ಮಂಡ್ಯ ಮಾತೃ ಪ್ರಧಾನ ಸಮಾಜವೇ ಎಂದು ಹುಬ್ಬೇರಿಸಬೇಡಿ. ಇದು ಕೇರಳ ಮತ್ತು ಕರ್ನಾಟಕದ ಕರಾವಳಿ ಜಿಲ್ಲೆಯಲ್ಲಿರುವ ಮಾದರಿ ಮಾತೃ ಪ್ರಧಾನ ಸಮಾಜವಲ್ಲದಿರಬಹುದು. ಆದರೆ ಪ್ರಮುಖ ನಿರ್ಣಯಗಳ ವಿಷಯಗಳಿಗೆ ಬಂದಾಗ ಮಂಡ್ಯ ಜಿಲ್ಲೆ ಪಕ್ಕಾ ಮಾತೃಪ್ರಧಾನ ಸಮಾಜ. ವೈವಾಹಿಕ ಹೊಸ ಸಂಬಂಧಗಳು, ಆಸ್ತಿ ಖರೀದಿ, ಮಾರಾಟ ಹೀಗೆ ಯಾವುದೇ ಪ್ರಮುಖ ವಿಷಯಗಳಲ್ಲಿ ಇಲ್ಲಿನ ಪುರುಷರು ತಾಯಿ, ಸಹೋದರಿಯರ ಸಲಹೆಗಳನ್ನು ಮೀರುವುದಿಲ್ಲ. ಕುಟುಂಬಗಳಲ್ಲಿ ಗಂಡುಮಕ್ಕಳು-ಹೆಣ್ಣುಮಕ್ಕಳ ಪಾಲನೆಯಲ್ಲಿಯೂ ವೆತ್ಯಾಸಗಳನ್ನು ಸಾಮಾನ್ಯವಾಗಿ ಮಾಡುವುದಿಲ್ಲ

ಅದು ಸರಿ ಚುನಾವಣೆ ವಿಶ್ಲೇಷಣೆ ಸಂದರ್ಭದಲ್ಲಿ  ಮಾತೃ ಪ್ರಧಾನ ಸಮಾಜದ ವಿಷಯವೇಕೆ ಎಂದು ಮತ್ತೊಮ್ಮೆ ಹುಬ್ಬೇರಿಸಬೇಡಿ. ಈ ವಿಷಯವನ್ನು ಮುಂದೆ ವಿವರಿಸುತ್ತೇನೆ. ಈಗ 2019ರ ಲೋಕಸಭಾ ಚುನಾವಣೆ ವಿಷಯಕ್ಕೆ ಬರೋಣ. ಇದು ಸ್ವಾತಂತ್ರ್ಯ ನಂತರ ಮಂಡ್ಯದಲ್ಲಿ ನಡೆದಿರುವ ಎಲ್ಲ ಲೋಕಸಭಾ ಚುನಾವಣೆಗಳಿಂತ ಬಹು ವಿಭಿನ್ನ. ಇಡೀ ದೇಶದ ಗಮನವನ್ನು ತನ್ನತ್ತ ಸೆಳೆದಿರುವ ಚುನಾವಣೆ.

ಇದಕ್ಕೆ ಮುಖ್ಯ ಕಾರಣಗಳು ಇದುವರೆಗೂ ನೇರ ಹಣಾಹಣಿ ನಡೆಸುತ್ತಿದ್ದ ರಾಷ್ಟ್ರೀಯ ಪಕ್ಷ ಕಾಂಗ್ರೆಸ್, ಪ್ರಾದೇಶಿಕ ಪಕ್ಷ ಜಾತ್ಯತೀತ ಜನತಾದಳ ಮೈತ್ರಿ ರಾಜಕಾರಣದಲ್ಲಿ ಲೋಕಸಭಾ ಚುನಾವಣೆಗೆ ಅಭ್ಯರ್ಥಿ ನಿಲ್ಲಿಸಿರುವುದು, ಈ ಅಭ್ಯರ್ಥಿ ಹಾಲಿ ಸಿಎಂ ಪುತ್ರನಾಗಿರುವುದು, ಇನ್ನೊಂದು ಕಡೆ ಜನಪ್ರಿಯ ಚಿತ್ರನಟ, ಮಾಜಿ ಸಚಿವ ದಿವಂಗತ ಅಂಬರೀಷ್ ಅವರ ಪತ್ನಿ  ಪಕ್ಷೇತರ ಅಭ್ಯರ್ಥಿಯಾಗಿರುವುದು. ಇವರಿಗೆ ರಾಷ್ಟ್ರೀಯ ಪಕ್ಷ ಬಿಜೆಪಿ ಅಧಿಕೃತವಾಗಿ ಬೆಂಬಲ ನೀಡಿದೆ. ಪಕ್ಷದ ಹೈ ಕಮಾಂಡ್ ಸೂಚನೆ ವಿರುದ್ಧವಾಗಿ ಮಂಡ್ಯದ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳ ಕಾಂಗ್ರೆಸ್ ಘಟಕಗಳ ಬಹುತೇಕ ಕಾರ್ಯಕರ್ತರು, ಮುಖಂಡರು ಬೆಂಬಲ ನೀಡಿದ್ದಾರೆ. ಇಷ್ಟೆ ಅಲ್ಲದೇ ಜಿಲ್ಲೆಯ ರೈತಸಂಘ, ಅಹಿಂದ ಸಂಘಟನೆ, ಅಂಬರೀಶ್ ಅಭಿಮಾನಿಗಳ ಸಂಘ,  ಬಹುತೇಕ ಮಹಿಳಾ ಸಂಘಗಳು ಸಹ ಬೆಂಬಲ ನೀಡಿವೆ. ಇಷ್ಟೆಲ್ಲ ವಿರೋಧಾಭಾಸಗಳ ನಡುವೆ ಈ ಚುನಾವಣೆ ನಡೆಯುತ್ತಿರುವುದರಿಂದಲೇ ಎಲ್ಲರ ಗಮನ, ಕುತೂಹಲ ಇತ್ತಇದೆ.

ಮೈತ್ರಿ ಇಲ್ಲದಿದ್ದರೆ ಸುಮಲತಾರೇ ಅಭ್ಯರ್ಥಿ: ರಾಷ್ಟ್ರೀಯಮಟ್ಟದಲ್ಲಿ ಬಿಜೆಪಿ ವಿರುದ್ಧವಿರುವ ಮಹಾಘಟ ಬಂಧನ್, ಕರ್ನಾಟಕದ ಮೈತ್ರಿ ಸರ್ಕಾರದ ಹಿನ್ನೆಲೆ ಇರದಿದ್ದರೆ ಸುಮಲತಾ ಅವರೇ ಕಾಂಗ್ರೆಸ್ ಅಭ್ಯರ್ಥಿಯಾಗುತ್ತಿದ್ದರು ಎಂಬುದರಲ್ಲಿ ಅನುಮಾನಗಳಿಲ್ಲ. ಚುನಾವಣಾ ಮೈತ್ರಿ ಕರ್ನಾಟಕದ ಕಾಂಗ್ರೆಸ್ ಘಟಕದ ಘಟಾನುಗಟಿಗಳಿಗೆ ಇಷ್ಟವಿರದಿದ್ರೂ ಪಕ್ಷದ ಹೈ ಕಮಾಂಡ್ ನಿರ್ಧಾರ ಅವರನ್ನು ಸುಮ್ಮನಿರಿಸಿದೆ. ಆದರೆ ಕಾರ್ಯಕರ್ತರು ಸುಮ್ಮನಿಲ್ಲ. ಬಹುತೇಕ ಕಡೆ ಅವರು ಸಿಡಿದೆದ್ದಿದ್ದಾರೆ. ತುಮಕೂರು, ಮಂಡ್ಯದಲ್ಲಿಯಂತೂ ಇದು ಬಹಿರಂಗವಾಗಿ ವ್ಯಕ್ತವಾಗಿದೆ. ಈ ಮಟ್ಟದ ಭಿನ್ನಾಭಿಪ್ರಾಯ ಹಾಸನದಲ್ಲಿ ಇಲ್ಲದಿದ್ದರೂ ಅಲ್ಲಿಯ ಪರಿಸ್ಥಿತಿಯೂ ಬೂದಿಮುಚ್ಚಿದ ಕೆಂಡದಂತಿದೆ.

ಪುತ್ರ ವ್ಯಾಮೋಹದ ರಾಜಕಾರಣ: ಅಂಬರೀಶ್ ಅವರು ಜಾತ್ಯತೀತಾ ಜನತಾ ದಳದಲ್ಲಿದ್ದವರು.  ಆ ಪಕ್ಷದಿಂದ ಹೊರಬಂದರೂ, ಬದುಕಿರುವ ಕೊನೆಯವರೆಗೂ ಆ ಪಕ್ಷದ ನಾಯಕರ ಜೊತೆ ರಾಜಕಾರಣ ಮೀರಿದ ಸ್ನೇಹವನ್ನಿಟ್ಟುಕೊಂಡಿದ್ದರು. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಅವರು ಜೆಡಿಎಸ್ ಅನ್ನು ಸಹ ಪ್ರತಿನಿಧಿಸಿದ್ದವರು. ಈ ಹಿನ್ನೆಲೆಯಲ್ಲಿ ಸುಮಲತಾ ಅವರ ಸ್ಪರ್ಧೆ ವಿಚಾರ ಮುನ್ನೆಲೆಗೆ ಬಂದಾಗ ಜೆಡಿಎಸ್ ಟಿಕೇಟ್ ನೀಡಬಹುದಾಗಿತ್ತು. ಪುತ್ರ ವ್ಯಾಮೋಹ ಅದಕ್ಕೆ ಅಡ್ಡಿಯಾಗಿದೆ. ಇದಕ್ಕೆ ಕಾರಣಗಳೂ ಇವೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯದ ಏಳುಕ್ಷೇತ್ರಗಳಲ್ಲಿಯೂ ಜೆಡಿಎಸ್ ಶಾಸಕರು ಆರಿಸಿಬಂದಿರುವುದರ ಫಾಯಿದೆಯನ್ನು ಬಳಸಿಕೊಳ್ಳಲು ಹೆಚ್ಡಿಕೆ ನಿರ್ಧರಿಸಿರದಿದ್ದರೆ ಖಂಡಿತ ನಿಖಿಲ್ ಅಭ್ಯರ್ಥಿಯಾಗುತ್ತಿರಲಿಲ್ಲ. ಇಲ್ಲಿರುವ ಜೆಡಿಎಸ್ ಮುಖಂಡರಿಗೆ ಮುಖ್ಯವಾಗಿ ಕಳೆದ ಲೋಕಸಭಾ ಉಪ ಚುನಾವಣೆಯಲ್ಲಿ 3 ಲಕ್ಷದ ಲೀಡ್ ತೆಗೆದುಕೊಂಡ ಶಿವರಾಮೇಗೌಡರಿಗೆ ಟಿಕೇಟ್ ನೀಡಿರುತ್ತಿದ್ದರು. ಆದರೆ ಅನಾಯಾಸವಾಗಿ ಮಗನನ್ನು ಗೆಲ್ಲಿಸುವ ಅವಕಾಶವಿದೆ ಎಂದು ಭಾವಿಸಿ ಬೇರೆಯವರಿಗೆ ಟಿಕೇಟ್ ಕೊಡಲಿಲ್ಲವೆಂಬುದೇ ಸ್ಥಳೀಯರ ಆಕ್ರೋಶ.

ಬೆಂಬಲದ ಪರಿ ಕಂಗೆಡಿಸಿದೆ: ಸುಮಲತಾ ಅಂಬರೀಷ್ ಅವರಿಗೆ ಜಿಲ್ಲೆಯಾದ್ಯಂತ ವ್ಯಕ್ತವಾಗುತ್ತಿರುವ ಬೆಂಬಲ ಸಹಜವಾಗಿ ಜೆಡಿಎಸ್ ಪ್ರಮುಖರನ್ನು ಅದರಲ್ಲಿಯೂ ಹೆಚ್ಡಿಕೆಯನ್ನು ಕಂಗೆಡಿಸಿದೆ ಅದರ ಪರಿಣಾಮವೇ ಅವರು ಹತಾಶೆಯ ಪ್ರತೀಕದಂತಿರುವ ಮಾತುಗಳನ್ನಾಡುತ್ತಿರುವುದು ಎಂದು ಮಂಡ್ಯದ ಬಹುತೇಕ ಜನ ಅಭಿಪ್ರಾಯಪಡುತ್ತಿದ್ದಾರೆ. ಸುಮಲತಾರ ಬೆಂಬಲಕ್ಕೆ ನಿಂತಿರುವ ಯಶ್-ದರ್ಶನ್ ರನ್ನು ಜೋಡೆತ್ತಲ್ಲ; ಕಳ್ಳೆತ್ತುಗಳು ಎನ್ನುತ್ತಿರುವುದು, ಸುಮಲತಾ ಅವರ ಮುಖದಲ್ಲಿ ಗಂಡನನ್ನು ಕಳೆದುಕೊಂಡ ದುಃಖದ ಛಾಯೆಯೇ ಕಾಣುತ್ತಿಲ್ಲ ಎಂದಿರುವುದು, ಇವರ ಅಣ್ಣ ರೇವಣ್ಣ, ಗಂಡ ಸತ್ತು ಭಾರಿ ದಿನಗಳಾಗಿಲ್ಲ, ಆಗಲೇ ರಾಜಕೀಯಕ್ಕೆ ಬರಬೇಕೇ, ಸಿನೆಮಾದಲ್ಲಿ ನಟನೆ ಮಾಡುತ್ತಿದ್ದರು; ರಾಜಕಾರಣದಲ್ಲಿಯೂ ಅದನ್ನು ಮುಂದುವರಿಸಿದ್ದಾರೆ ಎಂದಿರುವುದು ಜನರ ಜಿಗುಪ್ಸೆಗೆ, ಆಕ್ರೋಶಕ್ಕೂ ಕಾರಣವಾಗಿದೆ.

ಅದರಲ್ಲಿಯೂ ಹೆಚ್ಡಿಕೆ, ಜನಪ್ರಿಯ ನಟ ದರ್ಶನ್ ಅವರನ್ನು ಗುರಿಯಾಗಿಸಿಕೊಂಡು ಟೀಕೆ ಮಾಡುತ್ತಿರುವುದು ಅವರಿಗೇ ಮುಳುವಾಗಿ ಪರಿಣಮಿಸಿದೆ.

ಚಾಲೆಂಜಿಂಗ್ ಸ್ಟಾರ್ ಅಂತೆ, ಡಿ- ಬಾಸ್ ಅಂತೆ ಎಂದು ವ್ಯಂಗ್ಯ ಮಾಡುತ್ತಿರುವುದು ಸಹಜವಾಗಿ ದರ್ಶನ್ ಅಭಿಮಾನಿಗಳಿಗೂ ಕಿರಿಕಿರಿ ಉಂಟು ಮಾಡಿದೆ. ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಬಿರುದು ನೀಡುವುದು ಸಾಮಾನ್ಯ. ಅದನ್ನು ಅರಿಯದೇ ಅವರಿಗೆ ಕರ್ನಾಟಕದ ಆರೂವರೆ ಕೋಟಿ ಜನ ಬಿರುದು ಕೊಟ್ಟಿದ್ದಾರಾ ಎಂದೆಲ್ಲ ವ್ಯಂಗ್ಯವಾಡುವುದು ಸರಿಯೇ, ಇವರಿಗೇನೂ ಕರ್ನಾಟಕದ ಆರೂವರೆ ಕೋಟಿ ಜನ ಮತ ನೀಡಿದ್ದಾರಾ, ಸ್ವತಂತ್ರವಾಗಿ ಸರ್ಕಾರ ರಚಿಸಿ ಎಂದಿದ್ದಾರಾ, 37 ಮಂದಿ ಎಂ.ಎಲ್.ಎ.ಗಳನ್ನು ಇವರ ಪಕ್ಷ ಹೊಂದಿದ್ದು ಅದರಿಂದಲೇ ಮುಖ್ಯಮಂತ್ರಿಯಾಗಿಲ್ಲವೇ ಎಂಬೆಲ್ಲ ಟೀಕೆಗಳು ವ್ಯಕ್ತವಾಗುತ್ತಿವೆ.

ಅನುಕಂಪ ಹೆಚ್ಚಿಸುತ್ತಿದೆ:  ರೇವಣ್ಣ ಆಡಿರುವ ಮಾತುಗಳು, ಹೆಚ್ದಿಕೆ ಆಡುತ್ತಲೇ ಇರುವ ಮಾತುಗಳು ಸುಮಲತಾರ ಬಗ್ಗೆಗಿನ ಅನುಕಂಪ ಹೆಚ್ಚಿಸುತ್ತಿವೆ. “ಮಿನಿಸ್ಟ್ರು, ಸಿಎಂ ಆಗಿ ಇವರು ಆಡ್ತಿರೋ ಮಾತನ್ನ ಆಡೋ ಹೈಕ್ಳು ಕೂಡ ಮಾತನಾಡೋದಿಲ್ಲ ಎಂಬ ಕಟುಟೀಕೆಗಳು ವ್ಯಕ್ತವಾಗುತ್ತಿವೆ. ಜೆಡಿಎಸ್ ಪ್ರಮುಖರ ಟೀಕೆಗಳಿಗೆ ಸುಮಲತಾ ಶಾಂತವಾಗಿ ಪ್ರತಿಕ್ರಿಯೆ ನೀಡುತ್ತಿರುವ ರೀತಿ, ಅವರಾಡುತ್ತಿರುವ ಮಾತುಗಳು ಜನರ ಅಭಿಮಾನ, ಮೆಚ್ಚುಗೆಗೆ ಪಾತ್ರವಾಗುತ್ತಿವೆ.

ಸ್ಪರ್ಧಿಸಲು ಸಮರ್ಥರಿದ್ದರು: ಜಿಲ್ಲೆಯ ಜೆಡಿಎಸ್ ನಲ್ಲಿ ಲೋಕಸಭಾ ಅಭ್ಯರ್ಥಿಯಾಗಲು ಸಾಕಷ್ಟು ಸಮರ್ಥರಿದ್ದರು. ಬಹು ಪ್ರಭಾವಿ ನಾಯಕರಾಗಿದ್ದ ಮಾಜಿ ಸಚಿವ ದಿವಂಗತ ಎಸ್.ಡಿ. ಜಯರಾಂ ಪುತ್ರ ಅಶೋಕ್ ಜಯರಾಮ್ ಗೆ ಟಿಕೇಟ್ ನೀಡಬಹುದಿತ್ತು. ಅಥವಾ ಬೇರೆಯವರಿಗೆ ನೀಡಬಹುದಾಗಿತ್ತು. ಹೀಗೆ ಮಾಡಿದ್ದರೆ ಸುಮಲತಾ ಅವರಿಗೆ ವ್ಯಕ್ತವಾಗುತ್ತಿರುವ ಬೆಂಬಲದಲ್ಲಿ ಶೇಕಡ 50ರಷ್ಟು ಬೆಂಬಲ ಕಡಿಮೆಯಾಗುತ್ತಿತ್ತು. ಮಂಡ್ಯ ಜಿಲ್ಲೆಯ ಹಿತಕ್ಕೆ, ಏಳಿಗೆಗೆ ಕಿಂಚಿತ್ತೂ ಶ್ರಮಿಸದ, ಕಾರ್ಯಕರ್ತನಾಗಿಯೂ ದುಡಿಯದ ನಿಖಿಲ್ ಕುಮಾರಸ್ವಾಮಿಗೆ ಟಿಕೇಟ್ ನೀಡಿರುವುದು ಇಲ್ಲಿಯ ಜನರ ಸ್ವಾಭಿಮಾನವನ್ನು ಕೆಣಕಿದೆ ಎಂದೇ ಹೇಳಲಾಗುತ್ತಿದೆ.

ರಾಜಕೀಯ ಅರಿವು ಹೆಚ್ಚು: ಮಂಡ್ಯ ಜಿಲ್ಲೆಯಲ್ಲಿ ರಾಜಕೀಯದ ಅರಿವು ಅಪಾರವಾಗಿದೆ. ರಾಜ್ಯ, ರಾಷ್ಟ್ರ ರಾಜಕಾರಣದ ಪ್ರತಿಯೊಂದು ಬೆಳವಣಿಗೆಗಳನ್ನು, ಸಂಬಂಧಗಳನ್ನು ಇಲ್ಲಿನ ಜನ ಆಳವಾಗಿ ವಿಶ್ಲೇಷಿಸಬಲ್ಲರು. ಇಂಥ ಜಿಲ್ಲೆಯ ಲೋಕಸಭಾ ಚುನಾವಣಾ ಫಲಿತಾಂಶ ಏನಾಗಬಹುದು ಎಂಬ ಕುತೂಹಲ ಎಲ್ಲರಿಗೂ ಇದೆ. ಈ ಸಂದರ್ಭದಲ್ಲಿ ಹಿಂದೆ ಹೇಳಿದ “ಮಾತೃ ಪ್ರಧಾನ ಜಿಲ್ಲೆ” ಎಂಬ ಮಾತಿಗೆ ಬರೋಣ.

ಸುಮಲತಾ ಅವರ ಬಗ್ಗೆ ಜಿಲ್ಲೆಯ ಜನರಲ್ಲಿ ಅನುಕಂಪವಿದೆ. ವಿಶೇಷವಾಗಿ ಮಹಿಳೆಯರು ಹೆಚ್ಚಿನ ಅನುಕಂಪ ಹೊಂದಿದ್ದಾರೆ. ಇಂಥ ಸಂದರ್ಭದಲ್ಲಿ ಜೆಡಿಎಸ್ನ ಪ್ರಮುಖರ ಮಾತುಗಳು ಅವರ ಆಕ್ರೋಶವನ್ನು ಹೆಚ್ಚಿಸಿವೆ. ಪ್ರಮುಖ ಸಂದರ್ಭಗಳಲ್ಲಿ ಮನೆಯ ತಾಯಿ-ಅಕ್ಕತಂಗಿಯರ ಸಲಹೆ ಗೌರವಿಸುವ ಇಲ್ಲಿನ ಪುರುಷರು; ಅವರು ಸುಮಲತಾ ಅವರ ಬಗ್ಗೆ ಹೊಂದಿರುವ ಅನುಕಂಪವನ್ನು ಅನುಮೋದಿಸುತ್ತಾರೆ, ಗೌರವಿಸುತ್ತಾರೆ ಎಂಬ ಅಭಿಪ್ರಾಯವಿದೆ.

ಇವೆಲ್ಲದರ ಜೊತೆಗೆ ಜೆಡಿಎಸ್ ಅಭ್ಯರ್ಥಿ ಸ್ಥಳೀಯರಲ್ಲ ಎಂಬ ಭಾವನೆಯೂ ಜಿಲ್ಲೆಯ  ಮತದಾರರಲ್ಲಿ ಸ್ವಾಭಿಮಾನದ ಪ್ರಶ್ನೆಯಾಗಿ ಪರಿವರ್ತಿತವಾಗಿದೆ. ಇವೆಲ್ಲ ಅಂಶಗಳು ಚುನಾವಣೆ ಮೇಲೆ ಪರಿಣಾಮ ಬೀರುತ್ತವೆ. ಗೆಲುವು ಯಾರದಾಗಬೇಕು ಎಂದು ನಿರ್ಧರಿಸುವಷ್ಟು ಇವೆಲ್ಲ ಸಶಕ್ತವಾಗಿವೆ ಎಂದೇ ಜಿಲ್ಲೆಯ ರಾಜಕೀಯದ ನಾಡಿಮಿಡಿತ ಬಲ್ಲವರು ಹೇಳುತ್ತಿದ್ದಾರೆ.

ಕೃತಜ್ಞತೆ: ಈ ಲೇಖನಕ್ಕೆ ಬಳಸಿರುವ ಚಿತ್ರಗಳನ್ನು ಅಂತರ್ಜಾಲದಿಂದ ತೆಗೆದುಕೊಳ್ಳಲಾಗಿದೆ. ಇವುಗಳನ್ನು ಕ್ಲಿಕ್ಕಿಸಿದ ಛಾಯಾಗ್ರಾಹಕರಿಗೆ ಕೃತಜ್ಞಗಳು

Similar Posts

1 Comment

  1. ಕುಮಾರಣ್ಣ, ವಿಶ್ಲೇಷಣೆ ಚೆನ್ನಾಗಿದೆ.

    ಅತಿಯಾದ ಪುತ್ರವ್ಯಾಮೋಹಕ್ಕೆ ಸರಿಯಾದ ಬೆಲೆ ತೆರಬೇಕಾಗುತ್ತದೆ

Leave a Reply

Your email address will not be published. Required fields are marked *