ಇತ್ತೀಚೆಗೆ ಟಿವಿ ಕಾರ್ಯಕ್ರಮವೊಂದನ್ನು ನೋಡುತ್ತಿದ್ದೆ. ಪದವಿ ಹಂತದ ಕಾಲೇಜುಗಳಿಗೆ ತೆರಳಿ ವಿದ್ಯಾರ್ಥಿಗಳ ರಾಜಕೀಯ ಒಲವುಗಳನ್ನು ತಿಳಿದುಕೊಳ್ಳುತ್ತಿದ್ದರು. ಮೈಕ್ ಹಿಡಿದವರು ಕೇಳುತ್ತಿದ್ದ ಪ್ರಶ್ನೆಗಳು ” ನಿಮ್ಮ ಆಯ್ಕೆ ನರೇಂದ್ರ ಮೋದಿ ಅಥವಾ ರಾಹುಲ್ ಗಾಂಧಿ, ಒಮ್ಮೆ ಹೀಗೆ ಕೇಳಿದರೆ ಮತ್ತೊಮ್ಮೆ “ನಿಮ್ಮ ಒಲವು ಬಿಜೆಪಿಯೋ ಅಥವಾ ಕಾಂಗ್ರೆಸ್” ? ಇದಕ್ಕೆ ಬಹುತೇಕ ಯುವ ವಿದ್ಯಾರ್ಥಿಗಳ ಒಂದೇ ಆಗಿತ್ತು.
ಅವರು ತಮ್ಮ ಆಯ್ಕೆ ನರೇಂದ್ರಮೋದಿ, ನಮ್ಮ ಮತ ಬಿಜೆಪಿಗೆ ಎಂದು ಕೇಳುತ್ತಿದ್ದರು. ಈ ಸಂದರ್ಭದಲ್ಲಿ ತಮ್ಮ ಆಯ್ಕೆ ರಾಹುಲ್ ಮತ್ತು ಕಾಂಗ್ರೆಸ್ ಎಂದ ಮೂರ್ನಾಲ್ಕು ಮಂದಿ ವಿದ್ಯಾರ್ಥಿಗಳು ತಾವು ಏಕೆ ಈ ಆಯ್ಕೆ ಮಾಡಿಕೊಂಡಿದ್ದೇವೆ ಎಂದು ವಿವರಿಸಲು ವಿಫಲರಾದರು. ಓರ್ವ ವಿದ್ಯಾರ್ಥಿನಿ ಮಾತ್ರ ಕಳೆದ ಐದು ವರ್ಷದಲ್ಲಿ ನರೇಂದ್ರ ಮೋದಿ ಮಾಡಿದ್ದೇನು ಎಂದು ಪ್ರಶ್ನಿಸುತ್ತಾ ಕೃಷಿಕರು ಅನುಭವಿಸುತ್ತಿರುವ ತೊಂದರೆಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ವಿವರಿಸಿದರು.
ಭಾರತ ಕತ್ತಲೆಯಲ್ಲಿತಂತೆ: ಬಹುತೇಕ ವಿದ್ಯಾರ್ಥಿಗಳ ಉತ್ತರ ಹೇಗಿತ್ತು ಎಂದರೆ 2013ಕ್ಕೂ ಮೊದಲೇ ಭಾರತ ಕತ್ತಲೆಯ ಉಪಖಂಡವಾಗಿತ್ತು. ಮೋದಿ, ಪ್ರಧಾನಿಯಾದ ನಂತರವೇ ಭಾರತ ಪ್ರಕಾಶಿಸುತ್ತಿದೆ. ಅವರು ನಿರಂತರವಾಗಿ ವಿದೇಶಿ ಪ್ರವಾಸ ಮಾಡಿದ್ದರಿಂದ ಬಹಳ ಅನುಕೂಲವಾಗಿದೆ. ಕಳೆದ 60 ವರ್ಷಗಳಲ್ಲಿ ಕಾಂಗ್ರೆಸ್ ಏನೂ ಮಾಡಿದೆ? ಈ ಮಾತುಗಳನ್ನು ಆಡಿದವರ ಮುಖಗಳನ್ನು ನೋಡಿದರೆ ಅವರಿನ್ನೂ 18-20ರ ವಯೋಮಾನದಲ್ಲಿದ್ದವರು. ಪ್ರಥಮ ಬಾರಿಗೆ ಮತದಾನ ಮಾಡಲು ಉತ್ಸುಕರಾಗಿದ್ದವರು. ಈ ಯುವ ವಿದ್ಯಾರ್ಥಿಗಳ ಮಾತುಕೇಳಿ ನನಗೆ ದಿಗ್ಬ್ರಮೆ ಆಯಿತು.
ರಾಜಕೀಯ ಒಲವು ವೈಯಕ್ತಿಕ: ಇಂಥದ್ದೇ ರಾಜಕೀಯ ಸಿದ್ಧಾಂತ ಅಥವಾ ಪಕ್ಷದ ಒಲವು ಹೊಂದಿರಬೇಕು ಎಂದು ಹೇಳುವುದು ಮೂರ್ಖತನ. ಆದರೆ ನಾವು ಏಕೆ ಇಂಥದ್ದೇ ಪಾರ್ಟಿಗೆ ಓಟು ನೀಡುತ್ತಿದ್ದೇವೆ ಎಂಬ ಬಗ್ಗೆ ಸ್ಪಷ್ಟತೆ ಇರಬೇಕು. ಇಲ್ಲದಿದ್ದರೆ ಸದ್ದುದ್ದೇಶದಿಂದ ನೀಡಿದ ಮತಗಳ ಮೂಲಕ ನೀಡಿದ ಬೆಂಬಲ ನಿಷ್ಪಲವಾಗುತ್ತದೆ ಎಂಬ ಅರಿವು ಇರಬೇಕು. ದೇಶದ ಅಭಿವೃದ್ಧಿಗೆ ಭಾವನಾತ್ಮಕತೆಯೊಂದೆ ಸಾಲದು ಎಂಬ ತಿಳಿವಳಿಕೆಯೂ ಬೇಕು
ಎಷ್ಟೊಂದು ಸವಾಲುಗಳಿದ್ದವು: ಬ್ರಿಟಿಷರು ಬಿಟ್ಟುಹೋದ ಭಾರತ ಸಮಸ್ಯೆಗಳಿಂದ ಮುಕ್ತವಾಗಿರಲಿಲ್ಲ. ಬದಲಾಗಿ ಎತ್ತ ತಿರುಗಿದರತ್ತ ಸಮಸ್ಯೆಗಳೇ ಇದ್ದವು. ಹಲವಾರು ಸಂಸ್ಥಾನಗಳ ಮೂಲಕ ಹರಿದು ಹಂಚಿಹೋಗಿದ್ದ ಭಾರತವನ್ನು ಒಗ್ಗೂಡಿಸಬೇಕಿತ್ತು. ಈ ನಂತರ ಅಭಿವೃದ್ಧಿಗಳನ್ನು ಕೈಗೊಳ್ಳಲು ಸರ್ಕಾರದ ಬೊಕ್ಕಸದಲ್ಲಿ ಹಣವಿರಬೇಕಿತ್ತು. ಇದಕ್ಕಾಗಿ ಖಾಲಿ ಖಜಾನೆ ಭರ್ತಿ ಮಾಡಬೇಕಿತ್ತು. ಇವೆಲ್ಲದರ ಜೊತೆಗೆ ಇಡೀ ಭಾರತಕ್ಕೆ ಒಂದು ಸಾಂಸ್ಥಿಕ ಸ್ವರೂಪವನ್ನು ನೀಡಬೇಕಿತ್ತು. ಹಸಿವು ಮುಕ್ತ ರಾಷ್ಟ್ರವನ್ನಾಗಿ ಮಾಡಬೇಕಿತ್ತು. ಅದುವರೆಗೂ ಬ್ರಿಟಿಷ್ ಆರ್ಮಿ ಆಗಿದ್ದ ಸೈನ್ಯ, ಭಾರತೀಯ ಸೈನ್ಯವಾಗಿ ರೂಪಾಂತರಗೊಂಡಿತ್ತು. ಅದನ್ನು ಬಲಿಷ್ಠಗೊಳಿಸಬೇಕಿತ್ತು. ಇವೆಲ್ಲದರ ಜೊತೆಗೆ ಅತ್ಯಮೂಲ್ಯ ಪ್ರಜಾಪ್ರಭುತ್ವಕ್ಕೆ ಭದ್ರ ಬುನಾದಿ ಹಾಕಬೇಕಿತ್ತು. ದೇಶದ ಅಭಿವೃದ್ಧಿಗೆ ಸಾವಿರಾರು ಸಂಸ್ಥೆಗಳನ್ನು ಕಟ್ಟುವ ಅವಶ್ಯಕತೆ ಇತ್ತು. ಗಣತಂತ್ರದ ರಾಜ್ಯಗಳ ರೂಪುರೇಷೆಗಳನ್ನು ಸಿದ್ಧಗೊಳಿಸಬೇಕಿತ್ತು. ಭಾಷೆ ಆಧಾರದ ಮೇಲೆ ರಾಜ್ಯಗಳನ್ನು ಪುರ್ನವಿಂಗಡಿ ಅವುಗಳು ಸಮಸ್ಯೆ ಇಲ್ಲದೇ ಮುನ್ನಡೆಯುವಂತೆ ಮಾಡಬೇಕಿತ್ತು. ಇಷ್ಟೆಲ್ಲವನ್ನು ಮಾಡುವುದು ರೇಡಿಯೋದಲ್ಲಿ, ಟಿವಿಯಲ್ಲಿ, ರಾಜಕೀಯ ಸಮಾವೇಶಗಳಲ್ಲಿ ವೀರಾವೇಶದಿಂದ ಮಾತನಾಡುವಷ್ಟು ಸುಲಭವಾಗಿರಲಿಲ್ಲ.
ಬಲಿಷ್ಠ ಸಂವಿಧಾನ: ಇವೆಲ್ಲದರ ಜೊತೆಗೆ ಬಹುಮುಖ್ಯವಾಗಿ ಪ್ರಜಾಪ್ರಭುತ್ವದ ಆಧಾರಸ್ತಂಭವಾಗಿರುವ, ಗಣತಂತ್ರವನ್ನು ಬಲಿಷ್ಠ ಬಾಹುಗಳಿಂದ ಕಾಪಾಡುವ ಸಂವಿಧಾನ ರಚನೆಯಾಗಬೇಕಿತ್ತು. ಇಂಥ ಒಂದು ಬಲಿಷ್ಠ ಸಂವಿಧಾನವಿಲ್ಲದ ಕಾರಣದಿಂದಲೇ ಅನೇಕ ರಾಷ್ಟ್ರಗಳು ಮಿಲಿಟರಿ ತೆಕ್ಕೆಗೆ ಹೋದ ಉದಾಹರಣೆಗಳಿದ್ದವು. ಈಗಲೂ ಅಂಥ ವಿದ್ಯಮಾನಗಳು ನಿರಂತರವಾಗಿ ನಡೆಯುತ್ತಿವೆ. ಇದ್ಯಾವುದಕ್ಕೂ ಆಸ್ಪದ ನೀಡದಂತೆ ಸಂವಿಧಾನ ರಚಿಸುವ ಹೊಣೆಗಾರಿಕೆಯನ್ನು ಡಾ. ಬಿ. ಆರ್. ಅಂಬೇಡ್ಕರ್ ಮತ್ತು ಅವರ ಸಹಸದಸ್ಯರು ವಹಿಸಿಕೊಂಡರು. ತಮ್ಮ ಕೆಲಸವನ್ನು ಅವರು ಬಹುಸಮರ್ಥವಾಗಿ ಮಾಡಿದರು. ಆದ್ದರಿಂದಲೇ ಭಾರತದ ಗಣತಂತ್ರ ಸುಭದ್ರವಾಗಿದೆ. ಪ್ರಜಾಪ್ರಭುತ್ವ ನಿರಾಳವಾಗಿ ಉಸಿರಾಡುತ್ತಿದೆ.
ಬಂದೆರಗಿದ ಯುದ್ಧಗಳು: ದೇಶ ಕಟ್ಟುವ ಕೆಲಸಗಳು ಶುರುವಾಗುತ್ತಿದ್ದಂತೆ 1947-48ನಲ್ಲಿ ಕಾಶ್ಮೀರದ ವಿಷಯವಾಗಿ ಪಾಕಿಸ್ತಾನ ಯುದ್ಧ ಮಾಡುವಂಥ ಸ್ಥಿತಿ ನಿರ್ಮಿಸಿತು. ಅದರೊಂದಿಗೆ ಯುದ್ಧಮಾಡಿ ಆ ಸೈನ್ಯವನ್ನು ಭಾರತೀಯ ಸೈನಿಕರು ಹಿಮ್ಮೆಟ್ಟಿಸಿದರು. ಈ ಬಳಿಕ ಹಿಂದಿ-ಚೀನಿ ಬಾಯ್ ಬಾಯಿ ಘೋಷಣೆ ನಡುವೆಯೇ ಚೀನಾ ತಾನಾಗಿ ಕಾಲು ಕೆರೆದುಕೊಂಡು ಯುದ್ಧಕ್ಕೆ ಬಂತು. 1962ರಲ್ಲಿ ಅದರ ಜೊತೆಯೂ ಗಡಿಯಂಚಿನಲ್ಲಿ ತೀವ್ರಸ್ವರೂಪದ ಯುದ್ಧ ನಡೆಯಿತು. ಈ ನಂತರ 1965ರಲ್ಲಿ ಮತ್ತೆ ಪಾಕಿಸ್ತಾನದ ಜೊತೆ 17 ದಿನಗಳ ಕಾಲ ಘನಘೋರ ಯುದ್ಧವೇ ನಡೆಯಿತು. ಭಾರತೀಯ ಸೈನಿಕರು, ಪಾಕಿಸ್ತಾನ ಸೈನ್ಯವನ್ನು ಹಿಮ್ಮೆಟ್ಟಿಸಿದರು. ಅಲ್ಲಿನ ಸರ್ಕಾರಕ್ಕೆ ಭಾರಿ ಬಿಸಿ ಮುಟ್ಟುವಂತೆಯೂ ಮಾಡಲಾಯಿತು.
ಮತ್ತೆ ಯುದ್ಧಕ್ಕೆ ಬಂದ ಚೀನಾ: 1967ರಲ್ಲಿ ಚೀನಾ ಮತ್ತೆ ಕಾಲು ಕೆರೆದುಕೊಂಡು ಯುದ್ಧ ಮಾಡುವ ಸ್ಥಿತಿ ನಿರ್ಮಿಸಿದರು. ಈ ಬಾರಿ ಭಾರತೀಯ ಸೈನ್ಯಪಡೆಗಳು ಚೈನಾ ಸೈನ್ಯಕ್ಕೆ ತಕ್ಕಪಾಠ ಕಲಿಸಿದವು. ಆದರೆ ಚೀನಾ ಜಟ್ಟಿ ಕೆಳಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ ವರ್ತಿಸಿತು.
ಬಾಂಗ್ಲಾದೇಶದ ಉದಯ: 1971ರಲ್ಲಿ ಪಾಕಿಸ್ತಾನ ಯುದ್ಧ ಮಾಡುವ ಪರಿಸ್ಥಿತಿ ನಿರ್ಮಿಸಿತು, ಈ ಬಾರಿ ಭಾರತೀಯ ಸೈನಿಕರು ಕೊಟ್ಟ ಹೊಡೆತ ಜೋರಾಗಿಯೇ ಇತ್ತು. ಭಾರತ ಸರ್ಕಾರದ ಚಾಣಾಕ್ಷತೆಯಿಂದಾಗಿ ಪಾಕಿಸ್ತಾನ ಇಬ್ಬಾಗವಾಗಿ ಬಾಂಗ್ಲಾದೇಶ ಉದಯವಾಯಿತು. ಒಂದುವೇಳೆ ಈ ಭಾಗವೂ ಪಾಕಿನಲ್ಲಿಯೇ ಇದ್ದಿದ್ದರೆ ಅದರ ಬಲ ಮತ್ತಷ್ಟೂ ಹೆಚ್ಚಿರುತ್ತಿತ್ತು ಎಂಬುದನ್ನು ಮರೆಯಬಾರದು.
ಅಂದಿನ ನಾಯಕರ ಪ್ರಬುದ್ಧತೆ: ದೇಶ ಕಟ್ಟುವ ಕೆಲಸದ ಜೊತೆಜೊತೆಗೆ ಇಷ್ಟೆಲ್ಲ ಯುದ್ಧಗಳನ್ನು ಮಾಡಿ, ನೆರೆದೇಶಗಳಿಗೆ ತಕ್ಕ ಪಾಠ ಕಲಿಸಲಾಯಿತಾದರೂ ಅಂದಿನ ನಾಯಕರು ಇದರ ಬಗ್ಗೆ ಹೇಳಿಕೊಳ್ಳುತ್ತಾ ತಿರುಗುವ ಕಾರ್ಯ ಮಾಡಲಿಲ್ಲ. ಅಂದಿಗೂ ಸಾಕಷ್ಟು ಸರ್ಜಿಕಲ್ ದಾಳಿಗಳು ಆಗಿ ವಿಜಯ ಸಾಧಿಸಿದ್ದರೂ ಅದರ ಬಗ್ಗೆ ಯಾವ ವೇದಿಕೆಗಳಲ್ಲಿಯೂ ಚಕಾರವೆತ್ತಲಿಲ್ಲ. ಈ ಯುದ್ಧಗಳಾದಾಗ ಪ್ರಧಾನಿಗಳಾಗಿದ್ದ ಪಂಡಿತ್ ಜವಾಹರ್ ಲಾಲ್ ನೆಹ್ರು, ಲಾಲ್ ಬಹದ್ದೂರ್ ಶಾಸ್ತ್ರಿ, ಇಂದಿರಾ ಗಾಂಧಿ ಅವರು ಇದು ತಮ್ಮ ವೈಯಕ್ತಿಕ ಸಾಧನೆ ಎಂಬಂತೆ ಬಿಂಬಿಸಿಕೊಳ್ಳಲಿಲ್ಲ. ಆ ಎಲ್ಲ ವಿಜಯದ ಕ್ರೆಡಿಟ್ ಅನ್ನು ಸೈನಿಕರಿಗೆ ಅರ್ಪಿಸಿದರು. ಜೊತೆಗ ಈ ವಿಜಯಗಳನ್ನು ರಾಜಕೀಯವಾಗಿ ಬಳಸಿಕೊಳ್ಳಲು ಯತ್ನಿಸಲಿಲ್ಲ.
ಹಸಿರುಕ್ರಾಂತಿ: ದೇಶವನ್ನು ಹಸಿವುಮುಕ್ತ ಮಾಡಬೇಕಿತ್ತು. ಆಹಾರದಲ್ಲಿ ಸ್ವಾವಲಂಬಿಯಾಗುವಂತೆ ನೋಡಿಕೊಳ್ಳಬೇಕಿದ್ದು ತುರ್ತಿನ ವಿಷಯವಾಗಿತ್ತು. ಇದಕ್ಕಾಗಿ ಪಂಚವಾರ್ಷಿಕ ಯೋಜನೆಗಳನ್ನು ತರಲಾಯಿತು. ಹಸಿರುಕ್ರಾಂತಿಯನ್ನು ಸಮರೋಪಾದಿಯಲ್ಲಿ ಯಶಸ್ವಿ ಮಾಡಲಾಯಿತು. ದೇಶದ್ಯಂತ ಅನೇಕ ಅಣೆಕಟ್ಟುಗಳನ್ನು ಕಟ್ಟಲಾಯಿತು. ಲಕ್ಷಾಂತರ ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ಒದಗಿಸಲಾಯಿತು. ಇದರಿಂದಾಗಿಯೇ ಇಂದು ಭಾರತ ಆಹಾರದ ವಿಷಯದಲ್ಲಿಯೂ ಸ್ವಾವಲಂಬಿಯಾಗಿದೆ.
ಬಾಹ್ಯಕಾಶ ಸಾಧನೆಗಳು: ನಾಸಾ ಮಾದರಿಯಲ್ಲಿ ಭಾರತದಲ್ಲಿಯೂ ಇಸ್ರೋ ಸ್ಥಾಪಿತವಾಯಿತು. ಸಾಕಷ್ಟು ಉಪಗ್ರಹಗಳನ್ನು ಬಾಹ್ಯಾಕಾಶದ ಕಕ್ಷೆಗೆ ಯಶಸ್ವಿಯಾಗಿ ಸೇರಿಸಲಾಯಿತು. ಇವೆಲ್ಲರ ಜೊತೆಗೆ ಮಿಲಿಟರಿಯ ಸಬಲತೆಯನ್ನು ನಿರಂತರವಾಗಿ ಹೆಚ್ಚಿಸುವುದಕ್ಕಾಗಿ ಡಿ.ಆರ್.ಡಿ.ಒ. ಸ್ಥಾಪಿತವಾಯಿತು. ಪ್ರಾಥಮಿಕ ಶಿಕ್ಷಣದ ಜೊತೆಗೆ ಉನ್ನತ ಶಿಕ್ಷಣ ನೀಡುವ ಸಾವಿರಾರು ಸಂಸ್ಥೆಗಳು ಸ್ಥಾಪಿತಗೊಂಡವು. ಇವೆಲ್ಲದರ ಜೊತೆಗೆ ದೇಶಕ್ಕೆ ಹಿರಿಮೆಯನ್ನು ಮತ್ತಷ್ಟೂ ಹೆಚ್ಚಿಸುವ ಅಪ್ಸರಾ, ಬಾರ್ಕ್, ಎನ್.ಫಿ.ಎಲ್., ಐಐಟಿ, ಐ.ಎಸ್.ಎಸ್.ಟಿ., ಒ.ಎನ್.ಜಿ.ಸಿ., ಏಮ್ಸ್, ನಿಟ್, ಸಿ.ಡಿ.ಆರ್.ಐ., ಸಿ.ಬಿ.ಆರ್.ಐ., ಬೊಕ್ರೊ ಮತ್ತು ರೂರ್ಕೆಲಾ ಸ್ಟೀಲ್, ಸಿ.ಎಫ್.ಟಿ.ಆರ್.ಐ., ಸಿ.ಇ.ಸಿ.ಆರ್.ಐ., ಸಿ.ಜಿ.ಸಿ.ಆರ್.ಐ., ಸಿ.ಐ.ಎಂ.ಎ.ಪಿ., ಸಿ.ಎಲ್.ಆರ್.ಐ., ಸಿ.ಎಂ.ಇ.ಆರ್.ಐ., ಸಿ.ಆರ್.ಆರ್.ಐ., ಸಿ.ಎಸ್.ಐ.ಒ., ಸಿ.ಎ.ಜೆಡ್.ಆರ್.ಐ., ಸಿ.ಎಸ್.ಎಂ.ಸಿ.ಆರ್.ಐ. ಮತ್ತು ಇನ್ನು ಸಾಕಷ್ಟು ಸಂಸ್ಥೆಗಳು ರಚನೆಯಾದವು. ಇವುಗಳ ಬಗ್ಗೆಯೂ ಅಂದಿನ ನಾಯಕರು ಜಂಬ ಕೊಚ್ಚಿಕೊಳ್ಳಲಿಲ್ಲ. ತಮ್ಮ ಪಕ್ಷದ ಸಾಧನೆಯೆಂದು ಬಿಂಬಿಸಿಕೊಳ್ಳಲಿಲ್ಲ. ಸದ್ದಿಲ್ಲದೇ ರಾಷ್ಟ್ರ ಕಟ್ಟುತ್ತಾ ಸಾಗಿದರು.
ಆರೋಗ್ಯಕ್ಷೇತ್ರ: ಈ ಕ್ಷೇತ್ರದಲ್ಲಿಯೂ ದೊಡ್ಡದೊಡ್ಡ ಸಂಸ್ಥೆಗಳನ್ನು ಸ್ಥಾಪಿಸಲಾಯಿತು. ಇವೆಲ್ಲದರ ಪರಿಣಾಮವಾಗಿ ದೇಶದ ಜನತೆಯನ್ನು ನಿರಂತರವಾಗಿ ಕಾಡುತ್ತಿದ್ದ ಕಾಲರಾ, ಪ್ಲೇಗು, ಸಿಡುಬು ಇತ್ಯಾದಿ ಸಾಂಕ್ರಾಮಿಕ ರೋಗಗಳು ನಿವಾರಣೆಯಾದವು. ಜನಗಳು ಹುಳುಗಳ ಮಾದರಿಯಲ್ಲಿ ಸಾಯುತ್ತಿದ್ದ ದುಸ್ಥಿತಿ ನಿವಾರಣೆಯಾಯಿತು. ಇಂಥ ಕ್ರಮಗಳಿಗೆ ವಿಶ್ವಮಟ್ಟದ ಸಂಸ್ಥೆಗಳ ನೆರವು ಸಿಕ್ಕಿತ್ತಾದರೂ ದೇಶದ ನೌಕರವರ್ಗವನ್ನು ಸಮರ್ಥವಾಗಿ ಬಳಸಿಕೊಂಡು ಕಾರ್ಯಾಚರಣೆ ಮಾಡಿದ್ದು ಸಣ್ಣ ಸಾಧನೆಯಲ್ಲ.
ಟೆಲಿಕಾಂ ಕ್ರಾಂತಿ: ಪಕ್ಕದೂರಿಗೆ ಕಾಲ್ ಮಾಡಬೇಕಾದರೂ ಕಾಲ್ ಬುಕ್ಕಿಂಗ್ ಮಾಡಬೇಕಿತ್ತು. ತುರ್ತು ಪರಿಸ್ಥಿತಿ ಇದ್ದರೆ ಲೈಟ್ನಿಂಗ್ ಕಾಲ್ ಮಾಡಬೇಕಿತ್ತು. ಟೆಲಿಪೋನ್ ಎನ್ನುವುದು ಸಿರಿವಂತಿಕೆಯ ಸಂಕೇತವಾಗಿತ್ತು. ಇದೆಲ್ಲವನ್ನು ನಿವಾರಿಸಿ ದೇಶದಲ್ಲಿ ಟೆಲಿಕಾಂ ಕ್ರಾಂತಿ ಉಂಟಾಗುವಂತೆ ಮಾಡಿದ್ದು ರಾಜೀವ್ ಗಾಂಧಿ ನೇತೃತ್ವದ ಕೇಂದ್ರ ಸರ್ಕಾರ. ಸ್ಯಾಮ್ ಪಿಟ್ರೋಡಾ ಉಸ್ತುವಾರಿಯಲ್ಲಿ ಈ ಕೆಲಸ ದಕ್ಷತೆಯಿಂದ ನಡೆಯಿತು. ಇದರ ಫಲವಾಗಿಯೇ ಇಂದು ಇಂಡಿಯಾದಲ್ಲಿ ಬಹುತೇಕರ ಕೈಯಲ್ಲಿ ಸ್ಮಾರ್ಟ್ ಪೋನ್ ಗಳಿವೆ. ಇವತ್ತು ಪೋನ್ ಎನ್ನುವುದು ಸಿರಿವಂತರ ಸಂಕೇತವಾಗಿ ಉಳಿದಿಲ್ಲ ಎಂಬುದನ್ನು ಮರೆಯಬಾರದು.
ಆರ್ಥಿಕತೆ ಕುಸಿಯಲಿಲ್ಲ: ಯುರೋಪಿನ ಬಹುತೇಕ ರಾಷ್ಟ್ರಗಳು, ಅಮೆರಿಕಾದಂಥ ಬಲಿಷ್ಠ ರಾಷ್ಟ್ರವೂ ಆರ್ಥಿಕ ಕುಸಿತದಿಂದ ಕಂಗೆಟ್ಟಿತು. ಆದರೆ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರ ಭಾರತೀಯ ಪ್ರಜೆಗಳಿಗೆ ಇದರ ಬಿಸಿ ತಾಕದಂತೆ ನೋಡಿಕೊಂಡಿತು. ಇದು ಖಂಡಿತ ಸಣ್ಣಪುಟ್ಟ ಸಾಧನೆಯಲ್ಲ. ಇವೆಲ್ಲದರ ಜೊತೆಗೆ ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗಗಳನ್ನು ಸೃಜಿಸಲು ನರೇಗಾ ಯೋಜನೆ ಜಾರಿಗೆ ತರಲಾಯಿತು. ಇದು ಇಡೀ ವಿಶ್ವದ ಗಮನವನ್ನೇ ತನ್ನತ್ತ ಸೆಳೆದಿದ್ದ ಮಹಾ ಯೋಜನೆ.
ಸಾಧನೆಗಳ ಪಟ್ಟಿ: 2013ಕ್ಕೆ ಮುಂಚೆ ಆಗಿರುವ ಸಾಧನೆಗಳ ಪಟ್ಟಿ ಬಹಳ ದೊಡ್ಡದಿದೆ. ಇದರ ಬಗ್ಗೆ ಹೇಳುತ್ತಲೇ ಹೋಗಬಹುದು. ಆದರೆ 2013ರ ನಂತರ ಆದ ಸಾಧನೆಗಳೇನು ಎಂಬುದರ ಬಗ್ಗೆಯೂ ಗಮನ ಹರಿಸಬೇಕಲ್ಲವೇ.. ಆ ಬಗ್ಗೆ ಮಾತನಾಡಿದ್ದರೆ ತಪ್ಪಾಗುತ್ತದೆ.
ಅನುದಾನ ಕಡಿತ: ಹಿಂದಿನ ಕೇಂದ್ರ ಸರ್ಕಾರಗಳು ಎಂಥಾ ಪರಿಸ್ಥಿತಿಯಲ್ಲಿಯೂ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಕೊಡುತ್ತಿದ್ದ ಅನುದಾನ ಕಡಿತಗೊಳಿಸಿರಲಿಲ್ಲ. ಆದರೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇದರ ಅನುದಾನ ಕಡಿತಗೊಳಿಸಿತು. ಜೊತೆಗೆ ಇಂಥ ಸಂಸ್ಥೆಗಳ ನೀತಿನಿರೂಪಣೆಯಲ್ಲಿಯೂ ಹಸ್ತಕ್ಷೇಪ ಮಾಡಲಾರಂಭಿಸಿತು. ಯಾವುದರ ಬಗ್ಗೆ ಸಂಶೋಧನೆ, ಅಧ್ಯಯನ ಮಾಡಬೇಕು ಎಂಬುದನ್ನು ಸರ್ಕಾರವನ್ನೇ ಕೇಳಿ ಮಾಡಬೇಕಾದ ಪರಿಸ್ಥಿತಿ ನಿರ್ಮಿಸಿತು.
ನರೇಗಾ ಯೋಜನೆ: ಈ ಯೋಜನೆಗೆ ಸೂಕ್ತ ಅನುದಾನ ಒದಗಿಸಲಿಲ್ಲ. ಇದರಿಂದ ಈ ಯೋಜನೆಯೇ ಹಳ್ಳ ಹಿಡಿಯಿತು. ಕೋಟ್ಯಂತರ ಮಂದಿಗೆ ಭರವಸೆಯ ಬೆಳಕಾಗಿದ್ದ ಯೋಜನೆಯ ಬೆಳಕೇ ಕಂದುವಂತೆ ಮಾಡಿದರು.
ಶಾಂತಿ ಕದಡಿತು: ಯಾವುದೇ ದೇಶ ಅಭಿವೃದ್ಧಿಯಾಗಬೇಕಾದರೆ ಅಂತರಿಕ ಶಾಂತಿ ಬಹುಮುಖ್ಯ. ಆದರೆ ಕಳೆದ ಐದು ವರ್ಷಗಳಲ್ಲಿ ದಲಿತರು, ಆದಿವಾಸಿಗಳು, ಅಲ್ಪಸಂಖ್ಯಾತರ ಮೇಲೆ ನಿರಂತರ ದಾಳಿಗಳಾಗುತ್ತಿವೆ. ಇಂಥ ಪರಿಸ್ಥಿತಿಯನ್ನು ಸಮರ್ಥವಾಗಿ ತಡೆಯಬೇಕಾದ್ದು ಕೇಂದ್ರ ಸರ್ಕಾರದ ಕರ್ತವ್ಯ. ಆದರೆ ಅದು ಮಾಡಿದ್ದೇನು?
ನಿರುದ್ಯೋಗ: ಬಹು ಆಕರ್ಷಕ ಪದಪುಂಜಗಳನ್ನು ಪ್ರಧಾನಿಯವರು ಬಳಸುತ್ತಾರೆ. ಆದರೆ ವಾಸ್ತವಾಗಿ ಆಗಿರುವುದೇನು. ಕಳೆದ ಐದು ವರ್ಷಗಳಲ್ಲಿ ನಿರುದ್ಯೋಗ ಮಿತಿ ಮೀರಿದೆ. ಪದವೀಧರರು, ಸ್ನಾತಕೋತ್ತರ ಪದವಿಗಳನ್ನು ಪಡೆದು ಹೊರಬಂದವರು ಸಣ್ಣದೊಂದು ಉದ್ಯೋಗ ಪಡೆಯಲು ಪರದಾಡಬೇಕಾದ ದುಸ್ಥಿತಿ ನಿರ್ಮಾಣವಾಗಿದೆ.
ರೈತರ ಆತ್ಮಹತ್ಯೆ: ವರ್ಷದಿಂದ ವರ್ಷಕ್ಕೆ ರೈತರ ಆತ್ಮಹತ್ಯೆಗಳ ಸಂಖ್ಯೆ ಹೆಚ್ಚುತ್ತಿದೆ. ಇವುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರಕ್ಕೆ ಮಹತ್ತರ ಪಾತ್ರವಿದೆ. ಹೆಚ್ಚಿನಾಂಶ ತೆರಿಗೆ ಕೇಂದ್ರಕ್ಕೆ ಹೋಗುತ್ತದೆ. ಪ್ರಧಾನಿ ಮೋದಿ ಎಲ್ಲ ರಾಜ್ಯ ಸರ್ಕಾರಗಳ ಮುಖ್ಯಮಂತ್ರಿಗಳ ಜೊತೆ ಮತ್ತೆಮತ್ತೆ ಸಭೆಗಳನ್ನು ನಡೆಸಿ ಪರಿಹಾರ ಹುಡುಕಬೇಕಿತ್ತು. ಆದರೆ ಹೀಗೆ ಮಾಡಲಿಲ್ಲ. ಬಹುದೂರದಿಂದ ಅಹವಾಲು ಹೇಳಿಕೊಳ್ಳಲು ನಡೆದುಬಂದ ರೈತರನ್ನು ಭೇಟಿ ಮಾಡುವ ಸೌಜನ್ಯ ತೋರಿಸಲಿಲ್ಲ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿರುವ ರೈತರ ಸಾಲವನ್ನು ಮನ್ನಾ ಮಾಡಲು ಅಥವಾ ಸಾಲದ ಹೊರೆ ಕಡಿಮೆ ಮಾಡುವುದು ಹೇಗೆಂದು ತಜ್ಞರ ಜೊತೆ ಚರ್ಚಿಸಲಿಲ್ಲ.
ಎಲ್ಲಿ 15 ಲಕ್ಷ: ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಮುಂಚೆ, ಅಧಿಕಾರಕ್ಕೆ ಬಂದ ಹೊಸತರಲ್ಲಿ “ಹೊರದೇಶಗಳ ಬ್ಯಾಂಕುಗಳಲ್ಲಿರುವ ಭಾರತದ ಕಪ್ಪುಹಣವನ್ನೆಲ್ಲ ತರಲಾಗುತ್ತದೆ. ಪ್ರತಿಯೊಬ್ಬ ಭಾರತೀಯ ಬ್ಯಾಂಕ್ ಖಾತೆಗಳಿಗೆ 15 ಲಕ್ಷ ಭರ್ತಿ ಮಾಡಲಾಗುತ್ತದೆ ಎಂದು ನರೇಂದ್ರ ಮೋದಿ ಹೇಳಿದರು. ಇವರು ಮಾತನಾಡಿದ ರೀತಿ ನೋಡಿದ ಸಾಮಾನ್ಯ ಜನತೆ ಇದು ನಿಜವಿರಬಹುದು ಎಂದುಕೊಂಡರು. ವರ್ಷಗಳು ಉರುಳಿತು. ಈಗ ಚುನಾವಣೆಯೂ ಬಂದಿದೆ. ಆದರೆ 15 ಲಕ್ಷ ಮಾತ್ರ ಜನಸಾಮಾನ್ಯರ ಬ್ಯಾಂಕ್ ಖಾತೆಗಳಿಗೆ ಬರಲಿಲ್ಲ.
ಅನಾಣ್ಯೀಕರಣ: ಕಪ್ಪುಹಣ ತಡೆಯುತ್ತೇನೆಂದು ಮೋದಿ ಹೇಳಿದರು. ಡಿಮೊನಿಟೈಜೆಶನ್ ತಂದರು. ದಿಢೀರನೇ 500, 1000 ಮುಖಬೆಲೆಯ ನೋಟುಗಳ ಚಲಾವಣೆ ರದ್ದು ಮಾಡಿದರು. ಆದರೆ ಇದರಿಂದ ಆಗಿದ್ದೇನು, ಬಡವರು, ಮಧ್ಯಮವರ್ಗದ ಜನತೆ ಬೆವರು ಸುರಿಸಿ ದುಡಿದು ಬ್ಯಾಂಕಿನಲ್ಲಿಟ್ಟ ತಮ್ಮ ಹಣದ ತುಸು ಭಾಗವನ್ನು ಹಿಂಪಡೆಯಲು ಪರದಾಡಬೇಕಾಯಿತು. ಬ್ಯಾಂಕುಗಳು, ಎಟಿಎಂಗಳ ಮುಂದೆ ಕರಗದ ಕ್ಯೂ ನಿರ್ಮಾಣವಾಯಿತು. ಒಂದಷ್ಟು ಮಂದಿ ಅಮಾಯಕರು ಜೀವ ತೆತ್ತರು. ದೇಶಕ್ಕೆ ಒಳಿತಾಗಲು ಒಂದಷ್ಟು ಕಷ್ಟ ಪಡಬೇಕು ಎಂದಿಟ್ಟುಕೊಳ್ಳೋಣ. ಆದರೆ ಬಡವರು, ಮಧ್ಯಮವರ್ಗದವರು ಮಾಡಿದ ತ್ಯಾಗ ವ್ಯರ್ಥವಾಯಿತು. ಮೋದಿಯವರು ಕಪ್ಪುಹಣ ಪತ್ತೆಹಚ್ಚುವುದರಲ್ಲಿ ವಿಫಲವಾದರು.
ಉಂಡರು; ಕೊಂಡೂ ಹೋದರು: ರಿಸರ್ವ್ ಬ್ಯಾಂಕಿನ ಬಹುಸೂಕ್ಷ್ಮ ಆರ್ಥಿಕ ಕಾರ್ಯಾಚರಣೆಯಲ್ಲಿ ಹಸ್ತಕ್ಷೇಪ ಮಾಡುವ ಕಾರ್ಯವನ್ನು ಯಾವ ಪ್ರಧಾನಿಯೂ ಮಾಡಿರಲಿಲ್ಲ. ಮೋದಿಯವರು ಆ ಶ್ರೇಯಸ್ಸನ್ನು ಮುಡಿಗೇರಿಸಿಕೊಂಡರು. ಇದರಿಂದ ಆಗಿರುವ ದುಷ್ಪರಿಣಾಮ ಅಪಾರ. ಈ ನಡುವೆ ರಾಷ್ಟ್ರೀಕೃತ ಬ್ಯಾಂಕುಗಳಿಂದ ಭಾರಿಮೊತ್ತದ ಹಣ ಸಾಲವಾಗಿ ಪಡೆದ ವಿಜಯ ಮಲ್ಯ, ನೀರವ್ ಮೋದಿ ಪರದೇಶಕ್ಕೆ ಪರಾರಿಯಾದರು. ಇವರು ಪರಾರಿಯಾಗುವ ತನಕ ಮೋದಿ ನೇತೃತ್ವದ ಸರ್ಕಾರ ಏನು ಮಾಡುತ್ತಿತ್ತು. ಜನಸಾಮಾನ್ಯರು ಕೇಳುವ ಈ ಪ್ರಶ್ನೆಗಳಿಗೆ ಮೋದಿಯವರು ಉತ್ತರಿಸುವುದಿಲ್ಲ.
ಬಹುದೇಶ ತಿರುಗಿ ಮಾಡಿದ್ದಾದರೂ ಏನು: ಅಧಿಕಾರಕ್ಕೆ ಬಂದಂದಿನಿಂದ ಇಲ್ಲಿಯ ತನಕ ಪ್ರಧಾನಿ ಮೋದಿ ನಿರಂತರ ವಿದೇಶ ಪ್ರವಾಸ ಮಾಡಿದ್ದಾರೆ. ಇದಕ್ಕಾಗಿ ಸರ್ಕಾರದ ಬೊಕ್ಕಸದ ಸಾವಿರಾರು ಕೋಟಿ ಹಣ ವ್ಯಯವಾಗಿದೆ. ಈ ವಿದೇಶಗಳ ಪರ್ಯಟನೆಯಿಂದ ಭಾರತಕ್ಕೆ ಬಂದ ಭಾಗ್ಯವೇನು ಎಂಬುದರ ಬಗ್ಗೆ ಇಲ್ಲಿಯ ತನಕ ಮೋದಿಯವರು ಬಾಯ್ಬಿಟ್ಟಿಲ್ಲ. ಕಿರುಕುಳ ನೀಡುವ ದೇಶವನ್ನು ತೆಪ್ಪಗಾಗಿಸಲು ರಾಜತಾಂತ್ರಿಕ ಮಾರ್ಗಗಳನ್ನು ಕೂಡ ಅನುಸರಿಸಬಹುದು. ಭೂಮಿ ಮೇಲಿರುವ ಬಹುತೇಕ ದೇಶಗಳನ್ನು ಸುತ್ತಿಬಂದ ಮೋದಿಯವರು ಆ ದೇಶಗಳ ಕಪ್ಪುಪಟ್ಟಿಯಲ್ಲಿ ಪಾಕಿಸ್ತಾನ ಸೇರುವಂತೆ ಮಾಡಿ, ಭಾರತದ ಮುಂದೆ ಅಲ್ಲಿಯ ಸರ್ಕಾರ ಮಂಡಿಯೂರುವಂತೆ ಮಾಡಬಹುದಾಗಿತ್ತು.. ಆ ಕೆಲಸ ಏಕೆ ಮಾಡಲಿಲ್ಲ ? ಅವರೇ ಉತ್ತರಿಸಬೇಕು.
ಎಲ್ಲಿ ಅಚ್ಛೇದಿನ್: ಪ್ರಧಾನಿ ನರೇಂದ್ರಮೋದಿ, ಅಚ್ಛೇದಿನ್ ಬಗ್ಗೆ ಹೇಳುತ್ತಲೇ ಇರುತ್ತಾರೆ. ಅಂದರೆ ಇವರ ಮಾತಿನ ಅರ್ಥ ಮುಂಚೆ ಒಳ್ಳೆಯ ದಿನಗಳು ಇರಲೇ ಇಲ್ಲವೆಂದೆ? ಐದು ವರ್ಷ ಅಧಿಕಾರ ನಡೆಸಿದ ಪರಿಣಾಮ ತಂದ ಅಚ್ಚೇದಿನ್ ಯಾವುದು, ಬೆಲೆ ಏರಿಕೆಯಿಂದ ಜನ ತತ್ತರಿಸಿದ್ದಾರೆ. ದಿನಬಳಕೆಯ ವಸ್ತುಗಳು ಹಿಂದೆಂದಿಗಿಂತಳೂ ಹೆಚ್ಚಾಗಿವೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನದ ಬೆಲೆ ಇಳಿದಾಗಲೂ ಭಾರತೀಯ ಬಳಕೆದಾರರಿಗೆ ಅದರ ಪ್ರಯೋಜನ ದಕ್ಕುವಂತೆ ಮಾಡಲಿಲ್ಲ. ಜನಸಾಮಾನ್ಯರು ಬೆಚ್ಚಿಬೀಳುವ ರೀತಿ ಅಡುಗೆ ಅನಿಲದ ಬೆಲೆ ಏರಿಕೆಯಾಗಿದೆ. ಸೂಕ್ತ ಮಾದರಿಯಲ್ಲಿ ಜಾರಿಗೆ ಬರದ ಜಿ.ಎಸ್.ಟಿ.ಯಂತೂ ಬಹುದೊಡ್ಡ ಹೊಡೆತ ನೀಡಿವೆ. ಹೀಗಿರುವಾಗ ಅಚ್ಛೇದಿನ್ ಬಂದಿದ್ದಾದರೂ ಯಾರಿಗೆ ?
ರಫೇಲ್ ಡೀಲ್: ಪ್ರಾನ್ಸ್ ಜೊತೆಗಿನ ರಫೇಲ್ ಯುದ್ಧವಿಮಾನಗಳ ಖರೀದಿ ಒಪ್ಪಂದ ವಿವಾದಕ್ಕೀಡಾಗಿದೆ. ಇದು ಬಹುದೊಡ್ಡ ಹಗರಣದ ಸ್ವರೂಪ ಪಡೆದುಕೊಂಡಿದೆ ಎಂದು ವಿರೋಧಪಕ್ಷಗಳು ಆರೋಪ ಮಾಡುತ್ತಲೇ ಇವೆ. ಆದರೆ ಈ ಅನುಮಾನಗಳನ್ನು ಪರಿಹರಿಸುವ ಕಾರ್ಯಗಳು ಆಗಿಲ್ಲ. ಯುಪಿಎ ಸರ್ಕಾರದ ಅವಧಿಯಲ್ಲಿ ಭಾರತದ ವಾಯುದಳದ ಸಾಮರ್ಥ್ಯ ಹೆಚ್ಚಿಸುವುದಕ್ಕಾಗಿ ೧೨೬ ರಫೇಲ್ ಯುದ್ದವಿಮಾನಗಳನ್ನು ಖರೀದಿಸಲು ನಿರ್ಧರಿಸಲಾಗಿತ್ತು. ಆದರೆ ಮೋದಿ ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಇದರ ಸಂಖ್ಯೆ ೩೬ಕ್ಕೆ ಇಳಿಯಿತು. ಇದಲ್ಲದೇ ೭೧೫ ಕೋಟಿಗಳಷ್ಟಿದ್ದ ಒಂದು ರಫೇಲ್ ಯುದ್ಧ ವಿಮಾನದ ಬೆಲೆ ೧೬೦೦ ಕೋಟಿಗಳಿಗೇರಿತು. ಅಂದರೆ ಒಂದು ವಿಮಾನಕ್ಕೆ ಶೇಕಡ ೧೨೩ರಷ್ಟು ಏರಿಕೆ. ಇನ್ನೂ ಮುಖ್ಯವಾದ ಅಂಶವೆಂದರೆ ಆರಂಭದ ಪ್ರಸ್ತಾವನೆಯಲ್ಲಿ ಫ್ರಾನ್ಸ್ ನಿಂದ ಕೇವಲ ೧೮ ವಿಮಾನಗಳನ್ನು ಖರೀದಿಸಿ ಉಳಿದ ವಿಮಾನಗಳನ್ನು ಮೇಕ್ ಇನ್ ಇಂಡಿಯಾ ಯೋಜನೆಯಡಿ ಭಾರತದಲ್ಲಿಯೇ ನಿರ್ಮಿಸಲು ನಿರ್ಧರಿಸಲಾಗಿತ್ತು. ನಂತರ ಇದಕ್ಕೆ ಪ್ರಾಮುಖ್ಯತೆಯೇ ದೊರೆಯಲಿಲ್ಲ.
ತನ್ನ ಬಣ್ಣಿಸಬೇಡ; ಇದಿರ ಹಳಿಯಲು ಬೇಡ: ಹಿಂದೆ ಆಡಳಿತ ನಡೆಸಿದ ಸರ್ಕಾರಗಳ ಬಗ್ಗೆ, ವಿರೋಧಪಕ್ಷಗಳ ಬಗ್ಗೆ ರಚನಾತ್ಮಕ ಟೀಕೆಯಲ್ಲಿ ತಪ್ಪಿಲ್ಲ. ಆದರೆ ಅದೇ ಕಾಯಕದಂತೆ ಆಗಿಬಿಟ್ಟರೆ ಇವರು ಮಾತನಾಡುವುದೇನು, ಮಾಡುತ್ತಿರುವುದೇನು ಎಂಬ ಪ್ರಶ್ನೆಗಳು ಸಹಜವಾಗಿ ಮೂಡುತ್ತವೆ. ಇದಕ್ಕೊಂದು ಸಣ್ಣ ಉದಾಹರಣೆ; ೨೦೧೯ರ ಏಪ್ರಿಲ್ ೧ ರಂದು ಮಹಾರಾಷ್ಟ್ರದ ವಿಧರ್ಭದಲ್ಲಿ ಮೋದಿ ಅವರು ಚುನಾವಣಾ ಭಾಷಣ ಮಾಡಿದ್ದಾರೆ. ಭಾಷಣದುದ್ದಕ್ಕೂ ಕಾಂಗ್ರೆಸ್ ಮತ್ತು ಎನ್.ಸಿ.ಪಿ. ವಿರುದ್ಧವೇ ಹರಿಹಾಯ್ದರು. ರಾಹುಲ್ ಗಾಂಧಿ ಎರಡು ಕ್ಷೇತ್ರಗಳಿಂದ ಸ್ಪರ್ಧಿಸುತ್ತಿರುವುದನ್ನು ಛೇಡಿಸಿದರು. ೨೦೧4ರ ಲೋಕಸಭಾ ಚುನಾವಣೆಯಲ್ಲಿ ತಾವು ಕೂಡ ಗುಜರಾತಿನ ವಡೋದರ ಮತ್ತು ಉತ್ತರ ಪ್ರದೇಶದ ವಾರಣಾಸಿ (ಕಾಶಿ) ಲೋಕಸಭಾ ಕ್ಷೇತ್ರಗಳಿಂದ ಸ್ಪರ್ಧಿಸಿದ್ದರ ಬಗ್ಗೆ ಮಾತ್ರ ಜಾಣಮರೆವು ಪ್ರದರ್ಶಿಸಿದರು. ಮೋದಿ ಅವರು ಭಾರತದ ಜನತೆಯಲ್ಲಿ ಕನಸುಗಳನ್ನು ಬಿತ್ತಲು ಯತ್ನಿಸಿದ್ದರು. ಆದರೆ ಅವುಗಳ್ಯಾವುದು ಮೊಳಕೆಯೊಡೆಯಲೇ ಇಲ್ಲ. ಇದು ಜನತೆಯನ್ನು ಭ್ರಮನಿರಸನಗೊಳಿಸಿದೆ. ಅಧಿಕಾರದಲ್ಲಿರುವ ವ್ಯಕ್ತಿ ತನ್ನ ಬಗ್ಗೆ ಹೇಳಿಕೊಳ್ಳುವುದೇ ವ್ಯಸನದಂತೆ ಆಗಬಾರದು.
ಉರಿ, ಪುಲ್ವಾಮಾ, ಬಾಲಾಕೋಟ್: ಭಾರತೀಯ ಸೈನ್ಯ ನಡೆಸಿದ ಉರಿ ಸರ್ಜಿಕಲ್ ಸ್ಟ್ರೈಕ್ ಅನ್ನು ಮೋದಿ ತಮ್ಮದೇ ಸಾಧನೆ ಎಂದು ಬಣ್ಣಿಸಿಕೊಳ್ಳುತ್ತಿದ್ದಾರೆ. ಪುಲ್ವಾಮಾದಲ್ಲಿ ದಾಳಿ ಬಳಿಕ ಭಾರತೀಯ ಸೈನ್ಯ ಬಾಲಾಕೋಟ್ ನಲ್ಲಿ ನಡೆಸಿದ ಕಾರ್ಯಾಚರಣೆಯನ್ನೂ ತಮ್ಮದೇ ಸಾಧನೆ ಎಂಬಂತೆ ಹೇಳಿಕೊಳ್ಳುತ್ತಿದ್ದಾರೆ. ಇದು ಮಿಲಿಟರಿಗೆ ಸಲ್ಲಬೇಕಾದ ಹಿರಿಮೆ ಎಂಬುದನ್ನು ಮತ್ತು ಇದನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದು ಎಂಬುದನ್ನೂ ಅವರು ಮರೆತಿದ್ದಾರೆ.
ಬಲಿದಾನ: ಎಂ.ಕೆ. ಗಾಂಧಿ ( ಮಹಾತ್ಮ ಗಾಂಧಿ) ಹಿರಿಯ ಕಾಂಗ್ರೆಸಿಗರು. ದೇಶದ ಸಮಗ್ರತೆ ಮತ್ತು ಶಾಂತಿಗೆ ಮೀಡಿಯುತ್ತಿದ್ದ ಜೀವ. ಇಂಥ ಅಮೂಲ್ಯಜೀವ ಬಂದೂಕಿನ ಗುಂಡಿಗೆ ಬಲಿಯಾಯಿತು. ಪಂಜಾಬಿನಲ್ಲಿ ಉಗ್ರಗಾಮಿಗಳ ಅಟ್ಟಹಾಸವಿದ್ದಾಗ ದೇಶದ ಸಮಗ್ರತೆ ಉಳಿಸಿಕೊಳ್ಳಲು ಅಂದಿನ ಪ್ರಧಾನಿ ಇಂದಿರಾ ಗಾಂಧಿ ತೆಗೆದುಕೊಂಡ ನಿರ್ಧಾರ ಅವರ ಜೀವಕ್ಕೆ ಮುಳುವಾಯಿತು. ನೆರೆಯ ಶ್ರೀಲಂಕಾದಲ್ಲಿ ಪರದೇಶದ ಮಿಲಿಟರಿ ಬಂದು ಕುಳಿತರೆ ದೇಶದ ಭದ್ರತೆಗೆ ಅಪಾಯ ಎಂದು ಅಂದಿನ ಪ್ರಧಾನಿ ರಾಜೀವ್ ಗಾಂಧಿ ಅರಿತಿದ್ದರು. ಶ್ರೀಲಂಕಾಕ್ಕೆ ಶಾಂತಿಪಾಲನಾ ಪಡೆ ಕಳಿಸಿಕೊಟ್ಟರು. ಈ ನಿರ್ಧಾರ ಅವರ ಜೀವವನ್ನೇ ಬಲಿ ಪಡೆಯಿತು. ಇವರ್ಯಾರು ತಮ್ಮ ವೈಯಕ್ತಿಕ ಕಾರಣಗಳಿಂದ ಜೀವ ತೆತ್ತವರಲ್ಲ. ಭಾರತದ ಶಾಂತಿ, ಸಮಗ್ರತೆ ಉಳಿಸಿಕೊಳ್ಳುವ ಸಲುವಾಗಿ ತಮ್ಮ ಜೀವ ನೀಡಿದವರು. ಇವುಗಳನ್ನಾದರೂ ಯುವಜನತೆಗೆ ಹೇಳಬೇಕಲ್ಲವೆ…?
ಸೋಶಿಯಲ್ ಮೀಡಿಯಾವೇ ಮೊದಲ ಪಾಠಶಾಲೆ: ಈ ಬಾರಿ ಯುವಜನತೆ ಮತ ನಿರ್ಣಾಯಕ. ಲೋಕಸಭೆಗೆ ಈ ವರ್ಷ ಅಂದರೆ 2019ರಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ಸುಮಾರು ಎಂಟೂವರೆ ಕೋಟಿ ಯುವಜನತೆ ಮತ ಚಲಾಯಿಸುತ್ತಿದ್ದಾರೆ. ಇವರಲ್ಲಿ ಸುಮಾರು ನಾಲ್ಕೂವರೆ ಕೋಟಿ ಮಂದಿ ಪ್ರಪ್ರಥಮ ಬಾರಿಗೆ ಮತ ಚಲಾಯಿಸುತ್ತಿದ್ದಾರೆ. ಇವರಲ್ಲಿ ಬಹುತೇಕರ ಬಳಿ ಸ್ಮಾರ್ಟ್ ಪೋನ್ ಗಳಿವೆ. ಅದರಲ್ಲಿಯ ಫೇಸ್ ಬುಕ್, ವಾಟ್ಸಪ್, ಟ್ವೀಟರ್ ಇತ್ಯಾದಿ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸಂದೇಶಗಳು ಅವರಿಗೆ ಓದಲು ದಕ್ಕುತ್ತಿವೆ. ಇದರಲ್ಲಿ ಸತ್ಯಾಂಶ ಎಷ್ಟು, ಸುಳ್ಳೆಷ್ಟು ಎಂಬುದನ್ನು ಒರೆಗೆ ಹಚ್ಚುವ ಕಾರ್ಯವನ್ನು ಹೆಚ್ಚಿನವರು ಮಾಡುತ್ತಿಲ್ಲ. ಇದರ ಪ್ರತಿಫಲ ಯಾರಿಗೆ ದಕ್ಕುತ್ತಿದೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.
ಬಳಕೆ: ಬಿಜೆಪಿ, ಐಟಿ ಸೆಲ್ ಮುಖಾಂತರ ಸೋಶಿಯಲ್ ಮೀಡಿಯಾಗಳಲ್ಲಿ ಪ್ರಬಲ ಪ್ರಚಾರವನ್ನೇ ನಡೆಸುತ್ತಿದೆ. ಸಾಕಷ್ಟು ಟಿವಿ ಮಾಧ್ಯಮಗಳು/ ಪತ್ರಿಕೆಗಳು ಬಿಜೆಪಿಯೊಂದಿಗೆ ನೇರ ಸಂಬಂಧವಿರುವ/ ಒಲವಿರುವ ವ್ಯಕ್ತಿಗಳ ಮತ್ತು ಕಂಪನಿಗಳ ಮಾಲೀಕತ್ವದಲ್ಲಿವೆ. ಅವುಗಳು ತಮ್ಮ ಕಾರ್ಯವನ್ನು ತಮ್ಮ ಪಾಡಿಗೆ ತಾವು ಮಾಡುತ್ತಿವೆ. ಆದರೆ ಈ ಸಂದರ್ಭದಲ್ಲಿ ಕಾಂಗ್ರೆಸ್ ಮಾಡುತ್ತಿರುವುದಾದರೂ ಏನು? ಕಾಂಗ್ರೆಸ್ಸೇ ಉತ್ತರಿಸಬೇಕು.