ಬೆಂಗಳೂರು ಮಹಾನಗರದ ನಾಗರಬಾವಿ ಬಡಾವಣೆಯಲ್ಲಿ ನಾಲ್ಕು ವರ್ಷ ಇದ್ದೆ. ನಾನಿದ್ದ ಮನೆಯ ಕಿಚನ್ ವೆಟಿಲೆಂಟರ್ ನಲ್ಲಿ ಆಗಾಗ ನಾಗರಹಾವು ಕಳಚಿಕೊಂಡ ದೊಡ್ಡದೊಡ್ಡ ಪೊರೆಗಳು ಇರುತ್ತಿದ್ದವು ! ಕಿಟಕಿ ಭದ್ರಪಡಿಸಿದ್ದೆ. ನೆರೆಹೊರೆಯವರು ಪ್ರತಿದಿನ ಇವತ್ತು ಇಂಥ ಹಾವು ನೋಡಿದೆವು, ಅಂಥ ಹಾವು ನೋಡಿದೆವು ಎಂದು ಹೇಳುತ್ತಲೇ ಇದ್ದರು !
ನಾನು ನಿತ್ಯ ವಾಕಿಂಗ್ ಹೋಗುತ್ತಿದ್ದ ಪಾರ್ಕಿನಲ್ಲಿಯೂ ನಾಗರಹಾವುಗಳಿವೆ ಎಂದು ಹೇಳ್ತಿದ್ರು ! ಒಮ್ಮೆ ಪರಿಚಯದ ಒಬ್ಬರು ಗೇಟಿನ ಬಳಿ ಗಾಬರಿಯಿಂದ ನಿಂತಿದ್ರು !” ಏಕೆ ಸರ್ ಏನಾಯಿತು” ಎಂದೆ. “ಇಲ್ಲೊಂದು ನಾಗರಹಾವು ಹರಿದುಹೋಯಿತು. ಗಾಬರಿಯಾಯ್ತು” ಎಂದರು. ಆ ಏರಿಯಾದಲ್ಲಿ ಹಾವು ನನ್ನ ಕಣ್ಣಿಗಂತೂ ಬಿದ್ದಿರಲಿಲ್ಲ !
ಒಂದು ದಿನ ಮನೆಯ ಮುಂಭಾಗ ಮ್ಯಾಗಜೇನ್ ಕಟ್ಟು ಇರಿಸಿ ತುರ್ತು ಕೆಲಸದ ಮೇಲೆ ವಾಪಸು ಹೋಗಿದ್ದೆ. ಬಂದಾಗ ಏನೋ ಸರಿದು ಹೋಗುತ್ತಿದೆ ಎನಿಸಿತು ! ಗಮನಿಸಿದರೆ ಹಾವಿನ ಬಾಲ ! ಅದರ ಶರೀರದ ಶೇಕಡ 95 ಭಾಗ ಆಗಲೇ ಕಾಪೌಂಡಿನ ತಳದ ಕಿಂಡಿಯಿಂದ ಸರಿದು ಹೋಗಿತ್ತು !! ಹಾಗಾಗಿ ಅದರ ಪೂರ್ಣ ದರ್ಶನವಾಗಲಿಲ್ಲ ! ಅದಾದ ಒಂದು ವಾರಕ್ಕೆ ಅದೇ ಏರಿಯಾದ ಬೇರೆ ಭಾಗದಲ್ಲಿ ಒಂದೊಳ್ಳೆಯ ಮನೆ ಸಿಕ್ಕಿತು. ಶಿಫ್ಟ್ ಆದೆ !!
ನಿನ್ನೆ (ಫೆಬ್ರವರಿ 12, 2025) ಬೆಂಗಳೂರಿನ ಹವಾಮಾನ ಕೇಂದ್ರಕ್ಕೆ ಹೋಗಿದ್ದೆ. ಇದು ಸೆಂಟ್ರಲ್ ಕಾಲೇಜಿನ ಆವರಣದಲ್ಲಿರುವ ಜ್ಞಾನಭಾರತೀ ಆಡಿಟೋರಿಯಂ ಪಕ್ಕದಲ್ಲಿದೆ. “ಚಳಿಗಾಲದಲ್ಲಿಯೇ ತೀಷ್ಣವಾದ ರಣಬಿಸಿಲು ಇದೆ. ಈಗಲೇ ಹೀಗಾದರೆ ಬೇಸಿಗೆಯಲ್ಲಿ ಎಂಥಾ ಪರಿಸ್ಥಿತಿ ಇರಬಹುದು! ಚಳಿಗಾಲದಲ್ಲಿ ಇಷ್ಟು ತೀಷ್ಣ ಬಿಸಿಲು ಇರಲು ಕಾರಣಗಳೇನು ? ಇವು ನನ್ನ ಪ್ರಶ್ನೆಗಳಾಗಿದ್ದವು”
ಕನ್ನಡಿಗರೇ ಆದ ಹವಾಮಾನ ತಜ್ಞ ಡಾ.ಸಿ.ಎಸ್. ಪಾಟೀಲ ಅವರು ನನ್ನ ಪ್ರಶ್ನೆಗಳಿಗೆ ಉತ್ತರ ನೀಡಿದರು. ವಾಪಸು ಬಂದು ಪಾರ್ಕ್ ಮಾಡಿದ್ದ ಬೈಕ್ ತೆಗೆದುಕೊಂಡು ತಿರುಗಿದೆ. ರಟ್ಟೆ ಗಾತ್ರದ, ಸುಮಾರು 12 ಅಡಿ ಇದ್ದ ನಾಗರಹಾವು ಹವಾಮಾನ ಕೇಂದ್ರದ ಒಳಾವರಣದ ರಸ್ತೆ ದಾಟುತ್ತಿತ್ತು ! ಬೈಕ್ ಅನ್ನು ತುಸು ಮುಂದಕ್ಕೆ ಚಾಲನೆ ಮಾಡಿದ್ದರೂ ಅದು ಹೆಡೆ ಎತ್ತುವ ಸಾಧ್ಯತೆಗಳಿತ್ತು ! ನೆಲಕ್ಕೆ ಕಾಲನ್ನು ತುಸು ಅಪ್ಪಳಿಸಿದ್ದರೂ ಅದು ಗಾಬರಿಯಾಗುತ್ತಿತ್ತು ! ಅದ್ಯಾವುದನ್ನೂ ಮಾಡಲಿಲ್ಲ. ತಟಸ್ಥವಾಗಿ ನೋಡಿದೆ.
ಮಧ್ಯಾಹ್ನದ ಬಿಸಿಲಿಗೆ ನಾಗರಹಾವು ಮೈಯಿ ಮಿರಮಿರ ಮಿಂಚುತ್ತಿತ್ತು ! ನಾನು ನಿಂತ ಸ್ಥಳದಿಂದ ಕೇವಲ ಏಳೆಂಟು ಅಡಿ ಅಂತರದಲ್ಲಿ ಹರಿದು ಹೋಗುತ್ತಿತ್ತು ! ಬಹುಶಃ ತುಂಬ ಹಳೆಯ ಹಾವು ಇರಬೇಕು. ಯಾವ ಗಡಿಬಿಡಿ, ಭಯವೂ ಅದಕ್ಕೆ ಇದ್ದಂತೆ ಇರಲಿಲ್ಲ. ಬಹು ಸಾವಕಾಶವಾಗಿ ಅಲ್ಲಿನ ಸೆಕ್ಯುರಿಟಿ ಕ್ಯಾಬಿನ್ ಪಕ್ಕದಲ್ಲೇಯೇ ಹರಿದು ಹೋಯಿತು !
ದೊಡ್ಡದೊಡ್ಡ ಗಾತ್ರದ ನಾಗರಹಾವುಗಳನ್ನು ಹೊಲಗದ್ದೆಗಳ ಬಳಿ ಕಂಡಿದ್ದೇನೆ. ಆದರೆ ಸುಮಾರು 12 ಉದ್ದದ ನಾಗರಹಾವನ್ನು ಕಂಡಿರಲಿಲ್ಲ. ಅಲ್ಲಿದ್ದ ಸೆಕ್ಯುರಿಟಿಗೆ ಹುಷಾರಾಗಿರಿ ಎಂದು ಹೇಳಿದೆ. ಅವರು ಗಾಬರಿಯಾದರು ! ಅದೇ ಗಾಬರಿಯಲ್ಲಿ ಇಲ್ಲಿ ನಾಗರಹಾವುಗಳಿವೆ ಸರ್ ಎಂದರು !
ಮಹಾನಗರ ಎಂದರೆ ಕಾಂಕ್ರಿಟ್ ಜಂಗಲ್ ! ಇಲ್ಲಿ ಸೊಳ್ಳೆ – ಜಿರಳೆ ಬಿಟ್ಟರೆ ಮತ್ಯಾವುದು ಇರಲು ಸಾಧ್ಯ ? ಎಂಬುದು ಸಾಮಾನ್ಯ ಭಾವನೆಯಾಗಿರುತ್ತದೆ. ತುಸು ದಟ್ಟವಾದ ಮರಗಿಡ, ಹುಲ್ಲು ಇದ್ದು ಇಲಿ, ಅಳಿಲು ಮತ್ತು ಪಕ್ಷಿಗಳ ಗೂಡುಗಳು ಇದ್ದರೆ ಅಲ್ಲಿ ಹಾವುಗಳಿರುವ ಸಾಧ್ಯತೆ ಇರುತ್ತದೆ. ಜೀವಜಾಲ ಎನ್ನುವುದು ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿರುತ್ತದೆ.
ಸಾಮಾನ್ಯವಾಗಿ ಹಳೆಯ ಹಾವುಗಳು 8 ರಿಂದ 9 ಅಡಿ ಉದ್ದ ಇರುತ್ತವೆ. 10 ರಿಂದ 12 ಅಡಿ ಉದ್ದ ಇರುವ ಹಾವು ಅಪರೂಪ. ಯಾರಾದರೂ ಉರಗತಜ್ಞರು ಬೆಂಗಳೂರಿನ ಹವಾಮಾನ ಕೇಂದ್ರದ ಕ್ಯಾಂಪಸಿಗೆ ಹೋಗಿ ಸ್ಟಡಿ ಮಾಡಬಹುದು. ಅಲ್ಲಿನ ಒಳಾವರಣ ರಸ್ತೆಯ ಒಂದು ಅಂಚಿನಲ್ಲಿ ಬಾಲ ಇದ್ದರೆ ಅದರ ತಲೆ ಮತ್ತೊಂದು ಅಂಚಿನ ಆಚೆಗೂ ಚಾಚಿಕೊಂಡಿತ್ತು. ಹಾವು ಸರಿದು ಹೋಗುತ್ತಿದ್ದ ತುಸು ತಿರುವು ಇದ್ದ ರಸ್ತೆಯ ಅಗಲ ಅಳೆದರೂ ಹಾವಿನ ಉದ್ದದ ಅಳತೆ ದೊರೆಯುತ್ತದೆ.
(ಸಾಂದರ್ಭಿಕ ಚಿತ್ರ ಬಳಸಿದ್ದೇನೆ)