ಜಪಾನಿನ ಹರುಕಿ ಮುರುಕಾಮಿ ಓರ್ವ ಯಶಸ್ವಿ ಉದ್ಯಮಿ, ಸಾಹಿತಿ ಮತ್ತು ಓಟಗಾರ. ಈತನ ಮ್ಯಾಜಿಕ್ ರಿಯಲಿಸಂ ತಂತ್ರಗಾರಿಕೆಯ ಸೃಜನಶೀಲ ಕೃತಿಗಳು ಜಗತ್ತಿನ ಬಹುತೇಕ ಭಾಷೆಗಳಿಗೆ ಅನುವಾದಗೊಂಡಿವೆ.  ಓದುಗರನ್ನು ಮೋಡಿ ಮಾಡುತ್ತಿವೆ. ರನ್ನಿಂಗ್ ನಾವೆಲಿಸ್ಟ್ (What I talk about when I talk about running)  ಭಿನ್ನವಾದ ಪುಸ್ತಕ

ರನ್ನಿಂಗ್ ನಾವೆಲಿಸ್ಟ್ ಒಂದು ರೀತಿಯಲ್ಲಿ ಹರುಕಿ ಮುರಕಾಮಿಯ ಆತ್ಮಕಥೆಯೂ ಹೌದು. ಇದು ಈತ ತನ್ನನ್ನು ತಾನು ಕಂಡುಕೊಳ್ಳಲು ಮಾಡಿದ ತಂತ್ರದ ಅನಾವರಣವೂ ಹೌದು. ಓದುತ್ತಾ ಹೋದರೆ ಮ್ಯಾರಥಾನ್ – ಟ್ರಯಥ್ಲಾನ್  ಕುರಿತ ಪರಿಚಯದ ಪುಸ್ತಕವೆಂದೆ ಅನಿಸುತ್ತದೆ. ಆದರೆ ಅದಕ್ಕಿಂಥ ವಿಭಿನ್ನ. ಓದುವ ಒಂದು ಹಂತದಲ್ಲಿ ಆತನ ಕೃತಿಗಳಲ್ಲಿ ಕಾಣುವ ಮ್ಯಾಜಿಕ್ ರಿಯಲಿಸಂ ಛಾಯೆ ಇಲ್ಲಿಯೂ ಇದೆಯೇನೋ ಎಂಬಂತೆ ಭಾಸವಾಗುತ್ತದೆ.

ರನ್ನಿಂಗ್ ನಾವೆಲಿಸ್ಟ್ ಕೃತಿಯಲ್ಲಿ 9 ಅಧ್ಯಾಯಗಳಿವೆ. ಮಿಕ್ ಜಾಗರನನ್ನು ನೋಡಿ ನಗುವವರು ಯಾರು ?, ಓಡುವ ಕಾದಂಬರಿಕಾರನಾಗಲು ಒಂದಷ್ಟು ಸಲಹೆಗಳು, ಅಥೆನ್ಸ್ ಬಿರುಬೇಸಿಗೆಯಲ್ಲಿ ಮೊದಲ ಬಾರಿಗೆ 26.2 ಮೈಲಿ ಓಡಿದ್ದು, ಕಾದಂಬರಿ ಬರೆವಣಿಗೆ ಬಗ್ಗೆ ನಾನು ಏನನ್ನಾದರೂ ತಿಳಿದುಕೊಂಡಿದ್ದರೆ, ಅವಳಿಗಿರುವಂತೆ ನನಗೂ ಮೋಟುಜಡೆ ಇದ್ದಿದ್ದರೆ, ಯಾರೂ ಟೇಬಲ್ ಕುಟ್ಟಲಿಲ್ಲ, ಯಾರೂ ಕಪ್ಪುಗಳನ್ನೆಸಲಿಲ್ಲ,  ನ್ಯೂಯಾರ್ಕ್ ನಲ್ಲೊಂದು ವಸಂತ, 18 ಟಿಲ್ ಐ ಡೈ, ಕೊನೆ ಪಕ್ಷ ಅವನು ನಡೆಯಲಿಲ್ಲ;  ಓಡಿದ

ರನ್ನಿಂಗ್ ನಾವೆಲಿಸ್ಟ್ ಎಲ್ಲಿಯೂ ಆರೋಗ್ಯ ನಿರ್ವಹಣೆ ಬಗ್ಗೆ ಭಾಷಣ ಕುಟ್ಟುವುದಿಲ್ಲ “ ಜಾಣನಾದವ ತಾನು ಆರೋಗ್ಯದಿಂದಿರಲು ಕೈಗೊಂಡ ಚಟುವಟಿಕೆಗಳ ಬಗ್ಗೆ ಕೂಡ ಯಾರೊಂದಿಗೂ ಮಾತನಾಡುವುದಿಲ್ಲ” ಎಂದು ಹೇಳುವ ಮೂಲಕವೇ ಮುರುಕಾಮಿ ಇದರ ಬಗ್ಗೆ ಆರಂಭದಲ್ಲಿಯೇ ಸುಳಿವು ಬಿಟ್ಟು ಕೊಡುತ್ತಾರೆ.

ರನ್ನಿಂಗ್ ನಾವೆಲಿಸ್ಟ್ ಕೃತಿಯಲ್ಲಿ ಮುಖ್ಯವಾಗಿ ಗೊತ್ತಾಗುವುದು ಹರುಕಿ ಮುರುಕಾಮಿಯ ಪಾಲಿಗೆ ಓಟವೊಂದು ಧ‍್ಯಾನ. ಇದು ಒಂದೋ ಎರಡೋ ಕಿಲೋ ಮೀಟರ್ ಓಟವಲ್ಲ. ಮೈಲುಗಟ್ಟಲೆ ಓಟ ಮತ್ತು ಸುದೀರ್ಘ ಧ‍್ಯಾನ. “ಮ್ಯಾರಥಾನ್ ಓಡುವಾಗ ನೀವು ಜಪಿಸುವ ಮಂತ್ರ ಯಾವುದು” ಎಂಬ ಪ್ರಶ್ನೆ ಎದುರಾಗುವುದರ ಬಗ್ಗೆ ಹರುಕಿ ಮುರುಕಾಮಿ ಪ್ರಸ್ತಾಪಿಸುತ್ತಾರೆ. ಯಾವುದೋ ಮಂತ್ರವಂತೂ ಬೇಕು ಎನ್ನುವುದು ಇವರ ವಾದ !! ಅನುಭಾವಿಕರಾಗದಿದ್ದರೆ “ಮ್ಯಾರಥಾನ್ ಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ” ಎಂಬುದನ್ನೂ ಹೇಳುತ್ತಾರೆ. ಈ ಅನುಭಾವವೇ ಈತನ ಪಾಲಿಗೆ ಧ್ಯಾನ !! ಇದಕ್ಕೆ ಈತ ಬಳಸುವ ಮಂತ್ರ ಯಾವುದು ? ಇದಕ್ಕೆ ಉತ್ತರ ಪೂರ್ಣ ಕೃತಿ ಓದಿದಾಗ ದೊರೆಯುತ್ತದೆ

ಓಟ ಮತ್ತು ಸಂಗೀತ… ಎರಡೂ ಕೂಡ ಸುಮಧುರ ಫ್ಲೋ ಅಂದರೆ ಹರಿಯುವಿಕೆ. ಓಟದಲ್ಲಿ ನೋವಿದೆ. ಸಂಗೀತದಲ್ಲಿ ನೋವಿಗೆ ಮದ್ದಿದೆ. ಎರಡನ್ನೂ ಹರುಕಿ ಮುರುಕಾಮಿ ಮಿಶ್ರಣ ಮಾಡುತ್ತಾರೆ. ಇದು ಇವರ ಯಶಸ್ಸಿಗೆ ದೊಡ್ಡ ಕಾಣಿಕೆ ನೀಡಿದೆ.

ರನ್ನಿಂಗ್ ನಾವೆಲಿಸ್ಟ್ ನಲ್ಲಿ ಕಂಡು ಬರುವ ಮತ್ತೊಂದು ಮುಖ್ಯ ಅಂಶ; ಟ್ರಯಥ‍್ಲಾನ್ !! ಇದು ಈಜು, ಸ್ಲೈಕ್ಲಿಂಗ್ ಮತ್ತು ಓಟ ಕೂಡಿದ ಕ್ರೀಡೆ ! ಇದರಲ್ಲಿಯೂ ಕೂಡ ಆಸಕ್ತಿ ತೋರಿಸುತ್ತಾರೆ. ಇದು ಅವರ ಮ್ಯಾರಥಾನ್ ಓಟಕ್ಕೆ ಇಂಬು ನೀಡುತ್ತದೆ.

ರನ್ನಿಂಗ್ ನಾವೆಲಿಸ್ಟ್ ನಲ್ಲಿ ಕಂಡು ಬರುವ ಮತ್ತೊಂದು ಅಂಶ “ಗೆಲ್ಲುವ ಗುರಿಯಿಲ್ಲದೇ ತನ್ನ ಪಾಡಿಗೆ ತಾನು ಓಡುವುದು” ಹೀಗೂ ಉಂಟೆ ಎನಿಸಿಬಿಡುತ್ತದೆ. ಸಾಮಾನ್ಯವಾಗಿ ಎಲ್ಲರೂ ಗೆಲುವಿನತ್ತ ಚಿತ್ತ ಇಟ್ಟು ಕ್ರೀಡೆಯಲ್ಲಿ ಗೆಲ್ಲುವ ಮನೋಭಾವದಿಂದ ಭಾಗವಹಿಸುತ್ತಾರೆ. ಇದರಿಂದ ಮುರುಕಾಮಿ ಪ್ರತ್ಯೇಕ !!  “ ಹಾಗೆಂದರೆ ನನಗೆ ಸ್ಪರ್ಧಾ ಮನೋಭಾವ ಇಲ್ಲ ಅಂತ ಅರ್ಥವಲ್ಲ, ಆದರೆ ಬೇರೆಯವರನ್ನು ಸೋಲಿಸುವ, ಬೀಳಿಸುವ ಕಲ್ಪನೆ ಇಷ್ಟ ಆಗುವುದಿಲ್ಲ ಅಷ್ಟೆ. ಬೇರೆಯವರನ್ನು ಸೋಲಿಸುವುದಕ್ಕಿಂತ ನನ್ನೊಂದಿಗೆ ನಾನು ಸ್ಪರ್ಧೆಗಿಳಿಯುವುದು, ನನ್ನ ಸಾಧನೆ ನಾನೇ ಮುರಿಯುವ ಗುರಿ ಹೊಂದುವುದು ಅರ್ಥಪೂರ್ಣ ಎಂಬುದು ನನ್ನ ಭಾವನೆ” ಇದು ಈ ಸಾಹಿತಿಯ ಮನೋಭಾವದ ದರ್ಶನ ಮಾಡಿಸುತ್ತದೆ !!

ಬಹುತೇಕ ಕ್ರೀಡಾಪಟುಗಳು 40ನೇ ವಯಸಿಗೆಲ್ಲ ನಿವೃತ್ತಿ ತೆಗೆದುಕೊಳ್ಳಲು ಮುಂದಾಗುತ್ತಾರೆ. ಆದರೆ ಮುರುಕಾಮಿ ಇಲ್ಲಿಯೂ ವಿಭಿನ್ನ ! “ಓಟದ ವಿಷಯದಲ್ಲಿ ನಾನು ಗರಿಷ್ಠ ಸಾಧನೆ ಮಾಡಿದ್ದು ನನ್ನ ನಲ್ವತ್ತನೇ ವರ್ಷದ ನಂತರವಷ್ಟೆ” ಎಂಬ ಅಚ್ಚರಿಯ ವಿಷಯ ಹೇಳುತ್ತಾರೆ. ಅಂದರೆ ಇಲ್ಲಿ ಓಟದ ಸಾಧನೆ ಮಾಡುವುದಕ್ಕಾಗಿಯಷ್ಟೇ ಅಲ್ಲ; ಮತ್ತೊಂದು ಮಹೋನ್ನತ ಉದ್ದೇಶವೂ ಇದೆ.

ಈ ಉದ್ದೇಶ ಅವರೇ ಹೇಳುವ ಇದೊಂದು ವಾಕ್ಯದಲ್ಲಿ ತಿಳಿಯುತ್ತದೆ. “ ನಾನು ಪ್ರತಿದಿನ ತಪ್ಪದೇ ಓಡುತ್ತೇನೆ ಅಂದಾಗ ಹಲವರು ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ನಿಮ್ಮ ಮನೋಬಲ ನಿಜಕ್ಕೂ ಅದ್ಬುತ” ಎಂದು ಹೇಳುತ್ತಾರೆ. ನಿರಂತರತೆಯಿಂದ “ಲಯ “ ಕಂಡುಕೊಳ್ಳಲು ಸಾಧ್ಯ ಎಂಬುದು ಹರುಕಿ ಮುರುಕಾಮಿ ಕಂಡುಕೊಂಡ ಅನುಭಾವ !

ಓಡುವಾಗ ಅದರ ಲಯಕ್ಕೆ ಅನುಗುಣವಾಗಲು ಇಷ್ಟದ ಸಂಗೀತ ಕೇಳುವುದು, ಸಂಗೀತ ಕೇಳುತ್ತಾ ನೋವು ಮರೆಯುವುದು; ಸಂಗೀತದ ಲಯಕ್ಕೆ ಅನುಗುಣವಾಗಿ ಓಡುವುದು ತನ್ಮೂಲಕ ಬದುಕಿನ ಲಯವನ್ನು, ಬರೆವಣಿಗೆಯ ಲಯವನ್ನು ಕಾಪಿಟ್ಟುಕೊಳ್ಳವುದೇ ಹರುಕಿ ಮುರುಕಾಮಿ ಉದ್ದೇಶ !

ನಾವು ಬದುಕಿನಲ್ಲಿ ಲಯವೊಂದನ್ನು ಕಂಡುಕೊಳ್ಳಬೇಕಿದೆ ಎಂಬುದನ್ನು ವಾಚ್ಯವಾಗಿ ಹೇಳದೇ ಕೃತಿಯಲ್ಲಿ ಕೃತಿಯಾಗಿ ಹೇಳಲಾಗಿದೆ. ಇಂಥ ಪುಸ್ತಕವನ್ನು ಇಂಗ್ಲಿಷ್ ನಿಂದ (ಜಪಾನಿ ಭಾಷೆಯಿಂದ ಇಂಗ್ಲಿಷ್ ಗೆ ಅನುವಾದಗೊಂಡ ಕೃತಿ) ಸಾಹಿತಿ ರವಿ ಕುಮಾರ ಹಂಪಿ ಸೊಗಸಾಗಿ ಕನ್ನಡೀಕರಿಸಿದ್ದಾರೆ. ಮೌಲಿಕ ಅನುವಾದಿತ ಕೃತಿಗಳನ್ನು ಪ್ರಕಟಣೆಗೆ ಹೆಸರಾದ “ಸೃಷ್ಟಿ ಪಬ್ಲಿಕೇಷನ್ಸ್” ಇದನ್ನು ಪ್ರಕಟಿಸಿದೆ. ಗುಣಮಟ್ಟದ ಕಾಗದ ಬಳಸಿರುವ ಈ ಪುಸ್ತಕದ ಬೆಲೆ 160 ರೂಪಾಯಿ. ರಿಯಾಯತಿ ಬಗ್ಗೆ ನೇರವಾಗಿ 94484 39998 ನಂಬರಿಗೆ ಪೋನ್ ಮಾಡಿ ವಿಚಾರಿಸಬಹುದು

Similar Posts

1 Comment

  1. ಪುಸ್ತಕದ ಪರಿಚಯ ಸೊಗಸಾಗಿದೆ. ಓದಲು ಪ್ರೇರೇಪಿಸುತ್ತದೆ. ಧನ್ಯವಾದಗಳು💐💐

Leave a Reply

Your email address will not be published. Required fields are marked *