ನವೆಂಬರ್ 15 ರಿಂದ 18ರವರೆಗೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಆಯೋಜಿಸಿರುವ ಕೃಷಿಮೇಳ-2018 ನಡೆಯಲಿದೆ. ಕೃಷಿ-ತೋಟಗಾರಿಕೆ-ಹೈನುಗಾರಿಕೆ-ರೇಷ್ಮೆ ಮತ್ತು ಜಾನುವಾರು ಸಾಕಣೆ ವಿಭಾಗಗಳಲ್ಲಿ ಆಗಿರುವ ಪ್ರಗತಿಗಳ ಪ್ರಾತ್ಯಕ್ಷಿಕೆ ಮತ್ತು ಮಾಹಿತಿ ದೊರೆಯಲಿದೆ. ಈ ಬಾರಿಯ ಕೃಷಿಮೇಳ ಹಿಂದಿಗಿಂತಲೂ ಹೆಚ್ಚು ವಿಶೇಷತೆಗಳನ್ನು ಒಳಗೊಂಡಿದೆ. 12 ಲಕ್ಷಕ್ಕೂ ಹೆಚ್ಚು ಮಂದಿ ಭೇಟಿ ನೀಡುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಗಾಂಧಿ ಕೃಷಿವಿಜ್ಞಾನ ಕೇಂದ್ರದ ಆವರಣದಲ್ಲಿ ಸುಸಜ್ಜಿತ ಮಳಿಗೆಗಳನ್ನು ನಿರ್ಮಿಸಲಾಗಿದೆ ಎಂದು ವಿಶ್ವವಿದ್ಯಾಲಯದ ಕುಲಪತಿ ಡಾ. ರಾಜೇಂದ್ರ ಪ್ರಸಾದ್ ಅವರು ತಿಳಿಸಿದರು. ಈ ಸಂದರ್ಭದಲ್ಲಿ ವಿಸ್ತರಣಾ ವಿಭಾಗದ ನಟರಾಜು, ಸಂಶೋಧನಾ ವಿಭಾಗದ ಡಾ. ಷಡಕ್ಷರಿ ಇದ್ದರು

ವಿಶೇಷ ಆಕರ್ಷಣೆಗಳು: ಇತ್ತೀಚೆಗೆ ಬಿಡುಗಡೆಯಾದ ವಿವಿಧ ತಳಿಗಳ ಪ್ರಾತ್ಯಕ್ಷಿಕೆ * ಸುಧಾರಿತ ಬೇಸಾಯ ಪದ್ಧತಿಗಳ ತಾಕುಗಳು * ಖುಷ್ಕಿಬೇಸಾಯಕ್ಕೆ ಸೂಕ್ತವಾದ ಬೆಳೆಪದ್ಧತಿಗಳು * ತೋಟಗಾರಿಕೆ ಬೆಳೆಗಳು ಮತ್ತು ನಿಖರ ಕೃಷಿ * ಸಮಗ್ರ ಬೇಸಾಯ ಪದ್ಧತಿ ಪ್ರಾತ್ಯಕ್ಷಿಕೆ * ಸಿರಿಧಾನ್ಯಗಳು ಮತ್ತು ಮಹತ್ವ * ಔಷಧ ಮತ್ತು ಸುಗಂಧಯುಕ್ತ ಸಸ್ಯಗಳು * ಜಲಾನಯನ ನಿರ್ವಹಣೆ * ಸಾವಯವ ಕೃಷಿ ಪದ್ಧತಿಗಳು * ಸಮಗ್ರ ಪೋಷಕಾಂಶಗಳು ಹಾಗೂ ಪೀಡೆ ನಿರ್ವಹಣೆ * ಮಣ್ಣುಪರೀಕ್ಷೆಗೆ ಅನುಗುಣವಾಗಿ ಬೆಳೆಸ್ಪಂದನೆ ಪ್ರಾತ್ಯಕ್ಷಿಕೆ * ಹನಿ ಮತ್ತು ತುಂತುರು ನೀರಾವರಿ ಪದ್ಧತಿಗಳು *ಮಳೆ ಹಾಗೂ ಮೇಲ್ಛಾವಣಿ ನೀರಿನ ಕೊಯ್ಲು * ಸುಧಾರಿತ ಕೃಷಿ ಯಂತ್ರೋಪಕರಗಳ ಪ್ರದರ್ಶನ * ಕೋಯ್ಲಿನೋತ್ತರ ತಾಂತ್ರಿಕತೆ, ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ಮೌಲ್ಯವರ್ಧನೆ * ಬಿತ್ತನೆಬೀಜಗಳ ಪರೀಕ್ಷೆ ಹಾಗೂ ಶೇಖರಣೆ * ಪಶುಸಂಗೋಪನೆ, ಹೈನುಗಾರಿಕೆ, ಕುರಿ, ಕೋಳಿಸಾಕಣೆ ಹಾಗೂ ಮೀನುಸಾಕಣೆ * ಮಾರುಕಟ್ಟೆ ನೈಪುಣ್ಯತೆ ಮಾಹಿತಿ, ಹವಾಮಾನ ವೈಪರಿತ್ಯ ಕೃಷಿ * ಕೃಷಿಯಲ್ಲಿ ನೂತನ ಮಾಹಿತಿ ತಂತ್ರಜ್ಞಾನ, * ಜೈವಿಕ ಹಾಗೂ ನವೀಕರಿಸಲ್ಪಡುವ ಇಂಧನ, * ರೈತರ ಸಮಸ್ಯೆಗಳಿಗೆ ತಜ್ಞರಿಂದ ಸಲಹೆ * ರೈತರಿಂದ ರೈತರಿಗಾಗಿ ಚರ್ಚಾಗೋಷ್ಠಿ * ಕೃಷಿಪರಿಕರಗಳು ಹಾಗೂ ಪ್ರಕಟಣೆಗಳ ಮಾರಾಟ

ಲೋಕಾರ್ಪಣೆಗೊಳ್ಳಲಿರುವ ನೂತನ ತಳಿಗಳು: ರಾಗಿ ಕೆಎಂಆರ್ -630 * ಸೂರ್ಯಕಾಂತಿ – ಕೆಬಿಎಸ್ ಎಚ್ -78 * ಸೋಯಾ ಅವರೆ – ಕೆಬಿಎಸ್ -23 * ಅಕ್ಕಿ ಅವರೆ-ಕೆಬಿಆರ್ -1 ಈ ತಳಿಗಳನ್ನು ಬೆಳೆದಿರುವ ತಾಕುಗಳ ಮೇಳ ನಡೆಯುವ ಸ್ಥಳದ ಪಕ್ಕದಲ್ಲಿಯೇ ಇವೆ. ಇಲ್ಲಿ ಆಯಾ ಬೆಳೆಗಳ ತಜ್ಞರು ರೈತರ ಸಂದೇಹಗಳಿಗೆ ಸೂಕ್ತ ಪರಿಹಾರ ನೀಡುತ್ತಾರೆ

ಇಸ್ರೇಲ್ ತಂತ್ರಜ್ಞಾನ: ಕೃಷಿಯಲ್ಲಿ ಇಸ್ರೇಲ್ ತಂತ್ರಜ್ಞಾನಗಳ ಬಗ್ಗೆ ಚರ್ಚೆ ಮತ್ತು ಪ್ರಾತ್ಯಕ್ಷಿಕೆ ಇರುತ್ತದೆ. ವಿಶೇಷವಾಗಿ ಹನಿನೀರಾವರಿ, ತುಂತುರು ನೀರಾವರಿ, ಹಸಿರುಮನೆ, ಪ್ಲಾಸ್ಟಿಕ್ ಹೊದಿಕೆ ಮತ್ತು ನೆರಳುಮನೆ ಬೇಸಾಯದ ಬಗ್ಗೆ ಪ್ರಾತ್ಯಕ್ಷಿಕೆಯ ತಾಕುಗಳು ಇರುತ್ತವೆ. ಇವುಗಳ ಬಗ್ಗೆ ತಜ್ಞರು ವಿವರಣೆ ನೀಡುತ್ತಾರೆ.

ಕೃಷಿಯಂತ್ರೋಪಕರಣಗಳು: ಪ್ರಸ್ತುತ ಎಲ್ಲೆಡೆ ಕೃಷಿಕಾರ್ಮಿಕರ ಕೊರತೆಯಿದೆ. ಇದನ್ನು ಮನಗಂಡಿರುವ ಕೃಷಿ ವಿಶ್ವವಿದ್ಯಾಲಯ ಕೃಷಿ ಯಂತ್ರೋಪಕರಗಳ ವಿಶೇಷ ಪ್ರದರ್ಶನ – ಮಾರಾಟ ಏರ್ಪಡಿಸಿದೆ. ಇಲ್ಲಿ ಖಾಸಗಿ ಸಂಸ್ಥೆಗಳ ಜೊತೆಗೆ ರೈತರು ತಮ್ಮ ಅನುಭವದ ಆಧಾರದ ಮೇಲೆ ಅಭಿವೃದ್ಧಿಪಡಿಸಿರುವ ಯಂತ್ರಗಳ ಪ್ರದರ್ಶನವೂ ಇರುತ್ತದೆ. ವಿಶೇಷವಾಗಿ ಇವುಗಳು ಸಣ್ಣ ಮತ್ತು ಅತಿಸಣ್ಣ ರೈತರಿಗೆ ಉಪಯುಕ್ತವಾದ ಯಂತ್ರೋಪಕರಣಗಳು

ಮೇಳದ ಬಗ್ಗೆ ಮಾಹಿತಿ ನೀಡುವ ಆ್ಯಪ್: ಇದೇ ಮೊದಲಬಾರಿಗೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಮೇಳದ ಬಗ್ಗೆ ಮಾಹಿತಿ ನೀಡಲು ಮೊಬೈಲ್ ಆಧಾರಿತ ಆ್ಯಪ್ ಅಭಿವೃದ್ಧಿಪಡಿಸಿದೆ. ಇದು ಇಂದು (ನವೆಂಬರ್ 13) ಸಂಜೆ 7 ರಿಂದ ಗೂಗೂಲ್ ಪ್ಲೇ ಸ್ಟೋರಿನಲ್ಲಿ ಲಭ್ಯವಿದೆ. ಆಸಕ್ತರು ಇದನ್ನು ಡೌನ್ ಮಾಡಿಕೊಳ್ಳಬಹುದು. ಇದರಲ್ಲಿ ಮೇಳದ ರೂಟ್ ಮ್ಯಾಪ್, ಯಾವಯಾವ ವಿಭಾಗಗಳು ಎಲ್ಲೆಲ್ಲಿ ಇವೆ ಇತ್ಯಾದಿ ಮಾಹಿತಿ ಲಭ್ಯವಿದೆ.

ಸೌಲಭ್ಯಗಳು: ಮೇಳಕ್ಕೆ ಆಗಮಿಸುವ ರೈತರು ಮತ್ತು ಆಸಕ್ತರಿಗೆ ಉತ್ತಮ ಗುಣಮಟ್ಟದ ಸ್ಥಳೀಯ ಆಹಾರವನ್ನು ಕಡಿಮೆಬೆಲೆಗೆ ನೀಡಲು ವಿಶ್ವವಿದ್ಯಾಲಯ ನಿರ್ಧರಿಸಿದೆ. ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಹೆಬ್ಬಾಗಿಲಿನಿಂದ ಮೇಳ ನಡೆಯುವ ಸ್ಥಳಕ್ಕೆ ಕರೆದೊಯ್ಯಲು ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ. ಕೃಷಿಮೇಳಕ್ಕೆ ಉಚಿತ ಪ್ರವೇಶವಕಾಶವಿರುತ್ತದೆ

ಮೇಳ ನಡೆಯುವ ದಿನಾಂಕ : ನವೆಂಬರ್ 15 ರಿಂದ 18, 2018, ಸ್ಥಳ: ಗಾಂಧಿ ಕೃಷಿವಿಜ್ಞಾನ ಕೇಂದ್ರ (ಜಿಕೆವಿಕೆ) ಬೆಂಗಳೂರು

Similar Posts

1 Comment

  1. Wow

Leave a Reply

Your email address will not be published. Required fields are marked *