ಅಣ್ಣ (ತಂದೆ) ಬಿ.ಎಸ್ಸಿ ಪದವೀಧರ.     ಹಿರಿಯ ಅಧಿಕಾರಿ. ಆಗೆಲ್ಲ ಎಲ್.ಕೆ.ಜಿ.,  ಯು.ಕೆ.ಜಿ.‌ಇರಲಿಲ್ಲ. ನರ್ಸರಿ. ಈ ಹಂತದ ನಂತರ ಸೀದಾ ಕರೆ ತಂದಿದ್ದು ಕನ್ನಡ ಮಾಧ್ಯಮದ ಕಿರಿಯ ಪ್ರಾಥಮಿಕ‌ ಶಾಲೆಗೆ. ಒಂದನೇ ತರಗತಿಗೆ ದಾಖಲಾದ ದಿನ ಚೆನ್ನಾಗಿ ನೆನಪಿದೆ.

ನರ್ಸರಿಯಲ್ಲಿ ನನ್ನ ಜೊತೆಯಲ್ಲಿದ್ದ ಅನೇಕರು ಇಂಗ್ಲಿಷ್ ಮಾಧ್ಯಮದ ಶಾಲೆಗೆ ಸೇರಿಸಲ್ಪಟ್ಟರು. ನಮ್ಮ ಮನೆಗೆ ಈ ಶಾಲೆ ಹತ್ತಿರದಲ್ಲಿಯೇ ಇತ್ತು. ಆದರೂ ಅಣ್ಣನ ಆಯ್ಕೆ ಕನ್ನಡ ಮಾಧ್ಯಮ ಶಾಲೆ. ಇಲ್ಲಿಗೆ ಸೇರಿಸಿ ಸುಮ್ಮನಾಗಲಿಲ್ಲ. ಕನ್ನಡದ ಕಾಮಿಕ್ಸ್ ಪುಸ್ತಕಗಳನ್ನು ತಂದುಕೊಡಲು ಶುರು‌ ಮಾಡಿದರು. ಮನೆಗೆ ಪ್ರಜಾವಾಣಿ, ಸುಧಾ ಬರುತ್ತಿತ್ತು. ಫ್ಯಾಂಟಮ್ ಆಜಾದ್ ರಾಮನ್ ಇತ್ಯಾದಿ ಚಿತ್ರ ಮಾಲಿಕೆ ಓದಿಕೊಂಡೆ ಬೆಳೆಯಲು ಶುರು.

ಕನ್ನಡ ಎಂಥಾ ಸೊಗಸು, ಸೊಬಗು ಎನ್ನುವುದಾಗಲಿ ಆಗ ಅರ್ಥವಾಗಿರಲಿಲ್ಲ. ಆದರೆ ಓದಲು ಇಷ್ಟವಾಗುತ್ತಿತ್ತು. ಇದರಿಂದಾಗಿಯೇ ಅಣ್ಣ ತಾವು ಓದಲು ತಂದಿದ್ದ ಅಕ್ಕಮಹಾದೇವಿ, ಬಸವಣ್ಣ ಇತರರ ವಚನಗಳನ್ನು ೪ನೇ ತರಗತಿಗೆ ಓದಲು ಸಾಧ್ಯವಾಯಿತು.‌ ೫ನೇ ತರಗತಿಗೆ “ವಚನ ಭಾರತ” ಕೃತಿಯನ್ನು ಎರಡು ಭಾರಿ ಓದಿದ್ದೆ. ಇದಲ್ಲದೇ  ಬೃಹತ್ ಪುಸ್ತಕಗಳಾದ  “ಮಹಾಭಾರತ”, “ರಾಮಾಯಣ”7ನೇ ತರಗತಿಯೊಳಗೆ ಸಂಪೂರ್ಣವಾಗಿ ಓದಿದ್ದೆ.

೧೦ನೇ ತರಗತಿಯೊಳಗೆ ಕಾನೂರು ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು, ನೆನಪಿನ ದೋಣಿ, ಶಿವರಾಮ ಕಾರಂತರರ ಹುಚ್ಚು ಮನಸಿನ ಹತ್ತು ಮುಖಗಳು ಸೇರಿದಂತೆ ಅವರ ಅನೇಕ ಪುಸ್ತಕಗಳನ್ನು ಓದಿದೆ. ೮ನೇ ತರಗತಿಯಲ್ಲಿಯೇ ಜಿಂದೆ ನಂಜುಂಡಸ್ವಾಮಿ, ಕಾಕೋಳು ರಾಮಯ್ಯ, ನರಸಿಂಹಯ್ಯ. ಅನಂತರಾಮ್ ಅವರ ಎಲ್ಲ ಪತ್ತೇದಾರಿ ಕಾದಂಬರಿಗಳನ್ನೂ ಓದಿದ್ದೆ.

ಇಷ್ಟರೊಳಗೆ ಕನ್ನಡದ ರುಚಿ ಅರಿವಾಗಿತ್ತು. ಓದು ಎಷ್ಟರಮಟ್ಟಿಗೆ ಇತ್ತೆಂದರೆ ಪುಸ್ತಕ ಹಿಡಿದರೆ ಕಣ್ಣುಗಳಲ್ಲಿ ಧಾರಾಳ ನೀರು.ದೃಷ್ಟಿಯೆಲ್ಲ ಮಂಜುಮಂಜು. ಪೊರೆ ಕವಿದ ಹಾಗೆ. ಮನೆಯಲ್ಲಿ ಇಂಗ್ಲಿಷ್ ಟ್ಯೂಷನ್ ಹೇಳಿಕೊಡುತ್ತಿದ್ದ ನಿವೃತ್ತ ಮಿಲಿಟರಿ ಅಧಿಕಾರಿಯೊಬ್ಬರ ಸಲಹೆ ಕನ್ನಡಕದ ಅವಶ್ಯಕತೆಯಿಲ್ಲದಂತೆ ಮಾಡಿತು (ಬಹಳ ಸ್ವಾರಸ್ಯಕರವಾದ ಈ ಸಲಹೆ ಬಗ್ಗೆ ಇನ್ನೊಮ್ಮೆ ಬರೆಯುತ್ತೇನೆ)

ಪಿಯುಸಿಯಲ್ಲಿ ನನ್ನಿಷ್ಟದ ಮನಃಶಾಸ್ತ್ರ, ಪದವಿಯಲ್ಲಿ ಅಪರಾಧಶಾಸ್ತ್ರ ತೆಗೆದುಕೊಂಡರೂ ಆಯ್ಕೆ ಮಾಡಿದ್ದು ಕನ್ನಡ ಮಾಧ್ಯಮವನ್ನೇ. ಸ್ನಾತಕೋತ್ತರ ಹಂತದಲ್ಲಿ ಇಂಗ್ಲಿಷ್.‌ಆದರೆ ಆಯ್ಕೆಮಾಡಿ ಓದಿದ್ದು ಕನ್ನಡ ಪಠ್ಯಪುಸ್ತಕಗಳನ್ನೇ.

ಇಂಥ ಚೆಲುವಿನ ಕನ್ನಡ ನನಗೆ ಅನ್ನ ಕೊಟ್ಟಿದೆ. ಬದುಕು ಕೊಟ್ಟಿದೆ. ಕಷ್ಟಗಳ ಅರಿವಾಗದಂತೆ ಕೈ ಹಿಡಿದು ನಡೆಸಿಕೊಂಡು ಹೋಗುತ್ತಿದೆ. ಇದನ್ನು ಬರೆಯುವಾಗ ಕಂಗಳಲ್ಲಿ ಖುಷಿಯಿಂದ  ನೀರಾಡಿದೆ !

Similar Posts

1 Comment

  1. ಸೊಗಸಾದ ಕನ್ನಡದ ಒಡನಾಟದ ನೆನಪು.

Leave a Reply

Your email address will not be published. Required fields are marked *