂಬನೆ ಮಾಡುತ್ತದೆ. ಒಂದುರೀತಿ ಎರಡು ಅಲುಗಿನ ಕತ್ತಿ ಇದ್ದ ಹಾಗೆ. ಮಾತೇ ಇದರ ಮೂಲ ಬಂಡವಾಳ.

ಮಾತೇ ಮೂಲ ಬಂಡವಾಳವಾದ ನಾಟಕದ ನಿರ್ವಹಣೆ, ಅದರ ಟೆಂಪೋವನ್ನು ಕಾಯ್ದುಕೊಳ್ಳುವುದು ಸರಳ ಸಂಗತಿಯಲ್ಲ. ಡೈಲಾಗ್ ಡೆಲಿವರಿ ಟೈಮಿಂಗ್ ತುಸು ವ್ಯತ್ಯಯವಾದರೂ ನಾಟಕ ನೋಡುವ ಪ್ರೇಕ್ಷಕರ ಆಸಕ್ತಿ ಕುಸಿಯುತ್ತದೆ. ಇದಕ್ಕೆ “ಪುಕ್ಕಟೆ ಸಲಹೆ” ಆಸ್ಪದ ನೀಡಿಲ್ಲ. ಇದಕ್ಕೆ ಮುಖ್ಯ ಕಾರಣ ಇದರ ಮುಖ್ಯ ಪಾತ್ರಧಾರಿ ಅಶೋಕ್ ಬಿ. ಅವರ ಭಾವಾಭಿನಯ ಮತ್ತು ಸಂಭಾಷಣೆ ಹೇಳುವ ಧ್ವನಿಯಲ್ಲಿನ ಸಾಂದರ್ಭಿಕಾನುಸಾರ ಏರಿಳಿಗಳು. ಇವು ವೀಕ್ಷಕರನ್ನು ನಗೆಗಡಲಿನಲ್ಲಿ ತೇಲಿಸುತ್ತಲೇ ಯೋಚನೆಗೆ ಹಚ್ಚುತ್ತವೆ.

ಇಂದು ಜ್ಯೋತಿಷ ಕೇಳುವ ಆಚರಿಸುವ ಮನೋಭಾವ ಎಷ್ಟರಮಟ್ಟಿಗಿದೆ ಎಂದರೆ “ಯಾವದಿನ, ಯಾವಕ್ಷಣ ಹೆರಿಗೆಯಾಗಬೇಕು” ಎಂದು ನಿರ್ಧರಿಸುವವರು ವೈದ್ಯರ ಬದಲಿಗೆ ಜ್ಯೋತಿಷಿಗಳೇ ಆಗಿದ್ದಾರೆ. ಈ ಪರಿಪಾಠ ಸಾಕಷ್ಟು ವೈದ್ಯರ ಮೇಲೂ ಪರಿಣಾಮ ಬೀರಿದೆ. ಅವರು ಸಹ ಸಿಸೇರಿಯನ್ ಮಾಡುವ ಗಳಿಗೆಯನ್ನೂ ಜ್ಯೋತಿಷಿಗಳನ್ನು ಕೇಳಿ ನಿರ್ಧರಿಸುತ್ತಿದ್ದಾರೆ. ಇಂಥದನ್ನೆಲ್ಲ ಲೇವಡಿ ಮಾಡುವ ನಾಟಕ ಇಂಥ ಪ್ರವೃತ್ತಿ ನಮ್ಮನ್ನು ಎಲ್ಲಿಗೆ ಕರೆದುಕೊಂಡು ಹೋಗಬಹುದು ಎಂಬ ಯೋಚನೆಗೂ ಹಚ್ಚುತ್ತದೆ.

ಪರೀಕ್ಷೆಯಲ್ಲಿ ಮಗ ಅತ್ಯಧಿಕ ಅಂಕಗಳಿಸುತ್ತಿದ್ದರೂ ಇನ್ನೂ ಒಂದೆರಡು ಅಂಕ ಹೆಚ್ಚಿಗೆ ಗಳಿಸಬೇಕು ಎನ್ನುವ ಅಪ್ಪ, ಅತ್ತೆ ಯಾವಾಗ ನೆಗೆದುಬಿದ್ದು ಸಾಯುತ್ತಾಳೋ ಎನ್ನುವ ಸೊಸೆ, ತವರಿಗ ವರ್ಗಾವಣೆ ಬಯಸುವ ಸರ್ಕಾರಿ ಅಧಿಕಾರಿ, ಆತ ತವರಿಗೆ ಬರುವುದು ಬೇಡ ಎಂದು ದುಂಬಾಲು ಬೀಳುವ ಪತ್ನಿ, ಉನ್ನತ ಅಧಿಕಾರಕ್ಕಾಗಿ ಹಂಬಲಿಸುವ ರಾಜಕಾರಣಿ ಹೀಗೆ ಥರಾವರಿ ವ್ಯಕ್ತಿಗಳು ಥರಾವರಿ ಕಾರಣಗಳಿಗಾಗಿ ಜ್ಯೋತಿಷಿಗಳ ಮೊರೆ ಹೋಗುವುದನ್ನು ಅವರನ್ನು ಸಮಾಧಾನಗೊಳಿಸಲು ಜ್ಯೋತಿಷಿಗಳು ತೆಗೆದುಕೊಳ್ಳುವ ಹುನ್ನಾರಗಳನ್ನು ನಾಟಕ ಹೇಳುತ್ತಾ ಹೋಗುತ್ತದೆ.

ಕಾರ್ಯಕ್ರಮದ ನಡುನಡುವೆ ಬರುವ ಜಾಹಿರಾತುಗಳನ್ನೂ ನಾಟಕ ವ್ಯಂಗ್ಯಕ್ಕೆ ಗುರಿಯಾಗಿಸಿಕೊಳ್ಳುತ್ತದೆ. “ಅರೇ ಹೌದಲ್ಲವೇ ಇವರ ವ್ಯಂಗ್ಯ ಸಮಂಜಸವಾಗಿದೆಯಲ್ಲವೇ ಎಂಬ ಭಾವನೆ ಮೂಡುವಂತೆ ಮಾಡುತ್ತದೆ” ನಾಟಕದ ಆರಂಭದಿಂದಲೂ ಕೊನೆಯ ತನಕ ನಗೆಗಡಲಿನಲ್ಲೇ ತೇಲಿಸುವ ನಾಟಕ ಹೊರಬಂದ ಮೇಲೂ ಅದರ ಗುಂಗು ಉಳಿಯುವಂತೆ ಮಾಡುತ್ತದೆ.

ನಾಟಕದ ಮುಖ್ಯ ಪಾತ್ರಧಾರಿಗಳಾದ ಜ್ಯೋತಿಷಿ, ಆ್ಯಂಕರ್ ಡೈಲಾಗ್ ಒಪ್ಪಿಸುವ ಮಾದರಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತದೆ. ಬಹುತೇಕ ಪಾತ್ರಧಾರಿಗಳು ಇದೇ ಮೆಚ್ಚುಗೆ ಪಡೆಯುತ್ತಾರೆ. ಆದರೆ ಸಹಪಾತ್ರಧಾರಿಗಳು ಡೈಲಾಗ್ ಹೇಳುವ ಟೈಮಿಂಗ್ ಕೆಲೆಡೆ ವಿಳಂಬವಾಗಿದೆ. ಇದನ್ನು ಸರಿಪಡಿಸಲು ಜ್ಯೋತಿಷಿ ಪಾತ್ರಧಾರಿ ಪ್ರಯತ್ನಸಿ, ಯಶಸ್ವಿಯಾಗುವುದು ಸಹ ಗಮನಕ್ಕೆ ಬರುತ್ತದೆ.

ಆಗಸ್ಟ್ 4, 2019ರ ಸಂಜೆ ಬಸವೇಶ್ವರನಗರದ ಕೆ.ಇ.ಎ. ಪ್ರಭಾತ್ ರಂಗಮಂದಿರದಲ್ಲಿ ಈ ನಾಟಕ ನೋಡಿದೆ. ಮಧ್ಯಮ ಪ್ರಮಾಣದ ಈ ರಂಗಮಂದಿರ ಪ್ರೇಕ್ಷಕರಿಂದ ಸಂಪೂರ್ಣ ಭರ್ತಿಯಾಗಿತ್ತು. ಇದು ಖುಷಿಯ ಸಂಗತಿ. ನಾಟಕದ ಪಂಚಿಂಗ್ ಡೈಲಾಗುಗಳಿಗೆ ಪ್ರೇಕ್ಷಕರು ಸ್ಪಂದಿಸುವ ರೀತಿಯೂ ಕಲಾವಿದರ ಹುರುಪು ಹೆಚ್ಚಿಸುತ್ತಿತ್ತು. ಇದೇ ನಾಟಕ 40ಕ್ಕೂ ಹೆಚ್ಚುಬಾರಿ ಯಶಸ್ವಿಯಾಗಿ ಪ್ರದರ್ಶನಗೊಂಡಿದೆ ಎಂಬುದು ರಂಗಪ್ರಿಯರಿಗೆಲ್ಲರಿಗೂ ಖುಷಿಯ ಸಂಗತಿ.

Similar Posts

Leave a Reply

Your email address will not be published. Required fields are marked *