ಇಂದಿಗೆ ಇತಿಹಾಸ ಎನ್ನುವುದು ರಮ್ಯ – ಮನೋಹರವಾಗಿ ಕಾಣುತ್ತದೆ. ಅಂದು ವರ್ತಮಾನದಲ್ಲಿ ಅದು ರಕ್ತಸಿಕ್ತ ಆಳುವವರ ಹಂಬಲಗಳಲ್ಲಿ ನಲುಗಿದ ಜನಸಮಾನ್ಯರ ಬದುಕು. ಆದರೆ ಚರಿತ್ರೆ ಬರೆದವರು, ಕೆಲವಾರು ರಾಜರುಗಳ ಕಾಲವನ್ನು ಸುವರ್ಣಯುಗ ಎಂದು ಬಣ್ಣಿಸಿದವರು ಸಾಮಾನ್ಯರ ಬದುಕಿಗೆ ಒಂದೆರಡು ಪುಟಗಳನ್ನೂ ನೀಡುವುದಿಲ್ಲ. ಎಲ್ಲೆಡೆಯೂ ಆಳರಸರ ಬಹು ಪರಾಕ್. ಇಂಥ ಹೊತ್ತಿನಲ್ಲಿ “ತೇಜೋ ತುಂಗಭದ್ರಾ” ಕಾದಂಬರಿ ರೂಪದಲ್ಲಿ ಬಂದಿದೆ.
ಕಥೆಗಾರ ವಸುಧೇಂದ್ರ ಚರಿತ್ರೆಯನ್ನು ಜನಸಾಮಾನ್ಯ ದೃಷ್ಟಿಯಲ್ಲಿ ನೋಡುತ್ತಾ ಜನಸಾಮಾನ್ಯರ ಬದುಕಿನ ದುಮ್ಮಾನ – ತಲ್ಲಣ – ದುಃಖಗಳನ್ನು ಪುಟಗಳಲ್ಲಿ ಚಿತ್ರಿಸಿದ್ದಾರೆ. ಇದೇ ಕಾರಣಕ್ಕಾಗಿಯೇ ಈ ಕಾದಂಬರಿ ಕುತೂಹಲ ಮೂಡಿಸುತ್ತದೆ ಎಂದರಷ್ಟೇ ಸಾಲದು; ಅಪಾರ ಎಂಬ ವಿಶೇಷಣವನ್ನೂ ಸೇರಿಸಿಕೊಳ್ಳಬೇಕು. ಇದು ಅಧಿಕೃತ ಚರಿತ್ರೆಯ ಪುಟಗಳಲ್ಲ. ಆದರೆ ಅನಧಿಕೃತವೂ ಅಲ್ಲ; ಮೂಕಜ್ಜಿಯ ರೀತಿಯ ಕಥನವಿದು. ಇತಿಹಾಸದ ಪುಟಗಳನ್ನು ಮಗುಚುತ್ತಾ ಜನಸಮಾನ್ಯರ ಹೃದಯ ಬಡಿತಗಳನ್ನು ದಾಖಲಿಸಿರುವ ಕೃತಿ


ಬಹುದೂರದ ಪೊರ್ಚುಗಲ್ ದೇಶದಲ್ಲಿ ಹರಿಯುವ ತೇಜೋ ನದಿಯ ಮಗ್ಗುಲಲ್ಲಿ ಬೆಳೆದ ಲಿಸ್ಬನ್ ನಗರದಿಂದ ಕಥೆ ಆರಂಭವಾಗುತ್ತದೆ. ಹೀಗೆ ಹೇಳುವುದಕ್ಕಿಂತಲೂ ದುರಂತದ ಹುಚ್ಚೊಳೆ ಪ್ರಾರಂಭವಾಗುತ್ತದೆ ಎಂದರೆ ಸರಿ. ಅಲ್ಲಿಯೂ ಸಾಮ್ರಾಜ್ಯ ವಿಸ್ತರಣೆ; ಸಂಪತ್ತಿನ ಗಳಿಕೆಗಾಗಿ ತಹತಹಿಸುವ ರಾಜಪ್ರಭುತ್ವ. ಧರ್ಮದ ಪಾರಮ್ಯ ಮೆರೆಸಲು ತಹತಹಿಸುವ ಪುರೋಹಿತಶಾಹಿ. ಭಾರತದ ಹಾದಿ ಹುಡುಕಿದ ವಾಸ್ಕೋಡಿಗಾಮ ಹೊತ್ತೊಯ್ಯುವ ಸಂಪತ್ತು; ಸಂಪತ್ತಷ್ಟೇ ಆಗಿರದೇ ಅಲ್ಲಿನವರ ಧಾರ್ಮಿಕ ಉನ್ಮಾದವನ್ನು ಕೆರಳಿಸುವ ಸಾಧನವೂ ಆಗಿಬಿಡುತ್ತದೆ. ಇದರ ಪರಿಣಾಮ ಘನಘೋರ. ಸಾವಿರಾರು ಯೂಹೂದಿಗಳ ಮಾರಣಹೋಮ. ಧರ್ಮದ ಅಮಲು ತುಂಬಿಸಿಕೊಂಡವರವನ್ನು ಹೊತ್ತ ಹಡಗು ಚಲಿಸಿದೆಡೆಯೆಲ್ಲ ಇದೇ ಪುನಾರಾವರ್ತನೆ. ಭಾರತ ತಲುಪಿದರೂ ಈ ಕ್ರೌರ್ಯ ತಪ್ಪುವುದಿಲ್ಲ.
ಇಂಥ ಬೆಂಕಿಯಲ್ಲಿ ಅರಳಿದ ಪಾತ್ರಗಳಂತೆ ಗೇಬ್ರಿಯಲ್, ಬೆಲ್ಗಾ ಕಾಣುತ್ತಾರೆ. ಮದುವೆಯಾಗಿ ಸುಖದಿಂದಿರುವ ಕನಸು ಕಾಣುವ ಇವರ ನಡುವೆಯೂ ನಾಗರದಂತೆ ಧರ್ಮ – ಸಂಪತ್ತು ಹೆಡೆಯೆತ್ತುತ್ತದೆ. ಸಂಪತ್ತು ಸಂಪಾದಿಲು ಗೇಬ್ರಿಯಲ್ ಭಾರತದತ್ತ ಹೊರಡುವ ಹಡಗನ್ನೇರಿದರೂ ಕ್ರೌರ್ಯದ ಅಲೆಗಳು ಅವನನ್ನು ಹಿಂಬಾಲಿಸುತ್ತವೆ. ಭಾರತಕ್ಕೆ ಬಂದರೂ ನೆಮ್ಮದಿಯಿಲ್ಲ. ಇಲ್ಲಿಯೂ ಅದೇ ಅಮಲು. ಆದರೆ ಧರ್ಮಗಳು ಬೇರೆ
ತೆಂಬಕ್ಕ – ಮಾಪಳ – ಹಂಪಮ್ಮ – ಕೇಶವ – ಚಂಪಕ ಎಲ್ಲರದೂ ಕ್ರೌರ್ಯ – ದುರಂತದಲ್ಲಿ ಕೊಚ್ಚಿಕೊಂಡು ಹೋಗುವ ಪಾತ್ರಗಳೇ. ಇಲ್ಲಿ ಪಾತ್ರ ಯಾವುದೇ ತಪ್ಪು ಮಾಡಿರದಿದ್ದರೂ ಸನ್ನಿವೇಶದ ವಿಲಕ್ಷಣತೆಗಳಿಂದ ದುರಂತದ ಒಡಲಿಗೆ ಮಗುಚಿಕೊಳ್ಳುವ ಅನಿವಾರ್ಯತೆ. ಈ ಹುಚ್ಚೊಳೆಯಲ್ಲಿ ಎಲ್ಲಿಂದಲೋ ಬಂದ ಗೇಬ್ರಿಯಲ್ ಅಮದಕಣ್ಣನಾಗುವುದು – ಹಂಪಮ್ಮ ತಾನು ಕಾಣದ ಕಡಲಿಗೆ ತೆರಳುವುದೂ ನಡೆಯುತ್ತದೆ.
ಸತಿಯಾಗಿಸುವ ಅನಿವಾರ್ಯತೆ – ಸತಿಯಾದಾಗಲೂ ನಗುನಗುತ್ತಲೇ ತೆರಳಬೇಕಾದ ಸಂಕ – ಸತಿಯಾಗದಿದ್ದರೆ ಕೊಂದಾದರೂ ಸರಿ ಸತಿಯಾಗಿಸುವ ಹಂಬಲದ ಒಡಹುಟ್ಟಿದವರ ಕ್ರೌರ್ಯ ತೆರೆತೆರೆಯಾಗಿ ತೆರೆದುಕೊಳ್ಳುತ್ತಾ ಹೋಗುತ್ತವೆ. ಇವೆಲ್ಲದರ ಜತೆಗೆ ವಿಜಯನಗರ ಸಾಮ್ರಾಜ್ಯದ ಅಧಿಪತಿ ಕೃಷ್ಣದೇವರಾಯನಿಗೆ ಗಂಡು ಸಂತಾನವಿಲ್ಲದಿರುವುದು ಮತ್ತೊಂದು ಕ್ರೌರ್ಯಕ್ಕೆ ಎಡೆ ಮಾಡಿಕೊಡುತ್ತದೆ. ಪೊರ್ಚುಗಲ್ ದೇಶದಿಂದ ಬಂದ ಅಲ್ಬುಕರ್ಕ್ ಮನೋಭಾವ ಮತ್ತೊಂದು ಮಗದೊಂದು ಕ್ರೌರ್ಯಕ್ಕೆ ಎಡೆ ಮಾಡಿಕೊಡುತ್ತದೆ. ಬಹಮನಿ ಸುಲ್ತಾನ ಆದಿಲ್ ಶಾಹಿ ಆಡಳಿತವೂ ಬೇರೊಂದು ಕ್ರೌರ್ಯಕ್ಕೆ ಅಡಿಯಿಟ್ಟು ಮತ್ತೊಂದು ಕ್ರೌರ್ಯಕ್ಕೆ ಮೆಟ್ಟಿಲಾಗುತ್ತದೆ. ಇವೆಲ್ಲದರಿಂದ ಜನಸಾಮಾನ್ಯರ ಬದುಕು ನಲುಗುತ್ತಲೇ ಹೋಗುತ್ತದೆ.
ಕಾದಂಬರಿಯಲ್ಲಿ ತೇಜೋ – ತುಂಗಭದ್ರಾ ನದಿಗಳು ಒಂದಾಗುವ ಪವಾಡವೂ ಜರುಗುತ್ತದೆ. ಆದರಿದು ನದಿಗಳ ಸಂಗಮವಲ್ಲ; ಆಯಾ ನದಿಗಳ ಪಾತ್ರಗಳಿಂದ ಬಂದವರ ಸಂಗಮ. ಇದು ಕೂಡ ಬದುಕಿನ ಪವಾಡದಂತೆ – ಭವಿಷ್ಯದಲ್ಲಡಗಿರುವ ಕೌತುಕಗಳಂತೆ ಭಾಸವಾಗುತ್ತದೆ. ಉದ್ದಕ್ಕೂ ಕ್ರೌರ್ಯ – ದುರಂತಗಳಿದ್ದರೂ ಅಲ್ಲಿ ಮಾನವೀಯತೆ ಒರತೆಯೂ ಕಾಣುತ್ತದೆ. ಇದರ ಪ್ರತಿನಿಧಿಗಳಾಗಿ ಆಂಟೋನಿಯೋ – ಗೇಬ್ರಿಯಲ್ – ತೆಂಬಕ್ಕ – ಹಂಪಮ್ಮ – ಚಂಪಕ – ಗುಣ ಸುಂದರಿ – ಅಡವಿಸ್ವಾಮಿ ಕಾಣುತ್ತಾರೆ. ಅಡವಿಸ್ವಾಮಿಯದಂತೂ ಬಹು ಅದ್ಬುತ ಪಾತ್ರ
ಇತಿಹಾಸದಲ್ಲಿ ಜನಸಾಮಾನ್ಯರಿಗೆ ನೆಮ್ಮದಿಯಿಲ್ಲದ ಕಥೆಯನ್ನು ಹೇಳುವಾಗ ಅವರ ಬದುಕಿನ ನೆಮ್ಮದಿಗೆ – ಆತಂಕಕ್ಕೆ ಕಾರಣವಾಗುವ ಪ್ರಭುತ್ವದ ಕಥೆಯೂ ಇಲ್ಲಿ ಹಾಸುಹೊಕ್ಕಾಗಿದೆ. ಅವರಿಗೂ ನೆಮ್ಮದಿಯಿಲ್ಲ. ಯಾವ ಕ್ಷಣ ಏನಾಗುವುದು ಎಂಬ ಆತಂಕ. ಇಂಥ ಆತಂಕದ ಹೆಚ್ಚಳಗಳು ಜನಸಾಮಾನ್ಯರ ದುಃಖವನ್ನೂ ಹೆಚ್ಚಿಸುತ್ತಲೇ ಹೋಗುತ್ತದೆ.
ಕಾದಂಬರಿ ಓದಿದ ನಂತರ ಇಲ್ಲಿರುವ ಕೆಲವಾದರೂ ಪಾತ್ರಗಳನ್ನು ಕಥೆಗಾರ ಅನವಶ್ಯಕವಾಗಿ ದುರಂತದೆಡೆಗೆ ನಡೆಸುತ್ತಿದ್ದಾರೆಯೇ ಎಂಬ ಅನಿಸಿಕೆಯೂ ಮೂಡುತ್ತದೆ. ಕೇಶವನ ತಳಮಳ – ಆತ ತನ್ನದಲ್ಲದ ವೃತ್ತಿ ಆರಿಸಿಕೊಂಡಿದ್ದು ಅರ್ಥವಿಲ್ಲದ್ದು ಎಂದೂ ಅನಿಸುತ್ತದೆ. ತನಗೊದಗುವ ವಿಪತ್ತಿನಿಂದ ಗೇಬ್ರಿಯಲ್ ಪಾರಾಗಬಹುದಿತ್ತು. ಆದರೂ ಆತನನ್ನು ವಿಪತ್ತಿಗೆ ತಂದು ದೂಡಲಾಗಿದೆ ಎಂದನಿಸುತ್ತದೆ. ಇಂಥ ಅನೇಕ ಜಿಜ್ಞಾಸೆಗಳು ಮೂಡುತ್ತವೆ.
ಜನಸಾಮಾನ್ಯರ ದೃಷ್ಟಿಯ ಈ ಕಥಾನಕ ವರ್ತಮಾನದ ಸಂದರ್ಭದಲ್ಲಿ ಅನನ್ಯವೆನ್ನಿಸುತ್ತದೆ. ಇತಿಹಾಸವನ್ನೂ ಹೀಗೂ ನೋಡಬಹುದು ಎಂದು ಹೇಳಿದ ಕೃತಿಗಳ ಸಾಲಿನಲ್ಲಿ ನಿಲ್ಲುತ್ತದೆ. ಹೇಗಿರಬೇಕು ಎನ್ನುವುದಕ್ಕಿಂತಲೂ ಹೇಗಿರಬಾರದು ಎಂಬುದನ್ನು ಹೇಳುವ ತೇಜೋ – ತುಂಗಭದ್ರಾ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ವಿಶಿಷ್ಟ ಕೃತಿಯಾಗಿ ನಿಲ್ಲುತ್ತದೆ.

Similar Posts

Leave a Reply

Your email address will not be published. Required fields are marked *