ಭಾರತದಲ್ಲಿ ಜ್ಯೋತಿಷ (ಜ್ಯೋತಿಷ್ಯ ಅಲ್ಲ) ಅಧ್ಯಯನಕ್ಕೆ ಸಾವಿರಾರು ವರ್ಷ ಇತಿಹಾಸವಿದೆ. ತಾರಾಮಂಡಲವನ್ನು ಅಧ್ಯಯನ ಮಾಡುವವರಿಗೆ ಜ್ಯೋತಿಷಿ ಎಂದು ಕರೆಯಲಾಗುತ್ತದೆ. ಈ ರೀತಿಯ ಜ್ಯೋತಿಷಿಗಳು ಬೇರೆ, ಫಲ ಜ್ಯೋತಿಷಿಗಳು ಬೇರೆ. ಇವರು ತಾರಾಮಂಡಲ ಅಧ್ಯಯನಕಾರರಲ್ಲ.
ಫಲ ಜ್ಯೋತಿಷಿಗಳು
ಭವಿಷ್ಯ ಹೇಳುತ್ತೇವೆ ಎನ್ನುವವರನ್ನು ಫಲ ಜ್ಯೋತಿಷಿಗಳು ಎನ್ನುತ್ತಾರೆ. ಇವರು ಹೇಳುವುದಕ್ಕೆ ಯಾವುದೇ ಶಾಸ್ತ್ರಾಧಾರ ( ಶಾಸ್ತ್ರ – ವಿಜ್ಞಾನ) ಇಲ್ಲ. ಇಂಥವರನ್ನು ಖಾಸಗಿ ಟಿವಿ ವಾಹಿನಿಗಳು ಪ್ಯಾನೆಲಿನಲ್ಲಿ ಕೂರಿಸಿಕೊಂಡು ಚರ್ಚೆ ನಡೆಸುವುದೇಕೆ ? ಗ್ರಹಣಗಳ ಬಗ್ಗೆ ಅಧ್ಯಯನದ ಆಧಾರದ ಮೇಲೆ ವಿವರಿಸಲಾಗದ ಇವರು ಆ ಉದ್ಯಮಗಳನ್ನು ಮಾಡುವವರಿಗೆ ಒಳ್ಳೆಯದಾಗುತ್ತೆ, ಈ ಉದ್ಯಮಗಳನ್ನು ಮಾಡುವವರಿಗೆ ಕೆಟ್ಟದಾಗುತ್ತೆ, ರಾಜಕೀಯ ವಿಪ್ಲವಗಳು ಸಂಭವಿಸುತ್ತವೆ ಎಂದು ಯಾವ ಆಧಾರದಲ್ಲಿ ಹೇಳುತ್ತಾರೆ ?
ಸೂರ್ಯಗ್ರಹಣ, ಚಂದ್ರಗ್ರಹಣ ಸಹಜ ವಿದ್ಯಮಾನಗಳು.
ಇಂಥವರು ನಕಾರಾತ್ಮಕ ಸಂಗತಿಗಳನ್ನು ಹೇಳುವುದರಿಂದ ಬಹುತೇಕರಲ್ಲಿ ಪ್ರಾಕೃತಿಕ ವಿದ್ಯಮಾನಗಳ ಸೊಬಗು ಆನಂದಿಸುವ ಮನೋಭಾವ ನಾಶವಾಗುತ್ತದೆ. ಬದಲಿಗೆ ಭಯ ಭೀತಿ ಉಂಟಾಗುತ್ತದೆ. ಇದಕ್ಕೆ ಖಾಸಗಿ ಟಿವಿ ವಾಹಿನಿಗಳು ನೀರು, ಗೊಬ್ಬರ ಸುರಿಯುತ್ತವೆ.
ನೀವೇ ಚೆಕ್ ಮಾಡಬಹುದು
ಟಿವಿ ಮಾಧ್ಯಮಗಳು ಅತಿರೇಕ ಎನಿಸುವಷ್ಟು ರೀತಿಯಲ್ಲಿ ಫಲ ಜ್ಯೋತಿಷಿಗಳನ್ನು ಕೂರಿಸಿಕೊಂಡು ಚರ್ಚೆ ನಡೆಸುತ್ತವೆ. ಇವರು ಹಿಂದೆ ಹೇಳಿದ್ದು ಎಷ್ಟರ ಮಟ್ಟಿಗೆ ಸತ್ಯವಾಗಿವೆ ಇಲ್ಲ ಎಂಬುದನ್ನಂತೂ ಇವರು ಪರೀಕ್ಷೆ ಮಾಡಲು ಹೋಗುವುದಿಲ್ಲ.
ಕೇವಲ ಒಂದೆರಡು ವರ್ಷಗಳ ಅವಧಿಯ ಇಂಥ ಪ್ಯಾನೆಲ್ ಚರ್ಚೆಗಳ ವಿಡಿಯೋ ಕ್ಲಿಪ್ ಗಳನ್ನು ಇಟ್ಟುಕೊಂಡು ಜ್ಯೋತಿಷಿಗಳು ಹೇಳಿದ್ದೆಲ್ಲ ಏನೇನಾಗಿದೆ ಎಂದು ನೀವೇ ಚೆಕ್ ಮಾಡಬಹುದು. ಭಯಭೀತಿಗೊಳಿಸುವ ಇವರ ಹೇಳಿಕೆಗಳಲ್ಲಿ ಯಾವುದೇ ಹುರುಳಿಲ್ಲ ಎಂಬುದು ಅರ್ಥವಾಗುತ್ತದೆ.
ಮುದ್ರಣ ಮಾಧ್ಯಮಗಳು
ದಶಕದ ಹಿಂದೆ ಮುದ್ರಣ ಮಾಧ್ಯಮಗಳು ನಿತ್ಯ ಭವಿಷ್ಯವನ್ನು ನಿತ್ಯವೂ ಪ್ರಕಟಿಸುತ್ತಿದ್ದವು. ಹಲವರಿಗೆ ಪೇಪರ್ ಬಂದಾಕ್ಷಣ ತಮ್ಮತಮ್ಮ ನಿತ್ಯ ಭವಿಷ್ಯಗಳನ್ನು ನೋಡದಿದ್ದರೆ ಸಮಾಧಾನವಾಗುತ್ತಿರಲಿಲ್ಲ. ಅದರಲ್ಲೇನಾದರೂ ನಕಾರಾತ್ಮಕ ಅಂಶವೆಂದರೆ ದೇವರಿಗೆ ಮತ್ತೆರೆಡು ಸಲ ಪೂಜೆ ಮಾಡಿಯೇ ಹೊರಗೆ ಹೋಗುತ್ತಿದ್ದರು. ಅಂದಿನ ತಮ್ಮ ಪೂರ್ವ ನಿಯೋಜಿತ ಕಾರ್ಯಕ್ರಮಗಳನ್ನು ರದ್ದು ಮಾಡುವವರಿಗೇನೂ ಕೊರತೆಯಿರಲಿಲ್ಲ.
ಪ್ರಸರಣ ಸಂಖ್ಯೆ ಕಾಪಾಡಿಕೊಳ್ಳುವ ತಂತ್ರ
ಇತ್ತೀಚೆಗೆ ಕೆಲವಾರು ಪತ್ರಕರ್ತರು ಹಿಂದೆ ಸುದ್ದಿಮನೆಗಳಲ್ಲಿ ನಿತ್ಯ ಭವಿಷ್ಯ ಕಳಿಸುವವರು ಕಾರಣಾಂತರಗಳಿಂದ ಕಳಿಸದೇ ಇದ್ದಾಗ ಹೇಗೆ ದಿಢೀರ್ ನಿತ್ಯ ಭವಿಷ್ಯ ಸಿದ್ಧವಾಗುತ್ತಿತ್ತು ಎಂದೆಲ್ಲ ಬರೆದಿದ್ದಾರೆ. ಇದರಿಂದ ಆಗುತ್ತಿದ್ದ ಪರಿಣಾಮಗಳನ್ನು ಅಂದಿನ ಪತ್ರಿಕಾ ಮಾಲಿಕರಾಗಲಿ, ಸಂಪಾದಕರಾಗಲಿ ಯೋಚಿಸುತ್ತಿರಲಿಲ್ಲ ಎಂಬುದು ಇದರಿಂದ ಸ್ಪಷ್ಟವಾಗಿತ್ತದೆ. ಇದು ತೋರಿಸುವುದೇನೆಂದರೆ ಅಂದು ಪತ್ರಿಕೆಯವರಿಗೆ ನಿತ್ಯ ಭವಿಷ್ಯ ಪತ್ರಿಕೆಯ ಪ್ರಸರಣ ಸಂಖ್ಯೆ ಕಾಪಾಡಿಕೊಳ್ಳುವ ತಂತ್ರವಾಗಿತ್ತು ಎಂಬುದು ಅರಿವಾಗುತ್ತದೆ. ಇಂದಿನ ಟಿವಿ ಮಾಧ್ಯಮಗಳಿಗೆ ಜ್ಯೋತಿಷ ತಮ್ಮ ಮಾಧ್ಯಮದ ಟಿ.ಆರ್.ಪಿ. ಏರಿಸಿಕೊಳ್ಳುವ ತಂತ್ರವಾಗಿದೆ.
ತಾತ್ಕಾಲಿಕ ಟಿ.ಆರ್.ಪಿ. ಲಾಭ
ಇದರಿಂದ ಇವರಿಗೆ ತಾತ್ಕಾಲಿಕ ಟಿ.ಆರ್.ಪಿ. ಲಾಭ ದೊರೆಯಬಹುದು.ಆದರೆ ಇಡೀ ಒಂದು ಪೀಳಿಗೆಯ ವೈಜ್ಞಾನಿಕ ಮನೋಭಾವ ನಾಶ ಮಾಡಿದ ಅಪಖ್ಯಾತಿ ಅಂಟಿಕೊಳ್ಳುತ್ತದೆ. ಮುಂದೆ ಮಾಧ್ಯಮಗಳನ್ನು ಅಧ್ಯಯನ ಮಾಡುವವರಿಂದ ತೀವ್ರ ಟೀಕೆಗೆ ಗುರಿಯಾಗುವುದು ಖಚಿತ