ದೇವದಾಸಿ ಪದ್ಧತಿಯನ್ನೇ ಪರಂಪರೆಯಿಂದ ಆಚರಿಸಿಕೊಂಡು ಬಂದ ಮನೆತನ. ಸಿಂಬಳದಲ್ಲಿ ಸಿಕ್ಕಿಬಿದ್ದ ನೊಣ ಅದು ಮೃತ್ಯುಪಾಶ ಎಂದರಿಯದೇ ಅದೇ ತನ್ನ ಸ್ವರ್ಗ ಎಂದು ಭಾವಿಸುವ ಹಾಗೆ ವೇಶ್ಯಾಕೂಪದಿಂದ ಹೊರಬರಲು ಯತ್ನಿಸುವ ಮನಸ್ಥಿತಿಯನ್ನೇ ಕಳೆದುಕೊಂಡವರು. ಇಂಥ ಕುಟುಂಬದ ಸುಂದರ ಯುವತಿಗೆ ಪದವೀಧರೆಯಾಗಬೇಕು, ತಾನು ಈ ಬಲೆಯಿಂದ ಹೊರಬರಬೇಕು ಎಂಬ ಹಠ. ಈಕೆಯ ಪ್ರಯತ್ನ ಏನಾಗುತ್ತದೆ ಎಂಬುದನ್ನು ನಿರ್ದೇಶಕ ಎನ್. ಲಕ್ಷ್ಮೀನಾರಾಯಣ್ “ಮುಕ್ತಿ” ಸಿನೆಮಾ ಮೂಲಕ ತೆರೆಕಾಣಿಸಿರುವ ರೀತಿ ಅನನ್ಯ.
ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಪ್ರಮುಖ ನಿರ್ದೇಶಕರ ಸಿನೆಮಾಗಳನ್ನು ವಿಮರ್ಶಿಸಿ – ವಿಶ್ಲೇಷಿಸುವ ಸರಣಿಯಲ್ಲಿ “ಮುಕ್ತಿ” ನಾಲ್ಕನೇಯದು. ಈ ಹಿಂದಿನ ಮೂರು ಸಿನೆಮಾಗಳಾದ ನಾಂದಿ, ಉಯ್ಯಾಲೆ ಮತ್ತು ಮುಯ್ಯಿ ಕೂಡ ಇದೇ ನಿರ್ದೇಶಕರದ್ದಾಗಿವೆ. ಕನ್ನಡ ಚಿತ್ರರಂಗದ ಮೈಲಿಗಲ್ಲುಗಳೆನ್ನಿಸುವ ಚಿತ್ರಗಳ ಸಾಲಿನಲ್ಲಿ ಇವು ನಿಂತಿವೆ.
“ಮುಕ್ತಿ: ಯಂಥ ಕಥೆಯನ್ನು ಸೆಲ್ಯುಲಾಯ್ಡ್ ಗೆ ಅಳವಡಿಸುವಾಗ ನಿರ್ದೇಶಕರ ಮುಂದೆ ಬಹಳ ಸವಾಲುಗಳಿರುತ್ತವೆ. ಏಕೆಂದರೆ ಇಂಥವು ಎರಡು ಅಲುಗಿನ ಕತ್ತಿ ಇದ್ದ ಹಾಗೆ. ಒಂದು; ಈ ದುರಂತಪಾತ್ರಗಳ ಅಸಹಾಯಕತೆಯನ್ನೇ ಬಳಸಿಕೊಂಡು ಅಶ್ಲೀಲವಾಗಿ ಚಿತ್ರಿಸುವುದು. ಇದರ ಮೂಲಕ ಇಂಥ ಪಾಪಕೃತ್ಯಗಳು ಮತ್ತಷ್ಟೂ ಬೆಳೆಯಲು ಕಾಣಿಕೆ ನೀಡುವುದು; ಎರಡನೇಯದು ಮಡುಗಟ್ಟಿದ ಸಮಾಜದ ಸಾಂಪ್ರದಾಯಿಕ ನಡವಳಿ ಪ್ರಶ್ನಿಸುವುದು; ಕತ್ತಲಿನೆಡೆಗೆ ಬೆಳಕು ಚೆಲ್ಲಲ್ಲು ಯತ್ನಿಸುವುದು.
ನಿರ್ದೇಶಕ ಎನ್. ಲಕ್ಷ್ಮೀನಾರಾಯಣ್ ಎರಡನೇಯ ಮಾದರಿ ಆಯ್ಕೆ ಮಾಡಿದ್ದಾರೆ. ಆದ್ದರಿಂದಲೇ ಪ್ರೊ. ವಿ.ಎಂ. ಇನಾಂದಾರ್ ಅವರ “ ಮುಕ್ತಿ” ಕಾದಂಬರಿ ಸಶಕ್ತ ಸಿನೆಮಾವಾಗಿ ಮೂಡಿ ಬಂದಿದೆ. ಕಥೆಯನ್ನು ಹೇಳಲು “ಬಹು ವಿವರ” ಮಾದರಿ” ಆಯ್ಕೆ ಮಾಡಿಕೊಳ್ಳಲಾಗಿದೆ. ವಾಸ್ತವತೆಯನ್ನೇ ಪ್ರತಿಬಿಂಬಿಸಲಾಗಿದೆ. ಆದ್ದರಿಂದ ಇಲ್ಲಿ ನಾಟಕೀಯ ಎನಿಸುವಂಥದ್ದು ಇಲ್ಲ.
ಯಾವ ತಪ್ಪನ್ನೂ ಮಾಡದಿದ್ದವರು “ಬದುಕಿನ ಕ್ರೌರ್ಯಕ್ಕೆ ಸಿಲುಕುವ” ಪರಿಯನ್ನು ಇಲ್ಲಿ ತರಲಾಗಿದೆ. ಸರೋಜಿನಿಯದು ಇಂಥ ದುರಂತ ಬದುಕು. ಈಕೆಗೆ ಓದಬೇಕು. ಮನೆತನದ ದೇವದಾಸಿ ವೃತ್ತಿಯನ್ನು ಮುಂದುವರಿಸಿಕೊಂಡು ಹೋಗಬಾರದು, ಓದಿ ದಡ ಸೇರಬೇಕು. ಕೆಲಸಕ್ಕೆ ಸೇರಿ ಮನೆತನದ “ಭೂತ”ದಿಂದ ಮುಕ್ತಿ ಪಡೆಯಬೇಕು ಎಂಬ ಹಂಬಲ.
ಮಗಳದು ಈ ದಿಕ್ಕಿನ ಯೋಚನೆಯಾದರೆ ತಾಯಿ ರಂಗಸಾನಿಯದು ಸುಂದರಿಯೂ ಆಗಿರುವ ಮಗಳನ್ನು ತನ್ನ ವೃತ್ತಿಪರಂಪರೆಯಲ್ಲಿಯೇ ತೊಡಗಿಸಿದರೆ ಆರ್ಥಿಕವಾಗಿ ನೆಮ್ಮದಿಯಾಗಿರಬಹುದು ಎಂಬ ದುರಾಲೋಚನೆ. ಕಾಲೇಜಿಗೆ ಓದಲು ಕಳಿಸಿದರೆ ಅವಳು ತನ್ನ ಹಿಡಿತದಿಂದ ಪಾರಾಗಬಹುದೆಂಬ ಆತಂಕದಿಂದ ಹೇಳುವ ಮಾತುಗಳು;
“ನೀನು ಕಾಲೇಜಿಗೆ ಹೋಗಿ ಕೆಲ್ಸಕ್ಕೆ ಸೇರ್ಕೋಬೇಕೇನು ? ಏನೂ ಬೇಡ; ಸುಮ್ನಿರು
ಶ್ರದ್ಧೆಯಿಂದ ನಾಟ್ಯಭ್ಯಾಸ ಮಾಡು,
“ಚೆನ್ನಾಗಿ ಡ್ಯಾನ್ಸ್ ಕಲಿತು ನಾಲ್ಕು ಜನರ ಮನಸು ಸಂತೋಷ ಪಡಿಸಿದರೆ ಸಾಲದೇ”
ಬಿರುಸಿನ ಮಾತುಕತೆಗಳು ನಡೆಯುತ್ತಿರುವಾಗಲೇ ರಂಗಸಾನಿ ರಪ್ಪನೆ ಕಿಟಕಿ ಪರದೆ ಇಳಿಬಿಟ್ಟು ಬೆಳಕು ಬರುವುದನ್ನು ತಡೆಯುತ್ತಾಳೆ. ಬೆಳಕಿನತ್ತ ಹೋಗಲಾಗಲಿ ಅಥವಾ ಬರಮಾಡಿಕೊಳ್ಳುವ ಮನೋಭಾವವಾಗಲಿ ಆಕೆಯಲ್ಲಿ ಇಲ್ಲ ಎನ್ನುವುದನ್ನು ಇದು ಸಮರ್ಥವಾಗಿ ಚಿತ್ರಿಸುತ್ತದೆ.
ತಾಯಿ – ಮಗಳ ಬಿರುಸಿನ ಸಂಭಾಷಣೆ ನಡೆಯುವುದು ಪಂಜರದಲ್ಲಿರುವ ಪಕ್ಷಿಗಳ ಮುಂದೆ “ ಆದರೆ ಇವರಿಬ್ಬರೂ ಬಂಧನದಲ್ಲಿರುವ ಆ ಪಕ್ಷಿಗಳಿಗಿಂತ ವಿಭಿನ್ನವಲ್ಲ. ಸ್ವಾತಂತ್ರ್ಯವೇ ಇಲ್ಲದಿರುವವರು, ತಮ್ಮ ಬದುಕಿನ ಆಯ್ಕೆಯ ಅವಕಾಶವನ್ನು ಅನ್ಯರು ಮತ್ತೊಬ್ಬರು ಎನ್ನುವ ಲವಲೇಶದ ಚಿಂತನೆಯೂ ಇಲ್ಲದ ರಂಗಸಾನಿ ಪಕ್ಷಿಗಳಿಗೆ ಕಾಳು ಹಾಕುತ್ತಿರುತ್ತಾಳೆ.
ಅತ್ತ ಶ್ರೀಮಂತ ಮಾಧವನದು ಮತ್ತೊಂದು ಚಿಂತೆ “ ಅಪ್ಪ ಬ್ಯಾಂಕ್ ಕೃಷ್ಣರಾಯರ ಭೂತ” ದಿಂದ ಬಿಡಿಸಿಕೊಳ್ಳಬೇಕೆನ್ನುವ ಹಠ. ಈತನ ತಂದೆಯ ವ್ಯಕ್ತಿತ್ವಕ್ಕೆ ಕರಿಛಾಯೆ – ಬಿಳಿಛಾಯೆಗಳೆರಡೂ ಇವೆ. ಆದರೆ ಕರಿಯಲ್ಲದನ್ನೂ ಕರಿಯದು ಎಂದು ಗ್ರಹಿಸುವವರು ಅದನ್ನು ದೊಡ್ಡದು ಮಾಡಿದ್ದರಿಂದಲೇ ಅಪ್ಪನೆಡೆಗೆ ಈತನದು ನಕಾರಾತ್ಕಕ ಮನೋಭಾವ. ಆದರೆ ಈತ ಎಲ್ಲಿ ಹೋದರೂ “ಅಪ್ಪನ ಭೂತ”ದಿಂದ ಬಿಡಿಸಿಕೊಳ್ಳಲು ಆಗುವುದಿಲ್ಲ” ಇಲ್ಲಿಯೂ ಕೂಡ “ ಬದುಕು ಜಟಕಾ ಬಂಡಿ; ವಿಧಿ ಅದೆ ಸಾಹೇಬ” ಎಂಬ ರೂಪಕವನ್ನು ಸಮರ್ಥವಾಗಿ ದುಡಿಸಿಕೊಳ್ಳಲಾಗಿದೆ.
ಬದುಕು ಒಂದೇ ವೃತ್ತದ ಪರಿಧಿಯಲ್ಲಿಯೇ ಸುತ್ತುತ್ತಿರುತ್ತದೆ. ದೂರ ಹೋಗುತ್ತೇವೆ ಎನ್ನುವುದು “ ಭೂತ” ದಿಂದ ಬಿಡಿಸಿಕೊಳ್ಳುತ್ತೇವೆ ಎನ್ನುವುದು ಕೂಡ ಭ್ರಮೆ. ಮತ್ತೆಮತ್ತೆ ನಮಗೆ ಹೇಗೋ ಏನೋ ನಂಟಿರುವವರನ್ನು ಸಂಧಿಸುತ್ತಲೇ ಇರುತ್ತವೆ. ಇದರಿಂದ ಒಳಿತೂ ಆಗಬಹುದು ಅಥವಾ ಕೆಡಕು ಆಗಬಹುದು ಎನ್ನುವುದನ್ನೂ ಕಥೆ ಶಕ್ತಿಶಾಲಿಯಾಗಿ ಹೇಳುತ್ತದೆ.
ಕಾಲೇಜಿನಲ್ಲಿ ಸರೋಜಿನಿ – ಮಾಧವವರ ನಡುವೆ ಪ್ರೇಮ ಮೊಳೆಯುತ್ತದೆ. ಅದರಿತ್ತ ರಂಗಸಾನಿಯ ಕಾಯಿಲೆಯೂ ಉಲ್ಬಣಿಸುತ್ತದೆ. ಸರೋಜಿನಿ ಮೇಲೆ ಕಣ್ಣಿಟ್ಟುಕೊಂಡೇ ಈ ಕುಟುಂಬಕ್ಕೆ ಸಹಾಯ ಮಾಡುವ ಗೋವಿಂದಗೌಡನ ಮೂಲಕ ಈಕೆ ಆಸ್ಪತ್ರೆಗೂ ಸೇರುತ್ತಾಳೆ. ಅಲ್ಲಿ ಬರುವ ಫಲಿತಾಂಶ ಭೀಕರವಾಗಿರುತ್ತದೆ. ಈಕೆಗೆ ಸರೋಜಿನಿಯನ್ನು ನೀಡಿದ ಆಗಂತುಕ ವಾಸಿಯಾಗಲಾರದ ಗುಹ್ಯರೋಗವನ್ನೂ ನೀಡಿ ನಿರ್ಗಮಿಸಿರುತ್ತಾನೆ. ತಾಯಿಯಿಂದಾಗಿ ಮಗುವಿಗೂ ಸೋಂಕು ಹರಡಿ, ಬೆಳೆದಿರುತ್ತದೆ. ಇವರ ಜೊತೆ ಲೈಂಗಿಕ ಸಂಪರ್ಕ ಬೆಳೆಸುವವರಿಗೂ ಇದು ಬಳುವಳಿಯಾಗುತ್ತದೆ ಎಂಬುದು ವೈದ್ಯರ ಆತಂಕ
ಪಾತ್ರಗಳ ಮೇಲೆ ದಿಗ್ಬ್ರಮೆಗಳ ಮೇಲೆ ದಿಗ್ಬ್ರಮೆಗಳು ಎರಗುತ್ತಲೇ ಹೋಗುತ್ತವೆ. ಬಹುಕಾಲ ತನ್ನಪ್ಪನ ಪ್ರೇಯಸಿಯಾಗಿದ್ದ ರಂಗಸಾನಿಯ ಮಗಳೇ ಸರೋಜ. ಅಂದಮೇಲೆ ಈಕೆ ತನ್ನ ತಂಗಿ ಎಂದು ತಿಳಿಯುವ ಮಾಧವನಿಗಾಗುವ ಶಾಕ್. ಆದರೆ ರಂಗಸಾನಿ ಹೇಳುವುದು ಮತ್ತೊಂದು. ಇವರಿಬ್ಬರನ್ನೂ ಮತ್ತೊಂದು ಶಾಕಿಗೆ ದೂಡಿ ಮೃತಳಾಗುತ್ತಾಳೆ. ಸರೋಜಿನಿಗೆ ಮತ್ತೊಂದು ಕೊರಗು ಅಂಟಿಕೊಳ್ಳುತ್ತದೆ.
ತನ್ನ ಭೂತದಿಂದ ಮುಕ್ತಿಯನ್ನು ಪಡೆಯಬೇಕೆಂದು ಸರೋಜಿನಿ ಹಂಬಲಿಸುತ್ತಾಳೆ; ತನ್ನ ಭೂತದಿಂದ ತನಗೆಂದೂ ಮುಕ್ತಿಯಿಲ್ಲ ಎಂದರಿಯುವ ಮಾಧವ ನಿರ್ಗಮಿಸುತ್ತಾನೆ. ಆತ ಕುಳಿತ ಜಟಕಾಬಂಡಿ ಮರೆಯಾಗುವವ ತನಕ ಸರೋಜಿನಿ ನೋಡುತ್ತಾ ನಿಲ್ಲುತ್ತಾಳೆ. ಕೊನೆಯ ದೃಶ್ಯ ಇಡೀ ಸಿನೆಮಾದ ಸೂತ್ರಧಾರ.
“ಮುಕ್ತಿ”ಯನ್ನು ಸಿನೆಮಾ ಮಾಡುವಾಗ ನಿರ್ದೇಶಕ ಎನ್. ಲಕ್ಷ್ಮೀನಾರಾಯಣ್ ಆಯ್ಕೆ ಮಾಡುವ ನಿರೂಪಣಾ ತಂತ್ರ ಮಂದಗತಿಯನ್ನು ನೀಡಿದೆ. ಆದರೆ ಇದು ನೋಡುಗರಲ್ಲಿ ಬೇಸರ – ಏಕತಾನತೆ ಮೂಡಿಸದೇ ನೋಡಿಸಿಕೊಂಡು ಹೋಗುವುದು ಗಮನಾರ್ಹ. ರೂಪಕ – ಸಂಕೇತಗಳನ್ನು ಕೂಡ ಬಹಳ ಸಮರ್ಥವಾಗಿ ಬಳಸಿಕೊಳ್ಳಲಾಗಿದೆ. ಇದರಿಂದಲೇ ಸಿನೆಮಾ ತೀರಾ ವಾಚ್ಯ ಎಂಬ ಹಣೆಪಟ್ಟಿಯಿಂದ ಪಾರಾಗಿದೆ.
ಲಕ್ಷ್ಮೀನಾರಾಯಣ್ ಅವರು ರೂಪಕಗಳನ್ನು ಬಳಸಿಕೊಳ್ಳುವ ಪರಿ ‘ಮುಕ್ತಿಗೆ ವಿಶಿಷ್ಟ ಲಯ ನೀಡಿದೆ. ತೂಗುಯ್ಯಾಲೆಯಲ್ಲಿ ರಂಗಸಾನಿ ಕುಳಿತಿದ್ದಾಳೆ. ಎಣ್ಣೆಗಾಣದೇ ಕಿಲುಬುಗಟ್ಟಿದ ಉಯ್ಯಾಲೆ ಜೋರಾಗಿ ಕಿರುಗುಟ್ಟುತ್ತಿದೆ. ಸೇವಕಿ ತಂದಿಟ್ಟ ಹರಿವಾಣದಲ್ಲಿರುವ ಎಲೆಗೆ ಸುಣ್ಣವನ್ನು ಸವರಿಕೊಂಡು ಬಾಯಿಗಿಟ್ಟುಕೊಳ್ಳುತ್ತಾಳೆ. ಇವೆಲ್ಲ ಆಕೆಯ ಜಡ್ಡುಗಟ್ಟಿದ ಮನಸ್ಥಿತಿ – ರಸಿಕ – ಅತೀ ಲಾಲಾಸೆಗಳ ಸಂಕೇತವಾಗಿಯೂ ಬಂದಿದೆ.
ಆರಂಭದ ಟೈಟಲ್ ಕಾರ್ಡ್ ಸಂದರ್ಭದಲ್ಲಿ ಹಿನ್ನೆಲೆಯಾಗಿ ವಿಷಾದಛಾಯೆಯ ಶಹನಾಯಿ ನಾದನವಿದೆ. ಇದು ಪ್ರೇಕ್ಷಕರ ಮನಸನ್ನು “ ಮುಕ್ತಿಯಲ್ಲದ ಮುಕ್ತಿ” ನೋಡಲು ಹದಗೊಳಿಸುತ್ತದೆ. ವಿಜಯಭಾಸ್ಕರ್ ನೀಡಿರುವ ಸಂಗೀತ ಆಯಾ ದೃಶ್ಯಗಳ ಗಾಢತೆಯನ್ನು ಹೆಚ್ಚಿಸಿದೆ. ಎಂ. ಗೋಪಾಲಕೃಷ್ಣ ಅಡಿಗ, ಜಿ.ಎಸ್. ಶಿವರುದ್ರಪ್ಪ ಮತ್ತು ಎಂ. ನರೇಂದ್ರಬಾಬು ಅವರು ರಚಿಸಿದ ಗೀತ ಸಾಹಿತ್ಯವನ್ನು ಆಯಾ ಸಂದರ್ಭಕ್ಕೆ ತಕ್ಕಂತೆ ಸೂಕ್ತವಾಗಿ ಬಳಸಿಕೊಂಡಿದ್ದಾರೆ.
ವಿ. ಮನೋಹರ್, ಮೀನಾಕ್ಷಿ ಸುಂದರ್ ಅವರುಗಳು “ಮುಕ್ತಿ:ಕಥೆಯನ್ನು ಸಂಪೂರ್ಣ ಅರ್ಥ ಮಾಡಿಕೊಂಡು ಛಾಯಾಗ್ರಹಣ ಮಾಡಿದ್ದಾರೆ. ಕಥೆಯ ಓಟದ ಲಯ, ಅದರ ಪ್ರತಿಮೆಗಳಿಗೆ ಭಂಗ ಬಾರದಂತೆ ನೋಡಿಕೊಂಡಿದ್ದಾರೆ. ಪಿ. ಭಕ್ತವತ್ಸಲಂ ಕೂಡ ನಿರ್ದೇಶಕರು ಹಾಕಿಕೊಟ್ಟ ಸಂಕಲನದ ಚೌಕಟ್ಟನ್ನು ಮೀರಿಲ್ಲ. ಇವರ ಕತ್ತರಿಗೆ ಹೆಚ್ಚು ಅವಕಾಶವಾಗಿಲ್ಲ. ಬಹುಶಃ ಲಕ್ಷ್ಮೀನಾರಾಯಣ್ ಅವರು “ ಬಹು ವಿವರ ವಾಸ್ತವವಾದಿ” ಕಥನ ತಂತ್ರದ ಜೊತೆ ಕಿಂಚಿತ್ತು ರಾಜಿ ಮಾಡಿಕೊಂಡಿದ್ದರೂ ಸಾಕಷ್ಟು ದೃಶ್ಯಗಳಿಗೆ ಕತ್ತರಿಯಾಕಬಹುದಿತ್ತು.
ಸರೋಜಿನಿಯಾಗಿ ಕಲ್ಪನಾ, ರಂಗಸಾನಿಯಾಗಿ ಬಿ. ಜಯಮ್ಮ ಮತ್ತು ಮಾಧವನ ಸೋದರ ಮಾವನಾಗಿ ಕೆ.ಎಸ್. ಅಶ್ವಥ್ ಅಭಿನಯ ಸಹಜವಾಗಿದೆ. ಪಾತ್ರಗಳಿಗೆ ಇವರು ಪರಕಾಯ ಪ್ರವೇಶ ಮಾಡಿರುವುದು ತಿಳಿಯುತ್ತದೆ. ಕಲ್ಪನಾ ಅವರ ಆಂಗಿಕಭಾಭಿನಯ – ಸಂಭಾಷಣೆ ಒಪ್ಪಿಸುವಿಕೆ, ತೀರಾ ಅವಶ್ಯಕವಾಗಿರುವುದನ್ನು ಒತ್ತಿ ಹೇಳುವುದು – ಕೆಲವೆಡೆ ತುಸು ದೀರ್ಘರಾಗ ಅನನ್ಯ. ಇವುಗಳು ಭಾವಗಳಿಗೆ ರಂಗು ತುಂಬಿದೆ. ಉಳಿದಂತೆ ಉದಯ ಕುಮಾರ್, ಪಾಪಮ್ಮ, ರಮಾದೇವಿ, ಡಿಕ್ಕಿ ಮಾಧವರಾವ್, ವಾದಿರಾಜ್, ಬೆಂಗಳೂರು ನಾಗೇಶ್ ಅವರುಗಳು ತಮ್ಮ ಮಿತಿಯಲ್ಲಿ ಅಭಿನಯಿಸಿದ್ದಾರೆ.
ಕನ್ನಡದ ಬಹುತೇಕ ಸಿನೆಮಾಗಳಲ್ಲಿ ಧಾರವಾಡ ರಾರಾಜಿಸಿರುವುದು ಕಡಿಮೆ. ಆದರೆ ಈ ಸಿನೆಮಾದ ಉದ್ದಕ್ಕೂ ಧಾರವಾಡದ ಪರಿಸರ ಮೆರೆದಿದೆ. ಕರ್ನಾಟಕ ಕಾಲೇಜು ಕಾಣಿಸಿಕೊಂಡಿದೆ. ಆದರೆ ಪಾತ್ರಗಳು ಆಡುವ ಮಾತಿನ ಶೈಲಿ ಅಲ್ಲಿನಂತಿರದೇ ಮೈಸೂರು ಸೀಮೆಯ ಶೈಲಿಯಾಗಿದೆ. ಇದು ದೊಡ್ಡ ವಿರೋಧಾಭಾಸ.
ಧನ್ಯವಾದ