ವೈಷ್ಣವ ಪಂಥದ ದಾಸ ಪರಂಪರೆಯಲ್ಲಿ ಗುರುತಿಸಿಕೊಳ್ಳುವ ಪ್ರಮುಖರಲ್ಲಿ ಕನಕದಾಸರು ಸೇರಿದ್ದಾರೆ. ಗಮನಾರ್ಹ ಸಂಗತಿ ಎಂದರೆ ಇವರು ಹರಿದಾಸ ಪರಂಪರೆಯಲ್ಲಿ ತಳ ಸಮುದಾಯದ ಏಕೈಕ ವ್ಯಕ್ತಿ. ತಾರತಮ್ಯದ ನೋವುಂಡ ಕಾರಣದಿಂದಲೇ ಸಮಾನತೆ ಪ್ರತಿಪಾದಿಸಿದರು. ಅದರ ಬಗ್ಗೆ ಸಾಹಿತ್ಯವನ್ನೂ ರಚಿಸಿದರು.

“ಕುಲಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯನೇದಾದರೂ ಬಲ್ಲಿರಾ ಬಲ್ಲಿರಾ” ಎಂಬ ಪಲ್ಲವಿಯಿಂದ ಆರಂಭವಾಗುವ ಇವರ ರಚನೆ ಬಹು ಜನಪ್ರಿಯ. ಇದರಲ್ಲಿ ಜಾತಿ ಶ್ರೇಷ್ಠತೆ ವ್ಯಸನ, ಜಾತಿಪದ್ಧತಿಯನ್ನು ಕಟುವಾಗಿ ಟೀಕಿಸಿದ್ದಾರೆ.
ಈ ವರ್ಷ ಅಂದರೆ 2024ಕ್ಕೆ ಕನಕದಾಸರದು 525 ಅಥವಾ 530ನೇ ಜಯಂತಿ. ಸುಮಾರು 98 ವರ್ಷ ತುಂಬು ಬಾಳ್ವೆ ನಡೆಸಿದ ಕನಕದಾಸರು ಮೃತರಾದ 400 ವರ್ಷಗಳಿಗೂ ಅಧಿಕ ಸಮಯ ಕಳೆದರೂ ಅವರ ಸಮಾನತೆ ಆಶಯ ಈಡೇರಿತೇ ? ಇತರೆಡೆ ಇರಲಿ ಅವರು ತಮ್ಮ ಇಷ್ಟ ದೈವವನ್ನು ಒಲಿಸಿಕೊಂಡ ಉಡುಪಿಯ ಕೃಷ್ಣದೇವಸ್ಥಾನದಲ್ಲಿಯಾದರೂ ಸಮಾನತೆ ಆಶಯ ಈಡೇರಿದೆಯೇ ?

ತಿಮ್ಮಪ್ಪನಾಯಕರು ಕುರುಬ ಸಮುದಾಯದವರು. ವಿಜಯನಗರ ಸಾಮ್ರಾಜ್ಯದ ಬಂಕಾಪುರ ಪ್ರಾಂತ್ಯದ ಡಣ್ಣಾಯಕ ಆಗಿದ್ದವರು. ಯುದ್ಧದ ಸಂದರ್ಭದಲ್ಲಿ ಉಂಟಾದ ವೈರಾಗ್ಯ ಆಧ್ಯಾತ್ಮದೆಡೆಗೆ ಸೆಳೆಯಿತು. ವಿಷ್ಣುವನ್ನು ಆರಾಧಿಸುವ ವೈಷ್ಣವ ಪಂಥದ ದಾಸ ಪರಂಪರೆಗೆ ಸೇರಿ ಕನಕದಾಸರೆನ್ನಿಸಿಕೊಂಡರು. ಶ್ರೀಕೃಷ್ಣ ಇವರ ನೆಚ್ಚಿನ ದೈವ !

ತಮ್ಮ ನೆಚ್ಚಿನ ದೈವವನ್ನು ಕಾಣಲು ಉಡುಪಿಯ ಶ್ರೀಕೃಷ್ಣ ದೇವಸ್ಥಾನಕ್ಕೆ ಹೋದ ಇವರನ್ನು ಒಳಗೆ ಬಿಡಲಿಲ್ಲ. ದೈವ ದರ್ಶನ ಮಾಡಲೇಬೇಕು ಎಂದು ಕನಕರು ನಿಶ್ಚಯಿಸಿದರು. ದೈವವನ್ನೇ ತಮ್ಮತ್ತ ತಿರುಗಿಸಿಕೊಂಡರು ! ದೇವಸ್ಥಾನದ ಗೋಡೆ ಬಿರುಕು ಬಿಟ್ಟಿತು. ಗರ್ಭಗುಡಿಯಲ್ಲಿ ಮುಗುಳ್ನಗುತ್ತಾ ನಿಂತಿದ್ದ ಶ್ರೀಕೃಷ್ಣ ದರ್ಶನವಾಯಿತು. ಇದು ಪ್ರತೀತಿ. ಇದರ ಬಗ್ಗೆ ದಾಖಲೆಗಳಿಲ್ಲ. ಆದರೆ ಸಮಾನ ದರ್ಶನಕ್ಕಾಗಿ ಕನಕದಾಸರು ಪ್ರತಿಭಟನೆ ಮಾಡಿದರೆಂಬುದನ್ನು ಮಾತ್ರ ನಿರಾಕರಿಸುವ ಸಂಗತಿಯಲ್ಲ !!

ಭಕ್ತನಿಗೆ ದೇವರು ಒಲಿದ ಮೇಲೆ ಆತನ ದೃಷ್ಟಿಯಲ್ಲಿ ಎಲ್ಲರೂ ಸಮಾನರು ಎಂದಾಯಿತಲ್ಲವೇ ? ಇದನ್ನು ಅಂದಿನ ಶ್ರೀಕೃಷ್ಣ ದೇವಸ್ಥಾನದ ಅರ್ಚಕ ಮಂಡಳಿ ಅರಿಯಬೇಕಿತಲ್ಲವೇ ? ಕಿಂಡಿಯಾದ ಜಾಗದಲ್ಲಿಯೇ ದ್ವಾರ ನಿರ್ಮಾಣ ಮಾಡಿ ಎಲ್ಲ ಜಾತಿಯವರಿಗೂ ಒಳಗೆ ಪ್ರವೇಶ ನೀಡಬೇಕಿತ್ತು. ಬದಲಿಗೆ ಕನಕನ ಕಿಂಡಿ ಹಾಗೆ ಉಳಿಯಿತು. ಅಲ್ಲಿ ಜಾಲರಿ ಬಂತು. ಅದರ ಎದುರಿಗೆ ಕನಕನನ್ನು ನಿಲ್ಲಿಸಲಾಯಿತು. ಅಂದರೆ ಪ್ರತಿಭಟನೆ-ದೈವ ಸಾಕ್ಷಾತ್ಕಾರದ ನಂತರವೂ ಕನಕದಾಸರಿಗೆ ದೇವಸ್ಥಾನದೊಳಗೆ ಪ್ರವೇಶ ಸಿಗಲಿಲ್ಲ.

ಭಕ್ತನಿಗೆ ದೈವ ಒಲಿದ ಉದಾಹರಣೆ ಸಾಕಷ್ಟು ಸಿಗುತ್ತವೆ. ಆದರೆ ನಿಂತ ಜಾಗದಿಂದ ತಿರುಗಿ ಗೋಡೆ ಒಡೆದು ದರ್ಶನ ನೀಡಿದ ಉದಾಹರಣೆ ಮತ್ತೊಂದು ಇಲ್ಲ. ಹೀಗೆ ದೇವರಿಗೆ ಪ್ರಿಯನಾದ, ಆತ್ಮೀಯ (ಪರಮಾತ್ಮನಿಗೆ ಹತ್ತಿರವಾದವರು)ರಾದ ಕನಕರು ಮೃತರಾದ ನಂತರ ಅವರ ಪ್ರತಿಮೆಯನ್ನು ಶ್ರೀಕೃಷ್ಣನ ಜೊತೆಗೆ ಇರಿಸಿ ಪೂಜಿಸಬೇಕಿತ್ತಲ್ಲವೇ ? ಇದು ಆಗಲೇ ಇಲ್ಲ ! ಕನಕದಾಸರು ಕಿಂಡಿಯ ಹೊರಗೆ ಬಿಸಿಲಿನಲ್ಲಿ ಒಣಗುತ್ತಾ ನಿಂತರು. ಒಳಗೆ ದೈವ ಮರುಗುತ್ತಾ ನಿಂತಿತು !!

ಶ್ರೀಕೃಷ್ಣ ದೇವಸ್ಥಾನದ ಒಳಗೆ ಗಾಂಧೀಜಿ ಪ್ರವೇಶಿಸಲಿಲ್ಲ !

ಅಸ್ಪೃಶ್ಯತೆ ಆಚರಿಸುವ ದೇವಸ್ಥಾನಗಳ ಒಳಗೆ ಪ್ರವೇಶಿಸುವುದಿಲ್ಲ ಎಂದು ಸ್ವಾತಂತ್ರ್ಯ ಸೇನಾನಿ ಮೋಹನದಾಸ್ ಕರಮಚಂದ ಗಾಂಧಿ (ಮಹಾತ್ಮಗಾಂಧಿ) ನಿರ್ಧರಿಸಿದ್ದರು. 1934ರ ಫೆಬ್ರುವರಿ 25ರಂದು ಉಡುಪಿಗೆ ಬರುತ್ತಾರೆ. ಉಡುಪಿ ಸಮೀಪದ ಅಜ್ದರಕಾಡಿನಲ್ಲಿ ಸಾರ್ವಜನಿಕ ಸಭೆ ಇರುತ್ತದೆ. ಅದರಲ್ಲಿ ಭಾಗವಹಿಸಲು ತೆರಳುತ್ತಿದ್ದ ಅವರು ಶ್ರೀಕೃಷ್ಣ ದೇವಸ್ಥಾನದ ಬಳಿಯೇ ಇದ್ದ ದಾರಿಯಲ್ಲಿ ಹಾದು ಹೋದರೂ ದೇವಸ್ಥಾನಕ್ಕೆ ಹೋಗುವ ಆಸಕ್ತಿ ತೋರುವುದಿಲ್ಲ ! ಬಳಿಕ ಅಜ್ಜರಕಾಡಿನಲ್ಲಿ ಮಾಡಿದ ಭಾಷಣದಲ್ಲಿ ಉಡುಪಿ ಶ್ರೀಕೃಷ್ಣ ದೇವಸ್ಥಾನದಲ್ಲಿ ದಲಿತರಿಗೆ ಪ್ರವೇಶ ಇಲ್ಲ ಎಂಬ ಸಂಗತಿ ತನಗೆ ತಿಳಿದಿದೆ. ಎಲ್ಲ ದೇವಸ್ಥಾನಗಳಲ್ಲಿಯೂ ಹರಿಜನರಿಗೆ ಮುಕ್ತ ಪ್ರವೇಶ ಇರಬೇಕೆಂಬುದು ನನ್ನ ನಿಲುವು ಎಂದು ಪ್ರತಿಪಾದಿಸುತ್ತಾರೆ. ಈ ವಿವರ ಆ ವಿವರ ಅಂದಿನ “ರಾಷ್ಟ್ರಬಂಧು” ಪತ್ರಿಕೆಯಲ್ಲಿ ಪ್ರಕಟವಾಗಿದೆ !

ಇತ್ತೀಚಿನ ದಶಕಗಳವರೆಗೂ ಪ್ರವೇಶ ಇರಲಿಲ್ಲ !!
ಈ ನಂತರವೂ ದಶಕಗಳ ಕಾಲ ಶ್ರೀಕೃಷ್ಣ ದೇವಸ್ಥಾನಕ್ಕೆ ದಲಿತರಿಗೆ ಪ್ರವೇಶ ಇರಲಿಲ್ಲ. ಸತತ ಪ್ರತಿಭಟನೆಗಳ ನಂತರವೇ ಪ್ರವೇಶ ದೊರೆತಿದೆ. ಮೈಸೂರು ರಾಜ್ಯ ಉದಯವಾಗಿ ಮುಜರಾಯಿ ಆಕ್ಟ್ ಜಾರಿಗೆ ಬಂತು. ಇದರಿಂದಾಗಿ ಶ್ರೀಕೃಷ್ಣ ದೇವಸ್ಥಾನವು ಮುಜರಾಯಿ ಇಲಾಖೆ ಆಧೀನಕ್ಕೆ ಒಳಪಟ್ಟಿತು. 1980ರ ಬಳಿಕ ರಾಜ್ಯ ಸರ್ಕಾರವು ಮಠಗಳ ವ್ಯಾಪ್ತಿಯ ದೇವಸ್ಥಾನಗಳನ್ನು ಮುಜರಾಯಿ ಇಲಾಖೆಯ ಹೊರಗಿಡುವ ತಿದ್ದುಪಡಿ ಮಾಡಿತು. ಇದರಿಂದ ಉಡುಪಿ ಶ್ರೀಕೃಷ್ಣ ದೇವಾಲಯವು ಶ್ರೀಕೃಷ್ಣ ಮಠದ ಅಧೀನಕ್ಕೆ ಒಳಪಟ್ಟಿತು.

ಹರಿಜನರನ್ನು ಒಳಗೆ ಕರೆದು ಸಹಪಂಕ್ತಿ ಭೋಜನ ಮಾಡಲಿಲ್ಲವೇಕೆ ?
ಉಡುಪಿ ಪೇಜಾವರ ಮಠಾಧೀಶರು ದಲಿತ ಕಾಲೋನಿಗಳಿಗೆ ಹೋದರು. ಅವರ ಪಾದಪೂಜೆ ಸ್ವೀಕರಿಸಿದರು. ಇದು ಭಾರಿ ಸುದ್ದಿಯಾಯಿತು. ಆದರೆ “ನೀವು ಮೊದಲು ಶ್ರೀಕೃಷ್ಣ ಮಠಕ್ಕೆ ದಲಿತರನ್ನು ಆಹ್ವಾನಿಸಿ ಅವರೊಂದಿಗೆ ಸಹಪಂಕ್ತಿ ಭೋಜನ ಮಾಡಿ” ಎಂದು ಪ್ರಗತಿಪರರು ಹೇಳಿದರು. ಆದರೆ ಅವರ ಪ್ರಶ್ನೆಗೆ ಸಮರ್ಪಕ ಉತ್ತರ ದೊರೆಯಲಿಲ್ಲ. ಇಂದಿಗೂ ಶ್ರೀಕೃಷ್ಣ ಮಠದಲ್ಲಿ ಪಂಕ್ತಿ ಭೇದವಿದೆ. ಬ್ರಾಹ್ಮಣರಿಗೆ ಒಂದು ಪ್ರತ್ಯೇಕ ಪಂಕ್ತಿ ಇದೆ. ಇಲ್ಲಿ ತಿಳಿಯದೇ ಕುಳಿತ ಅಬ್ರಾಹ್ಮಣರನ್ನು ಬಲವಂತವಾಗಿ ಎಬ್ಬಿಸಿದ ಉದಾಹರಣೆಗಳೂ ಇವೆ. ಮೇಲಂಗಿ ತೆಗೆಯಿಸಿ ಒಳಗೆ ಪ್ರವೇಶ ನೀಡುವುದೇ ಯಜ್ಞೋಪವಿತ್ ಧರಿಸಿದವರನ್ನು, ಧರಿಸದೇ ಇರುವವರನ್ನು ಗುರುತಿಸಲು ಇರುವುದೇ ಆಗಿದೆ ಎಂದು ಅರಿಯದ ಅಬ್ರಾಹ್ಮಣರು ಖುಷಿಖುಷಿಯಿಂದ ಹೋಗುತ್ತಾರೆ.

ಇಂದಿಗೂ ಅಸ್ಪೃಶ್ಯತೆ ಆಚರಣೆ ರಾಜ್ಯ ಸರ್ಕಾರದ ಮುಜರಾಯಿ ದೇವಸ್ಥಾನಗಳಲ್ಲಿಯೂ ಇದೆ ಎಂಬುದು ದಿಗ್ಬ್ರಮೆ ಮೂಡಿಸುತ್ತದೆ. ಮಂಡ್ಯ ಸಮೀಪದ ಹನಕೆರೆ ಗ್ರಾಮದ ದೇವಸ್ಥಾನದಲ್ಲಿ ದಲಿತರ ಪ್ರವೇಶವನ್ನು ತಡೆಯಲು ಮಾಡಿದ ಪ್ರಯತ್ನ ಇದಕ್ಕೊಂದು ಜ್ವಲಂತ ಉದಾಹರಣೆ !ತನ್ನ ಸಮಾನತೆ ಕನಸು, ನನಸಾಗಲಿಲ್ಲವೆಂದು ಅತ್ತ ಕನಕದಾಸರು ಮತ್ತು ಗಾಂಧಿ ಕೊರಗುತ್ತಾ ಇದ್ದರೆ ಇತ್ತ ಆಳುವ ಸರ್ಕಾರಗಳು ಅವರ ಜಯಂತಿಯನ್ನು ಸಂಭ್ರಮದಿಂದ ಆಚರಿಸುತ್ತಿವೆ !!

Similar Posts

1 Comment

  1. Beautifully written
    Very practical thought

Leave a Reply

Your email address will not be published. Required fields are marked *