ಭಾರತದಲ್ಲಿ ಅನೇಕ ಸಮುದಾಯಗಳಿವೆ. ಅಷ್ಟೇ ವೈವಿಧ್ಯ ಆಚರಣೆಗಳಿವೆ. ಇದು ಎಷ್ಟರ ಮಟ್ಟಿಗೆ ಇದೆಯೆಂದರೆ ಅಚ್ಚರಿಗೆ ದೂಡುತ್ತದೆ. ಇಂಥಲ್ಲಿ ಹಬ್ಬಗಳಂದು ಸ್ಟೇಟ್ (ರಾಜ್ಯಾಂಗ ಅಥವಾ ಸರ್ಕಾರ) ಮಾಂಸ ಮಾರಾಟ ಮಾಡಬೇಡಿ; ತಿನ್ನಬೇಡಿ ಎಂದು  ಹೇಳಿದರೆ ಅದರಲ್ಲಿ ಅರ್ಥವಿರುತ್ತದೆಯೇ ?

ಈ ಪ್ರಶ್ನೆ ಏಕೆ ಉದ್ಬವಿಸಿತು ಎಂದರೆ ಮೊನ್ನೆ ಬೃಹತ್ ಬೆಂಗಳೂರು ಮಹಾನಗರ ಪಾಲಿಗೆ ಈ ಕುರಿತ ಆದೇಶ ಹೊರಡಿಸಿದೆ. ಇದರ ಪ್ರತಿಯನ್ನು ಇಲ್ಲಿ ಲಗತ್ತಿಸಿದ್ದೇನೆ. ೧೮-೦೯-೨೦೨೩ರ ಸೋಮವಾರ “ಗಣೇಶ ಚತುರ್ಥಿ” ಹಬ್ಬದ ಪ್ರಯುಕ್ತ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ಕಸಾಯಖಾನೆಯಲ್ಲಿ ಪ್ರಾಣಿವಧೆ ಹಾಗೂ ಮಳಿಗೆಗಳಲ್ಲಿ ಮಾಂಸಹಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಎಂಬುದು ಇದರ ಒಕ್ಕಣೆ

ಭಾರತದ ಸಂವಿಧಾನ ಎಲ್ಲರಿಗೂ ಸಮಾನವಾಗಿ ಬದುಕುವ ಹಕ್ಕು ಅರ್ಥಾತ್ ಸಮಾನತೆಯ ಹಕ್ಕು ಕೊಟ್ಟಿದೆ. ಹೀಗಿರುವಾಗ ಯಾವ ಕಾನೂನಿನನ್ವಯ ಪ್ರದತ್ತವಾದ ಅಧಿಕಾರ ಚಲಾಯಿಸಿ ಪುರಸಭೆ/ನಗರಸಭೆ/ ಮಹಾನಗರ ಪಾಲಿಕೆ ಅಧಿಕಾರಿಗಳು ಈ ಆದೇಶ ಹೊರಡಿಸುತ್ತಾರೆ ? ರಾಜ್ಯ ಸರ್ಕಾರದ ಯಾವ ಕಾನೂನಿನಲ್ಲಿಯೂ ಇಂಥ ಅಂಶಗಳನ್ನು ಹೇಳಿಲ್ಲ ಎಂಬುದು ನನ್ನ ತಿಳಿವಳಿಕೆ. ಇದು ಆಯಾ ಸ್ಥಳೀಯ ಪಾಲಿಕೆ ಸುತ್ತೋಲೆಯಾಗಿರಬಹುದು. ಇಂಥ ಸುತ್ತೋಲೆಯನ್ನು ಹೊರಡಿಸಲು ಇವರಿಗೆ ಅಧಿಕಾರ ಕೊಟ್ಟವರು ಯಾರು ?

ಮಹಾನಗರ ಪಾಲಿಕೆ ಆದೇಶ

ಹಬ್ಬಗಳ ದಿನವೂ ಮಾಂಸಹಾರ ಸೇವನೆ ಮಾಡುವವರಿದ್ದಾರೆ. ದೀಪಾವಳಿ ದಿನದಂದು ಮಾಂಸಹಾರದ ವಿಶೇಷ ಖಾದ್ಯಗಳನ್ನು ಮಾಡಿ ಸೇವಿಸುವ ರೂಢಿ ಇದೆ. ಇದನ್ನು ಹೆಚ್ಚು ಜನ ಮಾಡುತ್ತಾರೋ ಕಡಿಮೆ ಜನ ಮಾಡುತ್ತಾರೋ ಎಂಬುದು ಬೇರೆ ವಿಷಯ.
ದಸರಾದ ಕೊನೆದಿನವಾದ ವಿಜಯದಶಮಿಯೆಂದೇ ಅಗಲಿದ ಹಿರಿಯರಿಗೆ ಮಾಂಸಹಾರದ ಎಡೆಯಿಟ್ಟು ಪ್ರಾರ್ಥಿಸಿ ನಂತರ ಅದನ್ನು ಪ್ರಸಾದ ರೂಪದಲ್ಲಿ ಸೇವಿಸುವ ರೂಢಿ ಕೆಲವು ಜಾತಿಗಳಲ್ಲಿದೆ.

ವಿಶೇಷ ದಿನಗಳಂದು ಶ್ರೀನಿವಾಸ ದರ್ಶನಕ್ಕೆಂದು ತಂಡವಾಗಿ ಅಥವಾ ಕುಟುಂಬ ಸದಸ್ಯರೊಂದಿಗೆ ತೆರಳುವ ಕೆಲವು ಜಾತಿಗಳಿಗೆ ಸೇರಿದ ಗ್ರಾಮೀಣರು ತಿರುಮಲಕ್ಕೆ ತೆರಳುವ ಮೊದಲು ಗೋವಿಂದ ರಾಜ ಪಟ್ಟಣದಲ್ಲಿ ಅಂದರೆ ತಿರುಪತಿಯಲ್ಲಿ ಉಳಿದುಕೊಳ್ಳುತ್ತಾರೆ. ಇಲ್ಲಿ ಅವರು ಅವರವರ ಶಕ್ತ್ಯಾನುಸಾರ ಚಿಕ್ಕದೋ ದೊಡ್ಡದೋ ಮನೆಗಳನ್ನು ಎರಡ್ಮೂರು ದಿನದ ಮಟ್ಟಿಗೆ ಬಾಡಿಗೆ ತೆಗೆದುಕೊಳ್ಳುತ್ತಾರೆ.

ಗುಂಪಿನ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ಕೋಳಿಯನ್ನೋ ಕುರಿಯನ್ನೋ ತಂದು ಕತ್ತರಿಸಿ, ಸ್ವಚ್ಚಗೊಳಿಸಿ ಮಾಂಸಹಾರ ತಯಾರಿಸುತ್ತಾರೆ. ಇದನ್ನು ದೇವರಿಗೆ ಎಡೆಯಿಟ್ಟು ಪೂಜಿಸಿ ನಂತರ ಎಡೆಯಲ್ಲಿರುವುದನ್ನು ಪ್ರಸಾದವಾಗಿ ಸ್ವೀಕರಿಸುತ್ತಾರೆ. ಎಡೆಯಿಟ್ಟು ಪೂಜೆ ಸಲ್ಲಿಸುವ ತನಕ ಒಪ್ಪೊತ್ತು ಅಂದರೆ ಉಪವಾಸ ಇರುತ್ತಾರೆ. ಮಾಂಸಹಾರ ಸೇವನೆ ಮಾಡಿದ ನಂತರವೇ ಅಂದೇ ಬೆಟ್ಟಕ್ಕೆ ಹೋಗಿ ಶ್ರೀನಿವಾಸ ದರ್ಶನ ಮಾಡುತ್ತಾರೆ ( ಬಿಜೆಪಿಯೇತರ ರಾಜಕಾರಣಿಗಳು ಮಾಂಸಹಾರ ತಿಂದು ದೇವಸ್ಥಾನಕ್ಕೆ ಹೋದರು ಎಂದು ಗದ್ದಲ ಎಬ್ಬಿಸುವ ಮಾಧ್ಯಮಗಳು ಇದನ್ನು ಗಮನಿಸಬೇಕು)

ಕಾಲ ಭೈರವೇಶ್ವರ ದರ್ಶನಕ್ಕೆ ತೆರಳುವ ಆ ದೇವರ ಒಕ್ಕಲಿನ ಹಲವರು ದೇವಸ್ಥಾನದ ಬಳಿಯ ಖಾಲಿ ಜಾಗದಲ್ಲಿ ಮರಗಳ ಕೆಳಗೆ ಕಲ್ಲುಗಳನ್ನಿಟ್ಟು ಕೋಳಿಯೋ ಕುರಿಯನ್ನು ಕುಯ್ದು ದೇವರಿಗೆ ಎಡೆಯಿಟ್ಟು ಪೂಜಿಸುತ್ತಾರೆ. ಪ್ರಸಾದ ರೂಪದಲ್ಲಿ ಮಾಂಸಹಾರ ಸೇವನೆ ಮಾಡಿ ನಂತರವೇ ದೇಗುಲಕ್ಕೆ ತೆರಳುತ್ತಾರೆ.

ಕೆಲವರು ಸೋಮವಾರ, ಕೆಲವರು ಶನಿವಾರ, ಕೆಲವರು ಶ್ರಾವಣದಲ್ಲಿ ಮಾಂಸಹಾರ ಸೇವನೆ ಮಾಡುವುದಿಲ್ಲ. ಕೆಲವರು ಎಲ್ಲ ದಿನಗಳಂದು ಮಾಂಸಾಹಾರ ಸೇವನೆ ಮಾಡುತ್ತಾರೆ. ಇದೆಲ್ಲ ಅವರವರ ನಂಬಿಕೆ. ಆ ನಂಬಿಕೆಗಳನ್ನು ಯಾರೂ ಪ್ರಶ್ನೆ ಮಾಡಬಾರದು. ಇದರ ಹೊರತಾಗಿ “ನೀನು ಇಂಥ ದಿನ ಮಾರಾಟ ಮಾಡಬಾರದು; ತಿನ್ನಬಾರದು” ಎಂದರೆ ಅದರಲ್ಲಿ ಅರ್ಥವಿಲ್ಲ.

ಈ ರೀತಿ ಇರುವ ಆಚರಣೆಗಳನ್ನು ಹೇಳುತ್ತಾ ಹೋದರೆ ಅದರ ಪಟ್ಟಿ ದೀರ್ಘವಾಗುತ್ತದೆ. ಇಂಥ ವೈವಿಧ್ಯ, ವಿಶಿಷ್ಟ ನಂಬಿಕೆ- ಆಚರಣೆಗಳಿರುವ ರಾಜ್ಯ, ರಾಷ್ಟ್ರದಲ್ಲಿ ನೀವು ಇಂಥಿಂಥ ಹಬ್ಬದಲ್ಲಿ ಮಾಂಸಹಾರ ಸೇವನೆ ಮಾಡಬೇಡಿ ಎಂದು ಫರ್ಮಾನು ಹೊರಡಿಸುವುದು ಅಸಂವಿಧಾನಕ ಅಲ್ಲವೇ ?

ಸಾಮಾನ್ಯವಾಗಿ ಹೆಚ್ಚಿನ ಮಾಂಸಹಾರಿಗಳ ಅದರಲ್ಲೂ ನಗರಗಳಲ್ಲಿ ನೆಲಸಿರುವ ಮಾಂಸಹಾರಿಗಳು ಭಾನುವಾರದಂದು ಆಡೋ, ಕುರಿಯೋ, ಕೋಳಿಯೋ ಅಥವಾ ಮತ್ತೊಂದನ್ನು ತಂದು ವಿಶೇಷ ಖಾದ್ಯ ಮಾಡಿ ಸೇವಿಸುತ್ತಾರೆ. ಭಾನುವಾರ ಹೆಚ್ಚಿಗೆ ವ್ಯಾಪಾರವಾಗುತ್ತದೆ ಎಂದು ಮಾಂಸ ಮಾರಾಟ ಮಾಡುವ ಮಳಿಗೆಗಳವರು ಹೆಚ್ಚಿನ ಸಂಖ್ಯೆಯಲ್ಲಿ ಕುರಿಗಳನ್ನೋ, ಕೋಳಿಗಳನ್ನು ತಂದಿರುತ್ತಾರೆ. ಕಟ್ ಮಾಡಿ ನೇತು ಹಾಕಿರುತ್ತಾರೆ. ಅವರ ನಿರೀಕ್ಷೆಯಂತೆ ವ್ಯಾಪಾರವಾಗದೇ ಮಾಂಸಹಾರ ಉಳಿದರೆ ಮರುದಿನವೂ ಮಾರಾಟ ಮಾಡುತ್ತಾರೆ.

ಈ ಬಾರಿ ಗೌರಿಗಣೇಶ ಹಬ್ಬ ಸೋಮವಾರ ಬಂದಿದೆ. ಹೀಗಿರುವಾಗ ಭಾನುವಾರ ಖರ್ಚಾಗದೇ ಉಳಿದ ಮಾಂಸವನ್ನು ಪಾಲಿಕೆ ಆದೇಶದಂತೆ ಮಂಗಳವಾರ ತನಕ ಇಟ್ಟರೆ ಅದು ಹಳಸಿಕೊಳ್ಳುತ್ತದೆ. ಹೀಗೆ ಆದರೆ ವ್ಯಾಪಾರಿಗಳಿಗೆ ದೊಡ್ಡ ನಷ್ಟ. ಈ ನಷ್ಟವನ್ನು ಪಾಲಿಕೆ ಕಟ್ಟಿಕೊಡುತ್ತದೆಯೇ ? ಒಂದು ವೇಳೆ ಯಾರಾದರೂ ಕೋರ್ಟಿನ ಮೊರೆ ಹೋದರೆ ಪಾಲಿಕೆ ಅಧಿಕಾರಿಗಳು ತಮ್ಮ ಜೇಬಿನಿಂದ ನಷ್ಟ ತುಂಬಿ ಕೊಡುತ್ತಾರೆಯೇ ? ಇದಿರಲಿ ಇಂಥ ಆದೇಶ ಹೊರಡಿಸುವ ಮುನ್ನ ಮಾಂಸ ಕೆಡದಂತೆ ಸಂರಕ್ಷಿಸಲು ಪಾಲಿಕೆ ಶೈತ್ಯಾಗಾರಗಳನ್ನು ಒದಗಿಸಿದೆಯೇ ?

ಇಂಥ ಸಂಗತಿಗಳನ್ನು ಗಮನಿಸದೇ “ಎತ್ತು ಈಯಿತು ಎಂದರೆ ಕೊಟ್ಟಿಗೆ ಕಟ್ಟು” ಎನ್ನುವ ಮಾತಿನಂತೆ ಹಬ್ಬದ ದಿನದಂದು ಮಾಂಸಹಾರ ಮಾರಾಟ ಮಾಡಬೇಡಿ ಎಂದರೆ ಅರ್ಥವಿದೆಯೇ…? ಈ ಬಗ್ಗೆ ರಾಜ್ಯ ಸರ್ಕಾರ ಗಮನ ಹರಿಸಿ ಆದೇಶ ರದ್ದುಪಡಿಸುವ ಅಗತ್ಯವಿದೆ.

Similar Posts

Leave a Reply

Your email address will not be published. Required fields are marked *