Home ಪರಿಸರಪಕ್ಷಿಗಳು ಮಹಿಳೆಯರಿಗೆ ಹೆದರುತ್ತವೆ ಏಕೆ ?

ಪಕ್ಷಿಗಳು ಮಹಿಳೆಯರಿಗೆ ಹೆದರುತ್ತವೆ ಏಕೆ ?

by Kumara Raitha
2 comments

ವಿವಿಧ ಕ್ಷೇತ್ರಗಳಲ್ಲಿ ಅಧ್ಯಯನಗಳು ಮುಂದುವರಿದಂತೆ ಅಚ್ಚರಿದಾಯಕ ವಿಷಯಗಳು ಮನುಕುಲದ ಅರಿವಿಗೆ ಬಂದಿವೆ, ಬರುತ್ತಿವೆ ಮತ್ತು ಬರಲಿವೆ. ಪಕ್ಷಿಗಳ ನಡವಳಿಕೆ ಅಧ್ಯಯನ ಮಾಡುವ ಪಕ್ಷಿವಿಜ್ಞಾನಿಗಳು ಅಚ್ಚರಿದಾಯಕ ವಿಷಯ ಗುರುತಿಸಿದ್ದಾರೆ. ಅದೇನೆಂದರೆ ಪಕ್ಷಿಗಳು ಮಹಿಳೆಯರನ್ನು ಕಂಡು ಬೆದರುತ್ತವೆ ! ನಿಜಕ್ಕೂ ಇದು ಅಚ್ಚರಿಯ ವಿಷಯ ತಾನೇ ?

ಮುಖ್ಯವಾಗಿ ನಗರ ಪ್ರದೇಶಗಳಲ್ಲಿ ವಾಸಿಸುವ ಪಕ್ಷಿಗಳು ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರನ್ನು ಕಂಡು ಬೇಗನೆ ಹಾರಿಹೋಗುತ್ತವೆ ಎಂಬುದು ಪಕ್ಷಿವಿಜ್ಞಾನಿಗಳು ನಡೆಸಿದ ಅಧ್ಯಯನದಿಂದ ಗೊತ್ತಾಗಿದೆ.

ಯುರೋಪಿನ ಚೆಕಿಯಾ, ಫ್ರಾನ್ಸ್, ಜರ್ಮನಿ, ಪೋಲೆಂಡ್ ಮತ್ತು ಸ್ಪೇನ್ ಈ ಐದು ದೇಶಗಳಲ್ಲಿ ಪಕ್ಷಿಗಳ ನಡವಳಿಕೆ ಕುರಿತು ಸಂಶೋಧನೆ ನಡೆಸಲಾಯಿತು. ಸಂಶೋಧಕರು ಉದ್ಯಾನವನಗಳಲ್ಲಿ ಪಕ್ಷಿಗಳತ್ತ ನಡೆದುಕೊಂಡು ಹೋಗಿ, ಪಕ್ಷಿಗಳು ಎಷ್ಟು ದೂರದಲ್ಲಿದ್ದಾಗ ಹಾರಿಹೋಗುತ್ತವೆ ಎಂಬುದನ್ನು ಅಳತೆ ಮಾಡಿದರು. ಇದನ್ನು ‘ಫ್ಲೈಟ್ ಇನಿಶಿಯೇಶನ್ ಡಿಸ್ಟೆನ್ಸ್’ (Flight Initiation Distance) ಎಂದು ಕರೆಯಲಾಗುತ್ತದೆ.

 ಇದರಿಂದ ಕಂಡುಬಂದ ಫಲಿತಾಂಶ ಎಂದರೆ  ಸರಾಸರಿಯಾಗಿ, ಪುರುಷರು ಪಕ್ಷಿಗಳ ಹತ್ತಿರ ಹೋಗುವುದಕ್ಕಿಂತ ಒಂದು ಮೀಟರ್ (ಸುಮಾರು 3.3 ಅಡಿ) ಮುಂಚಿತವಾಗಿಯೇ ಮಹಿಳೆಯರನ್ನು ಕಂಡು ಪಕ್ಷಿಗಳು ಹಾರಿಹೋದವು. ಗುಬ್ಬಚ್ಚಿಗಳು, ಪಾರಿವಾಳಗಳು ಸೇರಿದಂತೆ ಸುಮಾರು 37 ಜಾತಿಯ ಪಕ್ಷಿಗಳಲ್ಲಿ ಈ ವರ್ತನೆ ಕಂಡುಬಂದಿದೆ.

ಪಕ್ಷಿಗಳು ಪುರುಷ ಮತ್ತು ಮಹಿಳೆಯರ ನಡುವಿನ ವ್ಯತ್ಯಾಸವನ್ನು ಹೇಗೆ ಗುರುತಿಸುತ್ತವೆ ಎಂಬುದು ವಿಜ್ಞಾನಿಗಳಿಗೆ ಆಶ್ಚರ್ಯ ಉಂಟು ಮಾಡಿದೆ. ಮಹಿಳೆಯರ ಮೈ ಗಂಧ (Scent), ಶರೀರದ ಆಕಾರ ಅಥವಾ ನಡೆಯುವ ಶೈಲಿಯ ಆಧಾರದ ಮೇಲೆ ಪಕ್ಷಿಗಳು ಈ ವ್ಯತ್ಯಾಸ ಗುರುತಿಸುತ್ತಿರಬಹುದು ಎಂದು ಅಂದಾಜಿಸಲಾಗಿದೆ.

ಪಕ್ಷಿಗಳು ಮಹಿಳೆಯರನ್ನು ನೋಡಿ ಹೆಚ್ಚು ಏಕೆ ಹೆದರುತ್ತವೆ ಎಂಬ ಪ್ರಶ್ನೆಗೆ ವಿಜ್ಞಾನಿಗಳ ಬಳಿ ಸದ್ಯಕ್ಕೆ ನಿಖರವಾದ ಉತ್ತರವಿಲ್ಲ. “ಪಕ್ಷಿಗಳು ತಮ್ಮ ಪರಿಸರವನ್ನು ಎಷ್ಟು ಸೂಕ್ಷ್ಮವಾಗಿ ಗಮನಿಸುತ್ತವೆ ಎಂಬುದಕ್ಕೆ ಇದೊಂದು ಉದಾಹರಣೆ” ಎಂದು ಸಂಶೋಧಕರು ಹೇಳಿದ್ದಾರೆ.

ಈ ಸಂಶೋಧನೆಯು ನಗರದ ಪರಿಸರ ವ್ಯವಸ್ಥೆ ಮತ್ತು ಪ್ರಾಣಿಗಳು – ಪಕ್ಷಿಗಳು ಮನುಷ್ಯರನ್ನು ಹೇಗೆ ಗ್ರಹಿಸುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಮುಂದಿನ ದಿನಗಳಲ್ಲಿ ಈ ನಿಗೂಢತೆಗೆ ಕಾರಣವೇನು ಎಂಬುದನ್ನು ತಿಳಿಯಲು ವಿಜ್ಞಾನಿಗಳು ಹೆಚ್ಚಿನ ಸಂಶೋಧನೆ ನಡೆಸಲಿದ್ದಾರೆ. ಆದರೆ ಸದ್ಯಕ್ಕಂತೂ ಪಕ್ಷಿಗಳು ಮಹಿಳೆಯರನ್ನು ಕಂಡು ಏಕೆ ಹೆಚ್ಚು ಹೆದರುತ್ತವೆ ಎಂಬ ವಿಷಯ ನಿಗೂಢವಾಗಿದೆ !

You may also like

2 comments

Dr. lokesh Mosale May 15, 2026 - 12:53 pm

ಸುಗಂಧ ದ್ರವ್ಯ ಮಾತ್ರ ಅಲ್ಲ… ಹೆಣ್ಣು ಮಕ್ಕಳು ತೊಡುವ ಗಾಢ ಬಣ್ಣಗಳ ಉಡುಪುಗಳಿಂದ ಕೂಡ ಪಕ್ಷಿಗಳು ಬೆಚ್ಚುತ್ತವೆ.. ಸುಗಂಧ ದ್ರವ್ಯ ಹಾಗೂ ಗಾಡ ಬಣ್ಣದ ಉಡುಪುಗಳು ಗಂಡಸರು ತೊಟ್ಟರೆ ಕೂಡ ಹಾರಿಹೋಗುತ್ತವೆ. ದೇಹದ ಚಲನೆ ಕೂಡ ಮುಖ್ಯವಾಗಿರುತ್ತದೆ ಇಲ್ಲಿ ಹೆಂಗಸರಿಗೆ ಮಾತ್ರ ಹಕ್ಕಿಗಳು ಹಾರಿ ಹೋಗಲಾರವು. ಮನುಷ್ಯನ ಮ್ಯಾನಲಿಸಂ ಮುಖ್ಯ ಅಷ್ಟೇ….

Reply
Dr. [email protected] May 15, 2026 - 1:01 pm

ಮನುಷ್ಯರ ತೊಡುವ ಗಾಢಬಣ್ಣದ ಬಟ್ಟೆ. ಸುಗಂಧ ದ್ರವ್ಯಗಳ ವಾಸನೆಯಿಂದ ಪಕ್ಷಿಗಳು ಬೆದರುತ್ತವೆ. ಗಂಡು- ಹೆಣ್ಣು ನಡುವೆ ಯಾವುದೇ ವ್ಯತ್ಯಾಸ ಇರುವುದಿಲ್ಲ ಹೆಣ್ಣು ಮಕ್ಕಳಿಗೆ ಮಾತ್ರ ಪಕ್ಷಿಗಳು ಬೆಚ್ಚುವುದಿಲ್ಲ

Reply

Leave a Comment

error: Content is protected !!