ವಿದೇಶದ ಸಾಹಿತ್ಯ ಪ್ರೈಜ್ ಪಡೆದವರಿಗೆ ನಮ್ಮ ಸರ್ಕಾರ ಹಣ ನೀಡುವುದು ಸೂಕ್ತವೇ ?
ವಿದೇಶದ ಸಾಹಿತ್ಯ ಪ್ರೈಜ್ ಪಡೆದವರಿಗೆ ನಮ್ಮ ಸರ್ಕಾರ ಹಣ ನೀಡಿ ಪುರಸ್ಕರಿಸುವ ಅಗತ್ಯವಿದೆಯೇ
ಭಾಗ -3
ಈ ಪ್ರಶ್ನೆ ಬಹಳ ಮುಖ್ಯ. ಏಕೆಂದರೆ ಇಂಗ್ಲೆಂಡ್ – ಐರ್ಲೆಂಡಿನಲ್ಲಿ ಸ್ಪರ್ಧೆಯಲ್ಲಿ ಜಯಗಳಿಸುವ ಇಂಗ್ಲಿಷ್ ಸಾಹಿತ್ಯ ಕೃತಿಗಳು, ಇಂಗ್ಲಿಷಿಗೆ ಅನುವಾದಿತವಾದ ಕೃತಿಗಳಿಗೆ ಬಹುಮಾನ ನೀಡುವ ಅನೇಕ ಖಾಸಗಿ ಸಂಸ್ಥೆಗಳಿವೆ. ಇವುಗಳು ಅಲ್ಲಿಯ ಪುಸ್ತಕ ಪ್ರಕಾಶಕರಿಂದಲೇ ಎಂಟ್ರಿ ಆಗಬೇಕು ಎಂಬ ನಿಯಮ ವಿಧಿಸಿವೆ.
ಏಕೆ ಹೀಗೆ ? ಸ್ಪರ್ಧೆಗೆ ತಮ್ಮ ಕೃತಿ ಕಳಿಸುವ ಲೇಖಕರ ದೇಶದ ಪ್ರಕಾಶಕರಿಂದಲೇ ಎಂಟ್ರಿ ಬಯಸುವುದಿಲ್ಲ. ಒಂದು ವೇಳೆ ಅವಕಾಶವಿದ್ದರೆ ಇಲ್ಲಿಯ ಪ್ರಕಾಶಕರು ಪುಸ್ತಕ ಮಾರಾಟದಿಂದ ಕೋಟ್ಯಾಂತರ ರೂಪಾಯಿ ಲಾಭ ಮಾಡುವ ಅವಕಾಶ ದೊರೆಯುತ್ತಿತ್ತು ಅಲ್ಲವೇ ?
ಖಾಸಗಿ ಸಂಸ್ಥೆಗಳು ತಮ್ಮ ಅನುಕೂಲಗಳಿಗಾಗಿ ನಡೆಸುವ ಸಾಹಿತ್ಯ ಸ್ಪರ್ಧೆಗಳ ಬಹುಮಾನ ವಿಜೇತರಿಗೆ ಇಲ್ಲಿಯ ಸರ್ಕಾರ ಅಪಾರ ನಗದು ಹಣ ನೀಡಿ ಪ್ರೋತ್ಸಾಹಿಸುವ ಅಗತ್ಯವೇನಿದೆ ?
ಒಂದು ವೇಳೆ ಇಂಗ್ಲೆಂಡಿನ ಸಾಹಿತಿ/ ಅನುವಾದಕರು ಭಾರತದ ಖಾಸಗಿ ಸಂಸ್ಥೆ ನೀಡುವ ಬಹುಮಾನ ಗೆದ್ದರೆ ಅಲ್ಲಿಯ ಸರ್ಕಾರ ಭಾರಿಮೊತ್ತದ ಹಣ ನೀಡುತ್ತಿತ್ತೇ ? ಖಂಡಿತ ಇಲ್ಲ. ಇಂಗ್ಲೆಂಡಿನ ನಿವಾಸಿ ನೋಬೆಲ್ ಪ್ರೈಜ್ ಗೆದ್ದ ಸಂದರ್ಭದಲ್ಲಿಯೂ ಅವರು ನಗದು ನೀಡುವುದಿಲ್ಲ. ಅಲ್ಲಿಯ ಪ್ರಧಾನಿ ಒಂದು ಅಭಿನಂದನೆ ಹೇಳುತ್ತಾರಷ್ಟೇ. ಹಣವೇನಿದ್ದರೂ ನೋಬೆಲ್ ಪ್ರೈಜ್ ನೀಡುವ ಪ್ರತಿಷ್ಠಾನದಿಂದಲೇ ಬಂದಿರುತ್ತದೆ.
ಇಂಗ್ಲಿಷ್ ಅನುವಾದಕ್ಕಾಗಿ ನಡೆಸಿದ ಸ್ಪರ್ಧೆಯಲ್ಲಿ ದೀಪಾ ಭಸ್ತಿ ಗೆದ್ದಿದ್ದಾರೆ. ಗೆದ್ದಿರುವ ಕಾರಣಕ್ಕೆ ದೀಪಾ ಭಸ್ತಿ ಅವರಿಗೆ ಬಹುಮಾನ ಸಂದಿದೆ. ಬಹುಮಾನದ ಒಟ್ಟು ಹಣ ಸುಮಾರು 60 ಲಕ್ಷ ರೂಪಾಯಿಯನ್ನು ಅನುವಾದಕರಿಗೂ ಮೂಲ ಕೃತಿಯ ಕತೃವಿಗೂ ಹಂಚಿದ್ದಾರೆ.
ಇಂಟರ್ ನ್ಯಾಷನಲ್ ಬುಕರ್ ಪ್ರೈಜ್ ಏನು ಸಾಹಿತ್ಯದ ನೋಬೆಲ್ ಪ್ರೈಜ್ ಅಲ್ಲ; ಅದು ಹೆಸರಿಗಷ್ಟೆ ಇಂಟರ್ ನ್ಯಾಷನಲ್ ಅಷ್ಟೆ ! ನೋಬೆಲ್ ಪ್ರೈಜ್ ವಿಜೇತರಿಗೇ ಹಣ ನೀಡಿ ಪುರಸ್ಕರಿಸುವ ಪರಿಪಾಠ ಪಾಶ್ಚಿಮಾತ್ಯ ದೇಶಗಳಲಿಲ್ಲ. ಹೀಗಿರುವಾಗ ವಿಚಿತ್ರ ಷರತ್ತುಗಳನ್ನು ವಿಧಿಸುವ ಖಾಸಗಿ ಸಂಸ್ಥೆಯೊಂದು ನೀಡುವ ಬಹುಮಾನ ಪಡೆದವರಿಗೆ ಕರ್ನಾಟಕ ಸರ್ಕಾರ ತಲಾ 10 ಲಕ್ಷ ಹಣ ನೀಡುವ ಅಗತ್ಯವೇನಿತ್ತು ? ಜೊತೆಗೆ ಕೋಟ್ಯಂತರ ರೂಪಾಯಿ ಬೆಲೆ ಬಾಳುವ G ಕೆಟಗರಿ ನೀವೇಶನವನ್ನೂ ನೀಡಲಾಗಿದೆ !!
“ಎದೆಯ ಹಣತೆ ಕೃತಿಯನ್ನು ಭಾಷಾಂತರ ಮಾಡಿದ ದೀಪಾ ಭಾಸ್ತಿಯವರನ್ನೂ ನಾವು ಮರೆತಿಲ್ಲ. ಸರ್ಕಾರ ಈಗಾಗಲೇ ದೀಪಾ ಭಾಸ್ತಿ ಹಾಗೂ ಬಾನು ಮುಷ್ತಾಕ್ ಅವರಿಗೆ ತಲಾ ಹತ್ತು ಲಕ್ಷ ರೂ.ಗಳನ್ನು ನೀಡಿ, ಸನ್ಮಾನಿಸಿ, ಗೌರವಿಸಿದ್ದೇವೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಹಾಗಿದ್ದರೆ ನಮ್ಮಲ್ಲಿಯೂ ಪ್ರತಿಷ್ಠಿತ ಸಾಹಿತ್ಯ ಪ್ರಶಸ್ತಿಗಳನ್ನು ನೀಡುವ ಕೇಂದ್ರ ಸಾಹಿತ್ಯ ಅಕಾಡೆಮಿ, ಕರ್ನಾಟಕ ಸಾಹಿತ್ಯ ಅಕಾಡೆಮಿಗಳಿವೆ. ಖಾಸಗಿ ಸಂಸ್ಥೆಗಳು ನೀಡುವ ಪ್ರಖ್ಯಾತ ಪ್ರಶಸ್ತಿಗಳಿವೆ. ಅವುಗಳನ್ನು ಗಳಿಸಿದವರಿಗೂ ರಾಜ್ಯ ಸರ್ಕಾರ ತಲಾ 10 ಲಕ್ಷ ರೂಪಾಯಿ ಜೊತೆಗೆ G ಕೆಟಗರಿ ನಿವೇಶನ ನೀಡುತ್ತದೆಯೇ ?
ವಿದೇಶದ ಶಂಖದಿಂದ ಬಂದದ್ದು ಮಾತ್ರ ತೀರ್ಥ, ಸ್ವದೇಶ ಶಂಖದಿಂದ ಬಂದಿದ್ದು ಕೇವಲ ನೀರು ಎಂಬ ಧೋರಣೆಯೇಕೆ ?
ಲೇಖನ ಮುಗಿಸುವ ಮುನ್ನ: ಅಮೆರಿಕಾ, ಇಂಗ್ಲೆಂಡ್, ಐರ್ಲೆಂಡ್, ಕೆನಡಾ ಇತ್ಯಾದಿ ಇಂಗ್ಲಿಷ್ ಸ್ಪಿಕಿಂಗ್ ದೇಶಗಳಲ್ಲಿ ಸಾಹಿತ್ಯ ಸ್ಪರ್ಧೆ ನಡೆಸುವ ಹಲವಾರು ಖಾಸಗಿ ಸಂಸ್ಥೆಗಳಿವೆ. ಅವುಗಳು ನೀಡುವ ಪ್ರೈಜ್ ಗಳನ್ನು ಬ್ರಾಂಡಿಂಗ್ ಮಾಡಿವೆ. ಬ್ರಾಂಡೆಡ್ ಆಗಿರುವುದಕ್ಕೂ ಆಗದೇ ಇರುವುದಕ್ಕೂ ವ್ಯತ್ಯಾಸ ನಿಮಗೆ ಗೊತ್ತಿರುತ್ತದೆ.
