Kannadaಪ್ರಸ್ತುತ

ಬಡವ ಮದ್ಯಪ್ರಿಯರ ಮೇಲೆ ಗ್ಯಾರಂಟಿಗಳ ಹೊಡೆತ

ತೆರಿಗೆಗಳಿಲ್ಲದೇ ಯಾವುದೇ ಸರ್ಕಾರ ನಡೆಸಲು ಸಾಧ್ಯವಿಲ್ಲ. ಆದರೆ ತೆರಿಗೆ ಜನತೆಯ ಮೇಲೆ ಅದರಲ್ಲಿಯೂ ಆರ್ಥಿಕ ದುರ್ಬಲರು ಅಂದರೆ ಬಡವರಿಗೆ ಹೊರೆಯಾಗಬಾರದು. ತಾಳಿಕೊಳ್ಳುವ ಸಾಮರ್ಥ್ಯಕ್ಕಿಂತಲೂ ಹೆಚ್ಚಿನ ತೆರಿಗೆ ಹಾಕಿದರೆ ಶ್ರೀಮಂತರೇ ತತ್ತರಿಸುತ್ತಾರೆ. ಹೀಗಿರುವಾಗ ಬಡವರ ಗತಿಯೇನು ? ಕಾಂಗ್ರೆಸ್‌ ಪಕ್ಷ ನೇತೃತ್ವದ ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಮದ್ಯ ತೆರಿಗೆ ನೀತಿ ಬಡವರ ಪಾಲಿಗೆ ಹೇಗೆ ಮಾರಕವಾಗಿದೆ ಎಂಬ ಮಾಹಿತಿ ನಿಮ್ಮ ಮುಂದಿದೆ.

ಕರ್ನಾಟಕ ಸರ್ಕಾರ 2026ರ  ಹೊಸ ಅಬಕಾರಿ ನೀತಿ (AIB =Alcohol-in-Beverage) ಜಾರಿಗೆ ತಂದಿದೆ. ಇದು ಮುಖ್ಯವಾಗಿ ಗ್ಯಾರಂಟಿ ಸ್ಕೀಮುಗಳ ವೆಚ್ಚ ನಿರ್ವಹಣೆಗಾಗಿ ಎಕ್ಸೈಸ್ ರೆವೆನ್ಯೂ ಹೆಚ್ಚಿಸುವ ಉದ್ದೇಶ ಹೊಂದಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಇದರ ಮೂಲಕ ಹೊಂದಿರುವ  ಗುರಿ ಸುಮಾರು ₹45,000 ಕೋಟಿ ತೆರಿಗೆ ಸಂಗ್ರಹ

ಹೊಸ ನೀತಿಯ ಮುಖ್ಯ ಬದಲಾವಣೆಗಳೆಂದರೆ ಪಾಲಿಯಂಗ್ ಬದಲಾವಣೆ. ಹಿಂದೆ ಬಾಟಲ್ ವಾಲ್ಯೂಮ್ (ಬಲ್ಕ್ ಲೀಟರ್) ಆಧರಿಸಿ ತೆರಿಗೆ ಹಾಕಲಾಗುತ್ತಿತ್ತು. ಈಗ ಆಲ್ಕೋಹಾಲ್‌ನ ನಿಜ ಪ್ರಮಾಣ (Litre of Alcohol in Beverage – LAIB) ಆಧರಿಸಿ ತೆರಿಗೆ ಹಾಕಲಾಗುತ್ತಿದೆ.

ಸ್ಲ್ಯಾಬ್‌ಗಳ ಕಡಿತ 16 ರಿಂದ 8ಕ್ಕೆ ಇಳಿಕೆ.

ಸರ್ಕಾರಿ ಬೆಲೆ ನಿಯಂತ್ರಣ ತೆಗೆದುಹಾಕಿ, ತಯಾರಕರು (ಡಿಸ್ಟಿಲರಿಗಳು) ಮಾರುಕಟ್ಟೆ ಆಧರಿಸಿ ಬೆಲೆ ನಿರ್ಧರಿಸುವ ಅವಕಾಶ. ಇದರ ಫಲಿತಾಂಶ ಏನೆಂದರೆ ಕಡಿಮೆ ಬೆಲೆಯ ಲಿಕ್ಕರ್ ಬೆಲೆ ಏರಿಕೆ, ಪ್ರೀಮಿಯಂ ಲಿಕ್ಕರ್ ಮತ್ತು ಕೆಲವು ಬಿಯರ್ ಬೆಲೆ ಶೇಕಡ 20-25 ಇಳಿಕೆ.ಇದರಿಂದ  ಬಡವರಿಗೆ (ಆರ್ಥಿಕ ದುರ್ಬಲರಿಗೆ)  ಹೊಡೆತ !! ಕಾಂಗ್ರೆಸ್‌ ನೇತೃತ್ವದ ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ನೀತಿ ರಿಗ್ರೆಸಿವ್ ಆಗಿದ್ದು ಆರ್ಥಿಕವಾಗಿ ಹಿಂದುಳಿದವರ ಮೇಲೆ ಹೆಚ್ಚು  ಪರಿಣಾಮ ಬೀರುತ್ತದೆ.

ಕಡಿಮೆ ಬೆಲೆಯ IMFL ಅಂದರೆ ದೇಸೀ ಲಿಕ್ಕರ್ಬೆ ಬೆಲೆ ಏರಿಕೆ : 180 ಎಂ.ಎಲ್.‌ ಸಣ್ಣ ಲಿಕ್ಕರ್‌  ಬಾಟಲ್‌ಗಳು ಉದಾಹರಣೆಗೆ ಒ ಟಿ.,  ಓಲ್ಡ್ ಮಂಕ್ ಇತ್ಯಾದಿ ಸ್ಥಳೀಯ ಬ್ರ್ಯಾಂಡ್‌ಗಳು ಬೆಲೆ ಶೇಕಡ 20-30% ಏರಿದೆ. ಅಂದರೆ 60-70 ರೂಪಾಯಿಯಿಂದ  80 ರಿಂದ 130 ರೂ ತನಕ ಏರಿಕೆ ಆಗಿದೆ. ಇದು ಬಡವರು/ಕಾರ್ಮಿಕ ವರ್ಗದವರು ಹೆಚ್ಚು ಕೊಳ್ಳುವ ವಿಭಾಗ. ಇದರಿಂದ ಬಡವರ ಆದಾಯದ ದೊಡ್ಡ ಭಾಗ ಮದ್ಯಕ್ಕೆ ಹೋಗುತ್ತದೆ. ಬೆಲೆ ಏರಿಕೆಯಿಂದ ಅವರ ಖರ್ಚು ಹೆಚ್ಚಾಗುತ್ತದೆ. ಇದೇ ಸಮಯದಲ್ಲಿ ಶ್ರೀಮಂತರು ಕುಡಿಯುವ ಪ್ರೀಮಿಯಂ ಲಿಕ್ಕರ್ ಬೆಲೆ ಇಳಿದಿದೆ. ಅಂದರೆ ಹೊಸ ಅಬಕಾರಿ ನೀತಿ ಪ್ರತ್ಯಕ್ಷ – ಪರೋಕ್ಷವಾಗಿ ಶ್ರೀಮಂತ ಮದ್ಯ ಪ್ರಿಯರಿಗೆ  ಲಾಭ, ಬಡವ ಮದ್ಯ ಪ್ರಿಯರಿಗೆ ನಷ್ಟ ಎಂಬ ನೀತಿ ಹೊಂದಿದೆ.

ಇದರಿಂದ ಆರ್ಥಿಕ ದುರ್ಬಲ ವರ್ಗಗಳ ಮೇಲೆ ಸಾಮಾಜಿಕವಾಗಿ, ಆರ್ಥಿಕವಾಗಿ ಆಗುವ ದುಷ್ಪರಿಣಾಮ ಅಪಾರ.  ಕುಟುಂಬದ ಮೇಲಿನ ಆರ್ಥಿಕ ಒತ್ತಡ ಹೆಚ್ಚುತ್ತದೆ. ಅನಧಿಕೃತ (ಕಳ್ಳಭಟ್ಟಿ) ಮದ್ಯದತ್ತ ಜನರು ತಿರುಗುವ ಅಪಾಯವಿದೆ. ಇಂಥ ಲಿಕ್ಕರ್‌ ಸೇವನೆಯಿಂದ  ಆರೋಗ್ಯಕ್ಕೆ ಭಾರಿ ಹಾನಿಯುಂಟಾಗುತ್ತದೆ. ಸಾವು ಸಹ ಸಂಭವಿಸಬಹುದು. ಗ್ಯಾರಂಟಿ ಸ್ಕೀಮುಗಳಿಗೆ ಹಣ ಸಂಗ್ರಹಿಸುವುದು ಬಡವರ ಜೀವನದ ಮೇಲೆಯೇ ಹೆಚ್ಚು ಭಾರ ಹಾಕುತ್ತದೆ — ಇದನ್ನು “ರಿಚ್ ಬೆನಿಫಿಟ್, ಪೂರ್ ಪೇ” ಎಂದು ಹೇಳಬಹುದು.

ಕರ್ನಾಟಕ ಸರ್ಕಾರ ತಂದಿರುವ ಹೊಸ ಅಬಕಾರಿ ನೀತಿಯಿಂದ ಡಿಮೆ ಬೆಲೆಯ ಲಿಕ್ಕರ್ ತಯಾರಿಸುವ ಡಿಸ್ಟಿಲರಿಗಳಿಗೆ ಅಪಾಯವಿದೆ. ದೇಸೀಯ ಸಣ್ಣ ಮತ್ತು ಮಧ್ಯಮ ಡಿಸ್ಟಿಲರಿಗಳ ಮಾಲೀಕರು  ಸಹ  ತುಂಬಾ ತೊಂದರೆಗೆ ಸಿಲುಕಿದ್ದಾರೆ. ಕಡಿಮೆ ಸ್ಲ್ಯಾಬ್‌ಗಳಲ್ಲಿ (lower 4-5 slabs) ತೆರಿಗೆ ಹೆಚ್ಚಾಗುತ್ತದೆ. ಅವರ ಮುಖ್ಯ ಉತ್ಪನ್ನಗಳ ಬೆಲೆ ಏರಿದ್ದರ ಕಾರಣದಿಂದ ಮಾರಾಟ ಕುಸಿಯುವ ಸಾಧ್ಯತೆ ಇರುತ್ತದೆ.ಇದೇ ಸಮಯದಲ್ಲಿ ದುಬಾರಿ ಬೆಲೆಯ ಮದ್ಯ ತಯಾರಿಸುವ ದೊಡ್ಡ ಕಂಪನಿಗಳು ಪ್ರೀಮಿಯಂ ಉತ್ಪನ್ನಗಳ ಬೆಲೆ ಇಳಿಸಿ ಮಾರುಕಟ್ಟೆ ಗೆಲ್ಲುತ್ತವೆ.

ಒಟ್ಟಾರೆಯಾಗಿ ಹೇಳುವುದಾದರೆ ಹೊಸ ಅಬಕಾರಿ ನೀತಿ ರಾಜ್ಯ ಸರ್ಕಾರದ ರೆವೆನ್ಯೂ ಹೆಚ್ಚಿಸುವಲ್ಲಿ ಸಹಾಯಕವಾಗಬಹುದು, ಆದರೆ ಅದು ಬಡವರ ಮೇಲೆ ಹೆಚ್ಚು ಭಾರ ಹಾಕುತ್ತದೆ. ಇದೇ ಸಮಯದಲ್ಲಿ ಸಣ್ಣ ಡಿಸ್ಟಿಲರಿಗಳನ್ನು ದುರ್ಬಲಗೊಳಿಸುತ್ತದೆ. ಇದು “ಪ್ರೀಮಿಯಂಗೆ ಉತ್ತೇಜನ, ಬಜೆಟ್ ಸೆಗ್ಮೆಂಟ್‌ಗೆ ಶಿಕ್ಷೆ” ಎನ್ನುವಂತೆ ಆಗಿದೆ. ಇವೆಲ್ಲದರ ಪರಿಣಾಮ ಬಡವರ ಹಣ ಹಾಳು, ಆರೋಗ್ಯವೂ ಹಾಳು ಮತ್ತು ಕುಟುಂಬದ ನೆಮ್ಮದಿಯೂ ಹಾಳು ಎನ್ನುವಂತೆ ಆಗಿದೆ.

ಕರ್ನಾಟಕದಲ್ಲಿ ಕಡಿಮೆ ಬೆಲೆಯ ಮದ್ಯ  (ಬಜೆಟ್/ಎಕಾನಮಿ IMFL – ಮುಖ್ಯವಾಗಿ ಮೊದಲ 4-5 ಸ್ಲ್ಯಾಬ್‌ಗಳು) ಒಟ್ಟು ಅಬಕಾರಿ ತೆರಿಗೆ ಆದಾಯದಲ್ಲಿ ಬಹುದೊಡ್ಡ ಪಾಲು ಹೊಂದಿದೆ. ಲಿಕ್ಕರ್‌ ಮಾರಾಟದ ಬಾಬ್ತಿನಿಂದ ಕರ್ನಾಟಕ ರಾಜ್ಯ ಸರ್ಕಾರದ 2026-27 ಸಾಲಿನ  ಒಟ್ಟು ಆದಾಯದ  ಅಬಕಾರಿ ಗುರಿ ಸುಮಾರು 45,000 ಕೋಟಿ ರೂಪಾಯಿ. ಇದರಲ್ಲಿ ಕಡಿಮೆ ಬೆಲೆಯ ಮದ್ಯದಿಂದ ಆದಾಯದ ಪಾಲು ಅತ್ಯಧಿಕ. ಮೊದಲ 4-5 ಸ್ಲ್ಯಾಬ್‌ಗಳು  (ಅಗ್ಗದ IMFL 750 ರೂಪಾಯಿ ಒಳಗಿನ ಬ್ರ್ಯಾಂಡ್‌ಗಳು) ಒಟ್ಟು ತೆರಿಗೆ ಆದಾಯದ ಶೇಕಡ 75% ರಿಂದ ಶೇಕಡ  85 ತೆರಿಗೆ ಸಂಗ್ರಹಿಸಿ ಕೊಡುತ್ತವೆ. ಅಂದರೆ, ಕಡಿಮೆ ಬೆಲೆಯ ಮದ್ಯದಿಂದಲೇ ಸುಮಾರು 33,000 ಕೋಟಿ ರೂಪಾಯಿಗಳಿಂದ 38,000 ಕೋಟಿ ರೂಪಾಯಿಗಳವರೆಗೆ ತೆರಿಗೆ ಹಣ ಸಂಗ್ರಹವಾಗುವ ಸಾಧ್ಯತೆ ಇದೆ  ಏಕೆ ಇಷ್ಟು ಹೆಚ್ಚು ಪಾಲು ಎಂಬ ಪ್ರಶ್ನೆ ಎದುರಾಗಬಹುದು. ಬಡವರು ಮತ್ತು ಕೆಳ ಮಧ್ಯಮ ವರ್ಗದವರು  ಕಡಿಮೆ ಬೆಲೆಯ 180 ml, 375 ml ಸಣ್ಣ ಲಿಕ್ಕರ್‌ ಬಾಟಲುಗಳನ್ನೇ ಹೆಚ್ಚಾಗಿ ಖರೀದಿ ಮಾಡುತ್ತಾರೆ.  ಇವುಗಳಲ್ಲಿ ಆಲ್ಕೋಹಾಲ್ ಪ್ರಮಾಣ ಹೆಚ್ಚಿರುವುದರಿಂದ ಹೊಸ AIB ನೀತಿಯಲ್ಲಿ ತೆರಿಗೆ ಹೆಚ್ಚಾಗುತ್ತದೆ.

ಈ ಲೇಖನ ಬಡವರೆಲ್ಲ ಮದ್ಯ ಸೇವನೆ ಮಾಡುತ್ತಾರೆ ಕುಡಿಯುತ್ತಾರೆ ಎಂಬ ತಿರುಳು ಹೊಂದಿಲ್ಲ.  ಮದ್ಯ ಸೇವಿಸುವ ಅಭ್ಯಾಸ ಇರುವ ಆರ್ಥಿಕ ದುರ್ಬಲರಿಗೆ ಸರ್ಕಾರದ ತೆರಿಗೆ ಸಂಗ್ರಹಣೆ ನೀತಿ ಹೇಗೆ ಮಾರಕವಾಗುತ್ತಿದೆ ಎಂದು ಹೇಳುವುದಷ್ಟೆ ನನ್ನ ಗುರಿ

ಕಾಂಗ್ರೆಸ್‌ ಪಕ್ಷ ನೇತೃತ್ವದ ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿಗಳು ಬಡವರ ಉದ್ದಾರ ಮಾಡುತ್ತಿವೆ ಎಂಬ ಸಂಕಥನ ಕಟ್ಟಲು ಪ್ರಯತ್ನಿಸಲಾಗುತ್ತಿದೆ. ವಾಸ್ತವವಾಗಿ ಗ್ಯಾರಂಟಿ ಸ್ಕೀಮುಗಳು ಆರ್ಥಿಕ ದುರ್ಬಲರ ಪಾಲಿಗೆ ಹೊರೆಯಾಗಿದೆ. ಸರ್ಕಾರವು ಬಡವರಿಗೆ ಕಾಯಿಸಿದ ಸರಳಿನ ಬರೆ ಹಾಕುತ್ತಿದೆ. “ರಿಚ್ ಬೆನಿಫಿಟ್, ಪೂರ್ ಪೇ” ಎಂಬ ನೀತಿಯನ್ನು ಅಕ್ಷರಶಃ ಪಾಲಿಸಲಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!