ಸಾಹಿತ್ಯ

 ಅಪಾರ ಹಣದ ಮೊತ್ತ ಹೊಂದಿದ ವಿಪುಲ ಪ್ರೈಜ್ ಗಳು

ಜಗತ್ತಿನ ಬೇರೆಬೇರೆ ಭಾಷೆಗಳ ಸಾಹಿತ್ಯವನ್ನು ಇಂಗ್ಲಿಷಿಗೆ ಅನುವಾದ ಮಾಡುವುದನ್ನು ಪ್ರೋತ್ಸಾಯಿಸುವುದಕ್ಕಾಗಿ ಇಂಗ್ಲೆಂಡ್ ಅಂದರೆ ಯುನೈಟೆಡ್ ಕಿಂಗ್ಡಮ್ ಮತ್ತು ಐರ್ಲೇಂಡಿನಲ್ಲಿ ಅನೇಕ‌ ಸಾಹಿತ್ಯಕ ಬಹುಮಾನಗಳಿವೆ. ಇವುಗಳಿಗೆ ಹುಬ್ಬೇರಿಸುವಷ್ಟು ಮೊತ್ತದ ನಗದು ಬಹುಮಾನಗಳಿವೆ. ಇಂಥವುಗಳಲ್ಲಿ ಇಂಟರ್ ನ್ಯಾಷನಲ್ ಬುಕರ್ ಪ್ರೈಜ್ ಒಂದಷ್ಟೆ !
ಇವುಗಳಲ್ಲಿ ಒಂದೆರಡು ಪ್ರೈಜ್ ಗಳನ್ನು ಅನುವಾದಕರ ಜೊತೆಗೆ ಮೂಲ ಲೇಖಕರಿಗೆ ನೀಡಲಾಗುತ್ತದೆ. ಉಳಿದಂತೆ ಬಹುತೇಕ ಎಲ್ಲ ಬಹುಮಾನಗಳನ್ನು ಅನುವಾದಕರಿಗೆ ಮಾತ್ರ ನೀಡಲಾಗುತ್ತದೆ.
ಬಹುಮಾನ ನೀಡುವ ಬಹುತೇಕ ಸಂಸ್ಥೆಗಳು ವಿಧಿಸುವ ಷರತ್ತು ಏನೆಂದರೆ “ಬಹುಮಾನಕ್ಕಾಗಿ ಸಲ್ಲಿಸುವ ಸಾಹಿತ್ಯಕ ಪುಸ್ತಕಗಳು ಇಂಗ್ಲೆಂಡ್ ಅಥವಾ ಐರ್ಲೆಂಡಿನಲ್ಲಿಯೇ ಪ್ರಕಟವಾಗಿರಬೇಕು” ಇದು ವಿಚಿತ್ರ ಎನಿಸುವುದಿಲ್ವ ? ಏಕೆ ಅಂತ ಮುಂದೆ ವಿವರಿಸ್ತೀನಿ ! ಈ ಷರತ್ತುಗಳ ವಿಷಯದಲ್ಲಿ “ಇಂಟರ್ ನ್ಯಾಷನಲ್ ಬುಕರ್ ಪ್ರತಿಷ್ಠಾನ ನೀಡುವ ಪ್ರೈಜ್ ಕೂಡ ಹೊರತಲ್ಲ. ಗಮನಾರ್ಹ ಎಂದರೆ ಅದು ಮತ್ತಷ್ಟು ವಿಚಿತ್ರ ಷರತ್ತುಗಳನ್ನು ವಿಧಿಸುತ್ತದೆ ! ಒಟ್ಟಾರೆ ಇಂಗ್ಲೆಂಡ್,ಐರ್ಲೆಂಡಿನಲ್ಲಿ ಎಷ್ಟು ಪ್ರೈಜ್ ಗಳಿವೆ ಎಂಬುದನ್ನು ನೋಡೋಣ
1. ಅಂತರರಾಷ್ಟ್ರೀಯ ಬುಕರ್ ಪ್ರೈಜ್
ಇಂಗ್ಲಿಷ್‌ಗೆ ಅನುವಾದಿಸಲಾದ ಮತ್ತು ಯುಕೆ ಅಥವಾ ಐರ್ಲೆಂಡ್‌ನಲ್ಲಿಯೇ ಪ್ರಕಟವಾದ ಒಂದು ಕಾದಂಬರಿ ಅಥವಾ ಸಣ್ಣ ಕಥೆಗಳ ಸಂಕಲನದ ಪುಸ್ತಕಕ್ಕಾಗಿ ವಾರ್ಷಿಕವಾಗಿ ನೀಡಲಾಗುತ್ತದೆ. ಬಹುಮಾನವನ್ನು ಲೇಖಕ ಮತ್ತು ಅನುವಾದಕ ಇಬ್ಬರಿಗೂ ಹಂಚಲಾಗುತ್ತದೆ. ಇದರ ಒಟ್ಟು ಮೊತ್ತ £50,000 (ಭಾರತೀಯ ಹಣದ ಮೊತ್ತ 60 ಲಕ್ಷ)
2. ಡಬ್ಲಿನ್ ಸಾಹಿತ್ಯ ಪ್ರಶಸ್ತಿ
ಪ್ರಪಂಚದಾದ್ಯಂತದ ಇರುವ ಗ್ರಂಥಾಲಯಗಳು ನಾಮನಿರ್ದೇಶನ ಸಲ್ಲಿಸಬಹುದು, ಇಂಗ್ಲಿಷ್‌ನಲ್ಲಿ ಬರೆಯಲಾದ ಅಥವಾ ಅನುವಾದಿಸಲಾದ ಕಾದಂಬರಿ ಕೃತಿಗೆ ವಾರ್ಷಿಕ ಪ್ರಶಸ್ತಿ ನೀಡಲಾಗುತ್ತದೆ. ಬಹುಮಾನದ ಮೊತ್ತ £100,000.‌ಭಾರತೀಯ ಹಣದ‌ ಮೊತ್ತ 1.20 ಲಕ್ಷ (ಒಂದು‌ಕೋಟಿ ಇಪ್ಪತ್ತು ಲಕ್ಷ ರೂಪಾಯಿ) ವಿಜೇತ ಕೃತಿ ಅನುವಾದವಾಗಿದ್ದರೆ ಇದೇ ಮೊತ್ತದಲ್ಲಿ ಕಡಿತ ಮಾಡಿ ಅನುವಾದ ಮಾಡಿದವರಿಗೆ £25,000 ನೀಡಲಾಗುತ್ತದೆ.
3. ಅನುವಾದದಲ್ಲಿ ಮಹಿಳೆಯರಿಗೆ ವಾರ್ವಿಕ್ ಪ್ರೈಜ್
ಅನುವಾದಿತ ಸಾಹಿತ್ಯದಲ್ಲಿನ ಲಿಂಗ ಅಸಮಾನತೆಯನ್ನು ಪರಿಹರಿಸುವ ವಾರ್ಷಿಕ ಬಹುಮಾನವಿದು. ಮಹಿಳೆ ರಚಿಸಿದ ಆಯ್ಕೆಯಾದ ಕೃತಿಗೆ £1,000 ಬಹುಮಾನವನ್ನು ನೀಡಲಾಗುತ್ತದೆ. ಇದನ್ನು ಲೇಖಕಿ ಮತ್ತು ಅನುವಾದಕಿ ನಡುವೆ ಸಮಾನವಾಗಿ ಹಂಚಲಾಗುತ್ತದೆ.
4. ಸೈಫ್ ಘೋಬಾಶ್ ಬನಿಪಾಲ್ ಪ್ರೈಜ್
ಅರೇಬಿಕ್ ಸಾಹಿತ್ಯ ಕೃತಿಗಳನ್ನು ಇಂಗ್ಲಿಷ್‌ಗೆ ಅನುವಾದಿಸಿದವರಿಗೆ ವಾರ್ಷಿಕ ಪ್ರಶಸ್ತಿ. ವಿಜೇತರು £3,000 ಪಡೆಯುತ್ತಾರೆ.
5. ವೊಂಡೆಲ್ ಪ್ರೈಜ್
ಡಚ್ ಸಾಹಿತ್ಯ ಕೃತಿಗಳನ್ನು ಇಂಗ್ಲಿಷ್‌ಗೆ ಅನುವಾದಿಸಿದವರಿಗೆ ತ್ರೈಮಾಸಿಕ ಪ್ರೈಜ್ £5,000
6. ಜಾನ್ ಫ್ಲೋರಿಯೊ ಪ್ರೈಜ್
ಇಟಾಲಿಯನ್ ಸಾಹಿತ್ಯ ಕೃತಿಗಳನ್ನು ಇಂಗ್ಲಿಷ್‌ಗೆ ಅನುವಾದಿಸಿದವರಿಗೆ ದ್ವೈವಾರ್ಷಿಕ ಪ್ರೈಜ್ ನೀಡಲಾಗುತ್ತದೆ. ವಿಜೇತರು £3,000 ಪಡೆಯುತ್ತಾರೆ.
7. ಹೊಸ ಅನುವಾದಕ್ಕಾಗಿ ಗೋಥೆ-ಇನ್ಸ್ಟಿಟ್ಯೂಟ್ ಪ್ರೈಜ್
ಜರ್ಮನ್ ಸಾಹಿತ್ಯವನ್ನು ಇಂಗ್ಲಿಷ್‌ಗೆ ಅನುವಾದಿಸಿದವರಿಗೆ ದ್ವೈವಾರ್ಷಿಕ ಪ್ರಶಸ್ತಿ ನೀಡಲಾಗುತ್ತದೆ. ಇದರ ಮೊತ್ತ €1,000. ಇದನ್ನು ಲೀಪ್‌ಜಿಗ್ ಪುಸ್ತಕ ಮೇಳದಲ್ಲಿ ಪ್ರದಾನ ಮಾಡಲಾಗುತ್ತದೆ.
8. ಶ್ಲೆಗೆಲ್-ಟೀಕ್ ಪ್ರೈಜ್
ಜರ್ಮನ್ ಸಾಹಿತ್ಯ ಕೃತಿಗಳನ್ನು ಇಂಗ್ಲಿಷ್‌ಗೆ ಅನುವಾದಿಸಿದವರಿಗೆ ವಾರ್ಷಿಕ ಬಹುಮಾನ ನೀಡಲಾಗುತ್ತದೆ. ವಿಜೇತರು £3,000 ಪಡೆಯುತ್ತಾರೆ.
9. ಬರ್ನಾರ್ಡ್ ಶಾ ಪ್ರಶಸ್ತಿ
ಸ್ವೀಡಿಷ್ ಸಾಹಿತ್ಯ ಕೃತಿಗಳನ್ನು ಇಂಗ್ಲಿಷ್‌ಗೆ ಅನುವಾದಿಸಿದವರಿಗೆ ದ್ವೈವಾರ್ಷಿಕ ಪ್ರೈಜ್ ನೀಡಲಾಗುತ್ತದೆ. ವಿಜೇತರು £3,000 ಪಡೆಯುತ್ತಾರೆ.
10. ಗ್ರೇಟ್ ಬ್ರಿಟನ್ ಸಸಕವಾ ಫೌಂಡೇಶನ್ (GBSF) ಅನುವಾದ ಪ್ರೈಜ್
ಜಪಾನೀಸ್ ಸಾಹಿತ್ಯ ಕೃತಿಗಳನ್ನು ಇಂಗ್ಲಿಷ್‌ಗೆ ಅನುವಾದಿಸಿದವರಿಗೆ ನೀಡುವ ವಾರ್ಷಿಕ ಪ್ರೈಜ್. ವಿಜೇತರಿಗೆ £3,000 ಸಿಗುತ್ತದೆ.
11. ಜಾನ್ ಕ್ಯಾಲ್ಡರ್ ಅನುವಾದ ಪ್ರೈಜ್
ಮಹತ್ವಾಕಾಂಕ್ಷೆಯ,ನಾವೀನ್ಯ ಪೂರ್ಣ ಸಾಹಿತ್ಯ ಕೃತಿಗಳನ್ನು ಇಂಗ್ಲಿಷ್‌ಗೆ ಅನುವಾದಿಸಿದವರಿಗೆ ನೀಡುವ ವಾರ್ಷಿಕ ಪ್ರೈಜ್. ವಿಜೇತರಿಗೆ £3,000 ಸಿಗುತ್ತದೆ.
12. ಜಾನ್ ಡ್ರೈಡನ್ ಅನುವಾದ ಸ್ಪರ್ಧೆ
ಯಾವುದೇ ಭಾಷೆಯಿಂದ ಇಂಗ್ಲಿಷ್‌ಗೆ ಅಪ್ರಕಟಿತ ಸಾಹಿತ್ಯ ಅನುವಾದಗಳಿಗಾಗಿ ನೀಡುವ ವಾರ್ಷಿಕ ಬಹುಮಾನಗಳು (£350, £200, £100) ನಗದು ಹಣದ ಜೊತೆಗೆ ಬ್ರಿಟಿಷ್ ತುಲನಾತ್ಮಕ ಸಾಹಿತ್ಯ ಸಂಘದ ಸದಸ್ಯತ್ವವನ್ನು ನೀಡುತ್ತದೆ.
ಅರ್ಹತೆ: ಯಾವುದೇ ಭಾಷೆಯಿಂದ ಇಂಗ್ಲಿಷ್‌ಗೆ ಕವನ, ಗದ್ಯ ಅಥವಾ ನಾಟಕದ ಅಪ್ರಕಟಿತ ಅನುವಾದಗಳು.
13. ಆಕ್ಸ್‌ಫರ್ಡ್-ವೀಡೆನ್‌ಫೆಲ್ಡ್ ಅನುವಾದ ಪ್ರೈಜ್
ಯಾವುದೇ ಭಾಷೆಯಿಂದ ಇಂಗ್ಲಿಷಿಗೆ ಮಾಡಲಾದ ಅನುವಾದಗಳಿಗೆ ವಾರ್ಷಿಕ ಪ್ರೈಜ್.
14. ಅನುವಾದದಲ್ಲಿ ಮಕ್ಕಳ ಸಾಹಿತ್ಯಕ್ಕಾಗಿ ಮಾರ್ಷ್ ಪ್ರೈಜ್
ಯುಕೆಯಲ್ಲಿ ಪ್ರಕಟವಾದ, ವಿದೇಶಿ ಭಾಷೆಯಿಂದ ಇಂಗ್ಲಿಷ್‌ಗೆ ಮಕ್ಕಳ ಪುಸ್ತಕದ ಅತ್ಯುತ್ತಮ ಅನುವಾದವನ್ನು ಗುರುತಿಸುವ ದ್ವೈವಾರ್ಷಿಕ ಬಹುಮಾನ
ಸಾಹಿತ್ಯಕ ಪ್ರೈಜ್ ಗಳು ವಾರ್ಷಿಕ, ದ್ವೈವಾರ್ಷಿಕ ಅಥವಾ ತ್ರೈಮಾಸಿಕವಾಗಿದ್ದು, ಬಹುಮಾನದ ಮೊತ್ತವು £350 ರಿಂದ £100,000 ವರೆಗೆ ಇರುತ್ತದೆ.ಹೆಚ್ಚಿನವು ಯುಕೆಯಲ್ಲಿಯೇ ನಿರ್ವಹಣೆಯಾಗುತ್ತವೆ. ಡಬ್ಲಿನ್ ಸಾಹಿತ್ಯ ಪ್ರಶಸ್ತಿಯು ಐರ್ಲೆಂಡ್‌ನಲ್ಲಿದೆ.
ಏಕಪ್ಪಾ ಇಷ್ಟೆಲ್ಲ ಪ್ರೈಜ್ ಗಳಿವೆ ಎಂದು‌ ನಿಮಗನಿಸಬಹುದು ! ಇಂಗ್ಲೆಂಡ್, ಐರ್ಲೆಂಡಿನಲ್ಲಿ‌‌ ಸಾಹಿತ್ಯ ಓದುವ ಹಸಿವು ಅಗಾಧವಾಗಿದೆ. ಈ ಬಹುಮಾನಗಳಲ್ಲಿ ಯಾವುದೇ ಒಂದನ್ನು ಪಡೆದ ಕೃತಿಯು ಕನಿಷ್ಟ ಎಂದರೂ 2 ಲಕ್ಷ ಪ್ರತಿಗಳು‌ ಪ್ರಿಂಟಾಗುತ್ತವೆ.
ಮುಂದಿನ ಕಂತಿನಲ್ಲಿ: ಭಾರತೀಯರ ದೃಷ್ಟಿಯಲ್ಲಿ ಇಂಟರ್ ನ್ಯಾಷನಲ್ ಬುಕರ್ ಪ್ರೈಜ್ ಮಹತ್ವ ಪಡೆದಿರುವ ಹಿನ್ನೆಲೆಯೇನು, ಅವುಗಳ ವಿಚಿತ್ರ ಷರತ್ತುಗಳೇನು

Leave a Reply

Your email address will not be published. Required fields are marked *

error: Content is protected !!