ನನ್ನ ತಂದೆ ಅವರು ತಿರುಪತಿ ತಿಮ್ಮಪ್ಪ, ಶ್ರೀನಿವಾಸ, ವೆಂಕಟೇಶ್ವರ, ಬಾಲಾಜಿ ಎಂದೆಲ್ಲ ಕರೆಸಿಕೊಳ್ಳುವ ದೈವದ ಭಕ್ತರು. ಕಚೇರಿಯ ಟೇಬಲಿಗೆ ಹಾಕಿದ್ದ ಗಾಜು ಹಾಸಿನ ಕೆಳಗೆ ತಿಮ್ಮಪ್ಪನ ಪಟವಿರುತ್ತಿತ್ತು. ವರ್ಷಕ್ಕೆ ಎರಡು ಬಾರಿ ಕುಟುಂಬ ಸಮೇತರಾಗಿ ದರ್ಶನ ಮಾಡುತ್ತಿದ್ದರು.
ತಿರುಪತಿ – ತಿರುಮಲಕ್ಕೆ ಹೋದಾಗ ದೇವಸ್ಥಾನ ಮಂಡಳಿ ನೀಡುವ ರೂಮು, ಹಜಾರ, ಅಡುಗೆ ಕೋಣೆ ಇರುವ ಮನೆ ಬಾಡಿಗೆ ತೆಗೆದುಕೊಳ್ಳುತ್ತಿದ್ದೆವು. ಮಳೆ ಇರಲಿ, ಚಳಿ ಇರಲಿ ಮುಂಜಾನೆಯೇ ಎದ್ದು ದೇಗುಲ ಸನಿಹದ ವಿಶಾಲವಾದ ಕಲ್ಯಾಣಿಯಲ್ಲಿ ಮೀಯುತ್ತಿದ್ದೆವು.
30 ವರ್ಷದ ಹಿಂದೆ ಧರ್ಮ ದರ್ಶನಕ್ಕೂ ದಿನಗಟ್ಟಲೇ ಕಾಯುವ ಪರಿಸ್ಥಿತಿ ಇರಲಿಲ್ಲ. ಕೆಲವೇ ಗಂಟೆಗಳಲ್ಲಿ ದರ್ಶನ ಆಗುತ್ತಿತ್ತು. ಆ ಬಳಿಕ ಪ್ರಸಾದ ತೆಗೆದುಕೊಳ್ಳುತ್ತಿದ್ದೆವು. ಆಗ ಬೆಳಗ್ಗಿನ ಹೊತ್ತು ದೇವಸ್ಥಾನದಲ್ಲಿ ದೋಸೆ, ಅಗಲವಾಗಿ, ಗಟ್ಟಿಯಾಗಿರುತ್ತಿದ್ದ ವಡೆ (ಹೋಟೆಲುಗಳಲ್ಲಿ ದೊರೆಯುವ ವಡೆ ಮಾದರಿಯದಲ್ಲ) ಲಾಡುವನ್ನು ಪ್ರಸಾದವಾಗಿ ನೀಡುತ್ತಿದ್ದರು.
ಈಗಿನಂತೆ ಒಬ್ಬರಿಗೆ ಎರಡೇ ಲಾಡು ಎಂಬ ಮಿತಿ ಇರಲಿಲ್ಲ. ಎಷ್ಟು ಬೇಕಾದರೂ ತೆಗೆದುಕೊಳ್ಳಬಹುದಿತ್ತು. ಮನೆ ಸದಸ್ಯರಿಗೆ, ಬಂಧುಗಳಿಗೆ ಲಾಡು ತೆಗೆದುಕೊಂಡು ಅದನ್ನು ಬೇರೆಬೇರೆ ಕೈ ಚೀಲದಲ್ಲಿ ತುಂಬಿಸಿಕೊಂಡು ಹೊರ ಬರುತ್ತಿದ್ದೆವು. ದ್ವಾರದಿಂದ ಹೊರ ಬರುವ ಮುನ್ನ ಪುಟ್ಟಪುಟ್ಟ ಲಾಡುಗಳನ್ನು ಪ್ರತಿಯೊಬ್ಬರಿಗೂ ಉಚಿತವಾಗಿ ನೀಡುತ್ತಿದ್ದರು.
ದೇವಸ್ಥಾನದ ಪಕ್ಕದಲ್ಲಿಯೇ ಇರುವ ಮೆಟ್ಟಿಲುಗಳ ಮೇಲೆ ನಾವೆಲ್ಲರೂ ಕುಳಿತುಕೊಳ್ಳುತ್ತಿದ್ದೆವು. ತಿಮ್ಮಪ್ಪನನ್ನು ಸ್ತುತಿಸಿದ ನಂತರ ತಂದೆ ಅವರು ಪ್ರಸಾದ ಹಂಚುತ್ತಿದ್ದರು. ಭಯ-ಭಕ್ತಿಯಿಂದ ಸೇವಿಸುತ್ತಿದ್ದೆವು.
ಊರಿಗೆ ಬಂದೊಡನೆ ದೇವರ ಕೋಣೆಯಲ್ಲಿ ಪ್ರಸಾದ ಇಟ್ಟು ಪೂಜಿಸುತ್ತಿದ್ದರು. ನಂತರ ನೆರೆಹೊರೆಯ ಮನೆ, ಬಂಧುಗಳ ಮನೆಗೆ ತಲುಪಿಸುತ್ತಿದ್ದೆವು. ಅವರು ಕೂಡ ಪ್ರಸಾದವನ್ನು ಮೊದಲು ದೇವರ ಪಟದ ಮುಂದೆ ಇಟ್ಟು ಪೂಜಿಸಿ ನಂತರ ಎರಡು ಕೈಗಳಲ್ಲಿಯೂ ಪ್ರಸಾದ ತೆಗೆದುಕೊಂಡು ತಲೆ ತಗ್ಗಿಸಿ ನಮಿಸಿದ ಬಳಿಕವೇ ಸೇವಿಸುತ್ತಿದ್ದರು.
ತಿರುಪತಿ ತಿಮ್ಮಪ್ಪನ ಭಕ್ತರಲ್ಲಿ ಈಗಲೂ ಈ ಆಚರಣೆ ತಪ್ಪಿಲ್ಲ. ಏಕೆಂದರೆ ಅವರಿಗೆ ತಿರುಪತಿಗೆ ಹೋಗುವುದು, ದರ್ಶನ ಮಾಡುವುದು, ಪ್ರಸಾದವನ್ನು ಭಕ್ತಿಯಿಂದ ಸೇವಿಸುವುದು ಅಧ್ಯಾತ್ಮಿಕ ಯಾತ್ರೆ, ತಿರುಪತಿ ತಿಮ್ಮಪ್ಪನ ದೇಗುಲದ ಲಾಡು ಅವರಿಗೆ ಬರೀ ಸಿಹಿಯಲ್ಲ; ಅದು ಅಧ್ಯಾತ್ಮಿಕ ಅನುಭೂತಿ!
ತಿರುಪತಿ ಲಾಡು ತಯಾರಿಕೆಗೂ ಸಿಹಿ ಅಂಗಡಿಗಳಲ್ಲಿ ದೊರೆಯುವ ಲಾಡುಗಳ ತಯಾರಿಕೆಗೂ ಅಪಾರ ವ್ಯತ್ಯಾಸವಿದೆ. ತಿರುಪತಿ ಲಾಡು ತಯಾರಿಸುವ ಪ್ರಕ್ರಿಯೆಯನ್ನು “ದಿಟ್ಟಂ” ಎಂದು ಕರೆಯುತ್ತಾರೆ. ಪಾಕ ವಿಧಾನವೂ ವಿಶಿಷ್ಟ. ಇದರ ಬಗ್ಗೆ ದೇವಸ್ಥಾನದಲ್ಲಿ ದಾಖಲೆಗಳಿವೆ. ಇದುವರೆಗಿನ ಇತಿಹಾಸದಲ್ಲಿ ಕೇವಲ ಆರು ಬಾರಿ ಮಾತ್ರ ಲಾಡು ಪಾಕ ವಿಧಾನ ಬದಲಿಸಲಾಗಿದೆ ಎಂದು ಹೇಳಲಾಗುತ್ತದೆ. ಈ ಲಾಡುವಿನ ಬಾಳಿಕೆ ಅವಧಿಯೂ ಹೆಚ್ಚು !
ದಶಕಗಳ ಕಾಲ ಅನುಭವವಿರುವ ನುರಿತ ಪಾಕ ಪ್ರವೀಣರ ನೇತೃತ್ವ, ಮಾರ್ಗದರ್ಶನದಲ್ಲಿ ದೇವಸ್ಥಾನದ ಪಾಕಾಲಯದಲ್ಲಿ ಲಾಡು ತಯಾರಾಗುತ್ತದೆ. ಇದನ್ನು “ಪೋಟು” ಎಂದು ಕರೆಯಲಾಗುತ್ತದೆ. ತಯಾರಿಕೆಗೆ ಬಳಸುವ ಪದಾರ್ಥಗಳ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಬಳಸುವ ಬಾದಾಮಿ, ಗೋಡಂಬಿ ಮತ್ತು ಒಣದ್ರಾಕ್ಷಿಗಳು ಇತರ ಪದಾರ್ಥಗಳ ಅಳತೆಯಲ್ಲಿಯೂ ವ್ಯತ್ಯಾಸಗಳಾಗುವುದಿಲ್ಲ. ಆದ್ದರಿಂದ ಬೇರೆಬೇರೆ ಬ್ಯಾಚುಗಳ ಲಾಡುಗಳಲ್ಲಿಯೂ ಒಂದೇ ಪರಿಮಳ, ರುಚಿ. ಸಿಹಿ ಅಂಶದಲ್ಲಿಯೂ ಕಿಂಚಿತ್ತೂ ಏರುಪೇರು ಇರುವುದಿಲ್ಲ.
ಇತ್ತೀಚಿನ ಅಂಕಿಅಂಶದ ಪ್ರಕಾರ ಪ್ರತಿನಿತ್ಯ ಮೂರು ಲಕ್ಷ, ಒಂದು ವರ್ಷಕ್ಕೆ 15 ಕೋಟಿಗಿಂತಲೂ ಅಧಿಕ ಲಾಡು ತಯಾರಾಗುತ್ತದೆ. ಇದರ ವಾರ್ಷಿಕ ವಹಿವಾಟು 500 ಕೋಟಿಗೂ ಹೆಚ್ಚು. ವಿಶಿಷ್ಟ ತಯಾರಿಕೆ, ನಿರಂತರ ನಿರ್ದಿಷ್ಟ ಗುಣಮಟ್ಟ ಕಾಪಾಡಿಕೊಳ್ಳುವಿಕೆ ಕಾರಣಗಳಿಂದ ತಿರುಪತಿ ಲಾಡುವಿಗೆ ಜಿಐ ಟ್ಯಾಗ ಅಂದರೆ “ಭೌಗೋಳಿಕ ಸನ್ನದು” (Geographical Indication tag) ದೊರೆತಿದೆ. ಇದು ಬೌದ್ದಿಕ ಆಸ್ತಿ ಹಕ್ಕು ((IPR) ರೂಪ. ಇದರಿಂದ ಇಂಥ ಉತ್ಪನ್ನವನ್ನು ನಕಲು ಮಾಡುವುದು ಅಪರಾಧ. ತಿರುಪತಿ ವೆಂಕಟೇಶ್ವರ ದೇವಸ್ಥಾನದಲ್ಲಿ ತಯಾರಾದ ಲಾಡುಗಳನ್ನು ಮಾತ್ರ ತಿರುಪತಿ ಲಾಡು ಎಂದು ಕರೆಯಬೇಕು. ಬೇರೆ ತಯಾರಕರು ಈ ಹೆಸರು ಸಹ ಬಳಸುವಂತಿಲ್ಲ. ಅಂಚೆ ಇಲಾಖೆಯು ತಿರುಪತಿ ಲಾಡು ಚಿತ್ರದ ಅಂಚೆ ಚೀಟಿಯನ್ನೂ ತಂದಿದೆ.
ಇಂಥ ವಿಶಿಷ್ಟತೆ ಉಳ್ಳ, ಆಸ್ತಿಕರ ಭಕ್ತಿ, ಅಭಿಮಾನ ಸ್ವರೂಪದ ಭಾವನೆಗಳಿಗೆ ಈಗ ಚ್ಯುತಿ ಉಂಟಾಗಿದೆ. ತಿರುಪತಿ ಲಾಡುವಿನಲ್ಲಿ ದನದ ಕೊಬ್ಬು, ಹಂದಿಯ ಕೊಬ್ಬು, ಮೀನಿನ ಎಣ್ಣೆ, ಲಿನ್ಸೆಡ್, ರೇಪ್ಸಿಡ್ ಮತ್ತು ಹತ್ತಿಬೀಜ ಎಣ್ಣೆಯ ಅಂಶಗಳು ಆಘಾತಕಾರಿ ಮಟ್ಟದಲ್ಲಿ ಇರುವುದು ಪ್ರಯೋಗಾಲಯದ ಪರೀಕ್ಷೆಯಲ್ಲಿ ದೃಢ ಪಟ್ಟಿದೆ.
ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ದು ಅವರೇ ನೇರವಾಗಿ ಪ್ರಯೋಗಾಲಯದ ಪರೀಕ್ಷೆಯನ್ನು ಬಹಿರಂಗಗೊಳಿಸಿದ್ದಾರೆ. ಇದೊಂದು ಗಂಭೀರ ಸ್ವರೂಪದ ಆರೋಪ. ಏಕೆಂದರೆ ಕೋಟ್ಯಂತರ ಆಸ್ತಿಕರ ಭಾವನೆಗಳಿಗೆ ಧಕ್ಕೆಯಾಗಿದೆ.
ಹಿಂದಿನ ಸರ್ಕಾರದ ಚುಕ್ಕಾಣಿ ಹಿಡಿದವರೇ ನೇರವಾಗಿ ಕಾರಣರು ಎಂದು ಹೇಳಲಾಗುವುದಿಲ್ಲ. ಆದರೆ ಇಂಥ ವಿಷಯದಲ್ಲಿ ಗುಣಮಟ್ಟ ಕಾಯ್ದುಕೊಳ್ಳುವುದು ಸರ್ಕಾರದ ಜವಾಬ್ದಾರಿಯಾಗಿರುತ್ತದೆ. ಏಕೆಂದರೆ ತಿರುಪತಿ ತಿರುಮಲ ದೇವಸ್ಥಾನ ಮಂಡಳಿ ಸ್ವಾಯತ್ತವಾಗಿದ್ದರೂ ಅಲ್ಲಿನ ಸರ್ಕಾರದ ಹಿರಿಯ ಶ್ರೇಣಿಯ ಐ.ಎ.ಎಸ್.ಅಧಿಕಾರಿಯು ದೇವಸ್ಥಾನದ ಕಾರ್ಯ ನಿರ್ವಾಹಕ ಅಧಿಕಾರಿಯಾಗಿರುತ್ತಾರೆ.
ಎಲ್ಲ ಪದಾರ್ಥಗಳ ಗುಣಮಟ್ಟ ಪರೀಕ್ಷೆ ಮಾಡಿದ ನಂತರವೇ ಅವುಗಳನ್ನು ಲಾಡು ತಯಾರಿಕೆಗೆ ಬಳಸಬೇಕು. ಆದರೆ ಸಾವಿರಾರು ಕೋಟಿ ಆದಾಯ ಇರುವ ಟಿಟಿಡಿ ತನ್ನದೇ ಆದ ಸುಸಜ್ಜಿತ ಪ್ರಯೋಗಾಲಯ ಹೊಂದಿಲ್ಲದೇ ಇರುವುದು ಆಶ್ಚರ್ಯಕರ ಸಂಗತಿ.
ತುರ್ತು ಕ್ರಮದ ಭಾಗವಾಗಿ ಆಂಧ್ರ ಪ್ರದೇಶದ ಸರ್ಕಾರ ತನಿಖೆಗೆ ಆದೇಶಿಸಿದೆ. ದೇವಸ್ಥಾನ ಮಂಡಳಿಯ ಕಾರ್ಯನಿರ್ವಾಹಕ ಅಧಿಕಾರಿಯನ್ನು ಬದಲಿಸಿದೆ. ಲಾಡು ತಯಾರಿಕೆಗೆ ತುಪ್ಪ ಸರಬರಾಜು ಮಾಡುತ್ತಿದ್ದ ತಮಿಳುನಾಡು ಮೂಲದ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ, ನೋಟಿಸ್ ನೀಡಲಾಗಿದೆ. ಅಲ್ಲಿಂದ ತುಪ್ಪ ತರಿಸಿಕೊಳ್ಳುವುದನ್ನು ನಿಲ್ಲಿಸಲಾಗಿದೆ. ಗುಣಮಟ್ಟದ ತುಪ್ಪದ ಬಳಕೆಗೆ ನಿರ್ಧರಿಸಲಾಗಿದೆ. ತನಿಖೆಯನ್ನು ತತ್ವರಿತವಾಗಿ ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಬೇಕು. ಗುಣಮಟ್ಟವಿಲ್ಲದ ಪದಾರ್ಥಗಳ ಖರೀದಿಗೆ ಕಾರಣರಾದವರಿಗೆ ಶಿಕ್ಷೆಯಾಗಬೇಕು.
ಸರ್ಕಾರ ಮತ್ತು ದೇವಸ್ಥಾನದ ಬೋರ್ಡ್ ಕೇವಲ ತುಪ್ಪದ ಗುಣಮಟ್ಟದ ಬಳಕೆಗೆ ಮಾತ್ರ ಗಮನ ಹರಿಸಿದರೆ ಸಾಲದು. ಲಾಡು ತಯಾರಿಕೆಗೆ ಬಳಸುವ ಕಡಲೇ ಹಿಟ್ಟು, ದ್ರಾಕ್ಷಿ, ಗೋಡಂಬಿ ಸೇರಿದಂತೆ ಇತರ ಪದಾರ್ಥಗಳ ಗುಣಮಟ್ಟದ ಬಗ್ಗೆಯೂ ಗಮನ ಹರಿಸಬೇಕಾಗಿದೆ. ಸಾವಯವ ಪದ್ದತಿಯಲ್ಲಿ ಬೆಳೆದ ಪದಾರ್ಥಗಳ ಖರೀದಿಗೆ ಆದ್ಯತೆ ನೀಡಬೇಕು. ಇದರಿಂದ ಸಾವಯವ ಕೃಷಿಕರಿಗೂ ಉತ್ತೇಜನ ನೀಡಿದಂತಾಗುತ್ತದೆ.