Kannadaಪ್ರಸ್ತುತ

ವಾಸ್ತು ಬೆನ್ನತ್ತಿದ ರಾಜಕಾರಣಿಗಳು ಉದ್ದಾರವಾದ ಉದಾಹರಣೆ ಇದೆಯೇ ?

ಮೂಲಭೂತವಾಗಿ ವಾಸ್ತುಶಾಸ್ತ್ರ ಎನ್ನುವುದು ಗಾಳಿ ಬೆಳಕು ಅನುಗುಣವಾಗಿ ಕಟ್ಟಡ ಕಟ್ಟಲು ಮಾರ್ಗದರ್ಶಿ. ಆದರೆ ಯಾವಾಗ ಇಂಥ ವ್ಯಕ್ತಿಗೆ ಇಂಥ ದಿಕ್ಕಿಗೆ ಮುಖ್ಯ ಬಾಗಿಲು ಇರುವ ಕಟ್ಟಡ ಸೂಕ್ತ, ಇಂಥ ವ್ಯಕ್ತಿ ಇಂಥ ದಿಕ್ಕಿಗೆ ಮುಖ ಮಾಡಿ ಕುಳಿತುಕೊಳ್ಳಬೇಕು ಎಂಬುದೆಲ್ಲ ಬಂತೋ ಅಲ್ಲಿದೀಚೆಗೆ ವಾಸ್ತು ನಂಬುವವರು ದಿಕ್ಕೆಟ್ಟವರಂತೆ ಆಡುತ್ತಿದ್ದಾರೆ.

ಇದೇನೇ ಇರಲಿ ತಪ್ಪಾಗಿ ಗ್ರಹಿಸಲ್ಪಡುತ್ತಿರುವ ವಾಸ್ತು ನಂಬುವುದು ಬಿಡುವುದು ಅವರವರ ವೈಯಕ್ತಿಕ ವಿಚಾರ. ಅವರ ಮನೆ ದುಡ್ಡು ಖರ್ಚು ಮಾಡಿ ಅವರು ಕಟ್ಟಿಸುವ ಕಟ್ಟಡ, ಕಟ್ಟಿಸಿದ ಕಟ್ಟಡ ಇವುಗಳಲ್ಲಿ ಏನಾದರೂ ಬದಲಾವಣೆ ಮಾಡಿಕೊಳ್ಳಲಿ ಅದರಿಂದ ಬಾಧಕವಿಲ್ಲ. ಆದರೆ ರಾಜ್ಯದ ಚುಕ್ಕಾಣಿ ಹಿಡಿದ ಉಖ್ಯಮಂತ್ರಿ, ಮಂತ್ರಿಗಳು ವಾಸ್ತುವಿನ ವಿಚಾರದಲ್ಲಿ ಕಾನೂನು ಮೀರಿದರೆ, ಸರ್ಕಾರಿ ಬೊಕ್ಕಸದ ಹಣ ದುರುಪಯೋಗ ಪಡಿಸಿಕೊಂಡರೆ ಪ್ರಶ್ನೆ ಮಾಡಬೇಕಲ್ಲವೇ ?

ಕುಮಾರ ಕೃಪ ೧೭೦ ವರ್ಷದ ಕಟ್ಟಡ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಮುಖ್ಯಮಂತ್ರಿಯಾದ ನಂತರ ಕುಮಾರ ಕೃಪ ರಸ್ತೆಯಲ್ಲಿರುವ ಕುಮಾರ ಕೃಪ ಕಲ್ಲಿನ ಕಟ್ಟಡವನ್ನು ಮಾರ್ಪಾಡುಗಳೊಂದಿಗೆ ಮುಖ್ಯಮಂತ್ರಿ ಗೃಹ ಕಚೇರಿಯನ್ನಾಗಿ ಮಾಡಿಕೊಳ್ಳಲು ತೀರ್ಮಾನಿಸಿದ್ದಾರೆ.  ಆ ಕಟ್ಟಡ ಇರುವ ಸ್ವರೂಪದಲ್ಲಿಯೇ ಕಚೇರಿ ಮಾಡಿಕೊಂಡಿದ್ದರೆ ಯಾರ ಅಭ್ಯಂತರವೂ ಇರುತ್ತಿರಲಿಲ್ಲ. ಆ ಕಟ್ಟಡ ೧೯೫೬ರಲ್ಲಿ ಅಂದಿನ ಮೈಸೂರು ಸಂಸ್ಥಾನದ ದಿವಾನ್‌ ಶೇಷಾದ್ರಿ ಅಯ್ಯರ್‌ ಅವರ ಸೂಚನೆ ಮೇರೆಗೆ ನಿರ್ಮಾಣವಾಗಿದೆ. ಯಾವುದೇ ೧೦೦ ವರ್ಷ ಮೀರಿದ ಸರ್ಕಾರಿ ಸುಪರ್ದಿಯಲ್ಲಿರುವ ಕಟ್ಟಡದ ಧಕ್ಕೆ ತಾರದಂತೆ ಸಂರಕ್ಷಿಸಬೇಕಾದ್ದು ಸರ್ಕಾರದ ಕರ್ತವ್ಯ. ಆದರೆ ಡಿಕೆ ಶಿವಕುಮಾರ್‌ ಇದನ್ನು ಮರೆತಂತೆ ಕಾಣುತ್ತದೆ. ನೆನಪಿಸಬೇಕಾದ ಅಧಿಕಾರಿಗಳು ನೆನಪಿಸಲ್ಲ ಎಂಬುದೂ ಅರ್ಥವಾಗುತ್ತದೆ.

ವಾಸ್ತು ಶಾಸ್ತ್ರದ ಪ್ರಕಾರ ಉತ್ತರ ದಿಕ್ಕು ಕುಬೇರನ (ಸಂಪತ್ತು ಮತ್ತು ಯಶಸ್ಸಿನ) ದಿಕ್ಕೆಂದು ನಂಬಲಾಗುತ್ತದೆ ಅಥವಾ ನಂಬಿಸಲಾಗುತ್ತದೆ.  ಹಾಗಾಗಿ ಅಧಿಕಾರಸ್ಥ ರಾಜಕಾರಣಿಗಳಲ್ಲಿ ವಾಸ್ತು ನಂಬುವವರು ಆಡಳಿತಗಾರರು ಅಥವಾ ಉದ್ಯಮಿಗಳು ಉತ್ತರಕ್ಕೆ ಮುಖ ಮಾಡಿ ಕುಳಿತುಕೊಳ್ಳಲು ಬಯಸುತ್ತಾರೆ. ಇತ್ತೀಚೆಗೆ ಸರ್ಕಾರಿ ಸಭೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಾನು ಕುಳಿತುಕೊಳ್ಳುವ ಕುರ್ಚಿ ಉತ್ತರ ದಿಕ್ಕಿಗೆ ಅಭಿಮುಖವಾಗಿ ಇರಬೇಕೆಂದು ಹೇಳಿದ್ದು ನಿಮಗೆ ಗೊತ್ತೇ ಇದೆ.

ಕುಮಾರಕೃಪಾದಂತಹ ಪಾರಂಪರಿಕ ಕಟ್ಟಡಗಳನ್ನು ವಾಸ್ತು ಹೆಸರಿನಲ್ಲಿ ಒಡೆಯುವುದು ಅಥವಾ ಮಾರ್ಪಾಡು ಮಾಡುವುದು ಇತಿಹಾಸ ಮತ್ತು ವಾಸ್ತುಶಿಲ್ಪದ ದೃಷ್ಟಿಯಿಂದ ಸರಿಯಲ್ಲ. ಈಗಾಗಲೇ ಸಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಣೆ ಬರುತ್ತಿದೆ. ಪ್ರಜಾಪ್ರಭುತ್ವದಲ್ಲಿ ಆಡಳಿತವು ವೈಜ್ಞಾನಿಕ ಮನೋಭಾವ ಮತ್ತು ಜನಪರ ಕೆಲಸಗಳ ಮೇಲೆ ನಡೆಯಬೇಕೇ ಹೊರತು, ದಿಕ್ಕುಗಳ ಮೇಲಲ್ಲ !!

ವಾಸ್ತುವಿನ ಬೆನ್ನ ಹಿಂದೆ ಬಿದ್ದು ವಿಫಲರಾದ, ಹಿನ್ನಡೆ ಅನುಭವಿಸಿದ ರಾಜಕಾರಣಿಗಳಿದ್ದಾರೆಯೇ?

ಭಾರತದ ರಾಜಕೀಯ ಇತಿಹಾಸದಲ್ಲಿ ವಾಸ್ತು, ಜ್ಯೋತಿಷ್ಯ ಮತ್ತು ಮೂಢನಂಬಿಕೆಗಳನ್ನು ಅತಿಯಾಗಿ ನಂಬಿಯೂ ರಾಜಕೀಯ ಹಿನ್ನಡೆ ಅಥವಾ ಅಧಿಕಾರ ಕಳೆದುಕೊಂಡ ಹಲವು ಪ್ರಮುಖ ನಿದರ್ಶನಗಳಿವೆ:

ತೆಲಂಗಾಣ  ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ (KCR)  ಅವರು ವಾಸ್ತು ಮತ್ತು ಜ್ಯೋತಿಷ್ಯವನ್ನು ವಿಪರೀತ ನಂಬುತ್ತಿದ್ದರು. ಹಳೆಯ ಸಚಿವಾಲಯ (Secretariat) ತಮಗೆ ವಾಸ್ತು ದೋಷ ತರುತ್ತದೆ ಎಂದು ನಂಬಿ, ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಹೊಸ ಸಚಿವಾಲಯ ಕಟ್ಟಿಸಿದರು. ಪ್ರಗತಿ ಭವನ ಎಂಬ ಕಚೇರಿಯನ್ನು ವಾಸ್ತು ಪ್ರಕಾರವೇ ನಿರ್ಮಿಸಿಕೊಂಡರು. ಆದರೂ ಕಳೆದ ಚುನಾವಣೆಯಲ್ಲಿ ಅವರು ಭಾರಿ ಸೋಲು ಕಂಡು ಅಧಿಕಾರ ಕಳೆದುಕೊಳ್ಳಬೇಕಾಯಿತು.

ಕರ್ನಾಟಕದ ಜೆಡಿಎಸ್ ನಾಯಕರಾದ ಎಚ್. ಡಿ. ರೇವಣ್ಣ , ಕುಮಾರಸ್ವಾಮಿ ವಾಸ್ತು ಮತ್ತು ಜ್ಯೋತಿಷ್ಯಕ್ಕೆ ಎಷ್ಟು ಪ್ರಾಮುಖ್ಯತೆ ನೀಡುತ್ತಾರೆ ಎಂಬುದು ಎಲ್ಲರಿಗೂ ಗೊತ್ತು. ಎಚ್.ಡಿ. ರೇವಣ್ಣ ಅವರು ಮಂತ್ರಿಯಾಗಿದ್ದಾಗ ವಾಸ್ತು ಕಾರಣಕ್ಕಾಗಿ  ಹೊಳೆನರಸೀಪುರದಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದರು. ಅವರು ವಿಧಾನಸೌಧದಲ್ಲಿ ಇದ್ದ ದಿನಗಳಿಗಿಂತಲೂ ಹೊಳೇನರಸೀಪುರದಲ್ಲಿ ಇದ್ದ ದಿನಗಳೇ ಹೆಚ್ಚು!  ಕುಮಾರಸ್ವಾಮಿ ಅವರು  ಸಿಎಂ ಆಗಿದ್ದಾಗ ತಾಜ್ ವೆಸ್ಟ್ ಎಂಡ್ ಹೋಟೆಲ್ ರೂಮ್ ಅನ್ನೇ ಕಚೇರಿ ಮಾಡಿಕೊಂಡಿದ್ದರು. ಆದರೂ ೨೦೧೯ ರಲ್ಲಿ ಅವರ ಸಮ್ಮಿಶ್ರ ಸರ್ಕಾರ ಪತನವಾಗುವುದನ್ನು ತಡೆಯಲು ವಾಸ್ತುವಿನಿಂದ ಸಾಧ್ಯವಾಗಲಿಲ್ಲ.

ಅವಿಭಜಿತ ಆಂಧ್ರಪ್ರದೇಶದ  ಎನ್‌.ಟಿ. ರಾಮರಾವ್ ಅವರು ಮುಖ್ಯಮಂತ್ರಿಯಾಗಿದ್ದಾಗ ತಮ್ಮ ಕಚೇರಿಯ ವಾಸ್ತು ಬದಲಾಯಿಸಿದ್ದರು. ಕಚೇರಿಗೆ ಹೋಗುವ ದಾರಿಯನ್ನೇ ಬದಲಿಸಿದ್ದರು. ಆದರೆ ಅಂತಿಮವಾಗಿ ಅವರ ಅಳಿಯ ಚಂದ್ರಬಾಬು ನಾಯ್ಡು ಅವರಿಂದಲೇ ರಾಜಕೀಯ ಬಂಡಾಯ ಎದುರಿಸಿ, ಅಧಿಕಾರ ಕಳೆದುಕೊಳ್ಳಬೇಕಾಯಿತು.

ದೆಹಲಿಯ ಕಾಂಗ್ರೆಸ್ ಮತ್ತು ಬಿಜೆಪಿ ಕಚೇರಿಗಳಲ್ಲೂ ಹಲವು ಬಾರಿ ವಾಸ್ತು ದೋಷ ನಿವಾರಣೆಯ ಪೂಜೆಗಳು ನಡೆದಿವೆ. ಆದರೆ ರಾಜಕೀಯ ಏರಿಳಿತಗಳು ಜನರ ಒಲವುಮತ್ತು ಆಡಳಿತದ ವೈಖರಿ ಮೇಲೆಯೇ ನಿರ್ಧಾರವಾಗಿವೆ.

ಇತಿಹಾಸವನ್ನು ಗಮನಿಸಿದರೆ, ರಾಜಕಾರಣಿಗಳಿಗೆ ಕಚೇರಿಯ ವಾಸ್ತುಗಿಂತ ಆಡಳಿತದ ವಾಸ್ತು ಅಂದರೆ ಜನಪರ ಕೆಲಸಗಳು, ಸರಿಯಾದ ನಿರ್ಧಾರಗಳು ಮತ್ತು ಭ್ರಷ್ಟಾಚಾರ ರಹಿತ ಆಡಳಿತ ಇದ್ದರೆ ಮಾತ್ರ ಜನ ಅವರನ್ನು ಕೈಹಿಡಿಯುತ್ತಾರೆ. ವಾಸ್ತು ಕೇವಲ ಮನಸ್ಸಿನ ನೆಮ್ಮದಿಗೆ ಸಹಕಾರಿಯಾಗಬಹುದೇ ಹೊರತು, ರಾಜಕೀಯ ಯಶಸ್ಸಿನ ಗ್ಯಾರಂಟಿ ಅಲ್ಲ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಸ್ತು ನಂಬುವವರಲ್ಲ. ಕುಳಿತುಕೊಳ್ಳುವ ಕುರ್ಚಿ ದಿಕ್ಕು ಬದಲಿಸಲಿಲ್ಲ. ಜ್ಯೋತಿಷಿಗಳ ಮೊರೆ ಹೋಗಲಿಲ್ಲ. ಆದರೂ ಕರ್ನಾಟಕದ ಮುಖ್ಯಮಂತ್ರಿಯಾಗಿ ೮ ವರ್ಷ ರಾಜ್ಯಭಾರ ಮಾಡಿದರು. ಅಲ್ಲವೇ ?

Leave a Reply

Your email address will not be published. Required fields are marked *

error: Content is protected !!