ಕಳೆಎರಡು ದಿನ ಕರ್ನಾಟಕದ ದಿನಪತ್ರಿಕೆಗಳು, ನ್ಯೂಸ್ ಚಾನೆಲ್ ಗಳಲ್ಲಿ ವ್ಯಕ್ತಿಯೊಬ್ಬರಿಗೆ ಬಂಪರ್ ಲಾಟರಿ ಹೊಡೆದಿದ್ದೇ ಸುದ್ದಿ ! ಮಂಡ್ಯ ಜಿಲ್ಲೆ ಪಾಂಡವಪುರದ ಬೈಕ್ ಮೆಕ್ಯಾನಿಕ್ ಅಲ್ತಾಫ್ ಪಾಶಾ ಅವರಿಗೆ ಕೇರಳ ಸರ್ಕಾರ ನಡೆಸುವ ಲಾಟರಿಯಲ್ಲಿ ೨೫ ಕೋಟಿ ರೂ. ಬಂದಿದ್ದೆ ! ಇದು ವಿಷಯ ! ಇದೇ ಸುದ್ದಿ ಮಾಧ್ಯಮಗಳಲ್ಲಿ ಸುದ್ದಿಯಾಗಿದೆ !!
ಈ ವಿಷಯ ಸುದ್ದಿಯಾಗಿದ್ದು ಏಕೆ ? ಆರ್ಥಿಕವಾಗಿ ಸಬಲರಾಗಿಲ್ಲದ ಮೆಕ್ಯಾನಿಕ್ ಒಬ್ಬರಿಗೆ ಭಾರಿ ಮೊತ್ತದ ಲಾಟರಿ ಬಂದಿದೆ ಎಂಬ ಕಾರಣವೇ ? ಕನ್ನಡಿಗರೊಬ್ಬರಿಗೆ ಕೇರಳದ ಲಾಟರಿ ಒಲಿದಿದೆ ಎಂಬ ಕಾರಣವೇ ? ಲಾಟರಿ ಟಿಕೇಟು ತೆಗೆದುಕೊಂಡರೆ ಹಣ ಜಣಜಣ ಎಂದು ಬರುವ ಸಾಧ್ಯತೆ ಇದೆ ಎಂಬ ಕಾರಣವೇ ?? ಇದನ್ನು ಸುದ್ದಿಯಲ್ಲದ ವಿಷಯವನ್ನು ಪ್ರಮುಖ ಸುದ್ದಿಯಾಗಿ ಪ್ರಕಟಿಸಿದ ಮಾಧ್ಯಮಗಳೇ ಹೇಳಬೇಕು !
ಕರ್ನಾಟಕದಲ್ಲಿ ಹಿಂದೆ ಬಿ.ಎಸ್. ಯಡಿಯೂರಪ್ಪ ಅವರು ಅಧಿಕಾರ ಸ್ಥಾನದಲ್ಲಿದ್ದಾಗ ರಾಜ್ಯದಲ್ಲಿ ಲಾಟರಿ ನಿಷೇಧಿಸಿದರು. ಸಾರಾಯಿ ನಿಷೇಧಿಸಿದರು. ಇವೆರಡೂ ಕ್ರಾಂತಿಕಾರಕ ನಿರ್ಧಾರಗಳು. ಲಾಟರಿಯಿಂದ ಸರ್ಕಾರಕ್ಕೆ ಗಣನೀಯ ಅಲ್ಲದಿದ್ದರೂ ಒಂದಿಷ್ಟಾದರೂ ಆದಾಯ ಇತ್ತು. ಸಾರಾಯಿ ಗುತ್ತಿಗೆ ಹರಾಜಿನಿಂದ ಗಣನೀಯ ಮೊತ್ತದ ಆದಾಯ ಬರುತ್ತಿತ್ತು. ಆದರೆ ಇವೆರಡೂ ಜನ ಸಾಮಾನ್ಯರ ಬದುಕಿಗೆ ಕಂಟಕವಾಗಿದ್ದವು.
ಇದನ್ನು ಗಮನಿಸಿದ್ದ ಯಡಿಯೂರಪ್ಪ ಲಾಟರಿ, ಸಾರಾಯಿ ನಿಷೇಧದ ನಿರ್ಣಯ ಕೈಗೊಂಡರು. ಇದರಿಂದ ಹಲವು ಕುಟುಂಬಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟವು. ಸಾರಾಯಿ ನಿಷೇಧಿಸಿದ ಮಾತ್ರಕ್ಕೆ ಕುಡಿತದ ವ್ಯಸನಕ್ಕೆ ಒಳಗಾದವರು ಮದ್ಯಪಾನ ತ್ಯಜಿಸಿದರೆ ಎಂಬ ಪ್ರಶ್ಬೆ ಬರಬಹುದು. ಹೆಚ್ಚುಕಡಿಮೆ ರಾಜ್ಯದ ಪ್ರತಿಹಳ್ಳಿಯಲ್ಲಿಯೂ ಸಾರಾಯಿ ಗಡಂಗುಗಳಿದ್ದವು. ತೀರಾ ಕಡಿಮೆ ಬೆಲೆಗೆ ದೊರೆಯುತ್ತಿದ್ದ, ಕಳಪೆ ದರ್ಜೆಯ ಸಾರಾಯಿ ಸೇವನೆ, ಜೇಬಿಗೂ ಇವೆಲ್ಲದಕ್ಕಿಂತ ಆರೋಗ್ಯಕ್ಕೂ ಮಾರಕವಾಗಿತ್ತು. ನಿಷೇಧದ ನಂತರ ಸಾರಾಯಿ ಸೇವಿಸುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಯಿತು !
ವಿವಿಧ ಶ್ರೇಣಿಯ ಮೊತ್ತಗಳನ್ನು ಹೊಂದಿದ್ದ ಲಾಟರಿ ಅಂತೂ ಪ್ರತಿ ಊರಿನ ಗಲ್ಲಿಗಲ್ಲಿಯಲ್ಲಿಯೂ ಮಾರಾಟವಾಗುತ್ತಿದ್ದವು. ಹಲವರು ತಮ್ಮ ದಿನಿತ್ಯದ ದುಡಿಮೆಯಲ್ಲಿ ಗಣನೀಯ ಪಾಲನ್ನು ಇವುಗಳ ಖರೀದಿಗಾಗಿ ಮೀಸಲಿಡುತ್ತಿದ್ದರು. ಇದರಿಂದ ಇವರ ಕುಟುಂಬದ ಸದಸ್ಯರು ಕಣ್ಣಿರಿನಲ್ಲಿ ಕೈ ತೊಳೆಯುತ್ತಿದ್ದರು.
ಕೇರಳದಲ್ಲಿ ಈಗಲೂ ಇಂಥ ಸ್ಥಿತಿ ಇದೆ. ಏಕೆಂದರೆ ಕೇರಳ ಪ್ರಮುಖವಾಗಿ ಕಾರ್ಮಿಕರ ನಾಡು. ಅಲ್ಲಿನ ರಾಜ್ಯ ಸರ್ಕಾರ, ಕಾರ್ಮಿಕರಿಗೆ ಉತ್ತಮ ವೇತನ, ಇನ್ನಿತರ ಸೌಲಭ್ಯಗಳು ದೊರೆಯುವಂತೆ ಮಾಡಿದೆ. ಅಲ್ಲಿ ಯಾವುದೇ ಪಕ್ಷದ ಸರ್ಕಾರ ಬಂದರೂ ಕಾರ್ಮಿಕರಿಗೆ ದೊರೆಯುವ ಸೌಲಭ್ಯದಲ್ಲಿ ಚ್ಯುತಿಯಾಗುವುದಿಲ್ಲ !
ಇನ್ನು ಕರ್ನಾಟಕದಂತೆ ಅಲ್ಲಿ ಹೆಜ್ಜೆಗೊಂದು ವೈನ್ ಸ್ಟೋರ್, ಬಾರ್ ಇಲ್ಲ. ಹಳ್ಳಿಗಳ ಹಲವು ಪೆಟ್ಟಿ ಅಂಗಡಿಗಳಲ್ಲಿ ದೂರದ ಪಟ್ಟಣದಿಂದ ತಂದ ಮದ್ಯ ದುಬಾರಿ ಬೆಲೆಗೆ ಲಭ್ಯವಾಗುತ್ತದೆ. ಆದರೆ ಕೇರಳ ರಾಜ್ಯದಲ್ಲಿ ಈ ದುಸ್ಥಿತಿ ಇಲ್ಲ. ಕುಡಿಯುವ ವ್ಯಸನ ಇರುವವರು ಕೆಲವು ಸ್ಥಳಗಳಲ್ಲಿ ಕೆಲವು ಕಿಲೋ ಮೀಟರ್ ದೂರ, ಹಲವು ಸ್ಥಳಗಳಲ್ಲಿ ಹಲವು ಕಿಲೋ ಮೀಟರ್ ದೂರ ಹೋಗಬೇಕು. ಕಾಲ್ನಡಿಗೆ ದೂರದಲ್ಲಿ ಲಭ್ಯವಾಗುವುದಕ್ಕೂ, ಬಹು ದೂರ ಹೋಗಿ ಮದ್ಯ ತರುವುದಕ್ಕೂ ವ್ಯತ್ಯಾಸವಿದೆ ಅಲ್ಲವೇ ? ಮದ್ಯದ ಬೆಲೆ ಜೊತೆಗೆ ಹೋಗಿ ಬರುವ ಸಾರಿಗೆ ವೆಚ್ಚವನ್ನೂ ಭರಿಸಬೇಕು. ಆದ್ದರಿಂದ ಅಲ್ಲಿ ಮದ್ಯ ಸೇವನೆಯನ್ನು ವ್ಯಸನ ಮಾಡಿಕೊಂಡವರ ಸಂಖ್ಯೆ ಕಡಿಮೆ !
ಲಾಟರಿ ಮಾತ್ರ ಇದಕ್ಕೆ ತದ್ವಿರುದ್ದ. ಅಲ್ಲಿನ ಹಳ್ಳಿಹಳ್ಳಿಗಳಲ್ಲಿಯೂ ಲಾಟರಿ ದೊರೆಯುತ್ತದೆ. ಅಲ್ಲಿ ಲಾಟರಿ ಟಿಕೇಟು ಮಾರುವವರು ವಿಶೇಷವಾಗಿ ಒಂದು ವಿಧಾನ ಅನುಸರಿಸುತ್ತಾರೆ. ವಿವಿಧ ಯೋಜನೆಗಳ ಅಡಿ ಧನ ಸಹಾಯ ಮಾಡುವ ಯೋಜನೆಗಳನ್ನು ಹೊಂದಿರುವ ಸರ್ಕಾರಿ ಇಲಾಖೆಗಳು, ಬಿಲ್ ಗಳನ್ನು ಕಟ್ಟಿಸಿಕೊಳ್ಳುವ ವಿದ್ಯುಚಕ್ತಿ ಮಂಡಳಿಗಳ ಕಚೇರಿಗಳು, ಪುರಸಭೆ/ ನಗರಸಭೆಗಳು, ಗ್ರಾಮ ಪಂಚಾಯತುಗಳು, ಬ್ಯಾಂಕುಗಳು ಇರುವ ರಸ್ತೆಗಳು ಕೂಡುವ ವೃತ್ತದಲ್ಲಿ ಲಾಟರಿ ಟಿಕೇಟ್ ಮಾರುವ ಕೌಂಟರ್ ಇಟ್ಟುಕೊಂಡಿರುತ್ತಾರೆ. ಇದರಿಂದ ಹೋಗಿ ಬರುವವರು ನಮ್ಮ ಅದೃಷ್ಟ ಪರೀಕ್ಷಿಸೋಣ ಎಂದು ಲಾಟರಿ ತೆಗೆದುಕೊಳ್ಳುತ್ತಾರೆ. ಹಲವರ ಪಾಲಿಗೆ ಇದು ಚಟವಾಗಿ ಪರಿಣಮಿಸಿದೆ. ವಿಶೇಷವಾಗಿ ಬದುಕಿಗೆ ನಿತ್ಯ ದುಡಿಮೆಯನ್ನೇ ನಂಬಿದ ಅನೇಕರ ಪಾಲಿಗೆ ವ್ಯಸನವಾಗಿದೆ. ಇದರಿಂದ ಆಗುವ ಅನಾನುಕೂಲ ಅಪಾರ !
ಈ ಎಲ್ಲ ಹಿನ್ನೆಲೆಯಲ್ಲಿ ಲಾಟರಿ ಖರೀದಿಸಿದ ನಂತರ ಆಕಸ್ಮಿಕವಾಗಿ ಹಣ ಬರುವುದು ಸುದ್ದಿಯಾಗುವುದು ಹೇಗೆ ? ಜನ ಸಾಮಾನ್ಯರ ಬದುಕಿಗೆ ಮಾರಕವಾಗುವ ಲಾಟರಿಯಿಂದ ಬರುವ ಹಣವು ಸಮುದಾಯದ ಸಂಭ್ರಮಕ್ಕೆ ಕಾರಣವಾಗುವುದೇ ? ಅಲ್ತಾಫ್ ಖರೀದಿ ಮಾಡಿದ ಒಂದು ಲಾಟರಿ ಟಿಕೇಟಿನ ಮಾರಾಟ ದರ ರೂ. ೫೦೦ (ಐದುನೂರು ರೂಪಾಯಿ) ಲಕ್ಷಾಂತರ ಮಂದಿ ನೀಡಿದ ಹಲವು ಐದುನೂರುಗಳು ಸೇರಿ ಆದ ಬೃಹತ್ ಮೊತ್ತವನ್ನು ಲಾಟರಿಯಿಂದ ಪಡೆದ ವ್ಯಕ್ತಿಗೆ ಸಂತೋಷವಾಗಬಹುದು ! ಆದರೆ ಸಮುದಾಯಕ್ಕೆ ಇದು ಸಂಭ್ರಮದ ವಿಷಯವೇ ? ಮಾಧ್ಯಮಗಳಿಗೆ ಸುದ್ದಿಯಾಗಬೇಕೆ ? ಇದನ್ನು ಸುದ್ದಿ ಮಾಡುವುದರಿಂದ “ನಾವು ಲಾಟರಿ ತೆಗೆದುಕೊಂಡು ಅದೃಷ್ಟ ಪರೀಕ್ಷಿಸೋಣ” ಎಂಬ ಭಾವನೆಗೆ ಉತ್ತೇಜನ ನೀಡಿದಂತೆ ಆಗುವುದಿಲ್ಲವೇ ???