ಆಗುಂಬೆ (Agumbe) ಎಂದೊಡನೆ ನೆನಪಾಗುವುದು ಕರ್ನಾಟಕದ ಚಿರಾಪುಂಜಿ (Chirapunji) ಎಂದೇ ! ಸಮುದ್ರಮಟ್ಟದಿಂದ 2, 165 ಅಡಿ ಎತ್ತರ.  ವಾರ್ಷಿಕ ಮಳೆಯ ಸರಾಸರಿ ಪ್ರಮಾಣ 8000 ಎಂ.ಎಂ. ಅಂದರೆ 320 ಇಂಚು !! ರಾಷ್ಟ್ರದಲ್ಲಿ ಅತ್ಯಧಿಕ ಮಳೆಯಾಗುವ ಸ್ಥಳಗಳ ಸಾಲಿಗೆ ಸೇರಿದೆ. ಇಲ್ಲಿ ಭಾರಿ ಮಳೆಯಾಗುವುದಕ್ಕೂ ಕಾರಣವಿದೆ. ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಹಬ್ಬಿದ ಇಂದಿಗೂ ದಟ್ಟವಾಗಿರುವ ನಿತ್ಯ ಹರಿದ್ವರ್ಣ ಕಾಡು.

ಆಗುಂಬೆ, ಅತ್ತ ಕುದುರೆಮುಖ ಅಭಯಾರಣ್ಯ ಇತ್ತ ಸೋಮೇಶ್ವರ ಅಭಯಾರಣ್ಯಗಳ ನಡುವೆ ಕೊಂಡಿಯಂತಿದೆ. ಪಶ್ಚಿಮಘಟ್ಟಗಳಿಗೆ ವಿಶಿಷ್ಟವಾದ ಕಾಳಿಂಗ ಸರ್ಪಗಳು ಇಲ್ಲಿ ಹೆಚ್ಚಾಗಿ ಕಂಡು ಬರುತ್ತವೆ.  ಆಗುಂಬೆ ಮಳೆಕಾಡು, ಕಾಳಿಂಗ ಸರ್ಪ ಸಂರಕ್ಷಣೆಯ ಅಭಯಾರಣ್ಯ ಎಂದು ಘೋಷಿಸಲ್ಪಟ್ಟಿದೆ. ಇವುಗಳಿಗೆ ಸಂಬಂಧಿಸಿದ ಸಂಶೋಧನೆಗಳೂ ನಡೆಯುತ್ತಿವೆ.

ಮಳೆಕಾಡಿನ ಮಡಿಲಿನಲ್ಲಿ ಮಲಗಿರುವ ಊರು ಆಗುಂಬೆ

ಆಗುಂಬೆ ಕೂಗಳತೆಯ ಊರು. ಊರಿನ ಒಂದು ಬದಿಯಲ್ಲಿ ನಿಂತು ಕೂಗಿದರೂ ಮತ್ತೊಂದು ಬದಿಗೆ ಕೇಳಿಸುತ್ತದೆ. ಅಪಾರ ಮಳೆಯಾಗುವ ಸ್ಥಳದಲ್ಲಿ ನಿಂತು ನೆಲೆ ಕಟ್ಟಿಕೊಳ್ಳುವುದಕ್ಕೂ ಅಪಾರ ಧೈರ್ಯ ಬೇಕು. ಭತ್ತ, ಅಡಿಕೆ ಪ್ರಮುಖ ಬೆಳೆ. ಆದರೆ ಮಳೆ ಕಾರಣ ಕೊಳೆರೋಗ ಬಾಧೆಯಿಂದ ಕೈಗೆ ಸಿಗುವ ಅಡಿಕೆ ಅಲ್ಪ !

ಆಗುಂಬೆ ಬದಲಾಗುತ್ತಿದೆ. ಅದೂ ನಿಧಾನವಾಗಿಯಲ್ಲ. ಶರವೇಗದಿಂದ ! ಕೇವಲ ಒಂದೂವರೆ ದಶಕದ ಹಿಂದೆ ಇದು ಕರಾವಳಿ ಮತ್ತು ಮಲೆನಾಡಿಗೆ ಸಂಪರ್ಕ ಕಲ್ಪಿಸುವ ಘಟ್ಟದ ಮೇಲಿನ ನಿಲ್ದಾಣ. ಬೆಂಗಳೂರು, ಮಂಗಳೂರಿನಲ್ಲಿ ಐಟಿ ಕ್ಷೇತ್ರ ಬೆಳೆದಂತೆ ಇತರ ಕ್ಷೇತ್ರಗಳಲ್ಲಿ ಕೆಲಸ ಮಾಡುವವರ ಕೈಯಲ್ಲಿ ಹಣ ಹೆಚ್ಚು ಓಡಾಡಲು ಶುರು ಮಾಡಿದಂತೆ ಇಲ್ಲಿ ಪ್ರವಾಸೋದ್ಯಮ ಗರಿ ಗೆದರಿದೆ.

ಮಂಜಿನಿಂದ ಆವೃತ್ತವಾದ ಆಗುಂಬೆ

ಗ್ರಾಹಕರಿಗಾಗಿ ಎದುರು ನೋಡುತ್ತಿದ್ದ ಪುಟ್ಟ ಹೋಟೆಲ್ ಜೊತೆಗೆ ಎರಡು ಕಿಲೋ ಮೀಟರ್ ಉದ್ದಕ್ಕೂ ಹೋಟೆಲ್ ಗಳು ತಲೆಯೆತ್ತಿವೆ. ದಶಕದ ಹಿಂದೆ ಇಲ್ಲಿದಿದ್ದು ಕೇವಲ ಒಂದೇ ಲಾಡ್ಜ್ ! ಇದನ್ನು ಬಿಟ್ಟರೆ ಪ್ರವಾಸಿ ಮಂದಿರ. ಅದು ಎಲ್ಲರಿಗೂ ಲಭ್ಯವಿರಲಿಲ್ಲ. ಈಗಲೂ ಲಭ್ಯವಿಲ್ಲ ! ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಹೋಮ್ ಸ್ಟೇಗಳು ತಲೆಯೆತ್ತಿವೆ. ಇವುಗಳಲ್ಲಿ ಅಧಿಕೃತಕ್ಕಿಂತ ಅನಧಿಕೃತವೇ ಹೆಚ್ಚು. ವಾರಂತ್ಯಗಳಲ್ಲಿ ಎಲ್ಲವೂ ಗಿಜಿಗಿಜಿ.

ಪ್ರವಾಸಿಗರು ಹೆಚ್ಚಾದಂತೆ ಅವರ ಅನುಕೂಲಕ್ಕಾಗಿ ಬಾರ್ ಅಂಡ್ ರೆಸ್ಟೊರೆಂಟ್ ಬಂದಿದೆ. ಇದು ಸಹ ಸದಾ ಭರ್ತಿ. ಊರಲ್ಲಿ ಇಷ್ಟೆಲ್ಲ ಬದಲಾವಣೆ ನಡುವೆ ಇಲ್ಲಿದ್ದವರಲ್ಲಿ ಅನೇಕ ಗ್ರಾಮಸ್ಥರು ಊರು ಖಾಲಿ ಮಾಡಿದ್ದಾರೆ. ಇನ್ನೂ ಕೆಲವರು ಖಾಲಿ ಮಾಡುವ ಅವಸರದಲ್ಲಿದ್ದಾರೆ. ಬೆರಳೆಣಿಕೆಯಷ್ಟು ಮಂದಿ ಮಾತ್ರ ಬದುಕು ಇಲ್ಲೇ ಸಾವು ಇಲ್ಲೇ ಎಂಬ ನಿಲುವಿಗೆ ಅಂಟಿಕೊಂಡಿದ್ದಾರೆ.

ಊರು ಖಾಲಿ ಮಾಡಲು ಪ್ರಮುಖ ಕಾರಣ, ಮಕ್ಕಳು ಉತ್ತಮ ಉದ್ಯೋಗಗಳನ್ನು ಗಳಿಸಿ ಬೆಂಗಳೂರು, ಮಂಗಳೂರಿನಲ್ಲಿ ನೆಲೆಸಿರುವುದು, ಕೆಲವರ ಮಕ್ಕಳು ವಿದೇಶದಲ್ಲಿರುವುದು ಕಾರಣ. ಖಾಲಿಯಾದ ಮನೆಗಳಲ್ಲಿ ಅನೇಕವು ನೋಡುವವರಿಲ್ಲದೇ ಅಂದರೆ ನಿರ್ವಹಣೆಯಿಲ್ಲದೇ ಪಾಳು ಸುರಿಯುತ್ತಿವೆ.

ಇವೆಲ್ಲದರ ನಡುವೆ ಊರ ನಡುವೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 66 ಎರಡೂ ಬದಿಗಳಲ್ಲಿಯೂ ಇರುವ ಜಮೀನುಗಳಿಗೆ ಚಿನ್ನಕ್ಕಿಂತಲೂ ಹೆಚ್ಚಿನ ಬೆಲೆ ಬಂದಿದೆ. ಅನೇಕರು ಜಮೀನು ಮಾರಿದ್ದಾರೆ. ಇನ್ನು ಕೆಲವರು ಮನೆ ಸಹಿತ ಜಮೀನು ಮಾರಿದ್ದಾರೆ. ಇನ್ನು ಕೆಲವರು ಇನ್ನೂ ಹೆಚ್ಚು ಬೆಲೆ ಬರಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.

ಮನಮೋಹಕ ಜೋಗಿಗುಂಡಿ

ಸದ್ಯದಲ್ಲಿಯೇ ಇನ್ನಷ್ಟು ವಸತಿಗೃಹಗಳು, ಬಗೆಬಗೆಯ ತಿಂಡಿತಿನಿಸು ದೊರೆಯುವ ಹೋಟೆಲ್ ಗಳು ಮತ್ತಷ್ಟೂ ಹೆಚ್ಚಲಿವೆ. ಎಂ.ಆರ್.ಪಿ. ಬೋರ್ಡ್ ಅಂಟಿಸಿಕೊಂಡ ಮದ್ಯದಂಗಡಿಗಳು, ಕುಡಿಯಲು ಮದ್ಯ, ತಿನ್ನಲು ತಿನಿಸು ನೀಡುವ ಬಾರ್ ಗಳು ಬರಲಿವೆ.

ಆಗುಂಬೆಯಿಂದ ಕಾಣುವ ಸೂರ್ಯಾಸ್ತ ದೃಶ್ಯ ಬಹು ಸುಂದರ. ಮೋಡಗಳಿಲ್ಲದ ಸಮಯಗಳಲ್ಲಿ ಇಲ್ಲಿನ ಸನ್ ಸೆಟ್ ಪಾಯಿಂಟ್ ನಲ್ಲಿ ಜನಸಂದಣಿ ಇರುತ್ತದೆ

ಇಷ್ಟಕ್ಕೆಲ್ಲ ಕಾರಣ ಎಲೆ ಮರೆ ಕಾಯಿಗಳಂತಿದ್ದ ಇಲ್ಲಿನ ಬರ್ಕಣ, ಜೋಗಿಗುಂಡಿ, ಒನಕೆ ಅಬ್ಬಿ, ಹತ್ತಿರದ ಸಿರಿಮನೆ, ಕೂಡ್ಲು ಜಲಪಾತಗಳನ್ನು ನೋಡಲು ಪ್ರವಾಹದಂತೆ ಪ್ರವಾಸಿಗರು ಬರುತ್ತಿರುವುದು, ವಾರಾಂತ್ಯ ದಿನಗಳಲ್ಲಿ ಇಲ್ಲಿ ಸೂಜಿ ಎಸೆದರೂ ಕೆಳಗೆ ಬೀಳದಷ್ಟು ಜನಸಂದಣಿ ! ಇವುಗಳ ಜೊತೆಗೆ ಕುಂದಾದ್ರಿ, ಕೊಡಚಾದ್ರಿ ಬೆಟ್ಟಗಳನ್ನು ನೋಡಲು ಬರುವವರು, ಆಗುಂಬೆಯ ಮಲ್ಲಂದೂರಿನಿಂದ ಶೃಂಗೇರಿಯ ಕಿಗ್ಗಾದವರೆಗೆ ನರಸಿಂಹ ಪರ್ವತ ಚಾರಣ ಮಾಡಲು ಬರುವವರು ಸೇರಿ ಪ್ರವಾಸಿಗರೋ ಪ್ರವಾಸಿಗರು !

ಆಗುಂಬೆ ನಡುವೆ ಸಂಚರಿಸುವ ವಾಹನಗಳ ಸಂಖ್ಯೆ ಈಗಾಗಲೇ ಹೆಚ್ಚಿದೆ. ಕರಾವಳಿ-ಮಲೆನಾಡಿಗೆ ಸಂಪರ್ಕ ಕಲ್ಪಿಸುವ ಘಾಟಿಯಾದ್ದರಿಂದ ಇದು ಸಹಜ. ಆದರೆ ಮಿತಿ ಇಲ್ಲದಷ್ಟು ಪ್ರವಾಸಿಗರ ವಾಹನಗಳೂ ಸೇರಿವೆ. ಪ್ರವಾಸಿಗರು ಬರಬಾರದು ಎಂದಲ್ಲ. ಸೂಕ್ಷ್ಮ ಪ್ರದೇಶವಾದ ಕಾರಣ ನಿತ್ಯ ಇಂತಿಷ್ಟು, ವಾರಾಂತ್ಯ ದಿನಗಳಲ್ಲಿ ಇಂತಿಷ್ಟು ಸಂಖ್ಯೆ ಎಂದು ನಿಗದಿಪಡಿಸಬಾರದೇಕೆ ?

ಆಗುಂಬೆ ಅನೇಕ ಕಾರಣಗಳಿಗೆ ಅತೀಸೂಕ್ಷ್ಮ . ಇದು ಮಳೆಕಾಡು ಪ್ರದೇಶ. ಇಲ್ಲಿ ವಾಹನಗಳ ಮಾಲಿನ್ಯ (ಹಾರ್ನ್ ಸದ್ದು ಸೇರಿದಂತೆ ) ಹೆಚ್ಚಬಾರದು. ಜಲಪಾತಗಳು, ಬೆಟ್ಟಗಳ ಬಳಿ ಮಾಲಿನ್ಯವಾಗಬಾರದು. ಇಲ್ಲಿನ ಘಾಟಿಯ ಧಾರಣ ಸಾಮರ್ಥ್ಯ ಕುಸಿದಿದೆ. ಅತಿಯಾದ ವಾಹನಗಳ ಸಂಚಾರದಿಂದಾಗಿ ಘಾಟಿ ರಸ್ತೆಯಲ್ಲಿ ಪದೇಪದೇ ಕುಸಿತವಾಗುತ್ತಿದೆ. ಮಳೆಗಾಲದಲ್ಲಂತೂ ಇದು ಇನ್ನೂ ಹೆಚ್ಚು !

ಆಗುಂಬೆ ರಸ್ತೆಗಳಲ್ಲಿ ಕಾಳಿಂಗ ಸರ್ಪದ ಸಂಚಾರ ವಿರಳವೇನಲ್ಲ. ಗ್ರಾಮಗಳ ಮನೆಗಳ ಒಳಗೂ ಅವುಗಳು ಬರುತ್ತವೆ. ಅವುಗಳ ಲೈಂಗಿಕ ಮಿಲನದ ಕಾಲದಲ್ಲಿ ಅವುಗಳ ಸಂಚಾರ ಹೆಚ್ಚು. ಊರು, ಬೆಟ್ಟ, ಜಲಪಾತದಂಥ ಸೂಕ್ಷ್ಮ ತಾಣಗಳಲ್ಲಿ ಪ್ರವಾಸಿಗರ ಗದ್ದಲ ಹೆಚ್ಚಾದಾಗ ಅವುಗಳ ಅನಿರ್ಭಂಧಿತ ಸಂಚಾರಕ್ಕೂ ಅಡ್ಡಿ ! ಇದಲ್ಲದೇ ಎಡೆಬಿಡದೇ ವಾಹನಗಳು ಸಂಚರಿಸುವುದರಿಂದ ಅವುಗಳ ಚಕ್ರಗಳಿಗೆ ಸಿಲುಕಿ ಸಾವನ್ನಬಹುದು. ಇಂಥ ನಿದರ್ಶನ ಅಪರೂಪವೇನಲ್ಲ

ಆಗುಂಬೆಯ ಭತ್ತದ ಗದ್ದೆ ಸಾಲು

ಆಗುಂಬೆ ವಿದ್ಯಮಾನಗಳ ಹಿನ್ನೆಲೆಯಲ್ಲಿ ಪರಿಸರ ಸೂಕ್ಷ್ಮತೆಗೆ ಧಕ್ಕೆ ಬಾರದ ರೀತಿಯಲ್ಲಿ ನಿರ್ವಹಣೆ ಮಾಡುವ ಅಗತ್ಯವಿದೆ. ಇಲ್ಲಿಗೆ ಪ್ರವಾಸೋದ್ಯಮದ ಭರಾಟೆಗೆ ನಿಯಂತ್ರಣ ಅಗತ್ಯವಾಗಿದೆ. ಆಗಲೇ ಹೇಳಿದಂತೆ ಇಂತಿಷ್ಟೇ ಸಂಖ್ಯೆ ಪ್ರವಾಸಿಗರಿಗೆ ಅವಕಾಶ ಎಂಬ ನೀತಿ ಬರಬೇಕಾಗಿದೆ. ಇಲ್ಲಿಗೆ ಬರಲು ಇಚ್ಛಿಸುವವರು ಆನ್ ಲೈನ್ ನೋಂದಣಿ ಮಾಡಿಯೇ ಅವಕಾಶ ಪಡೆಯಬೇಕು ಎಂಬ ನಿಯಮದ ಜೊತೆಗೆ ಕಿಂಚಿತ್ತೂ ಪ್ಲಾಸ್ಟಿಕ್, ಗಲೀಜಿಗೆ ಅವಕಾಶವಿಲ್ಲದಂತೆ ನೋಡಿಕೊಳ್ಳುವ ತುರ್ತು ಅಗತ್ಯವಿದೆ.

Similar Posts

1 Comment

  1. ಲೇಖನದ ಪರಿಸರ ಕುರಿತಾದ ಕಾಳಜಿಗೆ ಅಭಿನಂದನೆಗಳು. ಇತ್ತೀಚಿನ ಪೀಳಿಗೆ ಪ್ರವಾಸದ ನೆಪದಲ್ಲಿ ಎಗ್ಗಿಲ್ಲದೆ ಪ್ರತ್ಯಕ್ಷ ಪರೋಕ್ಷವಾಗಿ ಪರಿಸರಕ್ಕೆ ಹಾನಿ ಗೈಯುತ್ತಿರುವುದು ಅಕ್ಷಮ್ಯ.

Leave a Reply

Your email address will not be published. Required fields are marked *