ಭಾರತದಲ್ಲಿ  ಶೇ.55 ರಷ್ಟು ಗ್ರಾಮೀಣ ಜನರು ಕೃಷಿಯನ್ನೇ ಅವಲಂಬಿಸಿದ್ದಾರೆ. ಯಾವಾಗ ರೈತರ ಹತ್ತಿರ ಹಣವಿರುತ್ತೋ, ರೈತರ ಆದಾಯ ಹೆಚ್ಚುತ್ತೋ ಆಗ ದೇಶ ನಿಜವಾದ ಅಭಿವೃದ್ಧಿ ಹೊಂದುತ್ತದೆ ಎಂದು ರಾಜ್ಯಪಾಲ ವಜುಬಾಯ್ ವಾಲಾ ಅಭಿಪ್ರಾಯಪಟ್ಟರು. ಇಂದಿನಿಂದ ಬೆಂಗಳೂರಿನ ಜಿಕೆವಿಕೆಯಲ್ಲಿ 4 ದಿನಗಳ ಕಾಲ ನಡೆಯುವ ಕೃಷಿಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. . ಉತ್ಪಾದನೆ ಮತ್ತು ವ್ಯಾಪಾರ,   ಕೈಗಾರಿಕಾ ಉತ್ಪಾದನೆ ಮತ್ತು ಕೃಷಿ ಉತ್ಪಾದನೆ ಎರಡೂ ಮುಖ್ಯ ಉತ್ಪಾದನೆಗಳು. ಗ್ರಾಮೀಣ ಜನರ ಖರೀದಿಸುವಿಕೆ ಮಟ್ಟ ಹೆಚ್ಚಬೇಕು.. ಪುರಾತನ ಮಾದರಿಯ ಕೃಷಿಪದ್ಧತಿಯನ್ನೇ ಹಲವರು ಈಗಲೂ ಅವಲಂಬಿಸಿದ್ದಾರೆ. ವಿಶ್ವವಿದ್ಯಾಲಯಗಳು ಹೊಸ ಸಂಶೋಧನೆಗಳು ಮಾಡಿವೆ. ಸೂರ್ಯಕಾಂತಿ ಹೊಸ ತಳಿಯ ಸಂಶೋಧನೆ ಕರ್ನಾಟಕದಲ್ಲಿ  ಮೊದಲ ಬಾರಿಗೆಆಗಿದೆ ಎಂದು ಶ್ಲಾಘಿಸಿದರು.

ಕೆಲಸವಿಲ್ಲದವನೂ ಕೃಷಿ ಮಾಡುತ್ತಾನೆ ಅನ್ನೋ ಮನೋಭಾವನೆ ಹೋಗಬೇಕು. ರೈತರ ಉತ್ಪಾದನೆಗಳಿಗೆ ಉತ್ತಮ ಮಾರುಕಟ್ಟೆ, ಸೂಕ್ತ ಬೆಲೆ ಸಿಗಬೇಕು. ಮೊದಲು ಕೃಷಿಯೇ ಪ್ರಧಾನ ಎನ್ನಲಾಗುತ್ತಿತ್ತು. ಆದ್ರೆ ಕಾಲ ಬದಲಾದಂತೆ ನೌಕರಿ, ವ್ಯಾಪಾರವೇ ಶ್ರೇಷ್ಠವಾಗಿದೆ. ಕೃಷಿ, ಕೈಗಾರಿಕೆ, ವ್ಯಾಪಾರಿ ಈ ಮೂರು ಕ್ಷೇತ್ರಗಳನ್ನು ಅಭಿವೃದ್ಧಿಗೊಳಿಸಬೇಕು. ಆದರೆ ಕೃಷಿಗೆ ಹೆಚ್ಚು ಆದ್ಯತೆ ದೊರೆಯಬೇಕು ಎಂದರು.

ಇಸ್ರೇಲ್ ಕಡಿಮೆ ಮಳೆಯಲ್ಲಿಯೇ ಕೃಷಿಗೆ ಹೆಸರಾಗಿದೆ. ಆದ್ರೆ ನಮ್ಮ ದೇಶದ ಕೆಲವೆಡೆ ಅತಿವೃಷ್ಟಿಯಾಗುತ್ತೆ. ಆದ್ರೆ ನೀರು ಸಂರಕ್ಷಣೆ ವಿಧಾನವೇ ಇಲ್ಲಿ ಸರಿಯಿಲ್ಲ . ನೀರಿನ ಸಮರ್ಪಕ ಹಂಚಿಕೆ ಮತ್ತು ಬಳಕೆಯಾದಾಗ ನಮ್ಮಲ್ಲೂ ಕೃಷಿ ಕ್ಷೇತ್ರ ವೃದ್ಧಿಸಬಹುದಾಗಿದೆ.  ಭಾರತದಲ್ಲಿ ಸಮಯದ ಜೊತೆಗೆ ನೀರಿನ ಸಮರ್ಪಕ ನಿರ್ವಹಣೆಯಾದ್ರೆ ಮಾತ್ರ ಕೃಷಿಯಲ್ಲಿ ಪ್ರಗತಿ ಕಾಣಬಹುದೆಂದು ಸಲಹೆ ನೀಡಿದರು.

ನೀರು ಬಳಕೆ ಬಗ್ಗೆ ವಜೂಬಾಯಿವಾಲಾ ಅವರು ಗಾಂಧೀಜಿ ಮಾತನ್ನು ಉಲ್ಲೇಖಿಸಿದರು,  ಮಹಾತ್ಮ ಗಾಂಧೀಜಿ ತಮ್ಮ ಆಶ್ರಮದ ಪಕ್ಕದಲ್ಲಿಯೇ ನದಿಯಿದ್ದರೂ ಕೂಡ ಕೇವಲ ಒಂದು ಚೊಂಬು ನೀರಿನಲ್ಲಿ ಕೈಕಾಲು ಮುಖ ತೊಳೆದು, ಉಳಿದ ನೀರಿನಿಂದ ತಲೆಯನ್ನೂ ತೊಳೆದಿದ್ದರು. ಆಗ ಗಾಂಧಿಜಿಯ ಅನುಯಾಯಿಯೊಬ್ಬರು ನೀರು ಕಡಿಮೆ ಬಳಕೆ ಬಗ್ಗೆ ಕೇಳಿದಾಗ ಗಾಂಧೀಜಿ, “ನೀರಿನ ಮೇಲೆ ಕೇವಲ ಮನುಷ್ಯರಿಗಷ್ಟೇ ಹಕ್ಕಿಲ್ಲ. ಹಕ್ಕಿಪಕ್ಷಿ ಪ್ರಾಣಿಗಳಿಗೂ ಹಕ್ಕಿದೆ..ಹಾಗಾಗಿ ನೀರನ್ನು ಅಗತ್ಯವಿದ್ದಷ್ಟು ಮಾತ್ರ ಬಳಸಬೇಕು” ಎಂದಿದ್ದರು

ಕೃಷಿಸಚಿವ ಎನ್.ಹೆಚ್.ಶಿವಶಂಕರ್ ಮಾತನಾಡಿ, ಬೃಹತ್ ಕೃಷಿ ಮೇಳ ರೈತರಿಗೆ ಅನುಕೂಲಕರ. ರಾಜ್ಯ ಸರ್ಕಾರ, ರೈತಪರವಾದ ಅನೇಕ ನಿಲುವುಗಳನ್ನು ತೆಗೆದುಕೊಂಡಿದೆ. ಸಾಲದ ಸುಳಿಯಲ್ಲಿ ಸಿಕ್ಕ ರೈತರ ನೆರವಿಗೂ ದೊಡ್ಡ ಪ್ರಮಾಣದ ಕೃಷಿ ಸಾಲ ಮನ್ನಾ ಮಾಡಿದೆ. ಸಮ್ಮಿಶ್ರ ಸರ್ಕಾರ ಕೃಷಿ ಇಲಾಖೆಯಲ್ಲಿ ಅನೇಕ ಬದಲಾವಣೆ ಮಾ ಡಲು ಯೋಚಿಸಿದೆ. ಕೃಷಿಯಲ್ಲಿ ಪ್ರಗತಿ ಸಾಧಿಸಲು ಇಸ್ರೇಲ್ ಮಾದರಿಯ ಕೃಷಿ ಪದ್ಧತಿಯನ್ನು ಜಾರಿಗೊಳಿಸುತ್ತಿದೆ ಎಂದರು.

 ವಿಶೇಷ ಯೋಜನೆಗಳ ಮೂಲಕ ಕೃಷಿಗೆ ಸಂಬಂಧಿಸಿದ ಇಲಾಖೆಗಳನ್ನು ಒಗ್ಗೂಡಿಸಿ ಸಮನ್ವಯ ಸಾಧಿಸಲು ಕೃಷಿ ಅಗ್ರಿ ಕ್ಯಾಬಿನೆಟ್ನಲ್ಲಿ ಅಪ್ರೂವಲ್ ಆಗಿದೆ. ಕೃಷಿ ಕ್ಷೇತ್ರದಲ್ಲಿ ಖಾಸಗಿ ವಿಶ್ವವಿದ್ಯಾಲಯಗಳ ಹಾವಳಿಗೆ ಕಡಿವಾಣ ಹಾಕಲಾಗುತ್ತಿದೆ.. ಈ ಬಗ್ಗೆ ದಿಟ್ಟ ನಿಲುವು ತೆಗೆದುಕೊಂಡಿರುವ ಸರ್ಕಾರ ಹೊಸ ಕಾನೂನು ತಂದಿದೆ. ವಿಶ್ವವಿದ್ಯಾಲಯದಲ್ಲಿ ಸಂಶೋಧನೆಗಳು ರೈತರಿಗೆ ಅರ್ಥಗರ್ಭಿತವಾಗುವಂತೆ ಮತ್ತು ಅವರಿಗೆ ಮುಟ್ಟುವಂತೆ ಪ್ರಯತ್ನಗಳು ನಡೆಯಬೇಕು..ಸಂಪೂರ್ಣ ಸಂಶೋಧನೆ ಎಲ್ಲೋ ಒಂದು ಕಡೆ ರೈತರಿಗೆ ಸಿಗುತ್ತಿಲ್ಲ ಅನ್ನೋದು ಗಮನಕ್ಕೆ ಬಂದಿದೆ. ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆ ಮತ್ತು ಬೋಧನಾಮಟ್ಟ ಹೆಚ್ಚಿಸಲು ಹೊಸ ನಿಯಮ ತರಲಾಗುತ್ತಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಉದ್ಘಾಟನಾ ವೇದಿಕೆಯಲ್ಲಿ ಸೂರ್ಯಕಾಂತಿ, ಸೋಯಾ,ರಾಗಿ, ಅಕ್ಕಿ ಅಲ್ಪಾವಧಿಯ 4 ಹೊಸ ತಳಿಗಳನ್ನು ಕೃಷಿ ಸಚಿವರು ಮತ್ತು ರಾಜ್ಯಪಾಲರು ಬಿಡುಗಡೆಗೊಳಿಸಿದರು. ಸಾಂಕೇತಿಕವಾಗಿ ಮೂವರು ಕೃಷಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯ್ತು.

ವಿಶೇಷ ಆಕರ್ಷಣೆಗಳು: ಗೀರ್ ತಳಿಯ ಹೋರಿ; ಗುಜರಾತಿನಿಂದ ಗೀರ್ ತಳಿಯ ಹೋರಿಯೊಂದನ್ನು ಕೃಷಿ ಮೇಳಕ್ಕೆ ಕರಿಸಲಾಗಿತ್ತು. ಇಡಿ ಭಾರತದಲ್ಲಿ ಈ ಮಾದರಿಯ ಹೋರಿ ಇರೋದು ಬರಿ 5 ಮಾತ್ರ. ಅದ್ರಲ್ಲಿ ಒಂದು ಕೃಷಿಮೇಳಕ್ಕೆ ಬಂದಿದೆ. ಇದು ಸುಮಾರು 1300 ಕೆ. ಜಿ.ತೂಕವಿದೆ, ಈ ಹೋರಿಗಳನ್ನು ಬಹಳ ಜತನದಿಂದ ಸಂರಕ್ಷಿಸಿಕೊಂಡು ಬರಲಾಗುತ್ತಿದೆ. ಮೇಳದ ವೇದಿಕೆಯ ಮುಂಭಾಗ ಹೋರಿಯ ಮುಂದೆ ಸೆಲ್ಫಿ ತೆಗೆದುಕೊಳ್ಳೋರ ಸಂಖ್ಯೆ ಹೆಚ್ಚಾಗಿತ್ತು. ಬಹಳಷ್ಟು ಜನ ಈ ಬಗ್ಗೆ ಹೆಚ್ಚಿನ ಮಾಹಿತಿ ತೆಗೆದುಕೊಳ್ಳಲು ಆಸಕ್ತಿ ತೋರಿಸುತ್ತಿದ್ದರು. ಇನ್ನೊಂದು ಗಮನಾರ್ಹ ಎಂದರೆ ಕೆಂಪುಬಟ್ಟೆ ಧರಿಸಿದವರು ಇದರ ಮುಂದೆ ನಿಲ್ಲದಂತೆ ಸೂಚಿಸುತ್ತಿದ್ದರು.

 ಖಡಕ್ನಾಥ್ ಕೋಳಿ ತಳಿ ವಿಶೇಷ ಆಕರ್ಷಣೆ: ಕಳೆದ ವರ್ಷ ಒಂದೇ ಒಂದು ಖಡಕ್ನಾಥ್ ಕೋಳಿ ಕೃಷಿಮೇಳದಲ್ಲಿ ಪ್ರದರ್ಶನಗೊಂಡಿತ್ತು. ಈ ಬಾರಿ ಈ ಕೋಳಿ ಸಂಖ್ಯೆ ಹೆಚ್ಚಳಗೊಂಡಿದೆ. ಇಂದು ಮೊದಲ ದಿನದ ಕೃಷಿಮೇಳದಲ್ಲಿ ಖಡಕ್ ನಾಥ್ ಕೋಳಿಗಳು ವೀಕ್ಷಕರನ್ನು  ಸೆಳೆದವು. ಈ  ಕೋಳಿಯ ಹೊರಮೇಲ್ಮೈ ಪೂರ್ತಿ ಕಪ್ಪು. ಅಚ್ಚರಿ ಅಂದ್ರೆ ಈ ಕೋಳಿಯ ರಕ್ತವೂ ಕಪ್ಪು. ಖಡಕ್ನಾಥ್ ಕೋಳಿಯನ್ನು ನಾಟಿಪದ್ಧತಿಯಲ್ಲಿ ಬೆಳೆಸಲಾಗಿದೆ. ಯಾವುದೇ ರೀತಿಯ ರಾಸಾಯನಿಕ, ಕೃತಕ ಆಹಾರವನ್ನು ನೀಡದೇ ಇರೋದ್ರಿಂದ ಇದು ಸಾವಯವ ಮಾಂಸದ ಕೋಳಿ ಎಂದೇ ಹೆಸರುಪಡೆದಿದೆ. ಖಡಕ್ನಾಥ್ ಕೋಳಿ ಮಾಂಸ ಕೆ.ಜಿ.ಯೊಂದಕ್ಕೆ 500 ರೂ ಇದೆ.

ಕೃಷಿಮೇಳಕ್ಕೆ ಉಚಿತ ಪ್ರವೇಶವಕಾಶವಿದ್ದು ಕೃಷಿಕರು ಮತ್ತು ಆಸಕ್ತರು ಇದರ ಸದುಪಯೋಗಪಡೆದುಕೊಳ್ಳಲು  ಬೆಂಗಳೂರು ಕೃಷಿವಿಶ್ವವಿದ್ಯಾಲಯದ ಅಧಿಕಾರಿಗಳು ಕೋರಿದರು. ಮೊದಲದಿನವೇ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿರುವುದು ಗಮನಾರ್ಹ. ಶಾಲಾಕಾಲೇಜು ವಿದ್ಯಾರ್ಥಿಗಳೂ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ಕೊಟ್ಟಿದ್ದರು.

Similar Posts

1 Comment

  1. mobile number 9880622268

Leave a Reply

Your email address will not be published. Required fields are marked *