ಆಯಾ ಕಾಲಘಟ್ಟದ ಆಧುನಿಕತೆಗಳ ಸಂದರ್ಭದಲ್ಲಿ “ಪುಸ್ತಕ ಓದುವ ಹವ್ಯಾಸ ಕಡಿಮೆಯಾಗಿದೆ” ಎಂಬ ಉದ್ಗಾರಗಳು ಕೇಳಿಸುತ್ತಲೇ ಇವೆ. ಸಿನೆಮಾಗಳ ಸಂಖ್ಯೆ ಹೆಚ್ಚಾದಾಗ, ಟೆಲಿವಿಷನ್ ಎಲ್ಲರ ಮನೆಗಳ ಹಜಾರಗಳನ್ನು ಹೊಕ್ಕಾಗ, ಅದರಲ್ಲಿಯೂ ಅಂಗೈಗಳಲ್ಲಿ ಜಗದಗಲ ತೋರುವ ಮೊಬೈಲು, ಫೇಸ್ಬುಕ್, ವಾಟ್ಸಪ್ ಬಂದಾಗಲಂತೂ ಪುಸ್ತಕಲೋಕ ಏದುಸಿರು ಬಿಡುತ್ತಿದೆ ಎಂಬಂಥ ಮಾತುಗಳೂ ಹೆಚ್ಚಾಗಿ ಕೇಳಿವೆ. ನಿಜಕ್ಕೂ ಹೀಗೆ ಆಗಿದೆಯೇ; ಅಂಕಿಅಂಶ ನೋಡಿದಾಗ ಇಲ್ಲ ಎಂಬ ಉತ್ತರವೇ ದೊರೆಯುತ್ತದೆ. ಆದರೂ ಏಕಿಂಥ ಮಾತು; ಅದಕ್ಕೂ ಕಾರಣವಿದೆ.
ಕನ್ನಡ ಪುಸ್ತಕ ಲೋಕ ನೋಡಿದಾಗ ವರ್ಷಕ್ಕೆ 4 ರಿಂದ 6 ಸಾವಿರ ಪುಸ್ತಕಗಳು ಪ್ರಕಟವಾಗುತ್ತವೆ. ಅದೂ ವೈವಿಧ್ಯಮಯ ವಿಷಯಗಳಲ್ಲಿ. ಭಿನ್ನಭಿನ್ನ ವಿಷಯಗಳು, ಪುಸ್ತಕಗಳ ಓದುಗರೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ ಪ್ರಕಟವಾಗುವ ಎಲ್ಲ ಪುಸ್ತಕಗಳ ಮಾಹಿತಿ ದೊರೆಯುತ್ತಿಲ್ಲ. ಇದಕ್ಕೆ ಕಾರಣ ಪುಸ್ತಕ ಪ್ರಪಂಚದ ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡ ದಿನಪತ್ರಿಕೆಗಳು, ನಿಯತಕಾಲಿಕಗಳ ಸಂಖ್ಯೆ ಕಡಿಮೆ ಇರುವುದು. ಇಂಥ ಆಸಕ್ತಿ ಇರಿಸಿಕೊಂಡ ಪತ್ರಿಕೆಗಳು, ನಿಯತಕಾಲಿಕದಲ್ಲಿಯೂ ವಾರಕ್ಕೊಮ್ಮೆ ಒಂದು ಪುಸ್ತಕ ಪರಿಚಯ/ವಿಮರ್ಶೆ ಪ್ರಕಟವಾದರೆ ಹೆಚ್ಚು ಎನ್ನುವಂಥ ಸ್ಥಿತಿ ನಿರ್ಮಾಣವಾಗಿದೆ.
ಇವೆಲ್ಲದರಿಂದಾಗಿ ಲೇಖಕ – ಪ್ರಕಾಶಕ-ಮಾರಾಟಗಾರ – ಓದುಗರ ನಡುವೆ ಸಂವಹನದ, ಸಮಾನ ವೇದಿಕೆಯ ಕೊರತೆ ಇದೆ. ಇದರಿಂದ ಆಗುತ್ತಿರುವ ನಷ್ಟ ಅಪಾರ. ಇದು ಕೇವಲ ಹಣಕಾಸಿನ ನಷ್ಟ ಮಾತ್ರವಲ್ಲ. ಬೌದ್ಧಿಕ ತಿಳಿವಳಿಕೆ ಪಸರಿಸುವಿಕೆ ಕೊರತೆಯಿಂದ ಆಗುತ್ತಿರುವ ನಷ್ಟವೇ ಅತ್ಯಧಿಕ. ಏಕೆ ಹೀಗೆ ಎಂದು ಆಲೋಚಿಸಿದವರು ಇರಬಹುದು. ಆದರೆ ಸಮಸ್ಯೆ ನಿವಾರಣೆಗೆ ಸೃಜನಶೀಲ ಮಾದರಿಯಲ್ಲಿ ದೊಡ್ಡದೊಂದು ಯತ್ನ ಆಗಿರಲಿಲ್ಲ. ಇಂಥ ಸಂದರ್ಭದಲ್ಲಿ ಈ ಎಲ್ಲ ಕೊರತೆ/ ಸಮಸ್ಯೆ ನಿವಾರಣೆಗೆ ಪರಿಕಲ್ಪನೆ ಆವತರಿಸಿದೆ. ಅದೇ “ಬುಕ್ ಬ್ರಹ್ಮ”


ಕಳೆದ ಒಂದೂವರೆ ವರ್ಷದ ಹಿಂದೆಯೇ ಕುಡಿಯೊಡೆದ ಈ ಪರಿಕಲ್ಪನೆ, ತೆರೆಮರೆಯಲ್ಲಿಯೇ ಸಾಕಷ್ಟು ಕೆಲಸಗಳನ್ನು ಮಾಡಿದೆ. ಅದೂ ಗಮನಾರ್ಹ ರೀತಿಯಲ್ಲಿ ಎಂಬುದು ಬಹುಮುಖ್ಯ. ಸದ್ಯ ಡಿಜಿಟಲ್ ರೂಪದಲ್ಲಿ ಇರುವ ಬುಕ್ ಬ್ರಹ್ಮ; ತನ್ನೊಳಗೆ 5 ಸಾವಿರಕ್ಕೂ ಹೆಚ್ಚು ಪುಸ್ತಕಗಳು, 2 ಸಾವಿರಕ್ಕೂ ಹೆಚ್ಚು ಕನ್ನಡ ಲೇಖಕರ ಮಾಹಿತಿಯನ್ನು ಹುದುಗಿಸಿಕೊಂಡಿದೆ. ಈ ಸಂಖ್ಯೆ ಬೆಳೆಯುತ್ತಲೇ ಹೋಗುತ್ತದೆ. ಇದಕ್ಕೆ ಆಕಾಶವೇ ಪರಿಮಿತಿ ! ಇಲ್ಲಿ ಎಲ್ಲ ಪ್ರಕಾರಗಳ ಕನ್ನಡ ಸಾಹಿತ್ಯವೂ ಲಭ್ಯವಿದೆ ಮತ್ತು ಲಭ್ಯವಿರುತ್ತದೆ.
“ಬುಕ್ ಬ್ರಹ್ಮ” ಕನ್ನಡದ ಕೈಂಕರ್ಯ. ಇದರ ಮೂಲಕವೂ ಭಾಷೆಯ ಸೊಗಸು, ಸೊಗಡು, ಸೌಂದರ್ಯ, ಭಾರತ ಉಪಖಂಡದಲ್ಲೆಡೆ ಇರುವ ಕನ್ನಡಿಗರನ್ನು, ಸಮುದ್ರದಾಚೆಯ ನೆಲೆಗಳಲ್ಲಿ ಚೆದುರಿಹೋದ ಕನ್ನಡಿಗರನ್ನು ತಲುಪುತ್ತದೆ. ಕನ್ನಡದ ಯಾವುದೇ ಪ್ರಕಾರದ; ಯಾವುದೇ ಪುಸ್ತಕ; ಯಾವುದೇ ಆಯಾಮದಲ್ಲಿ ಅಂದರೆ ಮುದ್ರಣ, ಇ ರೂಪದಲ್ಲಿ ಪ್ರಕಟಗೊಂಡ ಕೂಡಲೇ ಅದರ ಪರಿಚಯ, ಖರೀದಿಯ ವಿಧಾನಗಳೆಲ್ಲವನ್ನೂ ತಿಳಿಸಲಾಗುತ್ತದೆ. ಇದರ ಮೂಲಕ ಕನ್ನಡ ಪುಸ್ತಕ ಲೋಕಕ್ಕೊಂದು ಹೊಸ ಆಯಾಮ, ವಿಸ್ತಾರ ಮಾರುಕಟ್ಟೆ ಲಭ್ಯವಾಗುತ್ತದೆ.
ಇಂಥದೊಂದು ಅಪರೂಪದ ಪರಿಕಲ್ಪನೆಯ ಚುಕ್ಕಾಣಿಯನ್ನು ಕನ್ನಡದ ಹಿರಿಯ ಪತ್ರಕರ್ತರುಗಳಾದ ಸತೀಶ್ ಚಪ್ಪರಿಕೆ, ದೇವು ಪತ್ತಾರ ಹಿಡಿದಿದ್ದಾರೆ. ಕನ್ನಡ ಸಾಹಿತ್ಯದ ಆಳ, ಹರವುಗಳ ಪರಿಚಯವಿರುವ ಇವರಿಬ್ಬರು “ಬುಕ್ ಬ್ರಹ್ಮ” ನೌಕೆಯನ್ನು ಸರಾಗವಾಗಿ ನಡೆಸಿಕೊಂಡು ಹೋಗಬಲ್ಲ ಬೌದ್ಧಿಕ ಸಾಮರ್ಥ್ಯ ಇರುವವರು. ಇವರೊಂದಿಗೆ ದೊಡ್ಡದೊಂದು ಪಡೆಯೇ ಅವಿರತ ದುಡಿಯುತ್ತಿದೆ. ಇವರ ಕಾರ್ಯಕ್ಕೆ “ವರ್ಬಿಂಡನ್ ಕಮ್ಯೂನಿಕೇಶನ್” ಸಂಸ್ಥೆ ಬೆಂಬಲವಾಗಿ ನಿಂತಿದೆ.
“ವಾರ್ಷಿಕ ಸರಿಸುಮಾರು ಆರು ಸಾವಿರಕ್ಕೂ ಹೆಚ್ಚು ಪುಸ್ತಕಗಳು ಪ್ರಕಟಗೊಳ್ಳುವ ಕನ್ನಡ ಪುಸ್ತಕ ಪ್ರಪಂಚ, ಸಂಘಟಿತ ಉದ್ಯಮವಾಗಿ ಇನ್ನೂ ನೆಲೆಗಂಡಿಲ್ಲ. ಇದರಿಂದಾಗಿಯೇ ಸಾಕಷ್ಟು ಸಂದರ್ಭಗಳಲ್ಲಿ ಆರ್ಥಿಕ ನಷ್ಟವೂ ಉಂಟಾಗುತ್ತಿದೆ. ಇಂಥ ಹೊರೆಯನ್ನು ನಿವಾರಿಸುವ, ಕನ್ನಡದ ಓದುಗರನ್ನು ಬೆಳೆಸುತ್ತಾ ಹೋಗುವ ಸಾಂಸ್ಕೃತಿಕ ಜವಾಬ್ದಾರಿಯನ್ನು ನಿಭಾಯಿಸುವ, ನಿರ್ವಹಿಸುವ ಹೊಣೆಯನ್ನು ಬುಕ್ ಬ್ರಹ್ಮ ಹೊಂದಿದೆ” ಎಂದು ಇವರಿಬ್ಬರೂ ಹೇಳುತ್ತಾರೆ. ಇವರಲ್ಲಿ ಇದೆಲ್ಲ ಸಾಧ್ಯತೆಗಳನ್ನು ಸಾಕಾರಗೊಳಿಸುವ ನಿಟ್ಟಿನ ಯೋಜನೆಗಳಿವೆ.
“ಬುಕ್ ಬ್ರಹ್ಮ” ಕನ್ನಡದ ಕಾರ್ಯವನ್ನು ಅಕ್ಷರಗಳಿಗಷ್ಟೇ ಸೀಮಿತಗೊಳ್ಳಿಸಿಕೊಂಡಿಲ್ಲ ಎಂಬುದು ಗಮನಾರ್ಹ ಸಂಗತಿ. ಏಕಕಾಲದಲ್ಲಿಯೇ ಅಂತರ್ಜಾಲ ಒದಗಿಸುವ ಸಾಧ್ಯತೆಗಳೆಲ್ಲವನ್ನೂ ಸಮರ್ಥವಾಗಿ ದುಡಿಸಿಕೊಳ್ಳುವ ಇರಾದೆ ಸತೀಶ್, ಪತ್ತಾರ ಇಬ್ಬರಿಗೂ ಇದೆ. ಆದ್ದರಿಂದ ಇಲ್ಲಿ ಆಡಿಯೋ, ವಿಡಿಯೋ ಸ್ವರೂಪದ ಕೃತಿ ಅವತರಣಿಕೆಗಳು, ಸಂದರ್ಶನಗಳೂ ಇರುತ್ತವೆ. ಕನ್ನಡದ ಬೇರೆಬೇರೆ ಪ್ರಕಾರಗಳ ಸಾಂಸ್ಕೃತಿಕ ಲೋಕವೂ ಇಲ್ಲಿ ಅನಾವರಣಗೊಂಡು ನಿತ್ಯವೂ ಅನುರಣಗೊಳ್ಳುತ್ತದೆ. ಇದೇ ಆಗಸ್ಟ್ 15ರಂದು “ಬುಕ್ ಬ್ರಹ್ಮ”(https://bookbrahma.com   ) ಲೋಕಾರ್ಪಣೆಗೊಳಲಿದೆ. ಅದನ್ನು ನಮ್ಮೆಲ್ಲರ ಚಿತ್ತಭಿತ್ತಿಯೊಳಗೆ ಬರಮಾಡಿಕೊಳ್ಳಬೇಕಾಗಿದೆ.

Similar Posts

Leave a Reply

Your email address will not be published. Required fields are marked *