ಜಾತಿಯ ಸಂಕೋಲೆಗಳ ಒಳಗೆ ಸಿಲುಕಿದ ಮನಸುಗಳು ಆ ಜಾತೀಯತನದ ಹೈರಾರ್ಕಿಗಳನ್ನು ಕಾಪಾಡಿಕೊಳ್ಳಲು ಯತ್ನಿಸುತ್ತಿರುತ್ತವೆ. ಈ ಹಿನ್ನೆಲೆಯಲ್ಲಿಯೇ ಮರ್ಯಾದಾ ಹತ್ಯೆಗಳು ನಡೆಯುತ್ತಲೇ ಇವೆ. ಇಂಥ ದುಷ್ಟಕಾರ್ಯಗಳು ಇದ್ದಕ್ಕಿದ್ದ ಹಾಗೆ ಸಂಭವಿಸಿರುವುದೇನೂ ಅಲ್ಲ. ಪರಂಪರೆಯಿಂದಲೂ ನಡೆಯುತ್ತಾ ಬಂದಿವೆ. ಇತ್ತೀಚೆಗೆ ಸಾಮಾನ್ಯರಲ್ಲಿಯೂ ಮಾಧ್ಯಮ ಪ್ರಜ್ಞೆ ಬಂದ ಕಾರಣದಿಂದ ಇವು ಬೆಳಕಿಗೆ ಬರುತ್ತಿವೆ. ಇಂಥ ದುರ್ಘಟನೆಗಳನ್ನು ಆಧರಿಸಿ ಸಿನೆಮಾ ಮಾಡುವುದು ಆ ಮೂಲಕ ಜಾತಿಕ್ರೌರ್ಯದ ಮನಸುಗಳು ಬಯಕೆಯನ್ನು ಬಯಲಿಗೆಡುವ ಕಾರ್ಯವನ್ನು ಪರಿಣಾಮಕಾರಿಯಾಗಿ ಮುಂದಿಡುವುದು ಅಷ್ಟು ಸರಳ ಸಂಗತಿಯಲ್ಲ. ಇಂಥ ಪ್ರಯತ್ನದಲ್ಲಿ ತಮಿಳು ಸಿನೆಮಾ “ಪರಿಯೆರುಮ್ ಪೆರುಮಾಳ್ ಬಿ.ಎ.,ಬಿ.ಎಲ್.” ಗೆದ್ದಿದೆ.

ಈ ಸಿನೆಮಾದಲ್ಲಿ ಜಾತಿಕ್ರೌರ್ಯವಷ್ಟೇ ಬಿಂಬಿತವಾಗದೇ ಭಾಷಾ ಕ್ರೌರ್ಯವೂ ಕೂಡ ಪ್ರತಿಫಲಿಸಿರುವುದು ಮಹತ್ವದ ಸಂಗತಿ. ಗ್ರಾಮೀಣ ಪ್ರದೇಶದಿಂದ ಬಂದ, ಬರುತ್ತಿರುವ ದಲಿತ ಸಮುದಾಯಗಳ ವಿದ್ಯಾರ್ಥಿಗಳನೇಕರ ಭವಿಷ್ಯ  ಇಂಗ್ಲಿಷ್ ದೆಶೆಯಿಂದಲೂ ಮುರುಟಿ ಹೋಗುತ್ತಿರುವುದು, ಈ ಕಾರಣಕ್ಕಾಗಿಯೇ ಅಂಥ ವಿದ್ಯಾರ್ಥಿಗಳು ಪದೇಪದೇ ಅವಮಾನಕ್ಕೆ ಒಳಗಾಗುತ್ತಲೇ ಇರುವ ಸಂಗತಿಯನ್ನೂ ಬಹಳ ಶಕ್ತಿಯುತವಾಗಿ ಮುಂದಿಡಲಾಗಿದೆ.

ಪರಿಯೆರುಮ್ ಪೆರುಮಾಳ್ ಸಿನೆಮಾ ರೂಪಕದ ಮೂಲಕವೂ ಮಾತನಾಡುತ್ತದೆ. ಇಲ್ಲಿ ನಾಯಿ ರೂಪಕ. ಅವಮಾನಗಳನ್ನು ಬಹುಬಗೆಯಲ್ಲಿ ಅನುಭವಿಸುತ್ತಲೇ ಸಾಗುವ ಪರಿಯನ್ ಜೀವಕ್ಕೆ ಜೀವವೇ ಆತನ ನಾಯಿ ಕರಿಯನನ್ನು ಕೊಲ್ಗಲಾಗುತ್ತದೆ. ಇಲ್ಲಿಯೂ ಕೆಲಸ ಮಾಡುವುದು ಜಾತಿಕ್ರೌರ್ಯ ಮತ್ತು ಅಸೂಯೆ. ಈ ನಾಯಿ ಸಿನೆಮಾದುದ್ದಕ್ಕೂ ಮೆಟಾಫರ್ ಆಗಿ ಕಾಣಿಸಿಕೊಳ್ಳುವ ಮೂಲಕ ಬಹು ಆಯಾಮಗಳನ್ನು ನೀಡುತ್ತದೆ.

ತನ್ನ ಸಮುದಾಯ ಪದೇಪದೇ ಒಳಗಾಗುತ್ತಿರುವ ಅವಮಾನಗಳ ವಿರುದ್ಧ ಸಶಕ್ತವಾಗಿ ಧ್ವನಿಯೆತ್ತಬೇಕೆಂಬ ಸಲುವಾಗಿಯೇ ಲಾ ಕಾಲೇಜಿಗೆ ಸೇರ್ಪಡೆಗೊಳ್ಳುವ ಪರಿಯನ್ ಗೆ ಪ್ರಿನ್ಸಿಪಾಲ್ ಹಾಕುವ ಪ್ರಶ್ನೆ…. ಓದಿ ನೀನು ಏನಾಗಬೇಕೆಂದು ಬಯಸುವೆ ? ಬರುವ ಉತ್ತರ ಡಾಕ್ಟರ್ ಆಗಬೇಕೆಂದು ಕೊಂಡಿದ್ದೇನೆ. ಪ್ರಿನ್ಸಿಪಾಲ್ ನಗುತ್ತಾ “ಇದು ಲಾ ಕಾಲೇಜ್ ಇಲ್ಲಿ ಓದಿ ಡಾಕ್ಟರ್ ಆಗುವುದಕ್ಕೆ ಆಗುವುದಿಲ್ಲ” ಅದಕ್ಕೆ ಪರಿಯನ್ ನೀಡುವ ಉತ್ತರ ಬಹುತೀಷ್ಣ. “ನೀವಂದುಕೊಂಡ ಡಾಕ್ಟರ್ ಅಲ್ಲ, ಡಾಕ್ಟರ್ ಬಿ.ಆರ್. ಅಂಬೇಡ್ಕರ್ ಅವರ ಮಾದರಿ ಆಗಬೇಕೆಂದುಕೊಂಡಿದ್ದೇನೆ” ಈ ಸಂಭಾಷಣೆ ಮೂಲಕ ನಿರ್ದೇಶಕರು ಜಾತಿ ಗ್ರಹಣಗ್ರಸ್ತ ಮನಸುಗಳೇ ಹೆಚ್ಚಿರುವ ಇಂಡಿಯಾಕ್ಕೆ ನಿರಂತರ ಅಂಬೇಡ್ಕರ್ ಮಾದರಿ ಬೇಕು ಎಂಬುದನ್ನು ಪ್ರತಿಪಾದಿಸುತ್ತಾರೆ.

ಯಾರುಯಾರಿಗೆ ಏಕೆ ಇಷ್ಟವಾಗುತ್ತಾರೆ ಎಂಬುದನ್ನು ಹೇಳುವುದು, ಗ್ರಹಿಸುವುದು ಕಷ್ಟ. ಬಹುಶಃ ಪರಿಯನ್ ಮುಗ್ದತನಕ್ಕೆ ಮನಸೋತ  ಬಲಾಢ್ಯ ಮೇಲ್ಜಾತಿಯ ಜ್ಯೋತಿ ಪ್ರೇಮಿಸತೊಡಗುತ್ತಾಳೆ. ಇದು ಏಕಮುಖ ಪ್ರೀತಿ. ಇಂಥ ಯಾವ ಭಾವನೆಗಳು ಪರಿಯನ್ ಗಿಲ್ಲ, ಅಥವಾ ಅಂತ ಭಾವನೆಗಳು ಆತನಲ್ಲಿ ಮೊಳೆಯದಂತೆ ಮಾಡಲಾಗಿದೆ. ಇವರಿಬ್ಬರ ನಡುವೆ ಸಂವಹಿಸುತ್ತಿದ್ದ ಸ್ನೇಹವನ್ನೇ ಅರ್ಥಮಾಡಿಕೊಳ್ಳದ ಜ್ಯೋತಿ ಕುಟುಂಬದವರು ಪರಿಯನ್ ಮೇಲೆ ಅಮಾನುಷವಾಗಿ ಹಲ್ಲೆ ಮಾಡುತ್ತಾರೆ. ಕೊಲ್ಲಲ್ಲು ಪದೇಪದೇ ಯತ್ನಿಸುತ್ತಾರೆ. ಆತನ ವಿದ್ಯಾರ್ಥಿಜೀವನವನ್ನೇ ನರಕ ಮಾಡುತ್ತಾರೆ. ತನ್ನಮೇಲೆ ಸತತವಾಗಿ ನಡೆಯುವ ಅವಮಾನಗಳು, ಕೊಲೆಯತ್ನಗಳಿಗೆ ಪರಿಯನ್ ಕೊಡುವ ಉತ್ತರ, ಕಿಂಚಿತ್ತಾದರೂ ಮನುಷ್ಯತ್ವ ಉಳಿಸಿಕೊಂಡಿರುವವರ ಮನಸುಗಳನ್ನು ಅಮೂಲಾಗ್ರ ಕಲಕಿಬಿಡುತ್ತದೆ.

ಜಾತಿಕ್ರೌರ್ಯದ ಯತ್ನಗಳಲ್ಲಿ ಹೇಗೆ ಗ್ರಾಮದೊಳಗೆ ಸುಫಾರಿ ಕೊಲೆಗಡುಕರು ಮೊಳೆತಿರುತ್ತಾರೆ ಎಂಬುದನ್ನು ಸಿನೆಮಾ ಹೇಳುತ್ತದೆ. ಇಲ್ಲಿ ಬರುವ ಪ್ರತಿಯೊಂದು ಪಾತ್ರದ ಗುಣಗಳು ಮಸುಕಾಗದೇ ಎದ್ದುಕಾಣುವಂತೆ ಮಾಡಲಾಗಿದೆ. ಆ ಮೂಲಕ ಇಡೀ ಸಿನೆಮಾದ ಥೀಮ್ ಗೆ ನ್ಯಾಯ ಒದಲಾಗಿಸಲಾಗಿದೆ.

ಪ್ರಸ್ತುತ ಭಾರತೀಯ ಸಂದರ್ಭದಲ್ಲಿ ನಡೆಯುತ್ತಿರುವ ಮರ್ಯಾದೆ ಹತ್ಯೆಗಳ ವಿರುದ್ಧ ಭಾಷಣ ಬೀಗಿಯದೇ ಅದರ ಘೋರ ಪರಿಣಾಮಗಳನ್ನು ಮುಟ್ಟಿಸುವ ಕಾರ್ಯದಲ್ಲಿ ಸಿನೆಮಾ ನಿರ್ದೇಶಕ ಮರಿ ಸೆಲ್ವರಾಜ್ ಯಶಸ್ವಿಯಾಗಿದ್ದಾರೆ .ಚಿತ್ರಕಥೆಯೂ ಇವರದೇ ಎಂಬುದು ಗಮನಾರ್ಹ. ಸ್ಕ್ರೀನ್ ಪ್ಲೇ ಬಿಗಿ ನಿರ್ದೇಶನದಲ್ಲಿಯೂ ಮುಂದುವರಿದಿದೆ.

ಸಂಕಲನ ನಿರ್ವಹಿಸಿರುವ ಸೆಲ್ವ ಪಿಕೆ, ಸಿನೆಮಾಟೋಗ್ರಫಿ ಮಾಡಿರುವ ಶ್ರೀಧರ್, ಸಂಗೀತ ನೀಡಿರುವ ಸಂತೋಷ್ ನಾರಾಯನ್ ಅವರುಗಳೆಲ್ಲ ಸಿನೆಮಾವನ್ನು ಮೊನಚಾಗಿ ಕಟ್ಟಿಕೊಡಲು ದುಡಿದಿದ್ದಾರೆ. ಇನ್ನು ಚಿತ್ರದ ಪ್ರತಿಯೊಬ್ಬ ಪಾತ್ರಧಾರಿಯೂ ತಾವು ನಿರ್ವಹಿಸಿದ ಪಾತ್ರಗಳಿಗೆ ನ್ಯಾಯ ಒದಗಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಜಾತೀಯ ಬಿಗಿಬಂಧಗಳು, ಸಾಮಾಜಿಕ ಸಂರಚನೆಗಳು, ದಲಿತರ ಸ್ಥಿತಿಗಳ ಬಗ್ಗೆ ಕಬಾಲಿ, ಕಾಲಾ ಸಿನೆಮಾಗಳನ್ನು ನಿರ್ದೇಶಿಸುವುದರ ಮೂಲಕ ಹೇಳಿರುವ ಪ. ರಂಜೀತ್ ಅವರು ಪರಿಯೆರುಮ್ ಪೆರುಮಾಳ್ ಸಿನೆಮಾದ ನಿರ್ಮಾಪಕರು. ಇವರ ಕಾಳಜಿ ಸಿನೆಮಾದುದ್ದಕ್ಕೂ ವ್ಯಕ್ತಗೊಂಡಿದೆ.

ಇಡೀ ಸಿನೆಮಾ ಹೇಗೆ ಬಲ್ಯಾಢ್ಯ ಮೇಲ್ಜಾತಿಯ ಕ್ರೌರ್ಯದ ಮನಸುಗಳು ದಲಿತರು ನಾಯಿಗಳ ಮಾದರಿಯಲ್ಲಿಯೇ ವಿಧೇಯವಾಗಿ ವರ್ತಿಸಬೇಕು ಎಂಬುದನ್ನು ಬಯಸುತ್ತಾರೆ ಎಂಬುದನ್ನು ನಾಇಯನ್ನು ರೂಪಕವಾಗಿ ಬಳಸಿಕೊಳ್ಳುವುದರ ಮೂಲಕವೂ ಹೇಳಿರುವುದು ಗಮನಾರ್ಹ. ಇಂಥ ಸಿನೆಮಾಗಳು ಉಂಟು ಮಾಡಬಹುದಾದ ಸಾಮಾಜಿಕ ಪರಿಣಾಮಗಳು ಕೂಡ ಕುತೂಹಲಕರ.

Similar Posts

3 Comments

  1. English subtitle ಇರುವ ಈ ಚಿತ್ರ ವೀಕ್ಷಣೆಗೆ ಎಲ್ಲಿ ಲಭ್ಯವಿದೆ ಸಾರ್

    1. ಅಮೆಜಾನ್ ಪ್ರೈಮ್ ನಲ್ಲಿ ಲಭ್ಯವಿದೆ..ನೋಡಿ…

  2. ಚಿತ್ರವನ್ನು ನಾನು ಯುಟ್ಯೂಬ್‌ನಲ್ಲಿ ನೋಡಿದೆ. ನಿಜವಾಗಿಯೂ ಮನಕಲಕುವ ಚಿತ್ರ. ಚಿತ್ರ ನನ್ನನ್ನು ನನ್ನ ಕಾಲೇಜಿನ ದಿನಗಳಿಗೆ ಕರೆದೊಯ್ದಿತ್ತು. ನನ್ನ ಮೊದಲನೇ ವರ್ಷದ ಬಿಎ ಅಭ್ಯಾಸದ ಸಮಯದಲ್ಲಿ ಕಾಲೇಜಿನಲ್ಲಿ ಇದ್ದ ವಿಚಿತ್ರವಾದ ಜಾತಿ ದಬ್ಬಾಳಿಕೆ ಮತ್ತು ಹೆಣ್ಣುಮಕ್ಕಳನ್ನು ಕುರಿತು ನಡೆದುಕೊಳ್ಳುತ್ತಿದ್ದ ರೀತಿ ನನಗೆ ಕಸಿವಿಸಿಯಾಗ್ತಿತ್ತು. ಪ್ರಾಯಶಃ ಹುಟ್ಟಿನಿಂದ ನನಗೆ ಬೇರೆಯೇ ಜಾತಿಯ ಗುರುತು ಇದ್ದ ಕಾರಣವೂ ಇದಾಗಿರಬಹುದು. ಆಗ ಸಬಲ ಜಾತಿಗಳ ವಿದ್ಯಾರ್ಥಿಗಳ ಗುಂಪುಗಳು ದಲಿತ ಮಕ್ಕಳನ್ನು ವಿನಾಕಾರಣ ಹೀಗೆಳೆಯುವುದು, ಹಂಗಿಸುವುದು ನನಗರ್ಥವೇ ಆಗುತ್ತಿರಲಿಲ್ಲ. ಮುಂದಿನ ದಿನಗಳಲ್ಲಿ ಎಲ್ಲ ಹಿನ್ನೆಲೆಯ ವಿದ್ಯಾರ್ಥಿಗಳು ಒಟ್ಟಿಗೆ ಕೂರುವಂತೆ, ಹಾಡುವಂತೆ, ನಟಿಸುವಂತೆ ಮುಖ್ಯವಾಗಿ ಎಲ್ಲರೂ ಯಾವುದೇ ಬೇಧಭಾವವಿಲ್ಲದೆ ಬೆರೆಯುವಂತೆ ಮಾಡುವ ಒಂದು ರಂಗವನ್ನು ಕಟ್ಟುವ ನನ್ನ ಕನಸು ನಿಧಾನವಾಗಿ ಬೆಳೆಯಿತು ಮತ್ತು ಅದು ಸಾಮೂಹಿಕ ಸ್ವರೂಪವನ್ನು ಕಂಡುಕೊಂಡಿತು. ನನಗೆ ನೆನಪಿರುವಂತೆ ನನ್ನ ಕೆಲವು ಸಂಗಡಿಗರಿಗೆ ೧೯೮೪ರ ಡಿಸೆಂಬರ್‌ನಲ್ಲಿ ಈ ಕನಸನ್ನು ಹಂಚಿಕೊಂಡಿದ್ದೆ. ಕೆಲವರು ನಕ್ಕಿದ್ದರು. ೧೯೮೫ರಲ್ಲಿ ಆಗ ಪ್ರಾಂಶುಪಾಲರಾಗಿದ್ದ ಮಾರುತಿ ರಾವ್‌ ಪವಾರ್‌ ಅವರೆದುರು ಹೇಳಿದಾಗಲೂ ಅವರು, ʼಏನಾದ್ರೂ ಮಾಡಯ್ಯ. ಆದ್ರೆ ಜಗಳ ಮಾತ್ರ ತರಬೇಡʼ ಅಂತ ಅಂದಿದ್ದರು. ಅವರ ಭಯ ನನಗೆ ಆಗ ಪೂರ್ಣವಾಗಿ ಅರ್ಥ ಆಗದಿದ್ದರೂ ನನ್ನ ಎಚ್ಚರಿಕೆ ಎಷ್ಟಿರಬೇಕು ಎನ್ನುವ ಜವಾಬ್ದಾರಿ ಗುರುತಿಸಿದ್ದೆ. ಮುಂದಿನ ದಿನಗಳಲ್ಲಿ ʼನೆಳಲು-ಬೆಳಕುʼ ಬೆಳೆಯುತ್ತಿದ್ದಾಗ ಹಲವರು ಕೊಂಕು ಮಾತಾಡಿದ್ದರು, ಜಾತಿಯನ್ನೇ ಇಟ್ಟುಕೊಂಡು ಟೀಕಿಸಿದವರೂ ಇದ್ದರು. ಜೊತೆಗೆ ನಮ್ಮ ಸಂಗಡಿಗರಾಗಿ ಎಲ್ಲ ಜಾತಿ ಧರ್ಮದ ವಿದ್ಯಾರ್ಥಿಗಳು ಹುಡುಗ ಹುಡುಗಿಯರು ಜೊತೆಯಾಗುವುದು ಅನೇಕರಿಗೆ ಕಿಸಿರಾಗಿತ್ತು. ಆಗ ನಮಗೆ ತಿಳಿಯದೆಯೇ ಯಾವುದೇ ಹಿಡನ್‌ ಅಜೆಂಡಾ ಇಲ್ಲದೆ ಸ್ನೇಹ ಬಳಗ ಬೆಳೆಯಿತು. ಆ ಸ್ನೇಹ ಸೌರಭ ನಮ್ಮಗಳ ನಡುವೆ ಯಾವುದೇ ಅಡೆತಡೆ ಅಥವಾ ಪರದೆಗಳಿಲ್ಲದೆ ಮುಂದುವರೆದಿದೆ.

    ಮುಂದೆ ನಾನು ಸ್ನಾತಕೋತ್ತರ ಪದವಿಗಾಗಿ ಬೆಂಗಳೂರು ವಿವಿಯಲ್ಲಿ ಸಮಾಜಕಾರ್ಯ ಅಭ್ಯಾಸಕ್ಕೆ ಬಂದಾಗ ಜಾತಿಯ ವಿವಿಧ ಆಯಾಮಗಳನ್ನು ಅಭ್ಯಾಸ ಮಾಡುವ ಅವಕಾಶ ಸಿಕ್ಕಿತು. ಹಳ್ಳಿ, ಕೊಳೆಗೇರಿಗಳಲ್ಲಿ ಬಡಜನರ ನಡುವೆ ಕ್ಷೇತ್ರಕಾರ್ಯ ಮಾಡುವುದು ಅನಿವಾರ್ಯವಾಗಿತ್ತು. ಅವುಗಳು ನನ್ನನ್ನು ತೆರೆದುಕೊಳ್ಳಲು, ತಿಳಿಯಲು ಅವಕಾಶವಾಯಿತು. ಆ ನಂತರದಲ್ಲೂ ಕೆಲಗಳಲ್ಲಿ ತೊಡಗಿಕೊಂಡಾಗಲೂ ʼಜಾತಿʼ ಅದು ಹೇಗೆ ಅಭಿವೃದ್ಧಿಗೆ ತೊಡರುಗಾಲು ಆಗಿದೆ ಎಂದು ಹತ್ತಿರದಿಂದ ನೋಡತೊಡಗಿದೆ. ಅದರಲ್ಲೂ ಸಂಪೂರ್ಣ ಸಾಕ್ಷರತಾ ಆಂದೋಲನಗಳಲ್ಲಿ ಮಂಡ್ಯ, ಶಿವಮೊಗ್ಗ, ರಾಯಚೂರು, ಕಲ್ಬುರ್ಗಿ, ಹಾಸನ ಮತ್ತು ಧಾರವಾಡದಲ್ಲಿ ಕಾರ್ಯಕರ್ತರಿಗೆ ತರಬೇತಿ ಕೊಡಲು ಓಡಾಡಿದ ನನಗೆ ಜಾತಿ, ಜಾತಿಯೊಳಗಿನ ವಿವಿಧ ಪದರಗಳು ಅದು ಹೇಗೆ ಬಾಧಿಸುತ್ತಿದೆ ಎಂದು ತಿಳಿಯುತ್ತಿತ್ತು. ನನ್ನಿಂದ, ನನ್ನ ಸಂಘಟನೆಗಳಿಂದ, ಗುಂಪುಗಳಿಂದ ಎಷ್ಟು ಸಾಧ್ಯವೋ ಅಷ್ಟು ಹಿಂದುಳಿದ ಗುಂಪುಗಳಿಗೆ ನೆರವು ಕಲ್ಪಿಸುವ ಬರಹ, ತರಬೇತಿ, ಕೆಲಸಗಳಲ್ಲಿ ತೊಡಗಿಕೊಳ್ಳಲು ಯತ್ನಿಸುತ್ತಿದ್ದೇನೆ. ಮಾಡುವ ಕೆಲಸ ಇನ್ನೂ ಇದೆ. ತಿಳಿಯುವ ವಿಚಾರಗಳು ಇನ್ನೂ ಇದೆ.

    ಈ ಚಿತ್ರ ನನ್ನನ್ನು ಅಲುಗಾಡಿಸಿತು. ಚಿತ್ರವನ್ನು ಪರಿಚಯಿಸಿದ ನಿಮಗೆ ವಂದನೆಗಳು.

Leave a Reply

Your email address will not be published. Required fields are marked *