ಬಹುಶಃ ಭಾರತದಲ್ಲಿ ನಡೆದಿರುವಷ್ಟು ಪಾರಮಾರ್ಥಿಕ, ಚಿಂತನೆಗಳು, ಇಲ್ಲಿ ಹೊಮ್ಮಿರುವಷ್ಟು ತತ್ವಾದರ್ಶಗಳು, ತತ್ವಪದಗಳು ಬೇರೆಡೆ ಕಾಣಸಿಗಲಿಕ್ಕಿಲ್ಲ. ಆದರೆ ಇವೆಲ್ಲವೂ ಇಲ್ಲಿಯೇ ಅನುಷ್ಠಾನಗೊಂಡಿದ್ದರೆ ಈ ಉಪಖಂಡದಷ್ಟು ಸುಂದರವಾದ ತಾಣ ವಿಶ್ವದ ಬೇರೊಂದು ಕಡೆ ಇರುತ್ತಿರಲಿಲ್ಲ. ಇಲ್ಲಿನ ವಾಸ್ತವಗಳೇ ಬೇರೆ ಇವೆ. ಇಲ್ಲಿ ಸತ್ತ ಮೇಲೂ ನೆಮ್ಮದಿಯಿಲ್ಲ.
ಜಾತಿಗೊಂದು, ಧರ್ಮಕ್ಕೊಂದು ಸ್ಮಶಾನ ಇಲ್ಲಿವೆ. ಸತ್ತಮೇಲೆಯೂ ಸಾಮಾಜಿಕ ಅಂತರಗಳನ್ನು ಕಾಪಾಡಲಾಗುತ್ತದೆ. ಇವೆಲ್ಲದರ ನಡುವೆ ದಲಿತ (ಎಲ್ಲ ಕೆಳಜಾತಿಗಳು ಸೇರಿ) ಸಮುದಾಯದ ವ್ಯಕ್ತಿಗಳು ಸತ್ತಾಗ ಅವರ ಅಂತ್ಯಕ್ರಿಯೆ ನೆರವೇರಿಸಲು ಹಲವೆಡೆ ಅವರಿಗೆ ಸ್ಮಶಾನಗಳಿಲ್ಲ. ಅವರ ಸಮುದಾಯದವರೇ ಯಾರಾದರೂ ದೊಡ್ಡಮನಸು ಮಾಡಿ ತಮ್ಮ ಜಮೀನುಗಳಲ್ಲಿ ಅಂತ್ಯಕ್ರಿಯೆ ಮಾಡಲು ಅವಕಾಶ ನೀಡಬೇಕು. ಇದು ಹೇಗೋ ದೊರಕುತ್ತದೆ ಎಂದುಕೊಂಡರೂ ಊರೊಟ್ಟಿನ ಮಂದಿ ಬಳಸುವ ಸಾಮಾನ್ಯ ರಸ್ತೆಯಲ್ಲಿ ಅಂತ್ಯಕ್ರಿಯೆ ಯಾತ್ರೆಗೆ ಅವಕಾಶ ನಿರಾಕರಿಸುವ ರೂಢಿ ಹಲವೆಡೆ ಇಂದಿಗೂ ಇದೆ.
ತಮಿಳು ಚಲನಚಿತ್ರ “ಮನುಸಂಗಡ” ಇದೇ ವಿಷಯವನ್ನು ನಮ್ಮ ಮುಂದೆ ಇಡುತ್ತದೆ. ಇದು ಕಾಲ್ಪನಿಕ ಚಿತ್ರಕಥೆಯಲ್ಲ. ನಡೆದ, ನಡೆಯುತ್ತಿರುವ ಘಟನಾವಳಿಗಳನ್ನು ಆಧರಿಸಿದ್ದು. ಆದ್ದರಿಂದಲೇ ಇದು ಸಂಪೂರ್ಣವಾಗಿ ಸಿನೆಮ್ಯಾಟಿಕ್ ಭಾಷೆಯಲ್ಲಿ ಇಲ್ಲ. ಇದನ್ನು ಡಾಕ್ಯುಮೆಂಟರಿ ಮಾದರಿಯಲ್ಲಿಯೂ ಹೇಳಲಾಗಿದೆ. ಆದ್ದರಿಂದಲೇ ಇದರ ಕ್ಯಾಮೆರಾ ಭಾಷೆಯೂ ವಿಭಿನ್ನವಾಗಿದೆ ಮತ್ತು ಅಷ್ಟೇ ಸಶಕ್ತವಾಗಿದೆ. ದಲಿತರ ನೋವನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡಲಾಗಿದೆ.
ಈ ಕಥನ ತಮಿಳುನಾಡಿನ ಹಳ್ಳಿಯೊಂದರಲ್ಲಿ ನಡೆಯುತ್ತದೆ. ಇದು ಇತರ ಯಾವುದೇ ರಾಜ್ಯದಲ್ಲಿಯೂ ನಡೆಯಬಹುದು. ಸ್ಥಳ ಇಲ್ಲಿ ನೆಪ ಅಷ್ಟೆ. ಚೆನ್ನೈ ಮಹಾನಗರದ ಕಾರ್ಖಾನೆಯೊಂದರಲ್ಲಿ ದುಡಿಯುವ ಯುವಕ ಕೊಲ್ಲಪ್ಪನ್. ಈತನ ತಂದೆ ಮರಣ ಹೊಂದಿದ ಸುದ್ದಿ ಬರುತ್ತದೆ. ಈತ ಗ್ರಾಮಕ್ಕೆ ಬರುತ್ತಾನೆ. ತಾಯಿಯ, ಸಂಬಂಧಿಕರ ದುಃಖ ಕಟ್ಟೆಯೊಡೆದಿರುತ್ತದೆ. ಅಂತ್ಯಕ್ರಿಯೆಗೆ ಸಿದ್ಧತೆಗಳು ನಡೆಯುವಾಗಲೇ ಊರೊಟ್ಟಿನ ರಸ್ತೆ (ಸಾಮಾನ್ಯ ರಸ್ತೆ)ಯಲ್ಲಿ ಶವ ತೆಗೆದುಕೊಂಡು ಹೋಗಲು ಮೇಲ್ಜಾತಿಯವರು ಬಿಡುವುದಿಲ್ಲ ಎಂಬ ವಿಷಯ ಚರ್ಚೆಯಾಗುತ್ತದೆ.
ಪೊಲೀಸ್ ಸ್ಟೇಷನ್, ಕಂದಾಯಾಧಿಕಾರಿ ಕಚೇರಿಗಳಿಗೆ ಅಲೆದರೂ ರಕ್ಷಣೆ ಭರವಸೆ ದೊರೆಯುವುದಿಲ್ಲ. ಹೈಕೋರ್ಟಿನಲ್ಲಿ ರಿಟ್ ಪಿಟಿಷನ್ ಹಾಕಲಾಗುತ್ತದೆ. ಆಗ ” ಸರ್ಕಾರಿ ವಕೀಲರು ಹೇಳುವುದು “ಗ್ರಾಮದ ಸಾಮಾನ್ಯ ರಸ್ತೆಯಲ್ಲಿ ದಲಿತ ಸಮುದಾಯದ ವ್ಯಕ್ತಿಯ ಶವ ತೆಗೆದುಕೊಂಡು ಹೋದರೆ ಕಾನೂನು ಸುವ್ಯವಸ್ಥೆ ಕೈಮೀರಿ ಹೋಗಬಹುದು” ಇದು ನ್ಯಾಯಾಧೀಶರಿಗೆ ಅಚ್ಚರಿ ಉಂಟು ಮಾಡುತ್ತದೆ. ಅರ್ಜಿದಾರ ಕೊಲ್ಲಪ್ಪನ್ ತಂದೆಯ ಅಂತ್ಯಕ್ರಿಯೆ ಯಾತ್ರೆಯನ್ನು ಸಾಮಾನ್ಯ ರಸ್ತೆಯಲ್ಲಿ ತೆಗೆದುಕೊಂಡು ಹೋಗಲು, ಅಂತ್ಯಕ್ರಿಯೆ ಯಾವುದೇ ಸಮಸ್ಯೆಗಳಿಲ್ಲದಂತೆ ನಡೆಯಲು ವ್ಯವಸ್ಥೆ ಮಾಡಬೇಕೆಂದು ಜಿಲ್ಲಾಡಳಿತ, ಪೊಲೀಸರಿಗೆ ಸೂಚಿಸುತ್ತದೆ.
ಪ್ರಾಯೋಗಿಕವಾಗಿ ಹೈಕೋರ್ಟ್ ಆದೇಶ ಪ್ರಹಶನದಂತೆ ಆಗಿಬಿಡುತ್ತದೆ. ಕಂದಾಯಾಧಿಕಾರಿ, ಪೊಲೀಸ್ ಉನ್ನತಾಧಿಕಾರಿಗಳು ಮೇಲ್ಜಾತಿಯ ವಕ್ತಾರರಾಗುತ್ತಾರೆ. “ಸಾಮಾನ್ಯ ರಸ್ತೆಯಲ್ಲಿ ಶವ ತೆಗೆದುಕೊಂಡು ಹೋಗುವುದು ಬೇಡ. ಪರ್ಯಾಯ ಮಾರ್ಗದಲ್ಲಿ ತೆಗದುಕೊಂಡು ಹೋಗಿ” ಎನ್ನುತ್ತಾರೆ. ಪರ್ಯಾಯ ಮಾರ್ಗವೇ ಇಲ್ಲ. ಕಲ್ಲು-ಮುಳ್ಳು-ಪೊದೆಗಳ ಹಾದಿ ಅದು. ಒಂದುವೇಳೆ ಪರ್ಯಾಯ ಹಾದಿಯಿದ್ದರೂ ಅದನ್ನು ಬಳಸುವ ಅನಿವಾರ್ಯತೆ ಏಕೆ ಎಂಬ ಪ್ರಶ್ನೆಯೂ ಎದುರಾಗುತ್ತದೆ. ಪೊಲೀಸರೇ ಬಲವಂತವಾಗಿ ಅಂತ್ಯಕ್ರಿಯೆ ನಡೆಸಲು ಮುಂದಾಗುತ್ತಾರೆ.
ಈ ಸಂದರ್ಭದಲ್ಲಿ ಕೊಲ್ಲಪ್ಪನ್ ಸಾಮಾನ್ಯ ಹಾದಿ ಶುರುವಾಗುವಲ್ಲಿ ಒಬ್ಬಂಟಿಯಾಗಿ ಬಂದು ನಿಂತು “ನಿಮ್ಮ ಮನೆಗಳ ಸತ್ತ ನಾಯಿ, ದನ ಸಾಮಾನ್ಯ ರಸ್ತೆಯಲ್ಲಿ ಹೋಗಬಹುದು, ನಮಗ್ಯಾಕೆ ಅವಕಾಶ ನಿರಾಕರಿಸುತ್ತೀರಿ. ನಿಮ್ಮಲ್ಲಿ ಸಾವು ಉಂಟಾದಾಗ ಹೂಳಲು, ಸುಡಲು ನಮ್ಮ ನೆರವು ಬೇಕು. ಆದರೆ ನಮ್ಮ ಶವವನ್ನು ಕೊಂಡೊಯ್ಯಲು ಏಕೆ ನಿರಾಕರಿಸುತ್ತೀರಿ ಎಂದು ಕೇಳುವುದು ಪರಿಣಾಮಕಾರಿ.
ಕೊಲ್ಲಪ್ಪನ್ ಗೆಳತಿ ಮಹಾನಗರದ ನಿವಾಸಿ. ಈಕೆಗೆ ಹಳ್ಳಿಯ ಬಗ್ಗೆ ರೋಮ್ಯಾಂಟಿಕ್ ಕಲ್ಪನೆಗಳಿವೆ. “ಇಲ್ಲಿ ಇಂಥ ಸಾಮಾಜಿಕ ವಾತಾವರಣ ಇರಬಹುದೆಂದು ನನಗೆ ಗೊತ್ತಿರಲಿಲ್ಲ” ಎನ್ನುತ್ತಾಳೆ. ಅದಕ್ಕೆ ಕೊಲ್ಲಪ್ಪನ್ ಕೊಡುವ ಉತ್ತರ “ಇಲ್ಲಿ ಎಲ್ಲ ಜಾತಿ-ಸಮುದಾಯಗಳವರು ಸಾಮರಸ್ಯದಿಂದ ಜೀವನ ನಡೆಸುತ್ತಾರೆ ಎಂದು ಭಾವಿಸಿದ್ದೆಯಾ” ಬಹುತೇಕ ಗ್ರಾಮಗಳಲ್ಲಿ ಎಲ್ಲ ಜಾತಿಗಳ ಸಾಮರಸ್ಯದ ಬದುಕು ಎಂಬುದೊಂದು ಇನ್ನೂ ರಮ್ಯ ಕಲ್ಪನೆ. ಸಾಮರಸ್ಯವೆಂದರೆ ಇಲ್ಲಿ ಮೇಲ್ಜಾತಿಗಳು ನಡೆಸಿಕೊಂಡು ಬಂದಂಥ ಆಚರಣೆಗಳನ್ನು ಪ್ರಶ್ನೆ ಮಾಡದಿರುವುದು, ತುಳಿಯುತ್ತಲೇ ಇರುವುದನ್ನು ಸಹಿಸಿಕೊಳ್ಳುವುದು.
ಆಸ್ಮೃಶ್ಯತೆ ಎನ್ನುವುದು ಹೇಗೆಲ್ಲ ಆಚರಣೆಯಲ್ಲಿದೆ ಎಂಬುದನ್ನು ನೇರವಾಗಿಯೇ ಹೇಳುವ “ಮನುಸಂಗಡ” ಒಂದು ಡಾಕ್ಯುಮೆಂಟರಿ ಹಂತದಲ್ಲಿಯೇ ನಿಂತು ಬಿಡಬಹುದಾಗಿತ್ತು. ಆದರೆ ನಿರ್ದೇಶಕ ಅಂಶನ್ ಕುಮಾರ್ ಪರಿಶ್ರಮ(ಚಿತ್ರಕಥೆಯೂ ಇವರದೇ) ಇದಕ್ಕೆ ಅವಕಾಶ ಮಾಡಿಕೊಟ್ಟಿಲ್ಲ. ಸಿನೆಮ್ಯಾಟಿಕ್ ಪರಿಭಾಷೆಗಳನ್ನೂ ಸಮರ್ಥವಾಗಿ ಬಳಸಿ ಕಥೆ ಹೇಳಲಾಗಿದೆ.
ಪಿ.ಎಸ್ ದರನ್ ಮಾಡಿರುವ ಸಿನೆಮಾಟೋಗ್ರಫಿ ವಿಭಿನ್ನವಾಗಿದೆ. ಈ ಥರದ ಕ್ಯಾಮೆರಾ ಪರಿಭಾಷೆ, ಭಾರತೀಯ ಸಿನೆಮಾಗಳ ಸಂದರ್ಭದಲ್ಲಿ ಬಹಳ ಅಪರೂಪ. ಸಾಕಷ್ಟು ಸನ್ನಿವೇಶಗಳಲ್ಲಿ ಹ್ಯಾಂಡಿ ಕ್ಯಾಮೆರಾ ಬಳಸಲಾಗಿದೆ. ಆದರೆ ಎಲ್ಲಿಯೂ ಕಥೆಯ ನಿರೂಪಣೆಗೆ ಕ್ಯಾಮೆರಾ ತೊಡಕಾಗದೇ ಮತ್ತಷ್ಟು ಪರಿಣಾಮಕಾರಿಯಾಗಿ ಹೇಳುವಲ್ಲಿ ಸಹಕಾರಿಯಾಗಿದೆ. ಸಿನೆಮಾಕ್ಕೆ ನೀಡಿರುವ ಹಿನ್ನೆಲೆ ಸಂಗೀತ ಕಥೆಯ ಸನ್ನಿವೇಶ, ಬೆಳವಣಿಗೆಯಲ್ಲಿ ಮಿಳಿತವಾಗಿದೆ. ಧನಶೇಖರ್ ನಿರ್ವಹಿಸಿರುವ ಸಂಕಲನ ಕಾರ್ಯ ಅತ್ಯುತ್ತಮ.
ಚಿತ್ರದಲ್ಲಿ ಇರುವ ಕಲಾವಿದರಾದ ರಾಜೀವ್ ಆನಂದ್, ಶೀಲಾ ರಾಜಕುಮಾರ್, ಮಣಿಮೇಘಲೈ, ವಿದುರ್ ರಾಜರಾಜನ್, ಆನಂದ್ ಸಂಪತ್, ಸೇತು ದರ್ವೀನ್, ಎ.ಎಸ್. ಶಶಿಕುಮಾರ್ ಅಭಿನಯ ಮನಮುಟ್ಟುತ್ತದೆ. ಗ್ರಾಮ ನಿವಾಸಿಗಳನ್ನು ಪಾತ್ರಧಾರಿಗಳಾಗಿರುವಂತೆ ಸಿನಿಮಾ ಸಂಯೋಜಿಸಿರುವುದು ವಿಶೇಷ.
ತಮಿಳುನಾಡಿನಲ್ಲಿ 2018ರ ಅಕ್ಟೋಬರ್ ನಲ್ಲಿ “ಮನುಸಂಗಡ” ತೆರೆಕಂಡಿದೆ. ಸಾಕಷ್ಟು ಅಂತರಾಷ್ಟ್ರೀಯ ಸಿನೆಮೋತ್ಸವಗಳಲ್ಲಿ ಪ್ರದರ್ಶಿತಗೊಂಡು ಪ್ರಶಸ್ತಿಗಳನ್ನೂ ಗಳಿಸಿದೆ. ಭಾರತೀಯ ಸಾಮಾಜಿಕ ಕಥನವನ್ನು ಬಹು ಪರಿಣಾಮಕಾರಿಯಾಗಿ ದೃಶ್ಯರೂಪದಲ್ಲಿ ಕಟ್ಟಿಕೊಟ್ಟಿರುವ ಈ ಸಿನೆಮಾ “ನೆಟ್ ಫ್ಲಿಕ್ಸ್ ನಲ್ಲಿಯೂ ಲಭ್ಯವಿದೆ.
ಪೊಲೀಸರು ಕೊಲ್ಲಪ್ಪನ್ ಮತ್ತವರ ಕುಟುಂಬದವರು, ಸಂಬಂಧಿಕರನ್ನು ಬಂಧಿಸಿ ಕರೆದೊಯ್ಯುತ್ತಾರೆ. ಇವರೆಲ್ಲ ಪೊಲೀಸ್ ವ್ಯಾನಿನಲ್ಲಿದ್ದೂ ಸಾಕಷ್ಟು ಪೊಲೀಸ್ ಸಿಬ್ಬಂದಿ ಇದ್ದರೂ ಹಳ್ಳಿಯ ಮೇಲ್ಞಾತಿಯವರು ದಾಳಿ ಮಾಡುತ್ತಾರೆ. ಕಲ್ಲುಗಳೂ ಸೇರಿದಂತೆ ಸಿಕ್ಕಸಿಕ್ಕ ವಸ್ತುಗಳನ್ನು ವ್ಯಾನಿನತ್ತ ತೂರುತ್ತಾರೆ, ನಿಂದಿಸುತ್ತಾರೆ. ಇವೆಲ್ಲವೂ ಇಲ್ಲಿ ಹಲವೊಮ್ಮೆ ಕಾನೂನು ಸುವ್ಯವಸ್ಥೆ ಎಂಬುದು ಅಣಕ ಎಂಬುದನ್ನು ಹೇಳುತ್ತದೆ.
ಭಾರತೀಯರಲ್ಲಿ ಅಂತ್ಯಕ್ರಿಯೆ ವಿಧಿವಿಧಾನಗಳನ್ನು ಸೂಕ್ತವಾಗಿ ನಡೆಸಬೇಕು ಎಂಬ ನಂಬಿಕೆಯಿದೆ. ಇದಕ್ಕೆ ಚ್ಯುತಿ ಬಂದರೆ ಆ ನೋವು ದೀರ್ಘಕಾಲ ಉಳಿಯುತ್ತದೆ. ಮಣ್ಣು ಮಾಡಿದ ನಂತರ ನಡೆಸುವ ವಿಧಿವಿಧಾನಗಳಿರುತ್ತವೆ. ಸತ್ತವರ ಸಮಾಧಿ ಮುಂದೆ ಅವುಗಳನ್ನು ನಡೆಸಲಾಗುತ್ತದೆ. ಆದರೆ ಸತ್ತವರ ಸಮಾಧಿ ಯಾವುದು, ಎಲ್ಲಿದೆ ಎಂದು ತಿಳಿಯದಿದ್ದರೆ …. ?