ಬಿಹಾರ ರಾಜ್ಯದಲ್ಲಿ ದೇಶದಲ್ಲಿಯೇ ಅತಿಹೆಚ್ಚು ಬಾಲ್ಯ ವಿವಾಹಗಳು ನಡೆಯುತ್ತವೆ. ಹೀಗೆ ಮಾಡುವುದು ಕಾನೂನು ಬಾಹಿರ. ಬಾಲಕಿಯರ ಭವಿಷ್ಯದ ಮೇಲೆ ಘೋರ ಪರಿಣಾಮ ಉಂಟು ಮಾಡುತ್ತವೆ. ಇವುಗಳನ್ನು ತಪ್ಪಿಸಲು ಅಲ್ಲಿನ ಸರ್ಕಾರ ವಿನೂತನ ಯೋಜನೆ ಜಾರಿಗೊಳಿಸುತ್ತಿದೆ. ಪ್ರಸ್ತುತ ಬಾಲಕಿಯರ ಪುಟ್ಬಾಲ್ ಕ್ಲಬ್ ರಚಿಸುತ್ತಿದೆ.
ಬಿಹಾರ ರಾಜ್ಯ. ಅತಿ ಹಿಂದುಳಿದ ರಾಜ್ಯ ಎಂಬ ಹಣೆಪಟ್ಟಿ ಧರಿಸಿದೆ. ಇಲ್ಲಿನ ಸಾಕ್ಷರತೆ ಪ್ರಮಾಣ ಕಡಿಮೆ. ಸಾಮಾಜಿಕ ಅಪರಾಧಗಳ ಸಂಖ್ಯೆ ಹೆಚ್ಚು. ಇವುಗಳಲ್ಲಿ ಬಾಲ್ಯ ವಿವಾಹವೂ ಒಂದು. ಈ ಅನಿಷ್ಟ ಪದ್ಧತಿಯಿಂದ ಬಾಲಕಿಯರ ಭವಿಷ್ಯ ಭೀಕರವಾಗುತ್ತದೆ. ದೇಹ ಮತ್ತು ಮನಸು ವಿಕಸಿತವಾಗುವ ಮುಂಚೆಯೇ ಮದುವೆ ಮಾಡುವುದರಿಂದ ಅವರು ಜರ್ಜರಿತರಾಗುತ್ತಾರೆ. ಅಕಾಲಿಕ ಗರ್ಭ ಧರಿಸುವುದರಿಂದ ಅತಿಹೆಚ್ಚಿನ ಸಾವುಗಳೂ ಸಂಭವಿಸುತ್ತವೆ
ಇತ್ತೀಚೆಗೆ ಬಿಹಾರ ಸರ್ಕಾರ, ಬಾಲಕಿಯರ ಅಕಾಲಿಕ ಮದುವೆಗಳನ್ನು ತಡೆಹಿಡಿಯಲು ಹೆಚ್ಚು ಶ್ರಮಿಸುತ್ತಿದೆ. ಅವರಿಗೆ ಉಚಿತ ಶಿಕ್ಷಣದ ಅವಕಾಶಗಳನ್ನೂ ನೀಡುತ್ತಿದೆ. ಬಾಲ್ಯ ವಿವಾಹ ಪ್ರಕರಣ ವರದಿಯಾದರೆ ಸಂಬಂಧಿಸಿದ ಪೋಷಕರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಲಾಗುತ್ತಿದೆ. ಅಲ್ಲಿನ ಸಮಾಜ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ ಶ್ರಮ ವಹಿಸುತ್ತಿದ್ದರೂ ಬಾಲ್ಯ ವಿವಾಹಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತಿರಲಿಲ್ಲ
ಈ ನಿಟ್ಟಿನಲ್ಲಿ ಬಿಹಾರ ರಾಜ್ಯ ಸರ್ಕಾರ ಗ್ರಾಮ ಪಂಚಾಯತ್ ಮಟ್ಟದಲ್ಲಿ ಪುಟ್ಬಾಲ್ ಕ್ಲಬ್ಸ್ ಫಾರ್ ಗರ್ಲ್ಸ್ ರಚಿಸುತ್ತಿದೆ. ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತದ ವಿದ್ಯಾರ್ಥಿನಿಯರನ್ನು ಸದಸ್ಯರನ್ನಾಗಿ ನೋಂದಣಿ ಮಾಡಿಕೊಳ್ಳಲಾಗುತ್ತಿದೆ. ಇವರಿಗೆ ಪುಟ್ಬಾಲ್ ಕಲಿಸಲಾಗುತ್ತಿದೆ
ಬಾಲಕಿಯರು ಪುಟ್ಬಾಲ್ ಆಡಲು ಅಗತ್ಯವಾದ ಉಡುಪು, ಬಾಲ್, ಪೋಷಕಾಂಶಯುತ ಉಪಹಾರ ವ್ಯವಸ್ಥೆಯನ್ನು ಸರ್ಕಾರವೇ ಮಾಡುತ್ತಿದೆ. ನುರಿತ ಕೋಚ್ ಗಳನ್ನು ತರಬೇತಿ ನೀಡಲು ನೇಮಿಸಲಾಗುತ್ತಿದೆ. ಬಾಲಕಿಯರು ಪುಟ್ಬಾಲ್ ಆಡಲು ಯಾರೂ ಅಡ್ಡಿಪಡಿಸದಂತೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಈ ಕ್ಲಬ್ ಗಳಿಗೆ ಸುಕನ್ಯಾ ಕ್ಲಬ್ ಎಂದು ಹೆಸರಿಸಲಾಗಿದೆ.
ಬಾಲಕಿಯರ ಪುಟ್ಬಾಲ್ ಕ್ಲಬ್ ರಚಿಸಿದರೆ ಬಾಲ್ಯ ವಿವಾಹ ತಡೆಯಲು ಸಾಧ್ಯವೇ ಎಂಬ ಪ್ರಶ್ನೆ ನಿಮಗೆ ಎದುರಾಗಿರಬಹುದು. ಇಲ್ಲಿ ಕಾಲ್ಚೆಂಡು ಆಟ ಕಲಿಸುವುದರ ಜೊತೆಗೆ ಅವರಿಗೆ ಸ್ವ ರಕ್ಷಣಾತ್ಮಕ ಕಲೆಗಳನ್ನು ಹೇಳಿಕೊಡಲಾಗುತ್ತದೆ. ವಾರಕ್ಕೊಮ್ಮೆ ಸಭೆಗಳನ್ನು ನಡೆಸಲಾಗುತ್ತದೆ. ಅಲ್ಲಿ ಬಾಲ್ಯ ವಿವಾಹಗಳ ದುಷ್ಪರಿಣಾಮಗಳ ಬಗ್ಗೆ ತಿಳಿಸಲಾಗುತ್ತಿದೆ. ಬಾಲಕಿಯರೇ ಪರಸ್ಪರ ಚರ್ಚಿಸಲು ಪ್ರೋತ್ಸಾಹಿಸಲಾಗುತ್ತಿದೆ.
ಈ ಕ್ರಮಗಳಿಂದ ಬಾಲಕಿಯರೇ ಬಾಲ್ಯ ವಿವಾಹಗಳ ವಿರುದ್ಧ ಖುದ್ದು ಹೋರಾಡಲು ಸಮರ್ಥರಾಗುತ್ತಿದ್ದಾರೆ. ತಮ್ಮ ಪರಿಸರದಲ್ಲಿ ಬಾಲ್ಯ ವಿವಾಹ ಸಿದ್ಧತೆ ನಡೆಯುತ್ತಿದ್ದರೆ ಸಂಬಂಧಿಸಿದ ಇಲಾಖೆಗಳಿಗೆ ಮಾಹಿತಿ ನೀಡುವಷ್ಟು ಧೈರ್ಯ ಅವರಲ್ಲಿ ಉಂಟಾಗುತ್ತಿದೆ. ಇವೆಲ್ಲದರಿಂದಾಗಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕಿ ವಿವಾಹ ಜರಗುವ ಮುಂಚೆಯೇ ಅದರ ಮಾಹಿತಿ ಸಮಾಜ ಕಲ್ಯಾಣ ಇಲಾಖೆಗೆ ಮತ್ತು ಪೊಲೀಸರಿಗೆ ತಿಳಿಯುತ್ತಿದೆ.
ಇವೆಲ್ಲದರ ಜೊತೆಗೆ ಬಾಲ್ಯ ವಿವಾಹ ತಡೆಯಲು ಪಂಚಾಯತ್ ಮಟ್ಟದಲ್ಲಿ ಸಮಿತಿಗಳನ್ನು ನೇಮಿಸಲಾಗುತ್ತಿದೆ. ಇಲ್ಲಿ ಪ್ರಜ್ಞಾವಂತ ಪುರುಷ ಮತ್ತು ಮಹಿಳೆಯರ ಜೊತೆಗೆ ಸ್ಥಳೀಯ ಗ್ರಾಮ ಪಂಚಾಯತ್ ಅಧಿಕಾರಿ, ಪ್ರತಿನಿಧಿಗಳನ್ನು ಸದಸ್ಯರನ್ನಾಗಿ ಮಾಡಲಾಗಿರುತ್ತದೆ. ಇವರು ಗ್ರಾಮಸ್ಥರಲ್ಲಿ ಬಾಲ್ಯ ವಿವಾಹಗಳ ದುಷ್ಪರಿಣಾಮ ತಿಳಿಸುವ ಜವಾಬ್ದಾರಿ ನಿರ್ವಹಿಸುತ್ತಾರೆ.
ಈ ಎಲ್ಲ ಕ್ರಮಗಳಿಂದ ಈಗಾಗಲೇ ಅನೇಕ ಬಾಲ್ಯ ವಿವಾಹಗಳನ್ನು ತಡೆಯಲಾಗಿದೆ. ಅವಶ್ಯಕವೆನ್ನಿಸಿದರೆ ಬಾಲ್ಯ ವಿವಾಹಕ್ಕೆ ಒಳಗಾಗುತ್ತಿದ್ದ ಬಾಲಕಿಯರನ್ನು ಪುನರ್ವಸತಿ ಕೇಂದ್ರಗಳಿಗೆ ಕಳಿಸಲಾಗುತ್ತಿದೆ. ಅವರ ಭವಿಷ್ಯದ ಜವಾಬ್ದಾರಿಯನ್ನು ಸರ್ಕಾರವೇ ವಹಿಸಿಕೊಳ್ಳುತ್ತದೆ.
ಬಾಲಕಿಯರ ಪುಟ್ಬಾಲ್ ಕ್ಲಬ್ ರಚಿಸಿದ ಪರಿಣಾಮಗಳು ಗೋಚರಿಸತೊಡಗಿವೆ. ತಮ್ಮ ಕುಟುಂಬದಲ್ಲಿ ನಡೆಯುತ್ತಿದ್ದ ದೌರ್ಜನ್ಯಗಳ ವಿರುದ್ಧ ಬಾಲಕಿಯರು ಪ್ರತಿಭಟಿಸತೊಡಗಿದ್ದಾರೆ. ಇದರಿಂದ ಅವರ ತಾಯಂದಿರಿಗೂ ಧೈರ್ಯ ಉಂಟಾಗುತ್ತಿದೆ. ತಮ್ಮ ಮೇಲೆ ನಡೆಯುತ್ತಿದ್ದ ಮಾನಸಿಕ-ದೈಹಿಕ ಹಲ್ಲೆಗಳನ್ನು ಪ್ರತಿಭಟಿಸಲೇಬೇಕು ಎಂಬ ಅರಿವು ಅವರಲ್ಲಿ ಉಂಟಾಗುತ್ತಿದೆ.
ಈಗ ಮೊದಲಿನಂತೆ ಸರಾಗವಾಗಿ ತಮ್ಮ ಮಕ್ಕಳ ಬಾಲ್ಯ ವಿವಾಹ ಮಾಡಬಹುದು ಎಂಬ ಧೈರ್ಯ ಪೋಷಕರಲ್ಲಿ ಇಲ್ಲ. ಇದು ಬಹುದೊಡ್ಡ ಬೆಳವಣಿಗೆ. ಅವರು ಕಾನೂನುಗಳಿಂತ ತಮ್ಮ ಪುತ್ರಿಯರಲ್ಲಿ ಉಂಟಾಗುತ್ತಿರುವ ಸ್ಥೈರ್ಯದ ಮನೋಭಾವಕ್ಕೆ ಅಂಜತೊಡಗಿದ್ದಾರೆ. ಆದ್ದರಿಂದ ಬಾಲಕಿಯರ ಪುಟ್ಬಾಲ್ ಕ್ಲಬ್ ಒಂದು ಕ್ರಾಂತಿಕಾರಕ ಹೆಜ್ಜೆಯೇ ಆಗಿದೆ.