ಬೆಂಗಳೂರು ಅಂತರಾಷ್ಟ್ರೀಯ ಚಲನ ಚಿತ್ರೋತ್ಸವ 2020ರ ಫೆಬ್ರವರಿ 26 ರಿಂದ ಮಾರ್ಚ್ 4 ರ ತನಕ ನಡೆಯಲಿದೆ. ಇದರ ಕುರಿತು ಈಚೆಗೆ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾಗಿ ನೇಮಕಗೊಂಡು ಚಿತ್ರೋತ್ಸವದ ಸಾರಥ್ಯದ ಜವಾಬ್ದಾರಿ ಹೊತ್ತ ಸುನೀಲ್ ಪುರಾಣಿಕ್ ಅವರು ಈ ಬಾರಿಯ ವಿಶೇಷತೆಗಳ ಬಗ್ಗೆ ಸಂದರ್ಶನದಲ್ಲಿ ವಿವರಿಸಿದ್ದಾರೆ.

 

ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವದ 12ನೇ ಆವೃತ್ತಿ ಆಯೋಜನೆ ಸಿದ್ಧತೆಗಳ ಬಗ್ಗೆ ಹೇಳಿ

 • ಸುನೀಲ್ ಪುರಾಣಿಕ್ : ಜನವರಿ 2, 2020ರಂದು ಅಧಿಕಾರ ವಹಿಸಿಕೊಂಡೆ. ಅಂದಿಗೆ ಚಿತ್ರೋತ್ಸವ ದಿನಕ್ಕೆ 56 ದಿನಗಳಷ್ಟೇ ಬಾಕಿ ಇತ್ತು. ಆಗಾಗಲೇ ಇದರ ಪ್ರಕ್ರಿಯೆ ಅರಂಭವಾಗಿತ್ತು. ಇದರ ಜತೆಗೆ ಸಕ್ರಿಯವಾಗಿ ತೊಡಗಿಸಿಕೊಂಡೆ. ಆದ್ಯತೆಗಳನ್ನು ನೀಡಬೇಕಾದ ವಿಷಯಗಳನ್ನು ಗುರುತಿಸಿಕೊಂಡು ಕೆಲಸ ಶುರು ಮಾಡಿದ್ದೇನೆ. ಉತ್ತಮ ತಂಡವಿರುವುದರಿಂದ ಉತ್ತಮ ಸಮನ್ವಯವಿದೆ. ಇರುವ ಕಾಲಮಿತಿಯಲ್ಲಿಯೇ ಅತ್ಯುತ್ತಮವಾಗಿ ಚಿತ್ರೋತ್ಸವ ಮಾಡಲು ಹಗಲಿರುಳು ಸಿದ್ಧತೆಗಳು ನಡೆಯುತ್ತಿವೆ. ಕೆಲವೊಂದು ವಿಶೇಷ ಸಂಗತಿಗಳಿವೆ.
 • ಪ್ಲಾಸ್ಟಿಕ್ ಬಳಕೆಯನ್ನು ಗರಿಷ್ಠ ಪ್ರಮಾಣದಲ್ಲಿ ಕಡಿಮೆ ಮಾಡಲು ಯೋಜಿಸಿದ್ದೇವೆ. ಈ ನಿಟ್ಟಿನಲ್ಲಿ ಪರಿಸರಸ್ನೇಹಿ ಪ್ರವೇಶಪತ್ರಗಳು ಇರುತ್ತವೆ. ಇದು ಗೋ ಗ್ರೀನ್ ಭಾಗವಾಗಿರುತ್ತದೆ. . 100ಕ್ಕೆ 100ರಷ್ಟು ಸಾಧ್ಯವಾಗದಿದ್ದರೂ ಸಾಧ್ಯವಾದಷ್ಟೂ ಮಟ್ಟಿಗೆ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಪ್ಯಾಸ್ಟಿಕ್ ಬಳಕೆಗೆ ಕಡಿವಾಣ ಹಾಕುತ್ತಿದ್ದೇವೆ

————————————

 • ಚಿತ್ರೋತ್ಸವದ ತೀರ್ಪುಗಾರರಲ್ಲಿ (ಜ್ಯೂರಿಸ್) ಸಾಮಾನ್ಯವಾಗಿ ಪುರುಷರೇ ಹೆಚ್ಚಿರುತ್ತಿದ್ದರು. ಆದರೆ ಈ ಬಾರಿ ಶೇಕಡ 50ರಷ್ಟು ಪ್ರಮಾಣದಲ್ಲಿ ಮಹಿಳೆಯರು ತೀರ್ಪುಗಾರರಾಗಿ ಇರುತ್ತಾರೆ. ಇದರಿಂದ ಮಹಿಳಾ ಸಂವೇದನೆಗಳಿಗೆ – ಚಿಂತನೆಗಳಿಗೆ ಹೆಚ್ಚು ಅವಕಾಶ ದೊರೆಯುತ್ತದೆ. ಇವರು ಸಿನೆಮಾಗಳ ಬಗ್ಗೆ ವಿಶೇಷವಾದ ನೋಟಗಳನ್ನು ಹೊಂದಿದವರಾಗಿರುತ್ತಾರೆ. ಭಾರತದ ಬೇರೆಬೇರೆ ರಾಜ್ಯಗಳಿಂದ ಬರುತ್ತಿದ್ದಾರೆ.

————————————

 • ಈ ಹಿಂದೆ ಕನ್ನಡ ಸಿನೆಮಾಗಳನ್ನು ನೋಡುವ ಜ್ಯೂರಿಗಳ ಪ್ಯಾನೆಲ್ನಲ್ಲಿ ಕನ್ನಡಿಗರೇ ಹೆಚ್ಚಿಗೆ ಇರುತ್ತಿದ್ದರು. ಇಲ್ಲಿಯವರೇ ಆದರೆ ಪಾರದರ್ಶಕತೆ  ಇರೋದಿಲ್ಲ, ಒತ್ತಡಗಳು ಬರುತ್ತವೆ, ಏಕಸ್ವಾಮ್ಯತೆಯಾಗುತ್ತವೆ ಎಂದುಕೊಂಡು ಬೇರೆ ರಾಜ್ಯಗಳ ನ್ಯಾಷನ್ ಅವಾರ್ಡ್, ಇಂಡಿಯನ್ ಪನೋರಮಾಗಳಿಗೆ ಯಾರು ಜ್ಯೂರಿಗಳಗಿದ್ದರೋ ಅಂಥವರುಗಳನ್ನು ಕರೆದು  ಪ್ಯಾನೆಲ್ನಲ್ಲಿ ಇರುವಂತೆ ವ್ಯವಸ್ಥೆ ಮಾಡಲಾಗಿದೆ.  ಇದರಿಂದ ಪಾರದರ್ಶಕತೆ ಬರುತ್ತದೆ. ಫೇವರಿಟಿಸಂ ಇರೋದಿಲ್ಲ. ಒಳ್ಳೆಯ ಚಿತ್ರಗಳಿಗೆ ಮೋಸವಾಗುವುದಿಲ್ಲ. ಇದನ್ನು ಇಡೀ ಚಿತ್ರೋದ್ಯಮ ಶ್ಲಾ‍‍‍ಘನೆ ಮಾಡಿದೆ, ಇನ್ನೊಂದು ವಿಶೇಷತೆಯೆಂದರೆ ಈಗ ಜ್ಯೂರಿಗಳಾಗಿ ಬರುತ್ತಿರುವವರು ಈ ಹಿಂದೆ ಬೆಂಗಳೂರು ಚಿತ್ರೋತ್ಸವದಲ್ಲಿ ಭಾಗವಹಿಸಿದವರಲ್ಲ.

ಬೇರೆ ಏನು ವಿಶೇಷತೆಗಳಳಿವೆ; ಅವುಗಳ ಬಗ್ಗೆಯೂ ವಿವರಿಸಿ

 • ಸುನೀಲ್ ಪುರಾಣಿಕ್ : ಇನ್ನೂ ಸಾಕಷ್ಟು ವಿಶೇಷತೆಗಳನ್ನು ತಂದಿದ್ದೀನಿ. ಹೇಳ್ತೀನಿ; ಆದರೆ ಮುಖ್ಯವಾಗಿ ಬದಲಾವಣೆಗಳನ್ನು ಅಡ್ಮಿನ್ ಲೆವೆಲ್ನಲ್ಲಿ ಗಮನಾರ್ಹ ಬದಲಾವಣೆಗಳು ಆಗಿವೆ. ಫೈನಲ್ ಕಂಟೆಂಟ್ನಲ್ಲಿ ಕಡೇಘಳಿಗೆಯಲ್ಲಿ ಬದಲಾಯಿಸಲು ಆಗುವುದಿಲ್ಲ,  ಉದಾಹರಣೆಗೆ ಹೇಳುವುದಾದರೆ ಜನಪ್ರಿಯ ವಿಭಾಗದ ಸಿನೆಮಾಗಳು, ಇಂಡಿಯನ್ ಸಿನೆಮಾ ಕ್ಯಾಟಗರಿ, ಏಶಿಯನ್ ಕ್ಯಾಟಗರಿ ಇವುಗಳನ್ನು ಟಚ್ ಮಾಡಲು ಹೋಗಿಲ್ಲ. ಮುಂದಿನ ವರ್ಷದಿಂದ ಇದರಲ್ಲಿಯೂ ಸಾಕಷ್ಟು ಬದಲಾವಣೆಗಳು ಆಗುತ್ತವೆ.
 • ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ನಿರ್ಮಾಪಕರ ಸಂಘ, ನಿರ್ದೇಶಕರ ಸಂಘ ಮತ್ತಿತರ ಚಿತ್ರರಂಗಕ್ಕೆ ಸಂಬಂಧಿಸಿದ ಸಂಸ್ಥೆಗಳನ್ನು ಚಿತ್ರೋತ್ಸವ ಆಯೋಜನೆ ಸಿದ್ಧತೆಗಳಿಗೆ ಕರೆದು ಚರ್ಚಿಸಲಾಗುತ್ತಿದೆ. ಇವರೆಲ್ಲರೂ ಉಪಯುಕ್ತವಾದ ಸಲಹೆಗಳನ್ನು ನೀಡಿದ್ದಾರೆ. ಈ ಹಿಂದಿನ ಹತ್ತು ವರ್ಷಗಳಿಂದ ಈ ಮುಖ್ಯವಾದ ಕೆಲಸ ಆಗಿರಲಿಲ್ಲ. ಚಿತ್ರರಂಗದ ಎಲ್ಲರಿಗೂ ಚಿತ್ರೋತ್ಸವ ನಮ್ಮದು ಎನ್ನುವ ಭಾವನೆ ಬರುವುದು ಅಗತ್ಯ.

ಗೋವಾದಲ್ಲಿ ಸಾಮಾನ್ಯವಾಗಿ ಪ್ರತಿವರ್ಷ ನಿರ್ದಿಷ್ಟ ದಿನಗಳಂದು ಅಂತರಾಷ್ಟ್ರೀಯ ಚಿತ್ರೋತ್ಸವ ನಡೆಯುತ್ತದೆ. ಇಲ್ಲಿಯೂ ಅದೇ ಮಾದರಿ ಅಳವಡಿಸುವ ಇರಾದೆ ಇದೆಯೇ ?

 • ಈ ಬಾರಿಯಿಂದ ಚಿತ್ರೋತ್ಸವದ ಕೊನೆಯ ದಿನದಂದು ಮುಂದಿನ ವರ್ಷದ ಚಿತ್ರೋತ್ಸವ ನಿರ್ದಿಷ್ಟವಾಗಿ ಯಾವ ತಿಂಗಳು ನಡೆಯುತ್ತದೆ ಎಂದು ಘೋಷಿಸಬೇಕು ಎಂದುಕೊಂಡಿದ್ದೇವೆ. ದಿನಾಂಕಗಳಲ್ಲಿ ಹೆಚ್ಚು ಕಡಿಮೆಯಾದರೂ ತಿಂಗಳು ವ್ಯತ್ಯಾಸವಾಗದಂತೆ ಮಾಡಬೇಕೆಂದುಕೊಂಡಿದ್ದೇವೆ. ಇದರಿಂದ ಚಿತ್ರೋತ್ಸವಕ್ಕೆ ಸಂಬಂಧಪಟ್ಟವರೆಲ್ಲರೂ ಬಹು ಮುಂಚಿತವಾಗಿ ಇದರ ಬಗ್ಗೆ ಮಾನಸಿಕವಾಗಿ ಸಿದ್ಧರಾಗಲು ಸಾಧ್ಯವಾಗುತ್ತದೆ. ಮುಖ್ಯವಾಗಿ ವಿದೇಶಗಳ ಚಿತ್ರರಂಗಗಳಿಗೆ ಕರ್ನಾಟಕದವರು ಪೂರ್ವ ಯೋಜಿತವಾಗಿ – ಬಹಳ ವ್ಯವಸ್ಥಿತವಾಗಿ ಚಿತ್ರೋತ್ಸವ ಮಾಡುತ್ತಾರೆ ಎಂಬ ಭಾವನೆ ಬರಲು ಸಹ ಇದು ಸಹಾಯಕ.

ಬೆಂಗಳೂರು ಅಂತರಾಷ್ಟೀಯ ಚಿತ್ರೋತ್ಸವದ ಬಜೆಟ್ ಎಷ್ಟು

 • ಪ್ರತಿವರ್ಷ ಚಿತ್ರೋತ್ಸವದ ಬಜೆಟ್ ವ್ಯತ್ಯಾಸವಾಗುತ್ತಿರುತ್ತದೆ. ಒಮ್ಮೆ ಮೂರು ಕೋಟಿ, ಮತ್ತೊಮ್ಮೆ ಐದು ಕೋಟಿ, ಕೆಲವೊಮ್ಮೆ ನಾಲ್ಕೂವರೆ ಕೋಟಿ ಹೀಗೆ. ಕೋರ್ ಕಮಿಟಿಯಲ್ಲಿ ಇದರ ಚರ್ಚೆ ನಡೆಯುತ್ತಿದೆ. ಅಂದಾಜು ಕನಿಷ್ಟ ನಾಲ್ಕು ಕೋಟಿ ಇರುತ್ತದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಸಿಗಬೇಕಾದರೆ ಕೆಲವೊಂದು ಅಳತೆಗೋಲುಗಳಿವೆ. ಅದರಂತೆ ಆಯೋಜಿಸಬೇಕಾಗುತ್ತದೆ. ಆದ್ದರಿಂದ ಈ ವರ್ಷ ಖರ್ಚು ಹೆಚ್ಚಾಗುವ ಸಾಧ್ಯತೆಗಳಿವೆ.

ಚಿತ್ರೋತ್ಸವದ ಮುಖ್ಯ ಅತಿಥಿಗಳಾಗಿ ಯಾರನ್ನು ಕರೆಯಬೇಕೆಂಬ ನಿಶ್ಚಯವಾಗಿದೆಯೇ

 • ಸುನೀಲ್ ಪುರಾಣಿಕ್ : ಅದರ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಆದರೆ ಪ್ರತಿನಿಧಿಗಳಾಗಿ ಯಾವಯಾವ ದೇಶದಿಂದ ಚಿತ್ರೋದ್ಯಮಗಳವರು ಬರುತ್ತಿದ್ದಾರೆ ಎಂಬುದು ನಿಶ್ಚಯವಾಗಿದೆ. ಯುರೋಪ್ – ರಷ್ಯಾಗಳಿಂದ ಪ್ರತಿನಿಧಿಗಳು ಬರುತ್ತಿದ್ದಾರೆ. ಬೇರೆಬೇರೆ ವಿಭಾಗಕ್ಕೆ ಸಂಬಂಧಿಸಿದಂತೆ ಮುಖ್ಯ ಅತಿಥಿಗಳಾಗಿ ಬೇರೆಬೇರೆ ವ್ಯಕ್ತಿಗಳನ್ನು ಕರೆಸಬೇಕೆಂದಿದೆ. ಅವರ ಹೆಸರುಗಳ ಪಟ್ಟಿ ಮಾಡಿದ್ದೇವೆ. ಇವರಲ್ಲಿ ಆಯ್ಕೆ ಮಾಡಲಾಗುತ್ತದೆ. ಇನ್ನು ಮೂರ್ನಾಲ್ಕು ದಿನಗಳಲ್ಲಿ ಅದು ಅಂತಿಮವಾಗುತ್ತದೆ.

ಈ ಬಾರಿ ಅನ್ ಲೈನ್ ಮೂಲಕವೇ ಪಾಸ್ ವಿತರಣೆ ಮಾಡಲು ಆದ್ಯತೆ ನೀಡಲಾಗಿರುವ ಬಗ್ಗೆ ಹೇಳಿ

 • ಸುನೀಲ್ ಪುರಾಣಿಕ್ : ನಮ್ಮನ್ನು ನಾವು ಡಿಜಿಟೈಜಲ್ ಎರಾಕ್ಕೆ ಅಣಿಮಾಡಿಕೊಳ್ಳಲೇಬೇಕು. ಇದೊಂದು ರೀತಿ ಅಪ್ ಗ್ರೇಡ್. ಆನ್ ಲೈನ್ ಮಾಡುವುದರಿಂದ ಆಗುವ ಅನುಕೂಲಗಳೆಂದರೆ ಐನಾಕ್ಸ್ ಚಿತ್ರಮಂದಿರಗಳಲ್ಲಿ ಇರುವ ಜಾಗ ಕಿರಿದು. ಸರದಿ ನಿಂತುಕೊಂಡಾಗ ಹೊರಗಿನವರಿಗೂ ಬರುತ್ತದೆ. ಆನ್ ಲೈನ್ ಮುಖಾಂತರ ಬುಕ್ ಆದಾಗ ಜನ ಜಂಗುಳಿ ಶೇಕಡ 50ರಷ್ಟಾದರೂ ಕಡಿಮೆಯಾಗುತ್ತದೆ. ಇನ್ನೊಂದು ಶೇಕಡ 50ರಷ್ಟನ್ನು ನಿರ್ವಹಣೆ ಮಾಡುವುದು ಸುಲಭವಾಗುತ್ತದೆ. ಆದರೆ ಮುಂದಿನ ವರ್ಷದಿಂದ ಪೂರ್ಣ ಆನ್ ಲೈನ್ ಬುಕಿಂಗ್ ವ್ಯವಸ್ಥೆ ಮಾಡಲಾಗುತ್ತದೆ.

ಚಿತ್ರೋತ್ಸವದಲ್ಲಿ ಎಷ್ಟು ಚಿತ್ರಗಳು ಪ್ರದರ್ಶಿತವಾಗುತ್ತವೆ

 • ಸುನೀಲ್ ಪುರಾಣಿಕ್ : ಒಟ್ಟು 200 ಚಿತ್ರಗಳು ಪ್ರದರ್ಶಿತವಾಗುತ್ತವೆ. ಇದರಲ್ಲಿ 50 ಕಂಟ್ರಿ. ಇದರಲ್ಲಿ 30 ಕನ್ನಡ ಚಿತ್ರಗಳಿರುತ್ತವೆ. ಪ್ರಾದೇಶಿಕತೆಯಲ್ಲಿಯೇ ಬೇರೆಬೇರೆ ಚಿತ್ರಗಳಿರುತ್ತವೆ. ಇವುಗಳನ್ನು ಜ್ಯೂರಿಗಳು ಆಯ್ಕೆ ಮಾಡುತ್ತಾರೆ.  ಉತ್ತಮ ಚಿತ್ರಗಳೇ ಪ್ರದರ್ಶಿತವಾಗುತ್ತವೆ. ಇದರಲ್ಲಿ ಯಾವುದೇ ಅನುಮಾನಗಳೂ ಬೇಡ.

ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರ ಸಂದರ್ಶನದ ನಂತರ ಬರುವಾಗ ಅಕಾಡೆಮಿಯ ಸಿಬ್ಬಂದಿ – ಅತ್ಯುತ್ತಮ ಸಿನೆಮಾಗಳು – ಅಂತರಾಷ್ಟ್ರೀಯ ಚಿತ್ರೋತ್ಸವಗಳ ಬಗ್ಗೆ ಆಳವಾದ ತಿಳಿವಳಿಕೆ ಇರುವ ತಜ್ಞರು, ಸ್ವಯಂಸೇವಕರು ಬಹುಭರದ ಪ್ರಕ್ರಿಯೆಗಳನ್ನು ನಡೆಸುತ್ತಿದ್ದರು.

 

Similar Posts

Leave a Reply

Your email address will not be published. Required fields are marked *