ಸಾಹಿತ್ಯ

ಇಂಟರ್ ನ್ಯಾಷನಲ್ ಬುಕರ್ ಪ್ರೈಜ್ ಮಹತ್ವ ಪಡೆದಿರುವ ಹಿನ್ನೆಲೆಯೇನು ?

ಭಾರತೀಯರ ದೃಷ್ಟಿಯಲ್ಲಿ ಇಂಟರ್ ನ್ಯಾಷನಲ್ ಬುಕರ್ ಪ್ರೈಜ್ ಮಹತ್ವ ಪಡೆದಿರುವ ಹಿನ್ನೆಲೆಯೇನು, ಅವುಗಳ ವಿಚಿತ್ರ ಷರತ್ತುಗಳೇನು
ಭಾಗ – 2
ಬುಕರ್ ಪ್ರೈಜ್
ಬೂಕರ್ ಪ್ರೈಜ್ ಮತ್ತು ಅಂತರರಾಷ್ಟ್ರೀಯ ಬೂಕರ್ ಪ್ರೈಜ್ ಎರಡು ವಿಭಿನ್ನ ಬಹುಮಾನಗಳು. (ಇವುಗಳು ಪ್ರಶಸ್ತಿಗಳಲ್ಲ; ರೂಢಿಗತವಾಗಿ ಪ್ರಶಸ್ತಿ ಎಂದು ಕರೆಯಲಾಗುತ್ತಿದೆ ಎಂದು ವಿವರಿಸಿದ್ದೆ.‌ಆಸಕ್ತರು ನನ್ನ ವಾಲ್ ನಲ್ಲಿ ನೋಡಬಹುದು) ಬೂಕರ್ ಪ್ರೈಜ್ ಅನ್ನು ಹಿಂದೆ “ಮ್ಯಾನ್ ಬೂಕರ್ ಪ್ರೈಜ್” ಎಂದು ಕರೆಯುತ್ತಿದ್ದರು.1969 ರಲ್ಲಿ ಯುಕೆಯಲ್ಲಿ ಸ್ಥಾಪನೆಯಾದ ಬೂಕರ್ ಪ್ರೈಜ್ ಅನ್ನು ಆರಂಭದಲ್ಲಿ ಕಾಮನ್‌ವೆಲ್ತ್ ಬರಹಗಾರರಿಗೆ ಮಾತ್ರ ಬಹುಮಾನ ನೀಡಲಾಗುತ್ತಿತ್ತು. ನಂತರ ಅದನ್ನು ಜಗತ್ತಿನ ಇತರ ರಾಷ್ಟ್ರಗಳ ಬರಹಗಾರರಿಗೂ ನೀಡಲು ಆರಂಭಿಸಲಾಯಿತು. ಷರತ್ತೇನೆಂದರೆ ಮೂಲ‌ ಲೇಖಕರೇ ನೇರವಾಗಿ ಇಂಗ್ಲಿಷಿನಲ್ಲಿ ಬರೆದಿರಬೇಕು ಮತ್ತು ಇಂಗ್ಲೆಂಡ್ ಅಥವಾ ಐರ್ಲೆಂಡಿನಲ್ಲಿಯೇ ಪ್ರಕಟವಾಗಿರಬೇಕು.
ಇಂಟರ್ ನ್ಯಾಷನಲ್ ಬುಕರ್ ಪ್ರೈಜ್
2005ರಲ್ಲಿ ಬುಕರ್ ಪ್ರತಿಷ್ಠಾನದವರು ಇಂಟರ್ ನ್ಯಾಷನಲ್ ಬುಕರ್ ಪ್ರೈಜ್ ಸಹ ಆರಂಭಿಸಿದರು. ಇದನ್ನು ಇಂಗ್ಲೆಂಡ್ ಅಥವಾ ಐರ್ಲೆಂಡ್‌ನಲ್ಲಿ ಪ್ರಕಟವಾದ ಯಾವುದೇ ಭಾಷೆಯಿಂದ ಇಂಗ್ಲಿಷ್‌ಗೆ ಅನುವಾದಿಸಲಾದ ಕಾದಂಬರಿ ಅಥವಾ ಸಣ್ಣ ಕಥೆಗಳ ಸಂಕಲನಕ್ಕಾಗಿ ನೀಡಲಾಗುತ್ತದೆ. ಪ್ರತಿಷ್ಠಾನದ ಅಧಿಕೃತ ವೆಬ್ ಸೈಟಿನಲ್ಲಿಯೇ ಇದನ್ನು ಅನುವಾದಕರ ಕಾರ್ಯವನ್ನು ಗುರುತಿಸಿ ನೀಡಲಾಗುತ್ತದೆ ಎಂದು ಹೇಳಲಾಗಿದೆ.
ಬೂಕರ್ ಪ್ರೈಜ್ ವಿಜೇತ ಭಾರತೀಯ ಲೇಖಕರು
ಸಲ್ಮಾನ್ ರಶ್ದಿ ಅವರ ಮಿಡ್‌ನೈಟ್ಸ್ ಚಿಲ್ಡ್ರನ್ ಕೃತಿಗೆ 1984ರಲ್ಲಿ ಬುಕರ್ ಪ್ರೈಜ್ ದೊರೆಯಿತು. ಇದಿವರ ಎರಡನೇ ಪುಸ್ತಕ. ಇಷ್ಟರಲ್ಲಾಗಲೇ ರಶ್ದಿ ಅವರು ಅಂತರಾಷ್ಟ್ರೀಯ ಮಟ್ಟದ ಇಂಗ್ಲಿಷ್ ಸಾಹಿತ್ಯ ಲೋಕದ ಓದುಗರ ನಡುವೆ ಮನೆ ಮಾತಾಗಿದ್ದರು. ಇವರಿಗೆ ಪ್ರಶಸ್ತಿ ನೀಡಿದ ನಂತರ ವಿಶೇಷವಾಗಿ ಭಾರತೀಯ ಸಾಹಿತ್ಯ ಲೋಕದಲ್ಲಿ ಬುಕರ್ ಪ್ರೈಜ್ ಗುರುತಾಯಿತು‌! ಬುಕರ್ ಬಂದಿದ್ದರಿಂದಾಗಿಯೇ ರಶ್ದಿ ಅವರ ಜನಪ್ರಿಯತೆ ಹೆಚ್ಚಲಿಲ್ಲ. ಅವರಿಗೆ ಅದಕ್ಕೂ‌‌ ಮೊದಲೇ ತಾರಾ ಮೌಲ್ಯವಿತ್ತು. ಪ್ರೈಜ್ ನೀಡಿದ್ದರಿಂದ ಬುಕರ್ ಮೌಲ್ಯ ಹೆಚ್ಚಾಯಿತಷ್ಟೆ !
ಸಾಹಿತಿ ಅರುಂಧತಿ ರಾಯ್ ಅವರು ನೇರ ದಿಟ್ಟ ಹಾಗೂ ನಿರ್ಭಿತ ಮಾತುಗಳಿಗೆ ಹೆಸರಾದವರು. ಇವರ “ದಿ ಗಾಡ್ ಆಫ್ ಸ್ಮಾಲ್ ಥಿಂಗ್ಸ್” ಕೃತಿಗೆ 1997 ದೊರೆಯಿತು ! ಇಷ್ಟರಲ್ಲಾಗಲೇ ಇವರು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದರು.‌ಭಾರತದ ಬುದ್ದಿಜೀವಿಗಳ‌ ನಡುವೆ ವಿಶೇಷ ಮನ್ನಣೆಗೂ ಪಾತ್ರರಾಗಿದ್ದರು. ಇವರಿಗೆ ಬುಕರ್ ನೀಡಿದ್ದರಿಂದ ಆ ಪ್ರೈಜ್ ಮಹತ್ವ ಹೆಚ್ಚಾಯಿತು.
ಸಾಹಿತಿ ಕಿರಣ್ ದೇಸಾಯಿ ಅವರ “ನಷ್ಟದ‌ ಪರಂಪರೆ” ಕೃತಿಗೆ 2006ರಲ್ಲಿ ಬುಕರ್ ಪ್ರೈಜ್ ದೊರೆತಿದೆ.
ಮೂಲತಃ ಕನ್ನಡಿಗರಾದ ಅರವಿಂದ ಅಡಿಗ ಅವರು ಮದ್ರಾಸ್ (ಚೆನ್ನೈ)ಯಲ್ಲಿ ಜನಿಸಿದರೂ 10ನೇ ತರಗತಿ ತನಕ ಮಂಗಳೂರಿನಲ್ಲಿಯೇ ಓದಿದರು.‌2008ರಲ್ಲಿ‌ ಇವರ “ದಿ ವೈಟ್ ಟೈಗರ್” ಕೃತಿಗೆ ಬುಕರ್ ಪ್ರೈಜ್ ದೊರೆಯಿತು.
ಅನುವಾದಿತ ಕೃತಿಗಾಗಿ ನೀಡಲಾಗುವ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ
ಉತ್ತರ ಪ್ರದೇಶದ ಸಾಹಿತಿ ಗೀತಾಂಜಲಿ ಶ್ರೀ ಅವರ ರೆಟ್ ಸಮಾಧಿ ಹಿಂದಿ ಕೃತಿಯ ಇಂಗ್ಲಿಷ್ ಅವತರಣಿಕೆ “ಟೂಂಬ್ ಆಫ್ ಸ್ಯಾಂಡ್” ಕೃತಿಗೆ 2022ರಲ್ಲಿ ಇಂಟರ್ ನ್ಯಾಷನಲ್ ಬುಕರ್ ಪ್ರೈಜ್ ದೊರೆತಿದೆ. ಇದನ್ನು ಡೈಸಿ ರಾಕ್‌ವೆಲ್ ಅವರು ಇಂಗ್ಲಿಷಿಗೆ ಅನುವಾದಿಸಿದ್ದಾರೆ.
ಸಾಹಿತಿ ಬಾನು ಮುಷ್ತಾಕ್ ಅವರ ಆಯ್ದ ಸಣ್ಣ ಕಥೆಗಳ ಸಂಕಲನವನ್ನು ದೀಪಾ ಭಸ್ತಿ ಅವರು “ ಹಾರ್ಟ್ ಲ್ಯಾಂಪ್” ಹೆಸರಿನಲ್ಲಿ ಇಂಗ್ಲಿಷಿಗೆ ಅನುವಾದಿಸಿದರು. 2024ರಲ್ಲಿ ಇಂಗ್ಲೆಂಡಿನಲ್ಲಿ ಅಲ್ಲಿನ “And other stories “ ಪ್ರಕಾಶನ ಸಂಸ್ಥೆಯಿಂದ ಪ್ರಕಟವಾಯಿತು. 2025ರಲ್ಲಿ ಅನುವಾದಕ್ಕಾಗಿ “ಇಂಟರ್ ನ್ಯಾಷನಲ್ ಬುಕರ್ ಪ್ರೈಜ್” ದೊರೆಯಿತು.
ಬುಕರ್ ಪ್ರತಿಷ್ಠಾನದ‌ ವೆಬ್ ಸೈಟ್ ಈ ಅಂಶವನ್ನು ಸ್ಪಷ್ಟವಾಗಿ ಹೇಳುತ್ತದೆ. ಇದೇ ಸಂದರ್ಭದಲ್ಲಿ ಅನುವಾದಕ್ಕಾಗಿ ಆಯ್ದುಕೊಂಡ ಹಿನ್ನೆಲೆಯಲ್ಲಿ ಮೂಲ‌ಕೃತಿಯ ಲೇಖಕರನ್ನು ಬಹುಮಾನದಲ್ಲಿ ಅರ್ಧಭಾಗ ನೀಡಿ ಗೌರವಿಸಲಾಗುತ್ತದೆ.
ಪ್ರೈಜ್ ಗಳ ನಡುವೆ ಗೊಂದಲಗಳು
ಬಹಳಷ್ಟು ಮಂದಿ ಬುಕರ್ ಮತ್ತು ಇಂಟರ್ ನ್ಯಾಷನಲ್ ಬುಕರ್ ಪ್ರೈಜ್ ಬಗ್ಗೆ ಗೊಂದಲಕ್ಕೆ ಒಳಗಾಗುತ್ತಾರೆ. ಸಲ್ಮಾನ್ ರಶ್ದಿ, ಅರುಂಧತಿ ರಾಯ್ ಅವರಿಗೆ ಬಂದ‌ ಪ್ರೈಜ್ ಬಂದಿರಬಹುದು ಎಂದು ಭಾವಿಸುತ್ತಾರೆ.
ಟೀಕೆಗಳಿವೆ
ಇಂಟರ್ ನ್ಯಾಷನಲ್ ಬುಕರ್ ಪ್ರೈಜ್ ಹೆಸರಿಗಷ್ಟೇ ಇಂಟರ್ ನ್ಯಾಷನಲ್ ! ಇದು ಬಹುತೇಕ ರಾಷ್ಟ್ರಗಳ ಕೃತಿಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂಬ ಟೀಕೆಗಳಿವೆ.
ವಿಚಿತ್ರ ಷರತ್ತುಗಳು
ಕೃತಿಯ ಮೂಲ ಲೇಖಕರಾಗಲಿ, ಅನುವಾದಕರಾಗಲಿ ನೇರವಾಗಿ ಪ್ರೈಜ್ ಸ್ಪರ್ಧೆಗೆ ಕೃತಿಗಳನ್ನು ಕಳಿಸುವಂತಿಲ್ಲ. ಭಾರತದಲ್ಲಿಯೇ ಮುದ್ರಿತವಾಗಿ, ಪ್ರಕಟವಾದ ಕೃತಿಗಳನ್ನು ಪರಿಗಣಿಸುವುದಿಲ್ಲ. ಇಂಗ್ಲೆಂಡ್ ಅಥವಾ ಐರ್ಲೆಂಡಿನ ಮುದ್ರಣಾಲಯದಲ್ಲಿ ಮುದ್ರಿತವಾಗಿ, ಅಲ್ಲಿಯ ಸಂಸ್ಥಾಪಿತ ಪ್ರಕಾಶನ ಸಂಸ್ಥೆಯಿಂದ‌ ಪ್ರಕಟವಾಗಿರಬೇಕು.‌ಈ ಪ್ರಕಾಶನ ಸಂಸ್ಥೆಯೇ ಬುಕರ್ ಪ್ರೈಜಿಗೆ ಕೃತಿ ಕಳಿಸಬೇಕು. ಬರೆದವರು, ಅನುವಾದಿಸಿದವರಿಗೆ ಇಲ್ಲದ ಹಕ್ಕು ಪ್ರಕಾಶನ ಸಂಸ್ಥೆಗಷ್ಟೇ ಇರುವುದು ವಿಚಿತ್ರವಲ್ಲವೇ ? ಮುಖ್ಯವಾಗಿ ಇದು ಅಲ್ಲಿನ ಪ್ರಕಾಶನ ಸಂಸ್ಥೆಗಳಿಗೆ ಅನುಕೂಲ‌ ಮಾಡಿಕೊಡುವ ಧೋರಣೆ ಹೊಂದಿದೆ ಎಂಬುದನ್ನೂ ಹೇಳುತ್ತದೆ.
ಇನ್ನೂ ಮುಖ್ಯವಾದ ಸಂಗತಿಯೆಂದರೆ ಅನುವಾದಕರು ತಮ್ಮ‌ ಹಸ್ತಪ್ರತಿ (ಸಾಫ್ಟ್ ಕಾಪಿ)ಯನ್ನು ಪ್ರಕಾಶನ ಸಂಸ್ಥೆಗೆ ಕೊಟ್ಟ ನಂತರ ಕಾದಂಬರಿ ಅಥವಾ ಕಥೆಗಳಲ್ಲಿ ಅವರು ಸೂಚಿಸುವ ಯಾವುದೇ ಬದಲಾವಣೆಗಳನ್ನೂ ಮಾಡಲೇಬೇಕು.‌ನಮ್ಮ ನೀತಿ ನಿರೂಪಣೆಗಳಿಗೆ ವಿರುದ್ಧ ಎಂದು‌ ಹೇಳುವಂತಿಲ್ಲ.
ಲೇಖನ ಪೂರ್ಣಗೊಳಿಸುವ ಮುನ್ನ; ದೀಪಾ ಭಸ್ತಿ ಅವರು ಇಂಗ್ಲಿಷಿಗೆ ಅನುವಾದಿಸಿರುವ ರೀತಿ, ಭಾಷಾ ಪ್ರೌಢಿಮೆ, ಗೊಂದಲಗಳಿಲ್ಲದಂತೆ ಆಕರ್ಷಕವಾಗಿ ನಿರೂಪಿಸಿರುವ ರೀತಿ ಭಾರಿ‌‌ ಮೆಚ್ಚುಗೆಗೆ ಪಾತ್ರವಾಗಿದೆ. ಇದರಿಂದಾಗಿ ಇದುವರೆಗೂ “ಹಾರ್ಟ್ ಲ್ಯಾಂಪ್” ಕೃತಿಯ 230,000 (ಎರಡು ಲಕ್ಷದ ಮುವತ್ತು ಸಾವಿರ)ಕ್ಕೂ ಹೆಚ್ಚು ಪ್ರತಿಗಳು ಮಾರಾಟವಾಗಿವೆ.

Leave a Reply

Your email address will not be published. Required fields are marked *

error: Content is protected !!